AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ದೀಪಾವಳಿಗೆ ರಜಾದಿನ ಘೋಷಿಸುವ ವಿಧೇಯಕ ಮಂಡನೆ; ಐವರು ಭಾರತೀಯರು ಸೇರಿ 19 ಸಂಸದರ ಬೆಂಬಲ

ಯುನೈಟೆಡ್ ಸ್ಟೇಟ್ಸ್‌ನಲ್ಲಿ (ಅಮೆರಿಕ) ದೀಪಾವಳಿ ಹಬ್ಬವನ್ನು ಅಧಿಕೃತ 'ಫೆಡರಲ್ ರಜಾದಿನ' ಎಂದು ಘೋಷಿಸುವಂತೆ ಕೋರುವ ಮಹತ್ವದ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್‌ನಲ್ಲಿ (ಸಂಸತ್ತು) ಬೆಂಬಲ ವ್ಯಕ್ತವಾಗಿದೆ. ಅಮೆರಿಕ ಪ್ರತಿನಿಧಿ ಸಭೆಯ 5 ಜನ ಭಾರತೀಯ ಮೂಲದ ಜನಪ್ರಿಯ ಸಂಸದರು ಸೇರಿದಂತೆ ಒಟ್ಟು 19 ಸಂಸದರು ಈ ಐತಿಹಾಸಿಕ 'ದೀಪಾವಳಿ ಕಾಯ್ದೆ'ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಅಮೆರಿಕ ಸಂಸತ್ತಿನಲ್ಲಿ ಭಾರತೀಯ ಮೂಲವನ್ನು ಪ್ರತಿನಿಧಿಸುವ ಪ್ರಮುಖ ನಾಯಕರಾದ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್, ಅಮಿ ಬೇರಾ ಮತ್ತು ಶ್ರೀ ಥಾಣೇದಾರ್ ಸೇರಿದಂತೆ ಒಟ್ಟು 5 ಪ್ರಭಾವಿ ಸಂಸದರು ಈ ಮಸೂದೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ದೀಪಾವಳಿಗೆ ರಜಾದಿನ ಘೋಷಿಸುವ ವಿಧೇಯಕ ಮಂಡನೆ; ಐವರು ಭಾರತೀಯರು ಸೇರಿ 19 ಸಂಸದರ ಬೆಂಬಲ
Indian Ambassodors With Donald Trump
ಸುಷ್ಮಾ ಚಕ್ರೆ
|

Updated on: Nov 10, 2026 | 12:34 PM

Share

ವಾಷಿಂಗ್ಟನ್, ನವೆಂಬರ್ 10: ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೀಪಾವಳಿಯನ್ನು ಅಧಿಕೃತ ‘ಫೆಡರಲ್ ರಜಾದಿನ’ ಎಂದು ಘೋಷಿಸುವಂತೆ ಕೋರುವ ಪ್ರಮುಖ ವಿಧೇಯಕವನ್ನು ಅಮೆರಿಕದ ಕಾಂಗ್ರೆಸ್‌ನಲ್ಲಿ (ಸಂಸತ್ತು) ಮರುಮಂಡಿಸಲಾಗಿದೆ. ಅಮೆರಿಕ ಸಂಸದೆ ಗ್ರೇಸ್ ಮೆಂಗ್ ಅವರ ನೇತೃತ್ವದಲ್ಲಿ 2023ರಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದ್ದ ‘ದೀಪಾವಳಿ ಕಾಯ್ದೆ’ ವಿಧೇಯಕವನ್ನು 3 ವರ್ಷಗಳ ನಂತರ 19 ಸಂಸದರ ಬೆಂಬಲದೊಂದಿಗೆ ಮತ್ತೆ ಮಂಡಿಸಲಾಗಿದೆ.

ಇಂದು ಸಂಸದೆ ಕ್ಯಾರೋಲಿನ್ ಬಿ. ಮಲೋನಿ ಅವರ ನೇತೃತ್ವದಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದ್ದು, ದೀಪಾವಳಿಯನ್ನು ಅಮೆರಿಕ ಸರ್ಕಾರ ಗುರುತಿಸುವ ಅಧಿಕೃತ ಫೆಡರಲ್ ರಜಾದಿನಗಳ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಇದು ಒಳಗೊಂಡಿದೆ. ಅಮೆರಿಕದಲ್ಲಿ ಲಕ್ಷಾಂತರ ಭಾರತೀಯ ಮೂಲದ ಜನರು, ಹಿಂದೂ, ಸಿಖ್, ಜೈನ್ ಹಾಗೂ ಬೌದ್ಧ ಸಮುದಾಯದವರು ವಾಸಿಸುತ್ತಿದ್ದು, ದೀಪಾವಳಿಯನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸುವುದರಿಂದ ಅವರ ಸಾಂಸ್ಕೃತಿಕ ಪರಂಪರೆಗೆ ಸೂಕ್ತ ಗೌರವ ದೊರೆತಂತಾಗುತ್ತದೆ ಎಂದು ಸಂಸದರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಅಬುಧಾಬಿಯಲ್ಲಿ ಉಕ್ರೇನ್-ರಷ್ಯಾ ಮಧ್ಯೆ ಇಂದು ಮತ್ತೆ ಶಾಂತಿ ಮಾತುಕತೆ; ಅಮೆರಿಕದ ಮಧ್ಯಸ್ಥಿಕೆ

