ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳುತ್ತಲೇ, ಬುರ್ಕಾ ಧರಿಸದ ಮಹಿಳೆಯ ಹತ್ಯೆ ಮಾಡಿದ ತಾಲಿಬಾನಿಗಳು
ತಾಲಿಬಾನ್ ಏನೇ ಹೇಳಿದರೂ ಅಫ್ಘಾನಿಸ್ತಾನದಲ್ಲಿ ಅವರು ಕ್ರೂರ ಆಡಳಿತ ನಡೆಸಿಯೇ ತೀರುತ್ತಾರೆ. ಅವರ ಬಿಗಿ ಹಿಡಿತದಲ್ಲಿ ಅಫ್ಘಾನ್ ನಲುಗಲಿದೆ. ಅವರ ಯಾವ ಭರವಸೆಯನ್ನೂ ನಂಬುವಂಥದ್ದಲ್ಲ ಎಂಬ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗಿವೆ.
ಅಫ್ಘಾನಿಸ್ತಾನ (Afghanistan)ವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು (Taliban Terrorists) ಇದೀಗ ನಿಧಾನವಾಗಿ ದೇಶಾದ್ಯಂತ ತಮ್ಮ ಉಗ್ರ ಆಡಳಿತವನ್ನು ಶುರು ಮಾಡಿದ್ದಾರೆ. ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾಲಿಬಾನಿಗಳು ತಾವು ಬದಲಾಗಿದ್ದಾಗಿ ಹೇಳಿಕೊಂಡಿದ್ದರು. ಕಳೆದ 20 ವರ್ಷಗಳ ಹಿಂದಿನಂತೆ ಈಗ ಆಡಳಿತ ನಡೆಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ಸರ್ಕಾರಿ ಉದ್ಯೋಗಕ್ಕೆ ಮಹಿಳೆಯರು ಹಿಂತಿರುಗಿ ಎಂದೂ ಕರೆ ನೀಡಿದ್ದರು. ಆದರೆ ಇದೀಗ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಒಂದು ಆತಂಕಕಾರಿ ಸುದ್ದಿ ವರದಿ ಮಾಡಿವೆ. ಮಹಿಳಾ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಉಗ್ರರು ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಹಾಗಿಲ್ಲ. ಕಾಬೂಲ್ ಮತ್ತು ಇತರ ನಗರಗಳಲ್ಲಿ ಮಹಿಳೆಯರಿಗೆ ತಾಲಿಬಾನಿಗಳು ಹೊಡೆದು, ಹಿಂಸಿಸುತ್ತಿದ್ದಾರೆ. ಅಲ್ಲದೆ, ಮಾಜಿ ಸರ್ಕಾರಿ ನೌಕರರನ್ನು ಹುಡುಕಿಕೊಂಡು ರಸ್ತೆಗಳಲ್ಲಿ ಅಲೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ತಖರ್ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರನ್ನು ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ. ಆಕೆ ತಲೆ-ಮುಖವನ್ನು ಮುಚ್ಚದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದಳು ಎಂಬ ಕಾರಣಕ್ಕೆ ಅವಳನ್ನು ಹತ್ಯೆ ಮಾಡಲಾಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿ ಆಕೆಯ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ತಾಲಿಬಾನ್ ಏನೇ ಹೇಳಿದರೂ ಅಫ್ಘಾನಿಸ್ತಾನದಲ್ಲಿ ಅವರು ಕ್ರೂರ ಆಡಳಿತ ನಡೆಸಿಯೇ ತೀರುತ್ತಾರೆ. ಅವರ ಬಿಗಿ ಹಿಡಿತದಲ್ಲಿ ಅಫ್ಘಾನ್ ನಲುಗಲಿದೆ. ಅವರ ಯಾವ ಭರವಸೆಯನ್ನೂ ನಂಬುವಂಥದ್ದಲ್ಲ. ಅದಕ್ಕೆ ಉದಾಹರಣೆ ಈ ಮಹಿಳೆಯ ಹತ್ಯೆ. ಅತ್ತ ತಾಲಿಬಾನ್ ವಕ್ತಾರ, ತಾವು ಮಹಿಳೆಯರ ಹಕ್ಕು ಗೌರವಿಸುತ್ತೇವೆ ಎಂದು ಹೇಳುತ್ತಾರೆ..ಇತ್ತ ಬುರ್ಕಾ ಧರಿಸದೆ ಇರುವ ಕಾರಣಕ್ಕೆ ಮಹಿಳೆಯ ಹತ್ಯೆಯಾಗುತ್ತದೆ. ಅಂದ ಮೇಲೆ ಅವರ ಮೇಲೆ ವಿಶ್ವಾಸ ಹುಟ್ಟುವುದಾದರೂ ಹೇಗೆ ಎಂದು ಕೆಲವು ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ.
