ಅಫ್ಘಾನ್ ಬಾಲಕಿಯರ ಭವಿಷ್ಯಕ್ಕೆ ಕತ್ತರಿ: 5 ವರ್ಷದಲ್ಲಿ 26 ಲಕ್ಷ ಹೆಣ್ಣುಮಕ್ಕಳ ಶಾಲಾ ಕನಸು ನುಚ್ಚುನೂರು

ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಬಾಲಕಿಯರ ಶಿಕ್ಷಣ ನಿಷೇಧದಿಂದ 26 ಲಕ್ಷ ಹೆಣ್ಣುಮಕ್ಕಳು ಮಾಧ್ಯಮಿಕ ಶಿಕ್ಷಣ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ. ಈ ಕ್ರಮವು ಇಡೀ ಪೀಳಿಗೆಯ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದು, ಬಾಲ್ಯವಿವಾಹ ಮತ್ತು ಶೋಷಣೆಯ ಅಪಾಯ ಹೆಚ್ಚಿಸಿದೆ. ಆರ್ಥಿಕತೆಗೂ ಭಾರಿ ನಷ್ಟ ಉಂಟಾಗಿ, ದೇಶದ ಆರೋಗ್ಯ ವ್ಯವಸ್ಥೆಯೂ ಕುಸಿಯುವ ಭೀತಿ ಎದುರಾಗಿದೆ.

ಅಫ್ಘಾನ್ ಬಾಲಕಿಯರ ಭವಿಷ್ಯಕ್ಕೆ ಕತ್ತರಿ: 5 ವರ್ಷದಲ್ಲಿ 26 ಲಕ್ಷ ಹೆಣ್ಣುಮಕ್ಕಳ ಶಾಲಾ ಕನಸು ನುಚ್ಚುನೂರು
ಶಾಲಾ ಮಕ್ಕಳು -ಸಾಂದರ್ಭಿಕ ಚಿತ್ರ
Image Credit source: UN News

Updated on: Oct 18, 2026 | 1:54 PM

ಕಾಬೂಲ್, ಅಕ್ಟೋಬರ್ 18: ಅಫ್ಘಾನಿಸ್ತಾನದಲ್ಲಿ 2021 ರಲ್ಲಿ ತಾಲಿಬಾನ್ ಪಡೆ ಅಧಿಕಾರ ವಹಿಸಿಕೊಂಡ ನಂತರದ ಐದು ವರ್ಷಗಳ ಅವಧಿಯಲ್ಲಿ ಸುಮಾರು 2.6 ಮಿಲಿಯನ್‌ಗಿಂತಲೂ (26 ಲಕ್ಷಕ್ಕೂ ಹೆಚ್ಚು) ಅಧಿಕ ಬಾಲಕಿಯರು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್)ಕಳವಳಕಾರಿ ವರದಿ ಬಿಡುಗಡೆ ಮಾಡಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಮಾಧ್ಯಮಿಕ ಹಾಗೂ ವಿಶ್ವವಿದ್ಯಾಲಯ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಏಕೈಕ ದೇಶ ಅಫ್ಘಾನಿಸ್ತಾನವಾಗಿದೆ.

ಸೆಪ್ಟೆಂಬರ್ 2021: 6 ನೇ ತರಗತಿಯ ನಂತರ ಬಾಲಕಿಯರು ಔಪಚಾರಿಕ ಶಿಕ್ಷಣ ಪಡೆಯುವುದನ್ನು ಅಧಿಕೃತವಾಗಿ ನಿಷೇಧಿಸಲಾಯಿತು.

Loading...

ಡಿಸೆಂಬರ್ 2022: ಮಹಿಳೆಯರು ಕಾಲೇಜು ಹಾಗೂ ವಿಶ್ವವಿದ್ಯಾಲಯ ಪ್ರವೇಶಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಯಿತು.

ದೀರ್ಘಾವಧಿ ನಷ್ಟ: ತರಗತಿಯಿಂದ ಸತತ ಐದು ವರ್ಷಗಳ ಕಾಲ ಹೊರಗುಳಿದಿರುವುದು ಒಂದು ಇಡೀ ಪೀಳಿಗೆಯ ಬಾಲಕಿಯರ ಭವಿಷ್ಯವನ್ನು ಶಾಶ್ವತವಾಗಿ ಕಸಿದುಕೊಂಡಂತಾಗಿದೆ ಎಂದು ಯುನಿಸೆಫ್ ಬಣ್ಣಿಸಿದೆ. ಶಾಲೆಗಳಿಂದ ವಂಚಿತರಾಗಿರುವ ಬಾಲಕಿಯರು ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಾನವ ಕಳ್ಳಸಾಗಣೆ, ಶೋಷಣೆ ಮತ್ತು ಲಿಂಗ ಆಧಾರಿತ ದೌರ್ಜನ್ಯಗಳಿಗೆ ಬಲಿಯಾಗುವ ಅಪಾಯ ತೀವ್ರಗೊಂಡಿದೆ.

