ಪಟ್ಟ ಬಿಟ್ಟುಕೊಡ್ತಾರಾ ಅಥವಾ ಪಟ್ಟು ಹಿಡಿದು ಕೂರ್ತಾರಾ? ಏನಾಗ್ತಿದೆ ಅಮೆರಿಕಾದಲ್ಲಿ!
ಬೈಡನ್ ಅಧ್ಯಕ್ಷರಾದರೆ ಪ್ರಮಾಣ ವಚನ ಸಮಾರಂಭಕ್ಕೆ ನೀವು ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತ್ಯುತ್ತರಿಸಿದ ಟ್ರಂಪ್, ನನಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಿದೆ ಅದನ್ನಿಲ್ಲಿ ಹೇಳುವುದಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ.
ಅತ್ಯಂತ ಕುತೂಹಲ ಹುಟ್ಟಿಸಿದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. 306 ಸ್ಥಾನ ಪಡೆದಿರುವ ಬೈಡನ್ ಗೆಲುವಿನ ನಗೆ ಬೀರಿದ್ದರೆ, 232 ಸೀಟ್ ಹೊಂದಿರುವ ಟ್ರಂಪ್ ಗುರಿ ಮುಟ್ಟಲಾಗದೇ, ಸೋಲನ್ನೂ ಒಪ್ಪಿಕೊಳ್ಳಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಸದ್ಯ ಜನವರಿ ತಿಂಗಳು ಸನ್ನಿಹಿತವಾಗುತ್ತಿದ್ದು ಟ್ರಂಪ್ ಮನಸ್ಥಿತಿ ಹೇಗಿದೆ? ದೊಡ್ಡಣ್ಣ ಟ್ರಂಪ್ ನಿಜಕ್ಕೂ ದೊಡ್ಡ ಮನಸ್ಸು ಮಾಡಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿದ್ದಾರಾ? ಎಂಬಿತ್ಯಾದಿ ಸಂಗತಿಗಳು ಕುತೂಹಲ ಮೂಡಿಸಿವೆ. ಆ ಕುರಿತಾದ ಸಂಕ್ಷಿಪ್ತ ವಿವರ ಇಲ್ಲಿದೆ.
ಫಲಿತಾಂಶ ಎಣಿಕೆಯ ಸಂದರ್ಭದಿಂದಲೂ ಅಸಮಾಧಾನ ಹೊರಹಾಕುತ್ತಿರುವ ಟ್ರಂಪ್ ಇನ್ನೂ ತಣ್ಣಗಾಗಿಲ್ಲ. ವೈಟ್ಹೌಸ್ನಲ್ಲಿ ಗುರುವಾರ ಆಯೋಜಿಸಿದ್ದ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಚುನಾವಣೆ ಕುರಿತು ಮಾತನಾಡಿದ ಅವರು ಫಲಿತಾಂಶದ ಪ್ರಕಾರ ನಾನು ನಿರ್ಗಮಿಸುವುದು ಖಚಿತವಾದರೂ ಜನವರಿಯ ತನಕ ಇನ್ನೂ ಸುಮಾರು ಬೆಳವಣಿಗೆಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ. ಅಮೆರಿಕಾದಂತಹ ರಾಷ್ಟ್ರದಲ್ಲೂ ಅವ್ಯವಹಾರ ಆಗಿದೆ, ಕಂಪ್ಯೂಟರ್ಗಳು ಹ್ಯಾಕ್ ಆಗಿವೆ ಎಂದರೆ ಅದು ಸಣ್ಣ ಸಂಗತಿಯಲ್ಲ. ಈ ಮೋಸಗಳು ಸಾಬೀತಾದರೆ ಪರಿಸ್ಥಿತಿ ಕಠಿಣವಾಗಲಿದೆ ಎಂದು ಕಿಡಿಕಾರಿದ್ದಾರೆ.
ಬೈಡೆನ್ ಗೆಲುವನ್ನು ಚುನಾವಣಾ ಆಯೋಗ ಘೋಷಿಸಿದರೆ.. ನಾನು ವೈಟ್ ಹೌಸ್ನಿಂದ ನಿರ್ಗಮಿಸುವೆ: ಟ್ರಂಪ್ ಅಮೆರಿಕಾದ ಚುನಾವಣಾ ಆಯೋಗ Electoral college ಬೈಡನ್ ಅವರನ್ನು ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಿಸಿದರೆ ನಾನು ನಿರ್ಗಮಿಸಲು ಸಿದ್ಧನಿದ್ದೇನೆ. ಆದರೆ, ಬೈಡನ್ ಅಧ್ಯಕ್ಷರಾದರೆ ಅದು ಚುನಾವಣಾ ಆಯೋಗದ ಮೋಸದಾಟದ ಫಲವೇ ಆಗಿರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಬರೀ ಮೋಸವೇ ಆಗಿದ್ದು ಜನರಿಗೆ ಬಹುಬೇಗನೇ ಅದು ಅರ್ಥವಾಗಲಿದೆ ಎಂದು ಹೇಳಿದ್ದಾರೆ.
ಒಂದುವೇಳೆ ಬೈಡನ್ ಅಧ್ಯಕ್ಷರಾದರೆ ಪ್ರಮಾಣ ವಚನ ಸಮಾರಂಭಕ್ಕೆ ನೀವು ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತ್ಯುತ್ತರಿಸಿದ ಟ್ರಂಪ್, ನನಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಿದೆ. ಅದನ್ನಿಲ್ಲಿ ಹೇಳುವುದಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ. ಜೊತೆಗೆ, ವೈಟ್ಹೌಸ್ನಲ್ಲಿ ಇದು ನನ್ನ ಕೊನೆಯ ಕಾರ್ಯಕ್ರಮವಲ್ಲ, ಮತ್ತೆ ಇಲ್ಲಿ ನಿಮಗೆ ಸಿಗಲಿದ್ದೇನೆ. ಸಾಗುವ ದಾರಿ ಇನ್ನೂ ದೂರವಿದೆ ಎಂಬ ಉತ್ತರ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೂ ಕೆಂಡಕಾರಿರುವ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೀವು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಇತ್ತ ಅಧಿಕಾರಿಗಳು ಜೋ ಬೈಡನ್ಗೆ ಅಧಿಕಾರ ಹಸ್ತಾಂತರಿಸಲು ತಯಾರಿ ನಡೆಸುತ್ತಿದ್ದರೆ ಟ್ರಂಪ್ ಮಾತ್ರ ತಮ್ಮ ವಾಗ್ದಾಳಿಯನ್ನು ಇನ್ನೂ ನಿಲ್ಲಿಸಿಲ್ಲ. ಈ ಬೆಳವಣಿಗೆಗಳು ಸದ್ಯ ಕೆಲ ಗೊಂದಲಗಳಿಗೆ ಕಾರಣವಾಗಿದ್ದು ಟ್ರಂಪ್ ಇನ್ನೇನಾದರೂ ವ್ಯೂಹ ರಚಿಸುತ್ತಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
Will leave White House if Electoral College declares Biden victory, says Trump
Read @ANI Story | https://t.co/A4uOZ93uxw pic.twitter.com/MJz5xlLXN6
— ANI Digital (@ani_digital) November 27, 2020