ದೇವರ ಮೇಲೆ ಭಾರ ಅದೆಷ್ಟೋ ಜನರು ದೇಶವನ್ನು ಬಿಟ್ಟು ಹೊರಟುಹೋಗಿದ್ದಾರೆ. ಹೋಗಲಾಗದವರು ತಾವು ದೇವರ ಮೇಲೆ ಭಾರ ಹಾಕಿ ಉಳಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಇಲ್ಲಿನ ಜನರ ಮನಸಲ್ಲಿ ಓಡುತ್ತಿರುವುದು ಎರಡೇ ವಿಚಾರ.. ಒಂದು ಹೇಗಾದರೂ ಸರಿ ಇಲ್ಲಿಂದ ಪಾರಾಗಬೇಕು ಇಲ್ಲವೇ ಅನಿವಾರ್ಯವೆಂದು ಈ ಉಗ್ರರ ಆಡಳಿತದೊಟ್ಟಿಗೇ ಉಳಿಯಬೇಕು ಎಂದು 22 ವರ್ಷದ ಯುವತಿಯೊಬ್ಬಳು ಕಾಬೂಲ್ನಲ್ಲಿರುವ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ನಮಗೆ ಇರುವ ಭರವಸೆಯೆಂದರೆ ನಮ್ಮ ದೇವರು ಎಂದೂ ಹೇಳಿದ್ದಾರೆ.
ಭಾನುವಾರ ಇಡೀ ಅಫ್ಘಾನಿಸ್ತಾನ ತಾಲಿಬಾನಿಗಳ ವಶಕ್ಕೆ ಸೇರ್ಪಡೆಯಾಗಿದೆ. ಅಲ್ಲಿನ್ನು ಶೆರಿಯಾ ಆಡಳಿತ ಶುರುವಾಗಲಿದ್ದು, ಕಟ್ಟಾ ಸಂಪ್ರದಾಯಬದ್ಧರಾಗಿ ಜನರು ಜೀವನ ನಡೆಸಬೇಕಾಗುತ್ತದೆ. ಅಫ್ಘಾನಿಸ್ತಾನದಲ್ಲಾಗುತ್ತಿರುವ ಬೆಳವಣಿಗೆಯ ಪ್ರತಿ ಹಂತವನ್ನು ವಿಶ್ವದ ಇತರ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತ ಬರುತ್ತಿವೆ. ಅಲ್ಲಿನ ನಿರಾಶ್ರಿತರಿಗೆ ಜಾಗ ಕೊಡಲು ಕೆಲವು ದೇಶಗಳು ಮುಂದೆ ಬಂದಿವೆ. ಆದರೆ ಯಾವುದೂ ಸದ್ಯಕ್ಕೆ ಸುಲಭವಂತೂ ಅಲ್ಲ.
ಇದನ್ನೂ ಓದಿ: New Novel : ಅಚ್ಚಿಗೂ ಮೊದಲು ; ‘ಎಲ್ಲೋ ಜೋಗಪ್ಪ ನಿನ್ನರಮನೆ‘ ಹೊಸ ಕಾದಂಬರಿಯೊಂದಿಗೆ ಕುಂವೀ ಬಂದರು ದಾರಿಬಿಡಿ
(Taliban kill woman in Takhar for being in public without a head covering)