ಕೊಲಂಬೊ: ಭಾರತ ಸರ್ಕಾರವು ಶ್ರೀಲಂಕಾಕ್ಕೆ ಒದಗಿಸಿರುವ ₹ 50 ಕೋಟಿ ಮೊತ್ತದ ಇಂಧನ ಸಹಾಯವು ಇನ್ನೇನು ಮುಕ್ತಾಯವಾಗುತ್ತಿದ್ದು, ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೆರೆಡು ವಾರಗಳಲ್ಲಿ ಭಾರತವು 1.20 ಲಕ್ಷ ಟನ್ ಡೀಸೆಲ್ ಮತ್ತು 40,000 ಟನ್ ಪೆಟ್ರೋಲ್ ಪೂರೈಕೆ ಮಾಡಲಿದೆ. ಭಾರತವು ಸರಬರಾಜು ಮಾಡಲಿರುವ ಇಂಧನ ಹೊತ್ತ ಕೊನೆಯ ಟ್ಯಾಂಕರ್ಗಳು ಏಪ್ರಿಲ್ 223ರಂದು ಶ್ರೀಲಂಕಾ ತಲುಪಲಿದೆ. ಅಲ್ಲಿಗೆ ಒಪ್ಪಂದದಂತೆ ಶ್ರೀಲಂಕಾಕ್ಕೆ ಇಂಧನ ಪೂರೈಸಬೇಕಿರುವ ಭಾರತದ ಹೊಣೆಗಾರಿಕೆ ಮುಗಿಯಲಿದೆ. ನಂತರದ ದಿನಗಳನ್ನು ಶ್ರೀಲಂಕಾ ಹೇಗೆ ನಿರ್ವಹಿಸುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಮಾಸಾಂತ್ಯಕ್ಕೆ ಶ್ರೀಲಂಕಾದ ಇಂಧನ ಸಂಗ್ರಹ ಬತ್ತಿ ಹೋಗಲಿದ್ದು ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಯಿದೆ. ತೈಲ ಬಿಕ್ಕಟ್ಟು ಪರಿಹರಿಸುವ ದೃಷ್ಟಿಯಿಂದ ಮತ್ತಷ್ಟು ಸಹಾಯ ಪಡೆದುಕೊಳ್ಳಲು ಶ್ರೀಲಂಕಾ ಈಗಾಗಲೇ ಭಾರತವನ್ನು ಕೋರಿದೆ. ಭಾರತವು ಒದಗಿಸಿರುವ ಕ್ರೆಡಿಟ್ ಲೈನ್ ಹೆಚ್ಚಿಸಬೇಕು ಎಂದು ಶ್ರೀಲಂಕಾ ಆಡಳಿತ ವಿನಂತಿಸಿದೆ. ಆದರೆ ಈ ಕುರಿತು ಭಾರತ ಈವರೆಗೂ ಏನನ್ನೂ ಹೇಳಿಲ್ಲ. ಹೀಗಾಗಿ ಲಭ್ಯವಿರುವ ಕ್ರೆಡಿಟ್ ಲೈನ್ನಷ್ಟೇ ಇಂಧನ ಬಳಸಿಕೊಳ್ಳಲು ಅಥವಾ ಹಳೆಯ ಖರೀದಿಗೆ ಹಣ ಪಾವತಿಸಿ ಹೊಸ ಕ್ರೆಡಿಟ್ ಲೈನ್ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಶ್ರೀಲಂಕಾ ಸಿಲುಕಲಿದೆ.
