ಡ್ಯುರಾಂಡ್ ರೇಖೆಯಲ್ಲಿ ಮುಂದುವರೆದ ರಕ್ತಸಿಕ್ತ ಸಂಘರ್ಷ: ವೈಫಲ್ಯಗಳಿಗೆ ನಮ್ಮನ್ನು ದೂಷಿಸಬೇಡಿ ಎಂದು ಪಾಕಿಸ್ತಾನಕ್ಕೆ ತಾಲಿಬಾನ್ ತಿರುಗೇಟು
ಡ್ಯುರಾಂಡ್ ಗಡಿ ರೇಖೆಯಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನ್ ತಾಲಿಬಾನ್ ನಡುವೆ ಭೀಕರ ಸಂಘರ್ಷ ಮುಂದುವರಿದಿದೆ. ತಮ್ಮ ಆಂತರಿಕ ವೈಫಲ್ಯಗಳಿಗೆ ಅಫ್ಘಾನಿಸ್ತಾನವನ್ನು ದೂಷಿಸಬೇಡಿ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಟಿಟಿಪಿ ಭಯೋತ್ಪಾದಕರ ಚಟುವಟಿಕೆಗಳು ಮತ್ತು ಗಡಿ ಬೇಲಿ ನಿರ್ಮಾಣ ವಿವಾದದಿಂದ ಸಂಬಂಧ ಹಳಸಿದೆ. ಉಭಯ ದೇಶಗಳ ವ್ಯಾಪಾರಕ್ಕೆ ಅಡ್ಡಿಯಾಗಿದ್ದು, ಪ್ರಾದೇಶಿಕ ಸ್ಥಿರತೆಗೆ ದೊಡ್ಡ ಬೆದರಿಕೆಯಾಗಿದೆ.

ಇಸ್ಲಾಮಾಬಾದ್, ಅಕ್ಟೋಬರ್ 13: ಡ್ಯುರಾಂಡ್ ಗಡಿ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳ ನಡುವೆ ಭೀಕರ ಸಶಸ್ತ್ರ ಸಂಘರ್ಷ ಮುಂದುವರೆದಿರುವಂತೆಯೇ, ಅಫ್ಘಾನ್ ತಾಲಿಬಾನ್ ಆಡಳಿತವು ಇಸ್ಲಾಮಾಬಾದ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪಾಕಿಸ್ತಾನವು ತನ್ನ ಆಂತರಿಕ ಆಡಳಿತಾತ್ಮಕ, ಭದ್ರತಾ ಹಾಗೂ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಅಫ್ಘಾನಿಸ್ತಾನದ ಮೇಲೆ ಆಧಾರರಹಿತ ದೂರುಗಳನ್ನು ಹೊರಿಸುತ್ತಿದೆ ಎಂದು ಅಫ್ಘಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಯುಲ್ಲಾ ಮುಜಾಹಿದ್ ಆಕ್ರೋಶ ಹೊರಹಾಕಿದ್ದಾರೆ.ಇಸ್ಲಾಮಾಬಾದ್‌ನ ಆಂತರಿಕ ಬಿಕ್ಕಟ್ಟು ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವುಗಳು ಸಮಗ್ರ ದಕ್ಷಿಣ ಹಾಗೂ ಮಧ್ಯ ಏಷ್ಯಾದ ಪ್ರಾದೇಶಿಕ ಸ್ಥಿರತೆಗೆ ದೊಡ್ಡ ಬೆದರಿಕೆಯಾಗಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ಕುರ್ರಂ ಜಿಲ್ಲೆಯ ಖರ್ಲಾಚಿ ಸೆಕ್ಟರ್‌ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಅಫ್ಘಾನ್ ಭಾಗದಿಂದ ಭಾರೀ ಫಿರಂಗಿ ಹಾಗೂ ಶೆಲ್ ದಾಳಿ ನಡೆದಿದ್ದು, ಗಡಿ ಭಾಗದಲ್ಲಿ ಯುದ್ಧ ಸದೃಶ ವಾತಾವರಣ ಸೃಷ್ಟಿಯಾಗಿದೆ. ಅಫ್ಘಾನಿಸ್ತಾನದ ದಂಡ್-ಎ-ಪಟಾನ್ ಕಡೆಯಿಂದ ಕುರ್ರಂ ಜಿಲ್ಲೆಗೆ ನುಸುಳಲು ಯತ್ನಿಸಿದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಉಗ್ರರಿಗೆ ಅಫ್ಘಾನ್ ಪಡೆಗಳು ಕವರ್-ಫೈರಿಂಗ್ ನೀಡಿವೆ ಎಂದು ಪಾಕ್ ಸೇನೆ ಆರೋಪಿಸಿದೆ.
