ಅಮ್ಮನಿಗಾಗಿ ಔಷಧ ಹುಡುಕುತ್ತಿದ್ದ ಯುವತಿಯನ್ನು ಕೊಂದ ರಷ್ಯಾ ಪಡೆ; ಗಡಿದಾಟುವ ಮೊದಲು ಜೀವವೇ ಹೋಯ್ತು

| Updated By: Lakshmi Hegde

Updated on: Mar 13, 2022 | 11:22 AM

ವಲೇರಿಯಾ ಒಬ್ಬರು ವೈದ್ಯೆ. ರಷ್ಯಾ ಆಕ್ರಮಣ ಮಾಡಿದ ತಕ್ಷಣ ಉಕ್ರೇನ್​ ಬಿಟ್ಟು ಹೋಗಲು ಅವಕಾಶ ಇದ್ದರೂ, ಅವರು ಹೋಗಿರಲಿಲ್ಲ. ಸ್ಥಳೀಯರಿಗೆ ನೆರವಾಗುವ ಸಲುವಾಗಿ ಇಲ್ಲಿಯೇ ಉಳಿದುಕೊಂಡಿದ್ದರು.

ಅಮ್ಮನಿಗಾಗಿ ಔಷಧ ಹುಡುಕುತ್ತಿದ್ದ ಯುವತಿಯನ್ನು ಕೊಂದ ರಷ್ಯಾ ಪಡೆ; ಗಡಿದಾಟುವ ಮೊದಲು ಜೀವವೇ ಹೋಯ್ತು
ಮೃತ ಯುವತಿ
Follow us on

ಉಕ್ರೇನ್​​ನಲ್ಲಿ (Ukraine) ಪರಿಸ್ಥಿತಿ ತುಂಬ ದಯನೀಯ ಸ್ಥಿತಿಗೆ ತಲುಪಿದೆ. ಯುದ್ಧದಿಂದಾಗಿ ಅದೆಷ್ಟೋ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಪುಟ್ಟ ಮಕ್ಕಳೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಸೂಪರ್​ ಮಾರ್ಕೆಟ್​ಗೆ ತಿಂಡಿ ತರಲು ಹೋಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ನವೀನ್​ ರಷ್ಯಾ ದಾಳಿಗೆ ಮೃತಪಟ್ಟಿದ್ದರು. ಇದೇ ರೀತಿಯ ಇನ್ನೊಂದು ಘಟನೆ ವರದಿಯಾಗಿದೆ. ಉಕ್ರೇನ್​​ನ 31 ವರ್ಷದ ಯುವತಿ ವಲೇರಿಯಾ ಮಕ್ಸೆಟ್ಸ್ಕಾ ಎಂಬುವರು, ತಮ್ಮ ಅನಾರೋಗ್ಯ ಪೀಡಿತ ತಾಯಿಗೆ ಔಷಧದ ಹುಡುಕಾಟದಲ್ಲಿ ಇದ್ದಾಗ ರಷ್ಯಾ ಸೇನೆಯಿಂದ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ.

ವಲೇರಿಯಾ ಮಕ್ಸೆಟ್ಸ್ಕಾ ತಾಯಿ ಇರಿನಾ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಕಾಯಂ ಆಗಿ ಔಷಧ ತೆಗೆದುಕೊಳ್ಳಬೇಕಾಗಿದೆ. ಆದರೆ ಔಷಧ ಖಾಲಿಯಾಗಿತ್ತು. ಯುದ್ಧದ ಪರಿಣಾಮದಿಂದಾಗಿ ಉಕ್ರೇನ್​ನಲ್ಲಿಯೂ ಔಷಧ ಕೊರತೆ ಉಂಟಾಗಿದೆ. ಹಾಗೇ, ವಲೇರಿಯಾ ತಾಯಿಗೆ ಬೇಕಾಗಿದ್ದ ಔಷಧಿಯೂ ಸಿಗುತ್ತಿರಲಿಲ್ಲ. ಹೀಗಾಗಿ ವಲೇರಿಯಾ ತಮ್ಮ ತಾಯಿಯನ್ನು ಕರೆದುಕೊಂಡು, ಉಕ್ರೇನ್​​ನಿಂದ ಹೊರಡಲು ಪಶ್ಚಿಮದ ಗಡಿಭಾಗಕ್ಕೆ ವಾಹನದಲ್ಲಿ ಹೋಗುತ್ತಿದ್ದರು. ಇದೇ ವೇಳೆ ರಷ್ಯಾದ ಯುದ್ಧ ಟ್ಯಾಂಕ್​​ಗಳು ಅದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದವು. ಉಕ್ರೇನ್​ ಬಿಡುವಾಗ ಕೊನೇ ಕ್ಷಣದಲ್ಲಿ ಎಲ್ಲಾದರೂ ಔಷಧ ಸಿಗಬಹುದಾ ಎಂದು ವಲೇರಿಯಾ ವಾಹನ ಇಳಿದು ಹುಡುಕುತ್ತಿದ್ದಾಗ, ರಷ್ಯಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಈ ದಾಳಿಯಲ್ಲಿ ವಲೇರಿಯಾ ಅಷ್ಟೇ ಅಲ್ಲ, ವಾಹನದಲ್ಲಿಯೇ ಕುಳಿತಿದ್ದ ಆಕೆಯ ತಾಯಿ ಮತ್ತು ಚಾಲಕನೂ ಮೃತಪಟ್ಟಿದ್ದಾರೆ.

