ಗುಟ್ಟಾಗಿ ಮದುವೆಯಾದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್; ಕೊನೇ ಕ್ಷಣದಲ್ಲಿ ಅತಿಥಿಗಳಿಗೆ ಆಹ್ವಾನ
ಬೋರಿಸ್ ಜಾನ್ಸನ್ರ ವೈವಾಹಿಕ ಜೀವನ ಸ್ವಲ್ಪ ಸಂಕೀರ್ಣವಾಗಿಯೇ ಇದ್ದು, ಈ ಹಿಂದೆ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹಿಂದಿನ ಪತ್ನಿ ಮರಿನಾ ವೀಲರ್. ಅವರೊಬ್ಬ ವಕೀಲೆಯಾಗಿದ್ದರು.
ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ರನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ವೆಸ್ಟ್ಮಿನಿಸ್ಟರ್ ಕ್ಯಾಥೆಡ್ರಲ್ನಲ್ಲಿ ಶನಿವಾರ ಮದುವೆ ಸಮಾರಂಭ ನಡೆದಿತ್ತು. ಆದರೆ ಅದು ತುಂಬ ಗುಟ್ಟಾಗಿ, ಖಾಸಗಿಯಾಗಿತ್ತು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಬಗ್ಗೆ ಬೋರಿಸ್ ಜಾನ್ಸನ್ ಕಚೇರಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
ಬೋರಿಸ್ ಜಾನ್ಸನ್ರ ವಿವಾಹದ ಬಗ್ಗೆ ಅವರ ಕಚೇರಿಯ ಹಿರಿಯ ಅಧಿಕಾರಿಗಳಿಗೇ ತಿಳಿದಿರಲಿಲ್ಲ. ಅತಿಥಿಗಳಿಗೂ ಕೊನೇ ಕ್ಷಣದಲ್ಲಿ ಆಹ್ವಾನ ನೀಡಲಾಯಿತು. ಕೊವಿಡ್ 19 ಕಾರಣದಿಂದ, ಲಂಡನ್ನಲ್ಲಿ ಯಾವುದೇ ವಿವಾಹವಾದರೂ ಕೇವಲ 30 ಜನರಿಗೆ ಮಾತ್ರ ಅವಕಾಶ ಇದೆ ಎಂದು ಸನ್ ಮತ್ತು ಮೇಲ್ ಸುದ್ದಿಪತ್ರಿಕಗಳಲ್ಲಿ ವರದಿಯಾಗಿದೆ. ಶನಿವಾರ ಮಧ್ಯಾಹ್ನ 1.30ರವೇಳೆಗೆ ಕ್ಯಾಥೋಲಿಕ್ ಕೆಥೆಡ್ರಲ್ ಸಡನ್ ಆಗಿ ಲಾಕ್ ಆಯಿತು. ಅದಾದ 30 ನಿಮಿಷಗಳ ನಂತರ ಕ್ಯಾರಿ ಸೈಮಂಡ್ಸ್(33) ಅಲ್ಲಿಗೆ ಲಿಮೋದಲ್ಲಿ ಬಂದರು. ಅವರು ಉದ್ದನೆಯ ಬಿಳಿ ಉಡುಪು ಧರಿಸಿದ್ದರು. ಅದಕ್ಕೆ ವೇಲ್ ಇರಲಿಲ್ಲ ಎಂದು ಹೇಳಲಾಗಿದೆ.
ಬೋರಿಸ್ ಜಾನ್ಸನ್ (56) ಮತ್ತು ಸೈಮಂಡ್ಸ್ ಇಬ್ಬರೂ 2019ರಿಂದಲೂ ಲಿವಿಂಗ್ ಟುಗೆದರ್ನಲ್ಲಿದ್ದಾರೆ. ಕಳೆದ ವರ್ಷ ಇದನ್ನು ಬಹಿರಂಗ ಪಡಿಸಿದ್ದ ಅವರು, ಕ್ಯಾರಿ ಸೈಮಂಡ್ಸ್ ಗರ್ಭಿಣಿಯಾಗಿದ್ದಾರೆ ಎಂದೂ ಹೇಳಿಕೊಂಡಿದ್ದರು. 2020ರ ಏಪ್ರಿಲ್ನಲ್ಲಿ ಗಂಡುಮಗುವಿನ ಪಾಲಕರೂ ಆಗಿದ್ದಾರೆ. ಆತನಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಡಲಾಗಿದೆ.
ಈ ತಿಂಗಳ ಪ್ರಾರಂಭದಿಂದಲೂ ಜಾನ್ಸನ್ ಮತ್ತು ಸೈಮಂಡ್ಸ್ ಮದುವೆ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. 2022ರ ಜುಲೈನಲ್ಲಿ ವಿವಾಹ ನಡೆಯಲಿದ್ದು, ಈ ಸಂಬಂಧ ಆಮಂತ್ರಣ ಪತ್ರಿಕಗಳನ್ನು ಕುಟುಂಬ ಮತ್ತು ಸ್ನೇಹಿತರಿಗೆ ಕಳಿಸಲಾಗಿದೆ ಎಂದೂ ಪತ್ರಿಕೆಗಳು ಹೇಳಿದ್ದವು. ಬೋರಿಸ್ ಜಾನ್ಸನ್ರ ವೈವಾಹಿಕ ಜೀವನ ಸ್ವಲ್ಪ ಸಂಕೀರ್ಣವಾಗಿಯೇ ಇದ್ದು, ಈ ಹಿಂದೆ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹಿಂದಿನ ಪತ್ನಿ ಮರಿನಾ ವೀಲರ್. ಅವರೊಬ್ಬ ವಕೀಲೆಯಾಗಿದ್ದರು. ಇವರಿಬ್ಬರಿಗೆ ನಾಲ್ವರು ಮಕ್ಕಳು ಇದ್ದರು. ಆದರೆ 2018ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಹತ್ಯೆಗೆ ಯೋಜನೆ ರೂಪಿಸಿದ್ದ ಗುಂಪನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Published On - 9:26 am, Sun, 30 May 21