ಕರ್ನಾಟಕದ ವಿಧಾನ ಸಭೆಯಲ್ಲಿ ಮಾತ್ರ ಅಲ್ಲ, ಯುನೈಟೆಡ್ ಕಿಂಗಡಮ್ ಸಂಸತ್ತಿನಲ್ಲೂ ಇಂಥದ್ದು ನಡೆಯುತ್ತದೆ. ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ (Conservative party) ಸಂಸತ್ ಸದಸ್ಯರೊಬ್ಬರು ಶನಿವಾರದಂದು ಯಾವುದೋ ಹುಚ್ಚು ಆವೇಶದ ಕ್ಷಣಕ್ಕೆ ಸಿಕ್ಕು ಹೌಸ್ ಆಫ್ ಕಾಮನ್ಸ್‌ನಲ್ಲಿ (House of Commons) ಅಶ್ಲೀಲ (ನೀಲಿ) (pornography) ಚಿತ್ರವನ್ನು ಎರಡು ಬಾರಿ ತನ್ನ ಫೋನ್‌ನಲ್ಲಿ ವೀಕ್ಷಿಸಿರುವುದನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದರು. ಸಂಸತ್ತಿನ ಮಾನದಂಡಗಳ ಕಮಿಷನರ್ ಅವರೆದುರು ಖುದ್ದು ನೀಲ್ ಪ್ಯಾರಿಶ್ (Neil Parish) ತಮ್ಮಿಂದಾದ ಪ್ರಮಾದ ಒಪ್ಪಿಕೊಂಡ ಬಳಿಕ ಕನ್ಸರ್ವೇಟಿವ್ ಪಕ್ಷ ಅವರನ್ನು ಅಮಾನತುಗೊಳಿಸಿದೆ.
ತನಿಖೆ ಜಾರಿಯಲ್ಲಿದ್ದಾಗ ಸಂಸತ್ ಸದಸ್ಯನಾಗಿ ಮುಂದುವರಿಯುವೆ ಅಂತ ಹೇಳಿದ್ದ ಪ್ಯಾರಿಶ್ ಶನಿವಾರ ರಾಜೀನಾಮೆ ಸಲ್ಲಿಸಿದರು.
‘ನನ್ನ ವರ್ತನೆಯಿಂದ ಕುಟುಂಬಕ್ಕೆ ಮತ್ತು ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರಕ್ಕೆ ಅಪಮಾನಕ್ಕೀಡು ಮಾಡಿದ ಅಂಶವನ್ನು ನಾನು ಅಂತಿಮವಾಗಿ ಮನವರಿಕೆ ಮಾಡಿಕೊಂಡೆ. ಸಂಸತ್ ಸದಸ್ಯನಾಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಅನ್ನೋದು ನನಗೆ ಖಾತ್ರಿಯಾಯಿತು,’ ಎಂದು ಶನಿವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಪ್ಯಾರಿಶ್ ಹೇಳಿದ್ದಾರೆ.
ಕೃಷಿಕರೂ ಆಗಿರುವ ಪ್ಯಾರಿಶ್ ಅವರು ಒಂದು ಬ್ರ್ಯಾಂಡ್ ಟ್ರ್ಯಾಕ್ಟರ್ ಗಳಿಗಾಗಿ ಫೋನಲ್ಲಿ ಸರ್ಚ್ ಮಾಡುತ್ತಿದ್ದಾಗ ಅದೇ ಹೆಸರಲ್ಲಿದ್ದ ಪೋರ್ನೊ ವೆಬ್ ಸೈಟ್ ಓಪನ್ ಆಗಿದ್ದು ಆಕಸ್ಮಿಕ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ಹೇಳಿದ್ದಾರೆ. ‘ಅದರೆ ಅದನ್ನು ನಾನು ಸ್ವಲ್ಪ ಹೊತ್ತು ವೀಕ್ಷಿಸಿದ್ದು ಮಾತ್ರ ಸತ್ಯ, ನಾನು ಹಾಗೆ ಮಾಡಬಾರದಿತ್ತು,’ ಎಂದು ಪ್ಯಾರಿಶ್ ಹೇಳಿದ್ದಾರೆ.
