ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್

ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ-ಚೀನಾ ಸಹಭಾಗಿತ್ವಕ್ಕೆ ಕರೆ . ಟ್ರಂಪ್ ಭೇಟಿ ವೇಳೆ, ಉಭಯ ರಾಷ್ಟ್ರಗಳು ಸಂಘರ್ಷದ ಹಾದಿ ಬಿಟ್ಟು ಪಾಲುದಾರರಾಗಬೇಕು, ಇದು ಜಾಗತಿಕ ಸ್ಥಿರತೆಗೆ ಅತ್ಯಗತ್ಯ ಎಂದರು. ಸಹಕಾರದಿಂದ ಲಾಭ, ಸಂಘರ್ಷದಿಂದ ನಷ್ಟ. ಬೆಳೆಯುವ ಶಕ್ತಿ-ಸ್ಥಾಪಿತ ಶಕ್ತಿ ನಡುವಿನ ಸಂಘರ್ಷ ತಪ್ಪಿಸಿ ಹೊಸ ರಾಜತಾಂತ್ರಿಕ ಮಾದರಿ ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್
ಸಾಂದರ್ಭಿಕ ಚಿತ್ರ

Updated on: May 14, 2026 | 10:15 AM

ಬೀಜಿಂಗ್, ಮೇ.14: ಜಗತ್ತಿನ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಪರಸ್ಪರ ಸಂಘರ್ಷದ ಹಾದಿ ಬಿಟ್ಟು ಸಹಕಾರದೊಂದಿಗೆ ಸಾಗಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಚೀನಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೀಜಿಂಗ್‌ನಲ್ಲಿ ಬರಮಾಡಿಕೊಂಡ ಜಿನ್‌ಪಿಂಗ್, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ನಾವು ಶತ್ರುಗಳಲ್ಲ, ಪಾಲುದಾರರಾಗಬೇಕು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾ “ವೈರಿಗಳಾಗುವ ಬದಲಿಗೆ ಪಾಲುದಾರರಾಗಬೇಕು” (Partners, not rivals). ಸಹಕಾರದಿಂದ ಎರಡೂ ದೇಶಗಳಿಗೆ ಲಾಭವಾಗಲಿದ್ದು, ಸಂಘರ್ಷದಿಂದ ನಷ್ಟವೇ ಹೆಚ್ಚು ಎಂದು ಅವರು ಪ್ರತಿಪಾದಿಸಿದರು. ಇಡೀ ಜಗತ್ತು ಪ್ರಸ್ತುತ ಕಳೆದ ಒಂದು ಶತಮಾನದಲ್ಲೇ ಕಂಡರಿಯದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಸ್ಥಿರ ಸಂಬಂಧ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಚೀನಾ ಹಾಗೂ ಅಮೆರಿಕದ ನಡುವೆ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂಬ ಜಾಗತಿಕ ಆತಂಕವನ್ನು ಮೀರಿ, ಹೊಸ ಮಾದರಿಯ ರಾಜತಾಂತ್ರಿಕ ಸಂಬಂಧ ಬೆಳೆಸುವ ಅಗತ್ಯವಿದೆ ಎಂದು ಜಿನ್‌ಪಿಂಗ್ ತಿಳಿಸಿದರು.

ಇದನ್ನೂ ಓದಿ: 9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ!

ಒಂಬತ್ತು ವರ್ಷಗಳ ನಂತರ ಚೀನಾಕ್ಕೆ ಭೇಟಿ ನೀಡಿದ ಟ್ರಂಪ್ ಅವರನ್ನು ಜಿನ್‌ಪಿಂಗ್ ಅಭಿನಂದಿಸಿದರು. ಅಲ್ಲದೆ, ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಮೆರಿಕದ ಜನತೆಗೆ ಶುಭಾಶಯ ಕೋರಿದರು. ಈ ಭೇಟಿಯು ವ್ಯಾಪಾರ, ತಂತ್ರಜ್ಞಾನ ಮತ್ತು ಜಾಗತಿಕ ಭದ್ರತೆಯ ದೃಷ್ಟಿಯಿಂದ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Thu, 14 May 26

Follow Us