Turkey Floods: ಟರ್ಕಿಯಲ್ಲಿ ಭೀಕರ ಪ್ರವಾಹ; ಸಾವಿನ ಸಂಖ್ಯೆ 70ಕ್ಕೆ ಏರಿಕೆ, 40 ಜನ ನಾಪತ್ತೆ
ಕಳೆದ ವಾರದಿಂದ ಟರ್ಕಿಯಲ್ಲಿ ಪ್ರವಾಹ ಉಂಟಾಗಿದ್ದು, ಮಳೆ ನೀರಿನಲ್ಲಿ ಕಾರುಗಳು ತೇಲಿಹೋಗಿರುವ ವಿಡಿಯೋಗಳು ವೈರಲ್ ಆಗಿವೆ.
ಇಸ್ತಾನ್ಬುಲ್: ಟರ್ಕಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಟರ್ಕಿಯಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇನ್ನೂ 47 ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರದಿಂದ ಟರ್ಕಿಯಲ್ಲಿ ಪ್ರವಾಹ ಉಂಟಾಗಿದ್ದು, ಮಳೆ ನೀರಿನಲ್ಲಿ ಕಾರುಗಳು ತೇಲಿಹೋಗಿರುವ ವಿಡಿಯೋಗಳು ವೈರಲ್ ಆಗಿವೆ.
ಪ್ರವಾಹದಿಂದ ಬೀದಿಗಳು, ಕಟ್ಟಡಗಳು, ಸೇತುವೆಗಳು ಪೂರ್ತಿ ಮುಳುಗಿ ಹೋಗಿವೆ. ಕಾಸ್ತಾಮೊನು ಎಂಬ ಊರೊಂದರಲ್ಲೇ ಪ್ರವಾಹದಿಂದ 60 ಜನರು ಸಾವನ್ನಪ್ಪಿದ್ದಾರೆ. ಉಳಿದ 10 ಜನರು ಬರ್ಟಿನ್ ಹಾಗೂ ಸಿನೋಪ್ನಲ್ಲಿ ಮೃತಪಟ್ಟಿದ್ದಾರೆ. ಈಗಾಗಲೇ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ. ಟರ್ಕಿಯ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬಹುತೇಕ ಊರುಗಳು ಮುಳುಗಡೆಯಾಗಿವೆ.
ಪ್ರವಾಹ ಉಂಟಾದ ಸ್ಥಳಗಳಿಂದ 47 ಜನರು ನಾಪತ್ತೆಯಾಗಿದ್ದು, ಅವರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಟರ್ಕಿಯ ಭೀಕರ ಪ್ರವಾಹದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹಲವರನ್ನು ಏರ್ಲಿಫ್ಟ್ ಮೂಲಕವೂ ರಕ್ಷಣೆ ಮಾಡಲಾಗಿದೆ. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಕುಸಿದಿರುವ ಕಟ್ಟಡಗಳ ಸುತ್ತಮುತ್ತ ರಕ್ಷಣಾ ತಂಡಗಳ ಸಿಬ್ಬಂದಿ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಾಪತ್ತೆಯಾದವರು ಕೆಸರಿನಡಿ ಹೂತುಹೋಗಿದ್ದು, ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇದನ್ನೂ ಓದಿ: West Bengal Flood: ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರವಾಹ; ನೆರವು ನೀಡುವುದಾಗಿ ಸಿಎಂ ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಭರವಸೆ
Uttara Kannada Flood: ಉತ್ತರ ಕನ್ನಡ: ಪ್ರವಾಹ, ಭೂಕುಸಿತದಿಂದ 737 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಕ್ಕೆ ಹಾನಿ
(Turkey floods 70 Dead 47 People Still Missing After Turkey Floods Rescue Operation Continues)