“ದೀಪಾವಳಿಯು ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಡಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಹಿಂದೂ ಮತ್ತು ದಕ್ಷಿಣ ಏಷ್ಯಾ ಸಮುದಾಯಗಳ ವಿರುದ್ಧ ದ್ವೇಷ ಹೆಚ್ಚುತ್ತಿರುವ ಈ ಸಮಯದಲ್ಲಿ, ದೀಪಾವಳಿಯನ್ನು ಫೆಡರಲ್ ರಜಾದಿನವಾಗಿ ಗುರುತಿಸುವುದು ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ನಮ್ಮ ಸಮಾಜದ ಮೌಲ್ಯಯುತ ಸದಸ್ಯರಾಗಿದ್ದಾರೆ ಎಂಬ ಶಕ್ತಿಯುತ ಸಂದೇಶವನ್ನು ನೀಡುತ್ತದೆ” ಎಂದು ಕ್ಯಾರೋಲಿನ್ ಬಿ. ಮಲೋನಿ ಹೇಳಿದ್ದಾರೆ.

ಮಸೂದೆಗೆ ವ್ಯಾಪಕ ಬೆಂಬಲ:

ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳೆರಡರ ಸಂಸದರು ಈ ವಿಧೇಯಕಕ್ಕೆ ಬೆಂಬಲ ಸೂಚಿಸುತ್ತಿದ್ದು, ಅಮೆರಿಕದಲ್ಲಿ ಭಾರತೀಯ ಅಮೆರಿಕನ್ ಸಮುದಾಯ ಬೆಳೆಯುತ್ತಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಇದು ಬಲವಾದ ಸಾಕ್ಷಿಯಾಗಿದೆ.

ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ಮಾತುಕತೆ; ಯುದ್ಧದ ಶಾಂತಿಯುತ ಅಂತ್ಯಕ್ಕೆ ಬೆಂಬಲದ ಪುನರುಚ್ಚಾರ

ಗ್ರೇಸ್ ಮೆಂಗ್ ಅವರು ಮೇ 15,2023ರಂದು ಜೋ ಬೈಡೆನ್ ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಈ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದರು. ಆಗ 13 ಜನ ಸಂಸದರು (ಪ್ರಮೀಳಾ ಜಯಪಾಲ್, ಅಮಿ ಬೇರಾ ಮುಂತಾದವರು) ಬೆಂಬಲಿಸಿದ್ದರು. ಆ ಬಳಿಕ ಬೆಂಬಲ ನೀಡಿದವರ ಸಂಖ್ಯೆ 16ಕ್ಕೆ ಏರಿತ್ತಾದರೂ, ಮಸೂದೆಯು ಓವರ್‌ಸೈಟ್ ಮತ್ತು ಅಕೌಂಟೆಬಿಲಿಟಿ ಸಮಿತಿಯ ಹಂತ ದಾಟಲು ಸಾಧ್ಯವಾಗದೆ ಮತದಾನಕ್ಕೆ ಬರಲಿಲ್ಲ. ಈ ಮಸೂದೆಗೆ ಸಂಸತ್ತು ಮತ್ತು ಅಧ್ಯಕ್ಷರ ಅಂಕಿತ ಬಿದ್ದರೆ ದೀಪಾವಳಿಯು ಅಮೆರಿಕದ 12ನೇ ಅಧಿಕೃತ ಫೆಡರಲ್ ರಜಾದಿನವಾಗಲಿದೆ.

ಅಮೆರಿಕದ ಫೆಡರಲ್ (ಕೇಂದ್ರ) ಸರ್ಕಾರಿ ಉದ್ಯೋಗಿಗಳಿಗೆ ಈ ದಿನ ಅಧಿಕೃತ ವೇತನ ಸಹಿತ ರಜೆ ಸಿಗಲಿದೆ ಹಾಗೂ ಮಿಲಿಯನ್‌ಗಟ್ಟಲೆ ಅಮೆರಿಕನ್-ಇಂಡಿಯನ್ ಸಮುದಾಯಕ್ಕೆ ಬಲವಾದ ಸಾಂಸ್ಕೃತಿಕ ಮಾನ್ಯತೆ ದೊರೆಯಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More