ಕೆನಡಾದಲ್ಲಿ ಇರಿತಕ್ಕೆ 10 ಮಂದಿ ಸಾವು, ಹತ್ತಾರು ಮಂದಿಗೆ ಗಾಯ: ಇಬ್ಬರು ಶಂಕಿತರ ಗುರುತು ಪತ್ತೆ
ಗಾಯಗೊಂಡಿರುವ 15ಕ್ಕೂ ಹೆಚ್ಚು ಜನರನ್ನು ಪೊಲೀಸರೇ ಸುತ್ತಮುತ್ತಲ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಒಂದಿಷ್ಟು ಜನರು ತಾವೇ ಸ್ವತಃ ಆಸ್ಪತ್ರೆಗಳಿಗೆ ಬಂದಿದ್ದಾರೆ.
ಒಟ್ಟಾವ: ಕೆನಡಾದಲ್ಲಿ (Canada) ಭಾನುವಾರ ಚೂಪಾದ ಆಯುಧಗಳಿಂದ ಇರಿದು ಕನಿಷ್ಠ 10 ಮಂದಿಯನ್ನು ಕೊಲ್ಲಲಾಗಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು, ಇಬ್ಬರು ಶಂಕಿತರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವೆಲ್ಡನ್ ಪಟ್ಟಣದಲ್ಲಿರುವ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಎಂಬಲ್ಲಿ ಸ್ಥಳೀಯ ಬುಡಕಟ್ಟು ಜನರಲ್ಲಿ ಗಲಾಟೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಗಾಯಗೊಂಡಿರುವ 15ಕ್ಕೂ ಹೆಚ್ಚು ಜನರನ್ನು ಪೊಲೀಸರೇ ಸುತ್ತಮುತ್ತಲ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಒಂದಿಷ್ಟು ಜನರು ತಾವೇ ಸ್ವತಃ ಆಸ್ಪತ್ರೆಗಳಿಗೆ ಬಂದಿದ್ದಾರೆ.
ಡಾಮಿಯನ್ ಮತ್ತು ಮೈಲ್ಸ್ ಸ್ಯಾಂಡರ್ಸನ್ ಎನ್ನುವ ಇಬ್ಬರು ಈ ಘಟನೆಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. 30ರ ಹರೆಯಲ್ಲಿರುವ ಇಬ್ಬರನ್ನೂ ಪೊಲೀಸರು ಹುಡುಕುತ್ತಿದ್ದಾರೆ. ಇಷ್ಟೊಂದು ಜನರನ್ನು ಏಕಾಏಕಿ ಕೊಲ್ಲಲು ಏನು ಕಅರಣ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಕೊಲೆಯ ನಂತರ ಶಂಕಿತರು ಕಪ್ಪು ಕಾರಿನಲ್ಲಿ ಪರಾರಿಯಾಗಿದ್ದಾರೆ. ವಿವಿಧೆಡೆ ಚೆಕ್ಪೋಸ್ಟ್ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಹೆದ್ದಾರಿ ಮತ್ತು ರಸ್ತೆಬದಿಗಳಲ್ಲಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಪ್ರಧಾನಿ ಜಸ್ಟಿನ್ ಟ್ರೂಡೇ ಘಟನೆಯನ್ನು ‘ಹೃದಯವಿದ್ರಾವಕ’ ಎಂದು ಖಂಡಿಸಿದ್ದಾರೆ. ಜೇಮ್ಸ್ ಸ್ಮಿತ್ ಕ್ರೀ ನೇಷನ್ ಪ್ರದೇಶದಲ್ಲಿ ಸ್ಥಳೀಯ ತುರ್ತುಸ್ಥಿತಿ ಘೋಷಿಸಲಾಗಿದ್ದು, ಸಸ್ಕಾಚ್ವಾಲ್ ಪ್ರಾಂತ್ಯದ ಜನರಿಗೆ ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಸೂಚಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಸಂಬಂಧಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸರ್ಕಾರವೇ ಹೆಲಿಕಾಪ್ಟರ್ ಮತ್ತು ವಾಹನಗಳ ವ್ಯವಸ್ಥೆ ಮಾಡಿದೆ. ಹಲವು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕಪಕ್ಕದ ನಗರಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
Published On - 8:27 am, Mon, 5 September 22