US Police Brutality: ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ಸಾವು: ವ್ಯಾಪಕ ಜನಾಕ್ರೋಶ, ಖಂಡನೆ
US Police Atrocity: ಪೊಲೀಸರ ಹೊಡೆತದಿಂದ ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ.
ಮೆಂಫಿಸ್: ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತನನ್ನು ಟೈರ್ ನಿಕೊಲಸ್ ಎಂದು ಗುರುತಿಸಲಾಗಿದೆ. ಮುಖಕ್ಕೆ ಗುದ್ದುವುದು, ಬೂಟುಗಾಲಿನಿಂದ ತುಳಿಯುವುದು ಹಾಗೂ ಲಾಠಿ ಹೊಡೆತಗಳನ್ನು ತಡೆಯಲು ಆಗದೆ ಟೈರ್ ನಿಕೊಲಸ್ (Tyre Nichols) ಸಾವನ್ನಪ್ಪಿದ್ದಾನೆ. ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ. ಮೆಂಫಿಸ್ ಅಧಿಕಾರಿಗಳು ಇದೀಗ ಘಟನೆಯ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕಪ್ಪುವರ್ಣೀಯರೇ ಆಗಿರುವ ಪೊಲೀಸರು ನಿಕೊಲಸ್ನನ್ನು ಬೆನ್ನಟ್ಟುವುದು, ಒಂದು ಕಾರ್ಗೆ ಅವನನ್ನು ಒರಗಿಸಿ ಥಳಿಸುವುದು, ತಮ್ಮ ಕೃತ್ಯವನ್ನು ಸಂಭವಿಸುವ ದೃಶ್ಯಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ.
ನಿಕೊಲಸ್ ಸತ್ತ ನಂತರ ಜನಾಕ್ರೋಶ ತೀವ್ರಗೊಂಡಿತ್ತು. ನಿಕೊಲಸ್ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಹೊರಿಸಲಾಯಿತು. ಹಲವು ಬಾರಿ ಜನರು ಒತ್ತಾಯಿಸಿದ್ದರೂ, ನ್ಯಾಯಾಲಯಗಳು ತಿಳಿಹೇಳಿದ್ದರೂ ಪೊಲೀಸರ ವರ್ತನೆ ಏನೇನೂ ಬದಲಾಗಿಲ್ಲ ಎಂದು ಅಮೆರಿಕ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. 29 ವರ್ಷದ ನಿಕೊಲಸ್ ಫೆಡ್ಎಕ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರ ಮೂರು ನಿಮಿಷಗಳ ಹೊಡೆತದಿಂದ ಅವರು ಮೃತಪಟ್ಟರು. ಇದು 1991ರಲ್ಲಿ ಪೊಲೀಸರ ಹೊಡೆತದಿಂದ ಸಾವನಪ್ಪಿದ ರೊಡ್ನಿ ಕಿಂಗ್ ಸಾವನ್ನೇ ಹೋಲುತ್ತದೆ ಎಂದು ನಿಕೊಲಸ್ ಅವರ ವಕೀಲರು ಹೇಳಿದ್ದಾರೆ.
This Tyre Nichols video should truly disgust every American. The vast majority of police are good people but Police brutality is a massive problem in this nation. Violence won’t fix this but we need Justice for Tyre from the Memphis Police.
— Brian Krassenstein (@krassenstein) January 28, 2023
ನಿಕೊಲಸ್ ಕೊನೆಯ ಕ್ಷಣಗಳು
ನಿಕೊಲಸ್ ಇದ್ದ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಡೆದು, ಅವರನ್ನು ಹೊರಗೆ ಎಳೆದರು. ‘ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಕೂಗಿಕೊಂಡಾಗ, ಪೊಲೀಸರ ಒಂದು ಗುಂಪು ಸುತ್ತುಗಟ್ಟಿ ಥಳಿಸಲು ಆರಂಭಿಸಿತು. ನಿಕೊಲಸ್ನನ್ನು ಹಿಡಿದಿದ್ದ ಪೊಲೀಸ್ ‘ಗುಂಡು ಹೊಡಿ’ ಎಂದು ಕೂಗಿಕೊಂಡಾಗ, ನಿಕೋಲಸ್ ‘ನಾನು ಈಗಾಗಲೇ ಕೆಳಗಿದ್ದೇನೆ’ ಎಂದು ಪ್ರತಿ ಹೇಳಿದ್ದಾರೆ. ‘ನಾನೇನೂ ತಪ್ಪು ಮಾಡಿಲ್ಲ. ಮನೆಗೆ ಹೋಗ್ತಿದ್ದೀನಿ. ನೀವು ಇತ್ತೀಚೆಗೆ ತುಂಬಾ ಒಳ್ಳೇದು ಮಾಡ್ತಿದ್ದೀರಿ. ನಿಲ್ಲಿಸಿ, ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಮತ್ತೊಮ್ಮೆ ಕೂಗಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರು ಸ್ಟನ್ಗನ್ನಿಂದ ಗುಂಡು ಹಾರಿಸಿದಾಗ ಹೆದರಿದ ನಿಕೊಲಸ್ ಓಡಲು ಆರಂಭಿಸಿದರು. ಬೆನ್ನಟ್ಟಿದ ಪೊಲೀಸರು ಮನಸೋಯಿಚ್ಛೆ ಥಳಿಸಿದರು. ಈ ಹೊಡೆತಕ್ಕೆ ನಿಕೊಲಸ್ ಜೀವ ಬಿಟ್ಟರು.