ಈವರೆಗೆ ಭಾರತ ಸರ್ಕಾರವು 2.70 ಲಕ್ಷ ಟನ್ಗಳಷ್ಟು ಇಂಧನವನ್ನು ನೆರೆಹೊರೆಯ ದೇಶಗಳಿಗೆ ಆದ್ಯತೆ ನೀತಿಯ ಅಡಿಯಲ್ಲಿ (neighbourhood first policy) ಭಾರತವು ಪೂರೈಸಿದೆ. ಆದರೂ ಶ್ರೀಲಂಕಾದಲ್ಲಿ ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ವಿದೇಶಿ ಮೀಸಲು ನಿಧಿಯ ತೀವ್ರ ಕೊರತೆಯನ್ನು ಶ್ರೀಲಂಕಾ ಎದುರಿಸುತ್ತಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ 2.31 ಶತಕೋಟಿ ಅಮೆರಿಕ ಡಾಲರ್ನಷ್ಟಿದ್ದ ಶ್ರೀಲಂಕಾದ ವಿದೇಶಿ ಮೀಸಲು ನಿಧಿಯು, ಮಾರ್ಚ್ ತಿಂಗಳಲ್ಲಿ 1.93 ಡಾಲರ್ಗೆ ಕುಸಿದಿತ್ತು. ಮೀಸಲು ನಿಧಿ ಕೊರೆಯಿಂದಾಗಿ ವಿದೇಶಗಳಿಂದ ಪಡೆದಿರುವ ಸಾಲ ಮರುಪಾವತಿ, ಆಹಾರ ಮತ್ತು ಇಂಧನದಂಥ ಅತ್ಯಗತ್ಯ ವಸ್ತುಗಳ ಖರೀದಿಯೂ ಸಾಧ್ಯವಾಗುತ್ತಿಲ್ಲ. ಭಾರತ ಸರ್ಕಾರವು ಶ್ರೀಲಂಕಾಕ್ಕೆ ₹ 2.5 ಶತಕೋಟಿ ಮೊತ್ತದ ಕ್ರೆಡಿಟ್ ಲೈನ್ ನೀಡಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ₹ 50 ಕೋಟಿ ಮೊತ್ತದ ಇಂಧನ ಖರೀದಿಗೆ ಸಾಲ ಒದಗಿಸಿದೆ.
1948ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಹಾರ ಮತ್ತು ಇಂಧನದ ತೀವ್ರ ಕೊರತೆ ಕಾಣಿಸಿಕೊಂಡಿದೆ. ಹಣದುಬ್ಬರ ತೀವ್ರಗೊಂಡಿದ್ದು ಅತ್ಯಗತ್ಯ ವಸ್ತುಗಳು ಬಹುತೇಕ ಅಂಗಡಿಗಳಲ್ಲಿ ನಾಪತ್ತೆಯಾಗಿದೆ. ಕ್ರೆಡಿಟ್ ರೇಟಿಂಗ್ ಕಂಪನಿಗಳು ಶ್ರೀಲಂಕಾದ ರೇಟಿಂಗ್ಸ್ ತಗ್ಗಿಸಿವೆ. 51 ಶತಕೋಟಿ ವಿದೇಶಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಶ್ರೀಲಂಕಾ ದಿವಾಳಿಯಾಗಬಹುದು ಎಂದು ಎಚ್ಚರಿಸಿವೆ. ಶ್ರೀಲಂಕಾಕ್ಕೆ ಹೊರಗಿನಿಂದ ಯಾವುದೆ ಸಹಾಯ ಅಥವಾ ಸಿಗುತ್ತಿಲ್ಲ.
ಅಧ್ಯಕ್ಷ ಗೊಟಬಾಯ ರಾಜಪಕ್ಸ ನೇತೃತ್ವದ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸಂಪುಟದ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದು, ಹೊಸ ಸಂಪುಟ ಅಸ್ತಿತ್ವಕ್ಕೆ ಬರಬೇಕಿದೆ. ನೆರೆ ದೇಶ ಶ್ರೀಲಂಕಾದೊಂದಿಗೆ ಭಾರತ ರಾಜತಾಂತ್ರಿಕ ಮೈತ್ರಿ ಹೊಂದಿದ್ದು ಅಲ್ಲಿನ ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಅಗತ್ಯ ನೆರವು ನೀಡಲಾಗುವುದು ಎಂದು ಭಾರತ ಸರ್ಕಾರ ಭರವಸೆ ನೀಡಿದೆ.
ಇದನ್ನೂ ಓದಿ: ಭಾರತದಲ್ಲೂ ಕೆಲ ರಾಜ್ಯಗಳ ಸಾಲ ಪ್ರಮಾಣ ಶ್ರೀಲಂಕಾದಷ್ಟೇ ಇದೆ! ನಮ್ಮ ಕರ್ನಾಟಕದ ಸಾಲ ಶೂಲ ಎಷ್ಟಿದೆ? ಸ್ಪೆಷಲ್ ರಿಪೋರ್ಟ್ ಇಲ್ಲಿದೆ
ಇದನ್ನೂ ಓದಿ: Sri Lanka Crisis ದೇಶದಾದ್ಯಂತ ಪ್ರತಿಭಟನೆ ನಡೆದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡುವುದಿಲ್ಲ: ಶ್ರೀಲಂಕಾ ಸಚಿವ
Published On - 3:33 pm, Fri, 8 April 22