ಉಕ್ರೇನ್ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧಿಸಿ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಮಾಡಿದ್ದ ಮನವಿಯನ್ನು ನ್ಯಾಟೋ ತಿರಸ್ಕರಿಸಿದೆ. ಫೆ.24ರಂದು ರಷ್ಯಾ ಭೂ, ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಉಕ್ರೇನ್ನ್ನು ಆಕ್ರಮಿಸಿಕೊಂಡಿದೆ. ಅದರ ಬೆನ್ನಲ್ಲೇ ಮನವಿ ಮಾಡಿದ್ದ ಝೆಲೆನ್ಸ್ಕಿ, ಉಕ್ರೇನ್ ವಾಯುಪ್ರದೇಶವನ್ನು ವಿಮಾನ ಹಾರಾಟ ನಿರ್ಬಂಧಿತ ಪ್ರದೇಶವೆಂದು ಘೋಷಿಸಲು ನ್ಯಾಟೊಕ್ಕೆ ಮನವಿ ಮಾಡಿದ್ದರು. ಆದರೆ ಯುಎಸ್ ನೇತೃತ್ವದ ನ್ಯಾಟೋ ಈ ಮನವಿಯನ್ನು ಶುಕ್ರವಾರ ತಿರಸ್ಕರಿಸಿದೆ. ಉಕ್ರೇನ್ ವಾಯುಪ್ರದೇಶದಲ್ಲಿ ರಷ್ಯಾ ವಿಮಾನ ಹಾರಾಟ ನಿರ್ಬಂಧ ಸಾಧ್ಯವಿಲ್ಲ ಎಂದ ಹೇಳುವ ಮೂಲಕ, ರಷ್ಯಾ ಏರ್ಸ್ಟ್ರೈಕ್ನಿಂದ ಉಕ್ರೇನ್ ವಾಯುಪ್ರದೇಶ ರಕ್ಷಣೆ ಮಾಡಲಾಗದು ಎಂಬುದನ್ನು ಹೇಳಿದೆ. ಅಷ್ಟೇ ಅಲ್ಲ, ನಾವು ಹೀಗೆ ಮಾಡಿದ್ದೇ ಆದಲ್ಲಿ ಇಡೀ ಪೂರ್ವ ಯುರೋಪ್ನಲ್ಲಿ ಯುದ್ಧ ಭೀಕರತೆ ಸೃಷ್ಟಿಯಾಗುತ್ತದೆ ಎಂದು ನ್ಯಾಟೋ ಹೇಳಿದೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ್ದ ಯುಎಸ್ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್, ನ್ಯಾಟೋ ತನ್ನ ಸದಸ್ಯ ರಾಷ್ಟ್ರಗಳಿಗೆ ಸೇರಿದ ಸ್ಥಳದ ಪ್ರತಿ ಅಂಗುಲವನ್ನೂ ರಕ್ಷಿಸಲು ಬದ್ಧವಾಗಿದೆ. ನಮ್ಮದು ರಕ್ಷಣಾತ್ಮಕ ಮೈತ್ರಿ. ನಾವು ಯಾರೊಂದಿಗೂ ಸಂಘರ್ಷಕ್ಕೆ ಹೋಗುವುದಿಲ್ಲ. ಆದರೆ ನಮ್ಮೊಂದಿಗೆ ಸಂಘರ್ಷಕ್ಕೆ ಬಂದರೆ ನಾವೂ ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ್ದರು. ಹಾಗೇ, ನ್ಯಾಟೋ ದೇಶಗಳ ವಿದೇಶಾಂಗ ಸಚಿವರ ಸಭೆ ಬಳಿಕ ಮಾತನಾಡಿದ್ದ, ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟನ್ಬರ್ಗ್, ನಾವು ಯಾವ ಕಾರಣಕ್ಕೂ ಉಕ್ರೇನ್ಗೆ ಹೋಗುವುದಿಲ್ಲ. ಭೂಪ್ರದೇಶವನ್ನಾಗಲಿ, ವಾಯುಪ್ರದೇಶವನ್ನಾಗಲಿ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಉಕ್ರೇನ್ ಅಧ್ಯಕ್ಷರಿಂದ ಕಟು ಟೀಕೆ ನ್ಯಾಟೋದ ಈ ಕ್ರಮವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. ಉಕ್ರೇನ್ ವಾಯು ಪ್ರದೇಶವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಬೇಕು ಎಂಬ ತಮ್ಮ ಮನವಿಯನ್ನು ನ್ಯಾಟೋ ತಿರಸ್ಕಾರ ಮಾಡಿದ್ದಕ್ಕೆ ದೂರದರ್ಶನದ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನ್ಯಾಟೋದ ಈ ನಿರ್ಧಾರ ರಷ್ಯಾಕ್ಕೆ ಇನ್ನಷ್ಟು ಬಾಂಬ್ ಹಾಕಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಉಕ್ರೇನ್ನ ಇನ್ನೂ ಹಲವು ನಗರಗಳು, ಭೂಮಾರ್ಗಗಳ ಮೂಲಕ ತಲುಪಲು ಕಷ್ಟವಾದ ಹಳ್ಳಿಗಳ ಮೇಲೆ ರಷ್ಯಾ ಇನ್ನು ಸುಲಭವಾಗಿ ದಾಳಿ ಮಾಡಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗ ನ್ಯಾಟೋ ಶೃಂಗ ಇಲ್ಲ ಎಂದೇ ಭಾವಿಸಬೇಕು. ಇದ್ದರೂ ಅದೊಂದು ದುರ್ಬಲ ಶೃಂಗ, ಗೊಂದಲಯುಕ್ತ ಶೃಂಗವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏನಿದು ನಿಷೇಧಿತ ವಲಯ ಈ ನೋ ಫ್ಲೈ ಝೋನ್ ಎಂಬುದು ಮಿಲಿಟರಿ ಅಧಿಕಾರ ಸ್ಥಾಪಿಸುವ ಒಂದು ನಿಷೇಧ. ಸಂಘರ್ಷ, ಯುದ್ಧದ ಸಂದರ್ಭದಲ್ಲಿ ಕೆಲವು ಆಯ್ದ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗುತ್ತಿದೆ. ಶತ್ರುಗಳು ವಾಯುದಾಳಿ ನಡೆಸದಂತೆ ತಡೆಯಲು ಹೀಗೆ ವಲಯ ನಿರ್ಬಂಧಿಸಲಾಗುತ್ತದೆ. ವಾಣಿಜ್ಯ ವಿಮಾನಗಳಿಗೆ ವಾಯು ಮಾರ್ಗ ನಿರ್ಬಂಧಿಸುವುದಕ್ಕೂ ಈ ನೋ ಫ್ಲೈ ಝೋನ್ಗೂ ತುಂಬ ವ್ಯತ್ಯಾಸವಿದೆ. ಹೀಗೆ ವಾಯು ಪ್ರದೇಶ ನಿರ್ಬಂಧವನ್ನು ಹೇರಿದ್ದಾಗ, ಆ ಪ್ರದೇಶಕ್ಕೆ ಇನ್ಯಾವುದೇ ದೇಶದ ವಿಮಾನಗಳು ಬಂದಾಗ ಅದನ್ನು ಆ ದೇಶ ಹೊಡೆದುರುಳಿಸಬಹುದಾಗಿದೆ.
ಇದನ್ನೂ ಓದಿ: PM Modi: ವಾರಣಾಸಿಯಲ್ಲಿ ಮೋದಿ ‘ಚಾಯ್ ಪೇ ಚರ್ಚಾ’, ವಿಶ್ವನಾಥ ದೇವಾಲಯದಲ್ಲಿ ಡಮರು ವಾದನ; ವಿಡಿಯೋ ಇಲ್ಲಿದೆ