Iran ಮೇಲೆ ಮತ್ತೊಂದು ಭೀಕರ ದಾಳಿಗೆ ಡೊನಾಲಡ್​ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ

ಅಮೆರಿಕ-ಇರಾನ್ ನಡುವೆ ಸಂಘರ್ಷ ತಾರಕಕ್ಕೇರಿದ್ದು, ಟ್ರಂಪ್ ಮತ್ತೊಂದು ದಾಳಿಗೆ ಸಿದ್ಧತೆ ನಡೆಸಿದ್ದಾರೆ. ಹಾಮರ್ಮಜ್ ಜಲಸಂಧಿಯಲ್ಲಿನ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳಿಂದ ಜಾಗತಿಕ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆಯಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಭಾರತವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಲು, ಯುದ್ಧ ನಿಲ್ಲಿಸಿ ಸಂಯಮ ಕಾಯ್ದುಕೊಂಡು ಸಂವಾದದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಉಭಯ ರಾಷ್ಟ್ರಗಳಿಗೆ ತುರ್ತು ಕರೆ ನೀಡಿದೆ.

Iran ಮೇಲೆ ಮತ್ತೊಂದು ಭೀಕರ ದಾಳಿಗೆ ಡೊನಾಲಡ್​ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ
ಡೊನಾಲ್ಡ್​ ಟ್ರಂಪ್
Edited By:

Updated on: Jul 09, 2026 | 10:42 AM

ಮುಖ್ಯಾಂಶಗಳು

  • ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ
  • ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ
  • ಅಮೆರಿಕ ಇಂದು ರಾತ್ರಿಯೂ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.

ನವದೆಹಲಿ, ಜುಲೈ 09: ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ (Hormuz Strait) ಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ (US Iran War) ತಾರಕಕ್ಕೇರಿದೆ. ಬುಧವಾರ ಮುಂಜಾನೆಯಷ್ಟೇ ಇರಾನ್ ಮೇಲೆ ಪ್ರಬಲ ದಾಳಿ ನಡೆಸಿದ್ದ ಅಮೆರಿಕ ಇಂದು ರಾತ್ರಿಯೂ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ. ಈ ಹಠಾತ್ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆಯಾಗುವ ಭೀತಿ ಎದುರಾಗಿದ್ದು, ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರತ ಸರ್ಕಾರ ಹೇಳಿದ್ದೇನು?

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ಉಭಯ ದೇಶಗಳು ತಕ್ಷಣವೇ ಯುದ್ಧದ ಹಠವನ್ನು ಬಿಟ್ಟು ಸಂಯಮ ಕಾಯ್ದುಕೊಳ್ಳಬೇಕು. ನಾಗರಿಕರ ರಕ್ಷಣೆ ಹಾಗೂ ಇಂಧನ ಸರಬರಾಜಿನ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕ ಹಾದಿಗೆ ಮರಳಬೇಕು ಎಂದು ಹೇಳಿದೆ.

ಡೊನಾಲ್ಡ್​ ಟ್ರಂಪ್ ಗುಡುಗಿದ್ದು ಏಕೆ?

ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಮಿಲಿಟರಿ ಮೈತ್ರಿಕೂಟದ ಶೃಂಗಸಭೆಯಲ್ಲಿ ಅಸಾಮಾನ್ಯ ಆಕ್ರಮಣಕಾರಿ ಶೈಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ನಾಯಕತ್ವವು ಹುಚ್ಚುಚ್ಚಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ಓದಿ: ಜಾಗತಿಕ ತೈಲ ಮಾರ್ಗದಲ್ಲಿ ಮತ್ತೆ ಯುದ್ಧ ಭೀತಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಭೀಕರ ದಾಳಿ

“ನಾವು ನಿನ್ನೆ ರಾತ್ರಿ ಇರಾನ್ ಮೇಲೆ ತುಂಬಾ ಕಠಿಣ ದಾಳಿ ನಡೆಸಿದ್ದೇವೆ. ಅಗತ್ಯಬಿದ್ದರೆ ಇಂದು ರಾತ್ರಿಯೂ ಅವರ ಮೇಲೆ ಬಲವಾದ ವಾಯುದಾಳಿ ನಡೆಸುವ ಸಾಧ್ಯತೆ ಹೆಚ್ಚು. ಇರಾನ್ ಬಹಳ ದಿನಗಳಿಂದ ಮಧ್ಯಪ್ರಾಚ್ಯದ ರೌಡಿಯಂತೆ ವರ್ತಿಸುತ್ತಿತ್ತು. ಆದರೆ ಇನ್ಮುಂದೆ ಅವರ ಬೆದರಿಕೆಗಳು ನಡೆಯುವುದಿಲ್ಲ,” ಎಂದು ಟ್ರಂಪ್ ಸವಾಲು ಹಾಕಿದ್ದಾರೆ. ಶಾಂತಿ ಮಾತುಕತೆಯ ವೇಳೆ ಕೊಟ್ಟ ಭರವಸೆಗಳಿಂದ ಇರಾನ್ ಪದೇ ಪದೇ ಹಿಂದೆ ಸರಿಯುತ್ತಿದೆ ಎಂದು ಟ್ರಂಪ್ ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮುಖ್ಯ ಏಕೆ?

ಒಮಾನ್ ಮತ್ತು ಇರಾನ್ ದೇಶಗಳ ನಡುವೆ ಇರುವ ಈ ಕಿರಿದಾದ ಹಾರ್ಮುಜ್ ಜಲಸಂಧಿಯು ಇಡೀ ಜಗತ್ತಿನ ಅತ್ಯಂತ ಕಾರ್ಯತಂತ್ರದ ಪ್ರಮುಖ ಕಡಲ ಮಾರ್ಗವಾಗಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ರಫ್ತಿನ ಬಹುದೊಡ್ಡ ಪಾಲು ಇದೇ ಮಾರ್ಗದ ಮೂಲಕ ಸಾಗುತ್ತದೆ. ಭಾರತವು ತನ್ನ ಸಿಂಹಪಾಲು ಕಚ್ಚಾ ತೈಲವನ್ನು ಗಲ್ಫ್ ದೇಶಗಳಿಂದ ಇದೇ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುವುದರಿಂದ, ಇಲ್ಲಿ ಯುದ್ಧ ನಡೆದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುವ ಮತ್ತು ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುವ ಭೀತಿ ಇದೆ. ಇದೇ ಕಾರಣಕ್ಕೆ ಭಾರತವು ಉಭಯ ದೇಶಗಳಿಗೆ ಶಾಂತಿಯ ಮಂತ್ರ ಪಠಿಸುವಂತೆ ಒತ್ತಾಯಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:39 am, Thu, 9 July 26

Follow Us