ಅಮೆರಿಕದಲ್ಲಿ ಚಂಡಮಾರುತದ ಅಬ್ಬರ: ಥ್ಯಾಂಕ್ಸ್‌ ಗಿವಿಂಗ್ ಸಂಭ್ರಮಕ್ಕೆ ಅಡ್ಡಿ, ವಿಮಾನ ಸಂಚಾರ ಅಸ್ತವ್ಯಸ್ತ

ಅಮೆರಿಕದಲ್ಲಿ ಪ್ರಬಲ ಚಂಡಮಾರುತವು ಥ್ಯಾಂಕ್ಸ್‌ಗಿವಿಂಗ್ ಹಬ್ಬದ ಸಂಭ್ರಮವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿ, ನೂರಾರು ವಿಮಾನಗಳು ರದ್ದಾಗಿವೆ. ಲಕ್ಷಾಂತರ ಮನೆಗಳಿಗೆ ವಿದ್ಯುತ್ ಕಡಿತವಾಗಿದೆ. ನ್ಯೂಯಾರ್ಕ್‌ನ ಪ್ರಸಿದ್ಧ ಥ್ಯಾಂಕ್ಸ್‌ಗಿವಿಂಗ್ ಪರೇಡ್ ಕೂಡ ಮುಂದೂಡಿಕೆಯಾಗಿದೆ. ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದು, ಅನಗತ್ಯ ಪ್ರಯಾಣದಿಂದ ದೂರವಿರಲು ಸೂಚಿಸಿದ್ದಾರೆ. ಈ ಹವಾಮಾನ ವೈಪರೀತ್ಯವು ದೇಶಾದ್ಯಂತ ವ್ಯಾಪಕ ಪರಿಣಾಮ ಬೀರಿದೆ.

ಅಮೆರಿಕದಲ್ಲಿ ಚಂಡಮಾರುತದ ಅಬ್ಬರ: ಥ್ಯಾಂಕ್ಸ್‌ ಗಿವಿಂಗ್ ಸಂಭ್ರಮಕ್ಕೆ ಅಡ್ಡಿ, ವಿಮಾನ ಸಂಚಾರ ಅಸ್ತವ್ಯಸ್ತ
ಚಂಡಮಾರುತ
Image Credit source: South China Morning Post

Updated on: Nov 27, 2026 | 1:28 PM

ವಾಷಿಂಗ್ಟನ್, ನವೆಂಬರ್ 27: ಅಮೆರಿಕದ ಹಲವು ರಾಜ್ಯಗಳಲ್ಲಿ ಪ್ರಬಲ ಚಂಡಮಾರುತ ಮತ್ತು ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭಾರಿ ಮಳೆ, ಬಲವಾದ ಗಾಳಿ ಹಾಗೂ ಪ್ರವಾಹದಿಂದಾಗಿ ಸಾವಿರಾರು ಜನರು ತೊಂದರೆ ಅನುಭವಿಸಿದ್ದಾರೆ. ಹಬ್ಬದ ಆಚರಣೆಗಾಗಿ ಪ್ರಯಾಣಿಸುತ್ತಿದ್ದ ಜನರಿಗೆ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. 2,000ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ವಿದ್ಯುತ್ ವ್ಯತ್ಯಯದಿಂದ ಲಕ್ಷಾಂತರ ಮನೆಗಳು ಮತ್ತು ವ್ಯಾಪಾರ ಕೇಂದ್ರಗಳು ಕತ್ತಲಲ್ಲಿ ಮುಳುಗಿವೆ.

9 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತ
ಅಮೆರಿಕದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿ ಚಂಡಮಾರುತದ ಪರಿಣಾಮ ತೀವ್ರವಾಗಿದೆ. ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗುರುವಾರ ರಾತ್ರಿ ವೇಳೆಗೆ ಸುಮಾರು 9 ಲಕ್ಷಕ್ಕೂ ಹೆಚ್ಚು ವಿದ್ಯುತ್ ಗ್ರಾಹಕರಿಗೆ ಪೂರೈಕೆ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ.

