ಉಕ್ರೇನ್ ಸೇನೆ ಉಗ್ರವಾದ ಪ್ರತಿದಾಳಿ ನಡೆಸಿ ರಷ್ಯಾ ವಶಪಡಿಸಿಕೊಂಡಿದ್ದ 20 ಪ್ರದೇಶಗಳನ್ನು ವಾಪಸ್ಸು ಪಡೆದಿದೆ
ಕಳೆದ ವಾರಾಂತ್ಯದಲ್ಲಿ ಪ್ರಮುಖ ನಗರಗಳಾಗಿರುವ ಇಜಿಯಂ, ಕುಪಿಯಾನ್ಸ್ಕ್ ಮತ್ತು ಬಲಾಕ್ಲಿಯ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ರಷ್ಯನ್ ಸೇನೆಯ ವಿರುದ್ಧ ಭಾರಿ ಯಶ ಸಾಧಿಸಿರುವ ಬಗ್ಗೆ ಉಕ್ರೇನ್ ಸೇನೆ ಹೇಳಿಕೊಳ್ಳುತ್ತಿದೆ.
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ 6-7 ತಿಂಗಳುಗಳಿಂದ ಜಾರಿಯಲ್ಲಿರುವ ಯುದ್ಧ ಕೊನೆಗೊಳ್ಳುವ ಲಕ್ಷಣ ಸದ್ಯಕ್ಕಂತೂ ಇಲ್ಲ. ಭಾರಿ ಮಿಲಿಟರಿ ಪಡೆ, ಆಧುನಿಕ ಶಸ್ತ್ರಾಸ್ತ್ರಗಳು ನನ್ನಲ್ಲಿವೆ ಎಂದು ಯುದ್ಧ ಅರಂಭಗೊಳ್ಳುವ ಮೊದಲಿನಿಂದ ಕೊಚ್ಚಿಕೊಳ್ಳುತ್ತಿದ್ದ ರಷ್ಯಾದ ಸರ್ವಾಧಿಕಾರಿ ವ್ಲಾದಿಮಿರ್ ಪುಟಿನ್ ಗೆ ಗರ್ವಭಂಗವಾಗಿದ್ದರೂ ಹೊರ ಪ್ರಪಂಚಕ್ಕೆ ಅದನ್ನು ತೋರಿಸಿಕೊಳ್ಳುತ್ತಿಲ್ಲ. ಯುದ್ಧದಲ್ಲಿ ಉಕ್ರೇನ್ ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದರೂ ಅದರ ಪರಾಕ್ರಮಿ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಎದೆಗುಂದಿಲ್ಲ. ತಮ್ಮ ಸೇನೆಯೊಂದಿಗೆ ಅವರು ಹೋರಾಟ ಮುಂದುವರಿಸಿದ್ದಾರೆ ಮತ್ತು ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಷ್ಯಾ ಸೇನೆ ಮೇಲೆ ತೀವ್ರಸ್ವರೂಪದ ಪ್ರತಿದಾಳಿ ನಡೆಸಿ ಅದು ವಶಪಡಿಸಿಕೊಂಡಿದ್ದ 20 ಪ್ರದೇಶಗಳನ್ನು ವಾಪಸ್ಸು ಪಡೆದುಕೊಂಡಿದೆ.
‘ಕಳೆದ 24 ಗಂಟೆಗಳಲ್ಲಿ ಉಕ್ರೇನಿನ ಸಶಸ್ತ್ರ ಸೇನಾಪಡೆಯು ಸುಮಾರು 20 ಪ್ರದೇಶಗಳಿಂದ ವೈರಿಯನ್ನು ಓಡಿಸಿದೆ ಮತ್ತು ಆ ಪ್ರದೇಶಗಳನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದೆ,’ ಎಂದು ಪ್ರತಿದಿನದ ಬ್ರೀಫಿಂಗ್ ನಲ್ಲಿ ಉಕ್ರೇನ್ ಸೇನೆ ಹೇಳಿದೆ. ‘ರಷ್ಯಾ ಸೈನಿಕರು ತಾವು ಆಕ್ರಮಿಸಿಕೊಂಡಿದ್ದ ಪ್ರದೇಶಗಳಲ್ಲಿನ ಅಡಗುದಾಣಗಳಿಂದ ಹೊರಬಂದು ಪಲಾಯನಗೈಯುತ್ತಿದ್ದಾರೆ,’ ಅಂತ ಸೇನಾ ಹೇಳಿಕೆ ತಿಳಿಸಿದೆ.