ಹಿಂಸಾಚಾರ ಬೇಡವೆಂದ ತಾಯಿ
ನಿಕೊಲಸ್ ಸಾವು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ನಿಕೊಲಸ್ ತಾಯಿ ‘ಶಾಂತಿ ಕಾಪಾಡಿ’ ಎಂದು ಪ್ರತಿಭಟನಾನಿರತರಿಗೆ ಮನವಿ ಮಾಡಿದ್ದಾರೆ. ‘ನಮ್ಮ ನಗರದಲ್ಲಿ ಹಿಂಸಾಚಾರ ನಡೆಯುವುದು ನನಗೆ ಬೇಕಿಲ್ಲ. ನೀವು ನಿಕೊಲಸ್ ಪರವಾಗಿದ್ದೀರಿ ಎಂದಾದರೆ ದಯವಿಟ್ಟು ಶಾಂತಿಯುತವಾಗಿ ಪ್ರತಿಭಟಿಸಿ’ ಎಂದು ಅವರು ತಮ್ಮ ಮನೆ ಎದುರು ಸೇರಿದ್ದ ಪ್ರತಿಭಟನಾನಿರತರನ್ನು ಕೋರಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಜೂಲಿಯಾನಾ ಸ್ಟ್ರಾಟನ್ ಟೈರ್ ನಿಕೊಲಸ್ನ ನಗುಮುಖದ ಚಿತ್ರ ಶೇರ್ ಮಾಡಿದ್ದಾರೆ.
Not sharing the video. Instead, sharing this human being’s beautiful smile.
Tyre Nichols. pic.twitter.com/8EihLATRYL
— Lt. Governor Juliana Stratton (@LtGovStratton) January 28, 2023
ಪೊಲೀಸ್ ಹಿಂಸಾಚಾರಕ್ಕೆ ಕಡಿವಾಣ: ಮೃತನ ತಾಯಿಗೆ ಅಧ್ಯಕ್ಷರ ಭರವಸೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ನಿಕೊಲಸ್ ತಾಯಿಯೊಂದಿಗೆ ಮಾತನಾಡಿದ್ದು, ಈ ವಿಚಾರವನ್ನು ಕಾಂಗ್ರೆಸ್ನಲ್ಲಿ (ಅಮೆರಿಕದ ಪ್ರಜಾಪ್ರತಿನಿಧಿ ಸಭೆ) ಪ್ರಸ್ತಾಪಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಶೀಘ್ರ ‘ಜಾರ್ಜ್ಫ್ಲಾಯ್ಡ್ ಕಾಯ್ದೆ’ (George Floyd Act) ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದು ಜಾರಿಗೆ ಬಂದರೆ ಅಮೆರಿಕದಲ್ಲಿ ಪೊಲೀಸರು ನಡೆಸುವ ಹಿಂಸಾಚಾರಕ್ಕೆ ಕಡಿವಾಣ ಬೀಳಲಿದೆ, ಕೇಂದ್ರ (ಫೆಡರಲ್) ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಹೆಚ್ಚಾಗುತ್ತದೆ.
ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಕರಾಳ ಹತ್ಯೆ ಪ್ರಕರಣ: ಫ್ಲಾಯ್ಡ್ ಕುಟುಂಬಕ್ಕೆ ಪರಿಹಾರ ನೀಡಲು ಒಪ್ಪಿದ ಅಮೆರಿಕ ಪೊಲೀಸ್
ವಿದೇಶದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Sat, 28 January 23