
ವಾಷಿಂಗ್ಟನ್, ಸೆಪ್ಟೆಂಬರ್ 05: ಇರಾನ್ ಜತೆಗಿನ ಸಂಭಾವ್ಯ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅಮೆರಿಕದ ಪ್ರಮುಖ ಶಸ್ತ್ರಾಸ್ತ್ರಗಳ ದಾಸ್ತಾನು ಕೊರತೆಯ ರಹಸ್ಯ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಪೆಂಟಗನ್‌ನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮಿಲಿಟರಿಯ ‘ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್’ ಜತೆ ಕಾರ್ಯನಿರ್ವಹಿಸುತ್ತಿರುವ ಸುಮಾರು 50 ಹಿರಿಯ ಸೇನಾ ಅಧಿಕಾರಿಗಳು ಹಾಗೂ ನಾಗರಿಕ ಸಿಬ್ಬಂದಿಯನ್ನು ಅಮೆರಿಕ ಆಡಳಿತವು ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಪಡಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಶಸ್ತ್ರಾಸ್ತ್ರಗಳ ಕೊರತೆ ಬಯಲು: ಅಮೆರಿಕದ ಸೇನಾ ಬತ್ತಳಿಕೆಯಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾಗೂ ಪ್ರಮುಖ ಪೇಟ್ರಿಯಾಟ್ ವಾಯು ರಕ್ಷಣಾ ಇಂಟರ್‌ಸೆಪ್ಟರ್‌ಗಳ ದಾಸ್ತಾನು ಗಣನೀಯವಾಗಿ ಕುಸಿದಿದೆ ಎಂದು ಮಾಧ್ಯಮಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು. ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ ಎಂದು ಆಡಳಿತ ಕೆಂಡಾಮಂಡಲವಾಗಿದೆ.
ಪಾಲಿಗ್ರಾಫ್ ಪರೀಕ್ಷೆ: ಜಂಟಿ ಸಿಬ್ಬಂದಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸುಮಾರು 1,500 ರಿಂದ 2 ಸಾವಿರ ನೌಕರರ ಪೈಕಿ ಆಯ್ದ 50 ಪ್ರಮುಖ ಅಧಿಕಾರಿಗಳನ್ನು ವರ್ಗೀಕೃತ ಮಾಹಿತಿ ಲೀಕ್ ಮಾಡಿದ ಶಂಕೆಯಡಿ ತೀವ್ರ ವಿಚಾರಣೆ ಹಾಗೂ ಪಾಲಿಗ್ರಾಫ್ ಟೆಸ್ಟ್‌ಗೆ ಗುರಿಪಡಿಸಲಾಗಿದೆ.
ಪೆಂಟಗನ್ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್, “ಆಂತರಿಕ ತನಿಖೆಗಳ ಕುರಿತು ನಾವು ಸಾರ್ವಜನಿಕವಾಗಿ ಯಾವುದೇ ವಿವರ ಹಂಚಿಕೊಳ್ಳುವುದಿಲ್ಲ. ಆದರೆ ವರ್ಗೀಕೃತ ರಾಷ್ಟ್ರೀಯ ಭದ್ರತಾ ಮಾಹಿತಿಯ ಸೋರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು. ಜಗತ್ತಿನಾದ್ಯಂತ ನಿಯೋಜಿಸಲಾದ ನಮ್ಮ ಸೈನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯ” ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಿ: ಇರಾನ್ನ ಜನನಿಬಿಡ ಪ್ರದೇಶದ ಮೇಲೆ ಹೊಸ ಸೂಪರ್ ಕ್ಷಿಪಣಿ ಪ್ರಯೋಗಿಸಿದ ಯುಎಸ್ ಸೇನೆ
ಉಕ್ರೇನ್ ಮತ್ತು ಇಸ್ರೇಲ್‌ಗೆ ಬೃಹತ್ ನೆರವು: ಕಳೆದ ಹಲವು ತಿಂಗಳುಗಳಿಂದ ಉಕ್ರೇನ್ ಹಾಗೂ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ಗೆ ನಿರಂತರವಾಗಿ ಅತ್ಯಾಧುನಿಕ ರಕ್ಷಣಾ ಕ್ಷಿಪಣಿಗಳನ್ನು ಸರಬರಾಜು ಮಾಡಿದ ಪರಿಣಾಮ ಅಮೆರಿಕದ ಸ್ವಂತ ಬತ್ತಳಿಕೆಯಲ್ಲೇ ನಿರ್ಣಾಯಕ ಯುದ್ಧಸಾಮಗ್ರಿಗಳ ಕೊರತೆ ಎದುರಾಗಿದೆ ಎನ್ನಲಾಗಿದೆ.
ಇರಾನ್ ಸಂಘರ್ಷದ ಭೀತಿ: ಇರಾನ್ ಜತೆ ಯುದ್ಧ ಸನ್ನಿವೇಶ ನಿರ್ಮಾಣವಾದರೆ ಕ್ಷಿಪಣಿ ಕೊರತೆಯಿಂದಾಗಿ ಅಮೆರಿಕ ಹಿನ್ನಡೆ ಅನುಭವಿಸಬಹುದು ಎಂಬ ಆಂತರಿಕ ರಹಸ್ಯ ವಿಶ್ಲೇಷಣೆಯನ್ನು ಪತ್ರಕರ್ತರಿಗೆ ಸೋರಿಕೆ ಮಾಡಿರುವುದು ಟ್ರಂಪ್ ಆಡಳಿತವನ್ನು ಮುಜುಗರಕ್ಕೀಡುಮಾಡಿದೆ.
ಸೇನೆಯಲ್ಲಿ ಅಸಮಾಧಾನ: ಸೇನೆಯ ಉನ್ನತ ದರ್ಜೆಯ ಜನರಲ್‌ಗಳು ಮತ್ತು ಗುಪ್ತಚರ ವಿಶ್ಲೇಷಕರನ್ನು ಅಪರಾಧಿಗಳಂತೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿರುವುದು ಪೆಂಟಗನ್ ಆಂತರಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಟ್ರಂಪ್ ಆಡಳಿತದ ಬಿಗಿ ನಿಲುವು: ಶ್ವೇತಭವನ ಹಾಗೂ ರಕ್ಷಣಾ ಇಲಾಖೆಯಿಂದ ರಹಸ್ಯ ದಾಖಲೆಗಳು ಮತ್ತು ಮಾತುಕತೆಗಳು ಮಾಧ್ಯಮಗಳಿಗೆ ಸೋರಿಕೆಯಾಗುವುದನ್ನು ತಡೆಯಲು ಟ್ರಂಪ್ ಈ ಹಿಂದಿನಿಂದಲೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಗಂಭೀರ ದೇಶದ್ರೋಹದ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Sat, 5 September 26