
ವಾಷಿಂಗ್ಟನ್, ನವೆಂಬರ್ 21: ಭಾರತದ ಆರ್ಥಿಕ ಮತ್ತು ಸೇನಾ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ತಡೆಯಲು ಚೀನಾ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಪಾಕಿಸ್ತಾನಕ್ಕೆ ಸೇನಾ ನೆರವು ನೀಡುವುದು, ಗಡಿ ಪ್ರದೇಶಗಳಲ್ಲಿ ಮಿಲಿಟರಿ ಒತ್ತಡ ಹೇರುವುದು ಮತ್ತು ಭಾರತದ ಕೈಗಾರಿಕೆಗಳಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಗೆ ನಿರ್ಬಂಧ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಚೀನಾ ಅನುಸರಿಸುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ಸಮಿತಿ ಎಚ್ಚರಿಸಿದೆ.
ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗವು (USCC) ನವೆಂಬರ್ 18ರಂದು ಕಾಂಗ್ರೆಸ್ಗೆ ಸಲ್ಲಿಸಿರುವ 2026ರ ವಾರ್ಷಿಕ ವರದಿಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದೆ. ‘ಚೀನಾಸ್ ಅದರ್ ಫ್ರಂಟ್, ಇಂಡಿಯಾ ಆ್ಯಂಡ್ ದಿ ಫ್ಯೂಚರ್ ಆಫ್ ಯುಎಸ್ ಸ್ಟ್ರ್ಯಾಟಜಿ ಇನ್ ದಿ ಇಂಡೋ ಪೆಸಿಫಿಕ್ ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ ಭಾರತದ ಬೆಳವಣಿಗೆಯನ್ನು ತಡೆಯಲು ಚೀನಾ ವಿವಿಧ ಕ್ಷೇತ್ರಗಳಲ್ಲಿ ಪ್ರಯತ್ನಿಸುತ್ತಿದೆ ಎಂದು ವರದಿ ಹೇಳಿದೆ.
2025ರ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷದ ವೇಳೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು ಎಂದು ಅಮೆರಿಕದ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಚೀನಾ ನೇರವಾಗಿ ಯುದ್ಧದಲ್ಲಿ ಭಾಗವಹಿಸದಿದ್ದರೂ, ಪಾಕಿಸ್ತಾನಕ್ಕೆ ನೆರವು ನೀಡುವ ಮೂಲಕ ಸಂಘರ್ಷದ ಸಂದರ್ಭದಲ್ಲಿ ಅದರ ಸಾಮರ್ಥ್ಯ ಹೆಚ್ಚಿಸಬಹುದು ಎಂಬುದನ್ನು ಈ ಘಟನೆ ತೋರಿಸಿದೆ ಎಂದು ವರದಿ ಹೇಳಿದೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ನೀಡಿತ್ತು ಎಂಬ ವಿಚಾರವನ್ನೂ ವರದಿ ಪ್ರಸ್ತಾಪಿಸಿದೆ.
ಇದನ್ನೂ ಓದಿ: ಆವತ್ತು ಭಾರತಕ್ಕೆ ಶಾಪ ಹಾಕಿದ್ದ ಟ್ರಂಪ್ ಇವತ್ತು ಮಾಡಿದ್ದೇನು? ಅಮೆರಿಕ, ರಷ್ಯಾ, ಚೀನಾ ನಾಯಕರ ಭೇಟಿ ಮತ್ತು ಟ್ರಂಪ್ ಸೋಗಲಾಡಿತನ
ಚೀನಾ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಸೇನಾ ಸಹಕಾರ ಭಾರತದ ಭದ್ರತೆಗೆ ಎರಡು ಕಡೆಯಿಂದಲೂ ಅಪಾಯ ಎದುರಾಗುವ ಆತಂಕವನ್ನು ಹೆಚ್ಚಿಸಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಭಾರತದ ಬೆಳವಣಿಗೆಯನ್ನು ತಡೆಯಲು ಚೀನಾ ಬಳಸುತ್ತಿರುವ ಪ್ರಮುಖ ಅಸ್ತ್ರ ಆರ್ಥಿಕ ಒತ್ತಡ ಎಂದು ವರದಿ ಹೇಳಿದೆ. ಭಾರತ ತನ್ನದೇ ಆದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಕಚ್ಚಾ ವಸ್ತುಗಳು, ತಂತ್ರಜ್ಞಾನ, ಯಂತ್ರೋಪಕರಣಗಳು ಮತ್ತು ತಜ್ಞರ ನೆರವಿನ ಮೇಲೆ ಚೀನಾ ನಿಯಂತ್ರಣ ಹೊಂದಿದೆ.
ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅಗತ್ಯವಿರುವ ಕೆಲವು ಉಪಕರಣಗಳ ಪೂರೈಕೆಯನ್ನು ಚೀನಾ ನಿರ್ಬಂಧಿಸಿದೆ. ಔಷಧ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವ ಮೂಲಕ ಭಾರತೀಯ ಉತ್ಪಾದನಾ ಘಟಕಗಳಿಗೆ ಸ್ಪರ್ಧೆ ನೀಡಿದೆ. ಬ್ಯಾಟರಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ರಫ್ತು ನಿಯಂತ್ರಣಗಳನ್ನೂ ವಿಧಿಸಿದೆ ಎಂದು ವರದಿ ತಿಳಿಸಿದೆ.
ಇದರಿಂದ ಭಾರತ ತನ್ನದೇ ಆದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಅಡ್ಡಿಯಾಗಬಹುದು ಎಂಬುದು ಅಮೆರಿಕದ ಸಮಿತಿಯ ಆತಂಕ.
ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ನೌಕಾಪಡೆ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ಹೆಚ್ಚಿಸುತ್ತಿರುವುದರ ಬಗ್ಗೆಯೂ ವರದಿ ಎಚ್ಚರಿಸಿದೆ. ಈ ಪ್ರದೇಶದಲ್ಲಿ ಚೀನಾದ ಹಡಗುಗಳು ಮತ್ತು ಸಂಶೋಧನಾ ನೌಕೆಗಳ ಸಂಚಾರ ಹೆಚ್ಚುತ್ತಿರುವುದು ಭಾರತದ ಸಮುದ್ರ ಭದ್ರತೆಗೆ ಸವಾಲಾಗಬಹುದು ಎಂದು ಹೇಳಿದೆ.
ದಕ್ಷಿಣ ಏಷ್ಯಾದ ಹಲವು ದೇಶಗಳಿಗೆ ಚೀನಾ ಮೂಲಸೌಕರ್ಯ ಮತ್ತು ಆರ್ಥಿಕ ನೆರವು ನೀಡುವ ಮೂಲಕ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ಭಾರತದ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ವರದಿ ವ್ಯಕ್ತಪಡಿಸಿದೆ.
ಚೀನಾದ ಪ್ರಭಾವವನ್ನು ಎದುರಿಸಲು ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಹಾಗೂ ಗುಪ್ತಚರ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ನೌಕಾಪಡೆ ಮತ್ತು ಜಲಾಂತರ್ಗಾಮಿ ನೌಕೆಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಎರಡೂ ದೇಶಗಳು ಮಾಹಿತಿ ಹಂಚಿಕೊಳ್ಳಬೇಕು. ಸಮುದ್ರ ಭದ್ರತೆ, ಗುಪ್ತಚರ ಮಾಹಿತಿ ಮತ್ತು ಕಣ್ಗಾವಲು ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ವರದಿ ಸಲಹೆ ನೀಡಿದೆ.
ಇದರ ಜೊತೆಗೆ ರಕ್ಷಣಾ, ಉದ್ಯಮ, ಶಿಕ್ಷಣ ಮತ್ತು ಸರ್ಕಾರಿ ವಲಯಗಳ ಯುವ ನಾಯಕರ ನಡುವೆ ದೀರ್ಘಕಾಲೀನ ಸಂಬಂಧ ಬೆಳೆಸಲು ಭಾರತ-ಅಮೆರಿಕ ಕಾರ್ಯತಂತ್ರದ ನಾಯಕತ್ವ ವಿನಿಮಯ ಕಾರ್ಯಕ್ರಮ ಆರಂಭಿಸುವಂತೆಯೂ ಶಿಫಾರಸು ಮಾಡಿದೆ.
ಏಷ್ಯಾದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಪ್ರಮುಖ ಕಾರ್ಯತಂತ್ರದ ಶಕ್ತಿಯಾಗಿ ಅಮೆರಿಕ ಪರಿಗಣಿಸಿದೆ. ಆದರೆ ಭಾರತ ತನ್ನ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅಮೆರಿಕದೊಂದಿಗೆ ಸಹಕಾರ ಮುಂದುವರಿಸಲಿದೆ ಎಂಬುದನ್ನೂ ವರದಿ ಗುರುತಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