‘ಆದರೆ, ನನ್ನ ಮಹಾಪರಾಧವೆಂದರೆ ನಾನು ಪುನಃ ವೆಬ್ಸೈಟ್ ಗೆ ಹೋಗಿದ್ದು, ಅದು ಆಕಸ್ಮಿಕವಾಗಿರಲಿಲ್ಲ, ಅದೇ ನನ್ನ ಪಾಲಿಗೆ ಮುಳುಬಾಯಿತು,’ ಅಂತ ಪ್ಯಾರಿಶ್ ಹೇಳಿದ್ದಾರೆ.
ನಿಮ್ಮ ಮನಸ್ಸಿನಲ್ಲಿ ಆಗ ಏನು ನಡೆಯುತಿತ್ತು ಎಂದು ಸಂದರ್ಶಕ ಕೇಳಿದಾಗ, ‘ಅದೊಂದು ಹುಚ್ಚುತನದ ಕ್ಷಣವಾಗಿತ್ತು’ ಎಂದು ಪ್ಯಾರಿಶ್ ಹೇಳಿದರು.
ಈ ವಾರದ ಆರಂಭದಲ್ಲಿ ಬ್ರಿಟಿಷ್ ಸರ್ಕಾರದ ಒಬ್ಬ ಸಚಿವೆ, ಕಾಮನ್ಸ್ ಚೇಂಬರ್ ನಲ್ಲಿ ತಮ್ಮ ಪಕ್ಕ ಕುಳಿತಿದ್ದ ಪುರುಷ ಸಹೋದ್ಯೋಗಿಯೊಬ್ಬರು ಫೋನಲ್ಲಿ ಪೋರ್ನೊಗ್ರಾಫಿ ವೀಕ್ಷಿಸುತ್ತಿದ್ದರು ಮತ್ತು ಕಮಿಟಿಯ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲೂ ಅದೇ ಸದಸ್ಯ ಪೋರ್ನೊಗ್ರಾಫಿ ನೋಡುತ್ತಿದ್ದರು ಎಂದು ಬ್ರಿಟಿಷ್ ಮಾಧ್ಯಮವೊಂದಕ್ಕೆ ತಿಳಿಸಿದ್ದರು.
‘ನನ್ನಿಂದಾದ ಪ್ರಮಾದದ ಬಗ್ಗೆ ವಿಷಾದವಿದೆ, ಅದರೆ ನನ್ನ ಸುತ್ತಮುತ್ತ ಕುಳಿತವರು ನಾನು ವೀಕ್ಷಿಸುತ್ತಿದ್ದುದನ್ನು ನೋಡಬೇಕೆಂಬ ಉದ್ದೇಶ ನನಗೆ ಖಂಡಿತ ಇರಲಿಲ್ಲ,’ ಎಂದು ಪ್ಯಾರಿಶ್ ಹೇಳಿದ್ದಾರೆ.
‘ನಾನು ಮಾಡಿರುವುದನ್ನು ಯಾವತ್ತೂ ಸಮರ್ಥಿಸಿಕೊಳ್ಳಲಾರೆ. ನಾನು ಮಾಡಿದ್ದು ಅಕ್ಷರಶಃ ತಪ್ಪು, ಆ ಸಮಯದಲ್ಲಿ ನನ್ನ ಜ್ಞಾನೇಂದ್ರಿಯಗಳು ಹುಲ್ಲು ಮೇಯಲು ಹೋಗಿದ್ದವೇನೋ ಎನಿಸುತ್ತಿದೆ,’ ಎಂದು ಪ್ಯಾರಿಶ್ ಹೇಳಿದ್ದಾರೆ.
ಪ್ಯಾರಿಶ್ ಅವರು ರಾಜೀನಾಮೆ ನೀಡುವ ಮೊದಲು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಪ್ಯಾರಿಶ್ ಅವರ ಪತ್ನಿಯು ಇದಕ್ಕಿಂತ ಮೊದಲು ಅವರು ಯಾವತ್ತೂ ಇಂಥ ಕೆಲಸ ಮಾಡಿಲ್ಲ, ಅವರೊಬ್ಬ ಸುಂದರ ಪ್ರವೃತ್ತಿಯ ವ್ಯಕ್ತಿಯಾಗಿದ್ದಾರೆ, ಎಂದು ಹೇಳಿದ್ದರು.
ಇದನ್ನೂ ಓದಿ: Fuel Shortage: ಯುನೈಟೆಡ್ ಕಿಂಗ್ಡಮ್ನಲ್ಲಿ ಇಂಧನ ಕೊರತೆ; ಸಮಸ್ಯೆ ಸರಿಪಡಿಸಲು ರಸ್ತೆಗೆ ಇಳಿಯಲಿದೆ ಸೇನೆ