ವಲೇರಿಯಾ ಒಬ್ಬರು ವೈದ್ಯೆ. ರಷ್ಯಾ ಆಕ್ರಮಣ ಮಾಡಿದ ತಕ್ಷಣ ಉಕ್ರೇನ್​ ಬಿಟ್ಟು ಹೋಗಲು ಅವಕಾಶ ಇದ್ದರೂ, ಅವರು ಹೋಗಿರಲಿಲ್ಲ. ಸ್ಥಳೀಯರಿಗೆ ನೆರವಾಗುವ ಸಲುವಾಗಿ ಇಲ್ಲಿಯೇ ಉಳಿದುಕೊಂಡಿದ್ದರು. ಆದರೆ ಅನಾರೋಗ್ಯ ಪೀಡಿತ ತಮ್ಮ ತಾಯಿಯ ಆರೋಗ್ಯವೇ ಹದಗೆಡಲು ಪ್ರಾರಂಭವಾಗಿ, ಇಲ್ಲಿ ಔಷಧಿ, ಚಿಕಿತ್ಸೆ ಸಿಗದೆ ಹೋದಾಗ ಅನಿವಾರ್ಯವಾಗಿ ದೇಶ ಬಿಡಲು ಮುಂದಾಗಿದ್ದರು. ಆದರೆ ರಷ್ಯಾ ಸೈನಿಕರ ಆಕ್ರಮಣಕ್ಕೆ ಜೀವ ಬಿಟ್ಟಿದ್ದಾರೆ. ರಷ್ಯಾ ಯುದ್ಧ ಟ್ಯಾಂಕ್​​ಗಳನ್ನು ನೋಡಿ ಚಾಲಕ ತನ್ನ ಕಾರನ್ನು ಬದಿಗೆ ಸರಿಸಿದ್ದಾಗ್ಯೂ ಕೂಡ,  ಅವರು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ವರದಿಯಾಗಿದೆ.

ವಲೇರಿಯಾ ಅವರು ಯುನೈಟೆಡ್​ ಸ್ಟೇಟ್ಸ್​​ ಏಜೆನ್ಸಿ ಫಾರ್​ ಇಂಟರ್​ನ್ಯಾಶನಲ್​ ಡೆವಲಪ್​​ಮೆಂಟ್​​ನಲ್ಲಿ ಕೆಲಸ ಮಾಡಿದವರು. ಈ ಏಜೆನ್ಸಿ ಯುನೈಟೆಡ್​ ಸ್ಟೇಟ್ಸ್​ ಫೆಡರಲ್ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು, ವಿದೇಶಿ ನಾಗರಿಕರಿಗೆ ಸಹಾಯ ಮತ್ತು ಅಭಿವೃದ್ಧಿ ನೆರವು ನೀಡುವುದು ಇದರ ಪ್ರಾಥಮಿಕ ಜವಾಬ್ದಾರಿಯಾಗಿದೆ.  ಈ ಯುಎಸ್​ಎಐಡಿಯ ಆಡಳಿತಾಧಿಕಾರಿ ಸಮಂತಾ ಪವರ್​ ಅವರು ವಲೇರಿಯಾ ಸಾವನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ, ಇನ್ನು ಕೆಲವೇ ದಿನಗಳಲ್ಲಿ ವಲೇರಿಯಾ 32ನೇ ವರ್ಷದ ಹುಟ್ಟಿದ ದಿನವಿತ್ತು. ತುಂಬ ಪ್ರತಿಭಾವಂತಳಾಗಿದ್ದಳು. ಅವಳ ಸಾವು ನೋವು ಕೊಟ್ಟಿದೆ ಎಂದು ಹೇಳಿದ್ದಾರೆ.

ಉಕ್ರೇನ್​​ನಲ್ಲಿ ರಷ್ಯಾ ಫೆಬ್ರವರಿ 24ರಿಂದ ಯುದ್ಧ ಮಾಡುತ್ತಿದೆ. ರಷ್ಯಾದ 12 ಸಾವಿರಕ್ಕೂ ಅಧಿಕ ಸೈನಿಕರನ್ನು ಕೊಂದಿದ್ದಾಗಿ ಉಕ್ರೇನ್​ ಹೇಳುತ್ತಿದೆ. ಆದರೆ ಆ ಸಂಖ್ಯೆಯನ್ನು ರಷ್ಯಾ ಖಚಿತ ಪಡಿಸಿಲ್ಲ. ಇತ್ತ ಉಕ್ರೇನ್​ ಸ್ಮಶಾನವಾಗುತ್ತಿದೆ. ಎಲ್ಲಿ ನೋಡಿದರೂ ಸುಟ್ಟು ಕರಕಲಾದ ಕಟ್ಟಡಗಳು, ಆಸ್ಪತ್ರೆಗಳು, ವಾಹನಗಳು ಕಾಣಿಸುತ್ತಿವೆ. ನಾಗರಿಕರೂ ಸಾಯುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಶಾಂತಿ ಮಾತುಕತೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಅದು ಫಲಪ್ರದವಾಗುತ್ತಿಲ್ಲ.

ಇದನ್ನೂ ಓದಿ: ಮಾರಿಯುಪೋಲ್ ಹೆರಿಗೆ ಆಸ್ಪತ್ರೆಯು ಉಕ್ರೇನಲ್ಲಿ ಧ್ವಂಸಗೊಂಡಿರುವ ಮೂರನೇ ಆಸ್ಪತ್ರೆಯಾಗಿದೆ: ವಿಶ್ವಸಂಸ್ಥೆ

Published On - 10:56 am, Sun, 13 March 22