ಕಳೆದ ವಾರಾಂತ್ಯದಲ್ಲಿ ಪ್ರಮುಖ ನಗರಗಳಾಗಿರುವ ಇಜಿಯಂ, ಕುಪಿಯಾನ್ಸ್ಕ್ ಮತ್ತು ಬಲಾಕ್ಲಿಯ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ರಷ್ಯನ್ ಸೇನೆಯ ವಿರುದ್ಧ ಭಾರಿ ಯಶ ಸಾಧಿಸಿರುವ ಬಗ್ಗೆ ಉಕ್ರೇನ್ ಸೇನೆ ಹೇಳಿಕೊಳ್ಳುತ್ತಿದೆ.
ರವಿವಾರ ರಾತ್ರಿ ಉಕ್ರೇನ್ ಪೂರ್ವ ಭಾಗದಲ್ಲಿ ವ್ಯಾಪಕವಾದ ಬ್ಲ್ಯಾಕ್ಔಟ್ ಗಳು ಜರುಗಿದವು. ವಿದ್ಯುಚ್ಛಕ್ತಿ ಪೂರೈಕೆ ನಿಲುಗಡೆಯನ್ನು ಉಕ್ರೇನಿನ ವಿದೇಶಾಂಗ ಸಚಿವಾಲಯದ ಬಾತ್ಮೀದಾರ ಒಲೆಗ್ ನಿಕೊಲೆಂಕೊ ಹೇಳಿರುವ ಹಾಗೆ ರಷ್ಯನ್ ಸೇನೆಯ ಹತಾಷೆಯನ್ನು ಸೂಚಿಸುತ್ತದೆ. ಈ ಭಾಗ ಮತ್ತು ಪೂರ್ವ ಭಾಗದಲ್ಲಿ ತನಗಾಗಿರುವ ಹಾನಿ ಮತ್ತು ಹಿನ್ನಡೆಯಿಂದ ರಷ್ಯನ್ ಸೇನೆಗೆ ದಿಕ್ಕೆಟ್ಟಂತಾಗಿದೆ, ಎಂದು ನಿಕೊಲೆಂಕೊ ಹೇಳಿದ್ದಾರೆ.
ಖಾರ್ಕಿವ್ ಡೊನೆಕ್ಸ್ ಪ್ರಾಂತ್ಯಗಳಲ್ಲಿ ಸಂಪೂರ್ಣವಾಗಿ ಮತ್ತು ಜಪೋರಿಜ್ಹಿಯ, ನಿಪ್ರೋಪೆಟ್ರೋವಸ್ಕ್ ಮತ್ತು ಸುಮಿ ಪ್ರಾಂತ್ಯಗಳಲ್ಲಿ ಭಾಗಶಃ ಬ್ಲ್ಯಾಕ್ಔಟ್ ಗಳಾಗಿದ್ದವು,’ ಎಂದು ತಮ್ಮ ಪ್ರತಿದಿನದ ಭಾಷಣದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
ಬಹಳಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಕೂಡಲೇ ಮರುಸ್ಥಾಪಿಸಲಾಯಿತು.
ಖಾರ್ಕಿವ್ ಪ್ರಾಂತ್ಯದಲ್ಲಿ ಸೋಮವಾರ ಬೆಳಗಿನವರೆಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಶೇಕಡ 80ರಷ್ಟು ಮರುಸ್ಥಾಪಿಸಲಾಗಿದೆ, ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟೈಮೊಶೆಂಕೋ ಹೇಳಿದ್ದಾರೆ.