Loading...

ಬಲವಾದ ಗಾಳಿಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಕೆಲವು ಕಡೆ ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತಂದಿದ್ದಾರೆ. ಚಂಡಮಾರುತದಿಂದಾಗಿ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಸಂಚಾರಕ್ಕೆ ಭಾರಿ ಅಡಚಣೆಯುಂಟಾಗಿದೆ.

400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
ಚಂಡಮಾರುತದಿಂದಾಗಿ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ. ಫ್ಲೈಟ್‌ಅವೇರ್ ಮಾಹಿತಿ ಪ್ರಕಾರ, 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, 2,000ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ವಿಶೇಷವಾಗಿ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಗರಗಳ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ವ್ಯತ್ಯಯ ಕಂಡುಬಂದಿದೆ. ರಸ್ತೆ ಮತ್ತು ರೈಲು ಸಂಚಾರಕ್ಕೂ ಅಡ್ಡಿಯಾಗಿದೆ.

ಇದನ್ನೂಓದಿ:

ಆಂಧ್ರ ಸಮೀಪಿಸುತ್ತಿದೆ ಅರ್ನಬ್ ಚಂಡಮಾರುತ; 4 ರಾಜ್ಯಗಳಲ್ಲಿ ಹೈ ಅಲರ್ಟ್​, ಭೂಕುಸಿತದ ಎಚ್ಚರಿಕೆ

 

100 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮೆರವಣಿಗೆ ಮುಂದೂಡಿಕೆ
ಚಂಡಮಾರುತದ ಪರಿಣಾಮ ನ್ಯೂಯಾರ್ಕ್‌ನ ಪ್ರಸಿದ್ಧ ‘ಮ್ಯಾಕೀಸ್ ಥ್ಯಾಂಕ್ಸ್‌ಗಿವಿಂಗ್ ಡೇ ಪರೇಡ್’ ಕೂಡ ಮುಂದೂಡಿಕೆಯಾಗಿದೆ. ಈ ಮೆರವಣಿಗೆ 100 ವರ್ಷಗಳ ಇತಿಹಾಸದಲ್ಲಿ ಹವಾಮಾನ ವೈಪರೀತ್ಯದ ಕಾರಣಕ್ಕೆ ಮೊದಲ ಬಾರಿಗೆ ಮುಂದೂಡಲಾಗಿದೆ. ಬಲವಾದ ಗಾಳಿಯಿಂದ ಬೃಹತ್ ಗಾತ್ರದ ಬಲೂನ್‌ಗಳನ್ನು ನಿಯಂತ್ರಿಸುವುದು ಅಪಾಯಕಾರಿಯಾಗಬಹುದು ಎಂಬ ಕಾರಣಕ್ಕೆ ಆಯೋಜಕರು ಮೆರವಣಿಗೆಯನ್ನು ನವೆಂಬರ್ 28ರ ಶನಿವಾರಕ್ಕೆ ಮುಂದೂಡಿದ್ದಾರೆ.

ಜನರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು
ನ್ಯೂಜೆರ್ಸಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ವಿದ್ಯುತ್ ತಂತಿಗಳು ಅಥವಾ ಬಿದ್ದಿರುವ ಮರಗಳ ಸಮೀಪ ಹೋಗದಂತೆ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ. ವಿದ್ಯುತ್ ಕಡಿತದ ಪರಿಣಾಮ ನೀರು ಪೂರೈಕೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಮೇರಿಲ್ಯಾಂಡ್‌ನ ಕೆಲವು ಪ್ರದೇಶಗಳಲ್ಲಿ ನೀರಿನ ಬಳಕೆಯನ್ನು ಮಿತಿಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಚಂಡಮಾರುತದ ಪ್ರಭಾವದಿಂದ ಅಮೆರಿಕದ ಹಲವು ಭಾಗಗಳಲ್ಲಿ ಥ್ಯಾಂಕ್ಸ್‌ಗಿವಿಂಗ್ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದೆ. ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us