ಸಾವು-ನೋವು: ಪಾಕಿಸ್ತಾನ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 12 ಉಗ್ರರು ಮತ್ತು ಅಫ್ಘಾನ್ ಸಿಬ್ಬಂದಿ ಹತರಾಗಿದ್ದು, ಪಾಕ್ ಸೇನೆಯ ನಯೀಬ್ ಸುಬೇದಾರ್ ಹಿದಾಯತ್ ಅಮಾನ್ (40) ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ, ತಾಲಿಬಾನ್‌ನ 203 ಮನ್ಸೌರಿ ಆರ್ಮಿ ಕಾರ್ಪ್ಸ್ ಪಾಕಿಸ್ತಾನದ ಮೇಲೆ ಆರೋಪ ಮಾಡಿದ್ದು, ಪಾಕ್ ಸೇನೆಯು ಪಾಕ್ಟಿಯಾ ಪ್ರಾಂತ್ಯದ ಮೇಲೆ 14 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಭಾರೀ ಫಿರಂಗಿ ಶೆಲ್‌ಗಳನ್ನು ಹಾರಿಸಿದೆ ಎಂದು ಪ್ರತ್ಯಾರೋಪ ಮಾಡಿದೆ.
ಮತ್ತಷ್ಟು ಓದಿ: ಪಾಕಿಸ್ತಾನವನ್ನು ವಿಭಜಿಸಲು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ಲ್ಯಾನ್? 4 ಪ್ರಾಂತ್ಯಗಳ ಪುನರ್‌ರಚನೆ ಚರ್ಚೆ
ಪಾಕಿಸ್ತಾನದ ಬಲೂಚಿಸ್ತಾನ, ಪಖ್ತೂನ್‌ಖ್ವಾ ಹಾಗೂ ಇಸ್ಲಾಮಾಬಾದ್‌ನಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳ ಬೆನ್ನಲ್ಲೇ, ಪಾಕ್ ಸೇನೆಯು ‘ಆಪರೇಷನ್ ಗಜಬ್ ಲಿಲ್-ಹಕ್’ ಹೆಸರಿನಲ್ಲಿ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ.
ವಾಯುದಾಳಿಗಳು ಹಾಗೂ ಡ್ರೋನ್ ಸಮರ: ಪೂರ್ವ ಅಫ್ಘಾನಿಸ್ತಾನದಲ್ಲಿರುವ ಟಿಟಿಪಿ ಹಾಗೂ ಐಸಿಸ್-ಖೊರಾಸನ್ ತರಬೇತಿ ಶಿಬಿರಗಳ ಮೇಲೆ ಪಾಕಿಸ್ತಾನ ವಾಯುಪಡೆ ನಿಖರ ಬಾಂಬ್ ದಾಳಿಗಳನ್ನು ನಡೆಸಿದೆ. ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲೂ ವಾಯುದಾಳಿ ನಡೆದಿದೆ.
ಅಫ್ಘಾನ್ನಿಂದ ಗುಲಿಸ್ತಾನ್ ವಲಯಕ್ಕೆ ಹಾರಿಸಲಾದ 8 ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈದ್ ಸಂದರ್ಭಗಳಲ್ಲಿ ಕತಾರ್ ದೇಶವು ನಡೆಸಿದ ಶಾಂತಿ ಸಂಧಾನ ಮತ್ತು ಕದನ ವಿರಾಮಗಳು ದೀರ್ಘಕಾಲ ಉಳಿಯದೆ, ಗಡಿಯಲ್ಲಿ ಶಾಂತಿ ಸಂಪೂರ್ಣವಾಗಿ ಕದಡಿದೆ.
ಡ್ಯುರಾಂಡ್ ರೇಖೆ ವಿವಾದ: ಬ್ರಿಟಿಷರ ಕಾಲದಲ್ಲಿ ಎಳೆಯಲಾದ 2,640 ಕಿ.ಮೀ ಉದ್ದದ ಡ್ಯುರಾಂಡ್ ಗಡಿ ರೇಖೆಯನ್ನು ಅಫ್ಘಾನಿಸ್ತಾನದ ಯಾವುದೇ ಸರ್ಕಾರವೂ ಅಧಿಕೃತ ಅಂತಾರಾಷ್ಟ್ರೀಯ ಗಡಿಯೆಂದು ಒಪ್ಪಿಕೊಂಡಿಲ್ಲ. ಪಾಕಿಸ್ತಾನವು ಗಡಿಗೆ ಬೇಲಿ ಹಾಕುತ್ತಿರುವುದನ್ನು ತಾಲಿಬಾನ್ ಬಲವಾಗಿ ವಿರೋಧಿಸುತ್ತಿದೆ.
2021ರಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನ ಸಂಭ್ರಮಿಸಿತ್ತು. ಆದರೆ ಈಗ ಅದೇ ಅಫ್ಘಾನ್ ನೆಲವನ್ನು ಬಳಸಿಕೊಂಡು ಟಿಟಿಪಿ ಉಗ್ರರು ಪಾಕಿಸ್ತಾನದ ಮೇಲೆಯೇ ನಿರಂತರ ದಾಳಿ ನಡೆಸುತ್ತಿರುವುದು ಪಾಕ್-ತಾಲಿಬಾನ್ ಸಂಬಂಧವನ್ನು ಸಂಪೂರ್ಣವಾಗಿ ಹಳಸುವಂತೆ ಮಾಡಿದೆ. ನಿರಂತರ ಗುಂಡಿನ ಚಕಮಕಿಯಿಂದಾಗಿ ತೋರಖಮ್, ಚಮನ್ ಮತ್ತು ಖರ್ಲಾಚಿ ಗಡಿ ಮಾರ್ಗಗಳು ಪದೇ ಪದೇ ಬಂದ್ ಆಗುತ್ತಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ಸ್ಥಗಿತಗೊಂಡು ಗಡಿ ಪ್ರದೇಶದ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




