ಕೊರೊನಾ ಆರಂಭವಾಗಿ, ಜಗತ್ತಿನೆಲ್ಲೆಡೆ ವ್ಯಾಪಿಸಿ ಸುಮಾರು ಒಂದೂವರೆ ವರ್ಷವಾಗಿದೆ. ಒಂದೊಂದು ಕಡೆಯಲ್ಲಿ ಒಂದೊಂದು ತೆರನಾಗಿ ರೂಪಾಂತರಗೊಳ್ಳುತ್ತಿರುವ ಈ ವೈರಾಣುವಿನ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಆದರೆ, ಇಲ್ಲಿಯ ತನಕ ಕೆಲ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ಕಾಣಿಸಿಕೊಂಡಿದೆ ಎಂಬ ಬಗ್ಗೆ ವರದಿಯಾಗಿತ್ತಾದರೂ ಸಾಕು ಪ್ರಾಣಿಗಳಿಗೆ ವೈರಾಣು ತಗಲುವ ಬಗ್ಗೆ ಹೆಚ್ಚು ಆತಂಕವೇನು ಸೃಷ್ಟಿಯಾಗಿರಲಿಲ್ಲ. ಇದೀಗ ಡಚ್ ತಜ್ಞರೊಬ್ಬರು ಸಿದ್ಧಪಡಿಸಿದ ವರದಿಯನ್ನು ನೋಡಿದರೆ ಕೊರೊನಾ ಸೋಂಕಿತರು ಸಾಕು ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂಬ ಎಚ್ಚರಿಕೆಯ ಸಂದೇಶ ಕಾಣಿಸುತ್ತಿದೆ. ಅಚ್ಚರಿಯ ಸಂಖ್ಯೆಯಲ್ಲಿ ನಾಯಿ, ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯನ್ನು ಅಧ್ಯಯನದಲ್ಲಿ ವ್ಯಕ್ತಪಡಿಸಲಾಗಿದ್ದು, ಇದು ಹೊಸ ಆತಂಕಕ್ಕೂ ಕಾರಣವಾಗಿದೆ.
ನೆದರ್ಲ್ಯಾಂಡ್ನ ಯುಟ್ರೆಕ್ಟ್ ವಿಶ್ವವಿದ್ಯಾನಿಲಯದ ಡಾ.ಎಲ್ಸ್ ಬ್ರೋನ್ಸ್ ಹೇಳುವಂತೆ, ಐದರಲ್ಲಿ ಒಂದು ಸಾಕುಪ್ರಾಣಿಗೆ ಮನುಷ್ಯರಿಂದ ಸೋಂಕು ದಾಟುವ ಸಾಧ್ಯತೆ ಇದೆ. ಆದರೆ, ಅದೃಷ್ಟವಶಾತ್ ಪ್ರಾಣಿಗಳಲ್ಲಿ ಅದು ತೀವ್ರವಾಗಿ ಬಾಧಿಸುವುದು ಇಲ್ಲಿಯ ತನಕ ಕಂಡುಬಂದಿಲ್ಲ. ಅಂತೆಯೇ, ಪ್ರಾಣಿಗಳಿಂದ ವಾಪಾಸ್ಸು ಮನುಷ್ಯರಿಗೆ ಸೋಂಕು ಹರಡುವುದು ಕೂಡಾ ಪತ್ತೆಯಾಗಿಲ್ಲ.
ಯುರೋಪಿಯನ್ ಕಾಂಗ್ರೆಸ್ ಮೈಕ್ರೋಬಯಲಾಜಿ ಮತ್ತು ಇನ್ಫೆಕ್ಷಿಯಸ್ ಡಿಸೀಸ್ನಲ್ಲಿ ಡಾ.ಎಲ್ಸ್ ಬ್ರೋನ್ಸ್ ತಮ್ಮ ಅಧ್ಯಯನದ ವರದಿಯನ್ನು ಬಹಿರಂಗಪಡಿಸಿದ್ದಾರೆ. ಸುಮಾರು 196 ಕೊರೊನಾ ಸೋಂಕಿತರ ಮನೆಗಳಿಂದ ನಡೆಸಲಾದ ಈ ಅಧ್ಯಯನದಲ್ಲಿ 156 ನಾಯಿಗಳು ಹಾಗೂ 154 ಬೆಕ್ಕುಗಳು ಕೊರೊನಾ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಇವುಗಳಲ್ಲಿ ಶೇ.17ರಷ್ಟು ಪ್ರಾಣಿಗಳು ಅಂದರೆ 31 ಬೆಕ್ಕು ಹಾಗೂ 23 ನಾಯಿಗಳ ದೇಹದಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಕಂಡುಬಂದಿದೆ.
ಆ ಪೈಕಿ ಅಧ್ಯಯನ ನಡೆಸುವ ಸಂದರ್ಭಲ್ಲಿ ಶೇ.4.2ರಷ್ಟು ಪ್ರಾಣಿಗಳಲ್ಲಿ ಅಂದರೆ 6 ಬೆಕ್ಕು ಹಾಗೂ 7 ನಾಯಿಗಳಲ್ಲಿ ಸಕ್ರಿಯ ಕೊರೊನಾ ಸೋಂಕು ಇರುವುದು ಪಿಸಿಆರ್ ಟೆಸ್ಟ್ನಿಂದ ದೃಢಪಟ್ಟಿದೆ. ನಂತರದಲ್ಲಿ ಆ ಪ್ರಾಣಿಗಳೂ ಬೇಗನೆ ಗುಣಮುಖವಾಗಿದೆ. ಜತೆಗೆ, ಅದೇ ಮನೆಯಲ್ಲಿದ್ದ ಬೇರೆ ಪ್ರಾಣಿಗಳಿಗೆ ಹರಡಿಯೂ ಇಲ್ಲವೆಂಬುದು ತಿಳಿದುಬಂದಿದೆ. ಆದರೆ, ಗಮನಾರ್ಹ ವಿಚಾರವೆಂದರೆ ಮಿಂಕ್ಸ್ಗಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಮಾತ್ರ ಅವುಗಳಿಂದ ಪುನಃ ಮನುಷ್ಯರಿಗೆ ಹಬ್ಬಿದೆ.
ಡಾ.ಬ್ರೋನ್ಸ್ ಅವರ ಪ್ರಕಾರ ಮನೆಯ ಸದಸ್ಯರು ಸಾಕು ಪ್ರಾಣಿಗಳೊಂದಿಗೆ ತೀರಾ ನಿಕಟ ಸಂಪರ್ಕ ಹೊಂದಿರುವುದರಿಂದ, ಕೆಲವರು ಅವುಗಳೊಟ್ಟಿಗೇ ಮಲಗುವುದರಿಂದ ಸೋಂಕು ಪ್ರಾಣಿಗಳಿಗೆ ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ಸೋಂಕಿತರಾದ ಮೇಲೂ ಪ್ರಾಣಿಗಳೊಟ್ಟಿಗೆ ತೀರಾ ಬೆರೆಯುವುದಕ್ಕಿಂತ ಅವುಗಳ ಹಿತದೃಷ್ಟಿಯಿಂದಲಾದರೂ ಕೊಂಚ ದೂರ ಉಳಿಯುವುದು ಉತ್ತಮ ಎನ್ನಲಾಗಿದೆ.
Published On - 12:11 pm, Fri, 2 July 21