ಇದನ್ನೂ ಓದಿ:
ಪಾಕಿಸ್ತಾನದಲ್ಲಿ ತಾಲಿಬಾನ್​ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ

2023 ರಿಂದ ಈಚೆಗೆ ನೆರೆಯ ಇರಾನ್ ಮತ್ತು ಪಾಕಿಸ್ತಾನದಿಂದ ಸುಮಾರು 27 ಲಕ್ಷ ಜನರು ಬಲವಂತವಾಗಿ ಅಫ್ಘಾನಿಸ್ತಾನಕ್ಕೆ ಮರಳಿದ್ದು, ಇವರಲ್ಲಿ ಶೇ. 60 ರಷ್ಟು ಮಕ್ಕಳು ಹಾಗೂ ಯುವಕರೇ ಆಗಿದ್ದಾರೆ. ಮನೆಯ ಬಡತನ ಹಾಗೂ ಸ್ಥಳಾಂತರದ ನಡುವೆ ಹೆಣ್ಣುಮಕ್ಕಳ ರಕ್ಷಣೆ ಸಂಪೂರ್ಣವಾಗಿ ಕುಸಿದಿದೆ. ದೇಶದ ಇತಿಹಾಸದಲ್ಲಿ 5 ವರ್ಷ ಚಿಕ್ಕದಿರಬಹುದು, ಆದರೆ ಬೆಳೆಯುವ ಬಾಲಕಿಯ ಜೀವನದಲ್ಲಿ ಇದು ಅತ್ಯಂತ ನಿರ್ಣಾಯಕ ಘಟ್ಟ. ತರಗತಿ ಕೊಠಡಿ ಬರೀ ಕಲಿಕೆಯ ಜಾಗವಲ್ಲ, ಅದು ಬಾಲ್ಯವಿವಾಹ, ಹಿಂಸೆ ಮತ್ತು ಶೋಷಣೆಯ ವಿರುದ್ಧ ಹೆಣ್ಣುಮಕ್ಕಳಿಗೆ ನೀಡುವ ರಕ್ಷಣಾ ಕವಚವಾಗಿತ್ತು. ಶಾಲೆ ಮುಚ್ಚಿದ್ದರಿಂದ ಆ ರಕ್ಷಣೆ ಮಾಯವಾಗಿದೆ” ಎಂದು ಯುನಿಸೆಫ್​ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಮತ್ತು ಆರೋಗ್ಯ ವ್ಯವಸ್ಥೆಯ ಮೇಲಿನ ಹೊಡೆತ

ಆರ್ಥಿಕ ನಷ್ಟ: ಯುನಿಸೆಫ್‌ನ ‘ಬಾಲಕಿಯರ ಶಿಕ್ಷಣ ಮತ್ತು ಮಹಿಳಾ ಕಾರ್ಮಿಕ ಬಲ’ ವಿಶ್ಲೇಷಣೆಯ ಪ್ರಕಾರ, ಮಹಿಳೆಯರ ಶಿಕ್ಷಣ ಹಾಗೂ ಉದ್ಯೋಗ ನಿರ್ಬಂಧಗಳಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆಗೆ ವಾರ್ಷಿಕ ಕನಿಷ್ಠ 84 ಮಿಲಿಯನ್ ಅಮೆರಿಕನ್ ಡಾಲರ್ ಉತ್ಪಾದನಾ ನಷ್ಟವಾಗುತ್ತಿದೆ. 2030 ರ ವೇಳೆಗೆ ದೇಶದಲ್ಲಿ 20,000 ಮಹಿಳಾ ಶಿಕ್ಷಕಿಯರು ಮತ್ತು 5,400 ಮಹಿಳಾ ಆರೋಗ್ಯ ಕಾರ್ಯಕರ್ತೆಯರ ತೀವ್ರ ಕೊರತೆ ಎದುರಾಗಲಿದೆ. ಮೂಲಭೂತ ಶಿಕ್ಷಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಶಿಕ್ಷಕಿಯರ ಸಂಖ್ಯೆ 2022 ರಲ್ಲಿ 73,000 ಇದ್ದದ್ದು, 2024 ರ ವೇಳೆಗೆ 66,000 ಕ್ಕೆ (ಶೇ. 9 ಕ್ಕಿಂತ ಹೆಚ್ಚು ಕುಸಿತ) ಇಳಿದಿದೆ.

ನಾಗರಿಕ ಸೇವೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಶೇ. 21 ರಿಂದ ಶೇ. 17.7 ಕ್ಕೆ ಕುಸಿದಿದೆ. ಅಕ್ಷರಸ್ಥ ತಾಯಂದಿರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ನವಜಾತ ಶಿಶುಗಳಲ್ಲಿ ಕಡಿಮೆ ತೂಕ, ಅಪೌಷ್ಟಿಕತೆ, ಲಸಿಕೆಗಳ ಕೊರತೆ ಮತ್ತು ಬೆಳವಣಿಗೆ ಕುಂಠಿತಗೊಳ್ಳುವ ಪ್ರಕರಣಗಳು ಹೆಚ್ಚಾಗಲಿದ್ದು, ದೇಶದ ಮುಂದಿನ ಪೀಳಿಗೆಯ ಆರೋಗ್ಯ ವ್ಯವಸ್ಥೆಯೇ ಅಪಾಯದಂಚಿಗೆ ತಲುಪಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us