ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಇಲ್ಲವಾದಲ್ಲಿ ಭಾರೀ ಸುಂಕ ಪಾವತಿಗೆ ಸಿದ್ಧರಾಗಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ

ಭಾರತದ ವಿರುದ್ಧ ಮತ್ತೊಮ್ಮೆ ಕಟುವಾದ ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರೀ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಮಾಸ್ಕೋದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಇಲ್ಲವಾದಲ್ಲಿ ಭಾರೀ ಸುಂಕ ಪಾವತಿಗೆ ಸಿದ್ಧರಾಗಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್​ ಟ್ರಂಪ್

Updated on: Oct 20, 2025 | 9:43 AM

ವಾಷಿಂಗ್ಟನ್, ಅಕ್ಟೋಬರ್ 20: ದೀಪಾವಳಿಯಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾರತಕ್ಕೆ ಸುಂಕಗಳ ಬಗ್ಗೆ ಬಲವಾದ ಎಚ್ಚರಿಕೆ ರವಾನಿಸಿದ್ದಾರೆ.  ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವವರೆಗೂ ಭಾರತ ಭಾರಿ ಸುಂಕ ಪಾವತಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ, ಮತ್ತಷ್ಟು ಸುಂಕಗಳನ್ನು ಪಾವತಿಸಲು ಸಿದ್ಧರಾಗಿರಿ ಎಂದು ಪುನರುಚ್ಚರಿಸಿದ್ದಾರೆ.

ಇದಲ್ಲದೆ, ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಈಗಾಗಲೇ ಹೇಳಿದೆ.

ಒನ್‌ಫೋರ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ಭಾರೀ ಸುಂಕ ವಿಧಿಸುವುದಾಗಿ ಹೇಳಿದರು. ರಷ್ಯಾದ ತೈಲ ಖರೀದಿಸುವ ವಿಷಯದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದು, ಇದುವರೆಗಿನ ಅತ್ಯಧಿಕವಾಗಿದೆ ಎಂಬುದು ಗಮನಾರ್ಹ. ಭಾರತದ ರಷ್ಯಾದ ತೈಲ ಖರೀದಿಯು ಉಕ್ರೇನ್ ಯುದ್ಧದಲ್ಲಿ ಪುಟಿನ್ ಅವರ ಪಾಲ್ಗೊಳ್ಳುವಿಕೆಗೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷರು ವಾದಿಸುತ್ತಾರೆ.

ಮತ್ತಷ್ಟು ಓದಿ: ರಷ್ಯನ್ ತೈಲ ಖರೀದಿಸಲ್ಲ ಅಂತ ಟ್ರಂಪ್​ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು

ಪಾಶ್ಚಿಮಾತ್ಯ ದೇಶಗಳು ತೈಲವನ್ನು ಖರೀದಿಸಲು ನಿರಾಕರಿಸಿದ್ದರ ಹೊರತಾಗಿಯೂ ಮತ್ತು 2022 ರಲ್ಲಿ ಉಕ್ರೇನ್ ಜೊತೆಗಿನ ರಷ್ಯಾದ ಸಂಘರ್ಷದ ಹೊರತಾಗಿಯೂ ಭಾರತವು ಮಾಸ್ಕೋದಿಂದ ತೈಲವನ್ನು ಖರೀದಿಸುತ್ತಿದೆ. ರಷ್ಯಾ ಭಾರತಕ್ಕೆ ಕಡಿಮೆ ಬೆಲೆಗೆ ತೈಲವನ್ನು ಪೂರೈಸುತ್ತಿದೆ.

ಏತನ್ಮಧ್ಯೆ, ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಮತ್ತಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಪದೇ ಪದೇ ಬೆದರಿಕೆ ಹಾಕಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವುದು ನಮ್ಮ ಆದ್ಯತೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.
ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಅಮೆರಿಕ ಒತ್ತಡ ಹೆಚ್ಚಿಸುತ್ತಿದೆ.

ರಷ್ಯಾದಿಂದ ತೈಲ ಖರೀದಿಸುವ ದೇಶಗಳು ಪರೋಕ್ಷವಾಗಿ ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಟ್ರಂಪ್ ಆಡಳಿತ ಹೇಳುತ್ತಿದೆ. ಭಾರತ-ಯುಎಸ್ ವ್ಯಾಪಾರ ಮಾತುಕತೆಯಲ್ಲಿ ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದು ಪ್ರಮುಖ ಅಡಚಣೆಯಾಗಿ ಉಳಿದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:43 am, Mon, 20 October 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us