ಟ್ರಂಪ್ ಕೈಗೆ ಸುಂಕದ ಚಾವಟಿ: ರಷ್ಯಾ-ಭಾರತ ಇಂಧನ ವ್ಯಾಪಾರದ ಮೇಲೆ ಅಮೆರಿಕ ಸಂಸತ್ತಿನ ಕಣ್ಣು

ಅಮೆರಿಕ ಸಂಸತ್ತು ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಮಸೂದೆಗೆ ಸಿದ್ಧವಾಗಿದೆ. ಭಾರತ ಪ್ರಮುಖ ತೈಲ ಖರೀದಿದಾರನಾಗಿ ಇದರ ಕೇಂದ್ರಬಿಂದುವಾಗಿದೆ. ಮಸೂದೆ ಜಾರಿಯಾದರೂ ತಕ್ಷಣ ಭಾರತದ ಮೇಲೆ ಸುಂಕ ಬೀಳುವುದಿಲ್ಲ; ಅಧ್ಯಕ್ಷರಿಗೆ ವಿವೇಚನಾ ಅಧಿಕಾರ ನೀಡುತ್ತದೆ. ಭಾರತ ತನ್ನ ಇಂಧನ ಭದ್ರತಾ ನಿಲುವನ್ನು ಸಮರ್ಥಿಸಿಕೊಂಡಿದೆ. ಮುಂದೆ ಅಮೆರಿಕ-ಭಾರತ ನಡುವೆ ರಾಜತಾಂತ್ರಿಕ ಸಂಧಾನಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.

ಟ್ರಂಪ್ ಕೈಗೆ ಸುಂಕದ ಚಾವಟಿ: ರಷ್ಯಾ-ಭಾರತ ಇಂಧನ ವ್ಯಾಪಾರದ ಮೇಲೆ ಅಮೆರಿಕ ಸಂಸತ್ತಿನ ಕಣ್ಣು
ಡೊನಾಲ್ಡ್​ ಟ್ರಂಪ್
Image Credit source: BBC

Updated on: Sep 16, 2026 | 7:27 AM

ವಾಷಿಂಗ್ಟನ್, ಸೆಪ್ಟೆಂಬರ್ 16: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುವ ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇಕಡಾ 100 ರಷ್ಟು ಆಮದು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುವ ಮಹತ್ವದ ಮಸೂದೆಯೊಂದರ ಮೇಲೆ ಯುಎಸ್ ಸಂಸತ್ತು ಮತ ಚಲಾಯಿಸಲು ಸಜ್ಜಾಗಿದೆ. ರಷ್ಯಾದಿಂದ ಅಪಾರ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಈ ಮಸೂದೆಯ ಪ್ರಮುಖ ಕೇಂದ್ರಬಿಂದುವಾಗಿದ್ದು, ಇದು ಜಾರಿಯಾದರೆ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತಕ್ಷಣಕ್ಕೆ ಭಾರತದ ಮೇಲೆ ಸುಂಕ ಬೀಳುವುದಿಲ್ಲ: ಈ ಶಾಸನವು ಜಾರಿಯಾದರೂ ಭಾರತದ ಸರಕುಗಳ ಮೇಲೆ ತಾನಾಗಿಯೇ (ಸ್ವಯಂಚಾಲಿತವಾಗಿ) ಶೇ.100ರಷ್ಟು ಸುಂಕ ಬೀಳುವುದಿಲ್ಲ. ಬದಲಿಗೆ, ಮಾಸ್ಕೋ ಮೇಲೆ ಆರ್ಥಿಕ ಒತ್ತಡ ಹೇರಲು ರಷ್ಯಾದ ಇಂಧನ ಖರೀದಿಸುವ ದೇಶಗಳ ವಿರುದ್ಧ ಸುಂಕ ವಿಧಿಸುವ ವಿವೇಚನಾ ಅಧಿಕಾರವನ್ನು ಇದು ಅಮೆರಿಕ ಅಧ್ಯಕ್ಷರಿಗೆ ನೀಡುತ್ತದೆ.

ಭಾರತದ ಹೆಸರಿದ್ದ ತಿದ್ದುಪಡಿ ತಿರಸ್ಕೃತ: ಭಾರತ, ಚೀನಾ, ಯುಎಇ ಸೇರಿದಂತೆ 10 ದೇಶಗಳನ್ನು ನೇರವಾಗಿ ಹೆಸರಿಸಿ ತಕ್ಷಣ ಸುಂಕ ಹೇರುವಂತೆ ಪ್ರಸ್ತಾಪಿಸಲಾಗಿದ್ದ ‘ಸ್ಟೆನಿ ಹೋಯರ್ ತಿದ್ದುಪಡಿ’ಯನ್ನು ಹೌಸ್ ನಿಯಮಗಳ ಸಮಿತಿಯು 3-7 ಮತಗಳ ಅಂತರದಿಂದ ತಿರಸ್ಕರಿಸಿದೆ. ಹೀಗಾಗಿ ಯಾವುದೇ ದೇಶದ ಹೆಸರು ಪ್ರಸ್ತುತ ನೇರವಾಗಿ ಪಟ್ಟಿಯಲ್ಲಿಲ್ಲ.

ಮತ್ತಷ್ಟು ಓದಿ: ರಷ್ಯಾದ ತೈಲ ಘಟಕಗಳ ಮೇಲೆ ದಾಳಿ ನಿಲ್ಲಿಸಿ, ಜಾಗತಿಕ ಡೀಸೆಲ್ ಬಿಕ್ಕಟ್ಟಿಗೆ ಝೆಲೆನ್‌ಸ್ಕಿ ಕಾರಣವೆಂದು ಕೆಂಡವಾದ ಟ್ರಂಪ್

ಸೆನೆಟ್ ಆವೃತ್ತಿಯ ನಿಯಮ: ಸೆನೆಟ್ ಅಂಗೀಕರಿಸಿರುವ ಮೂಲ ಮಸೂದೆಯಲ್ಲಿ ಯಾವುದೇ ದೇಶವನ್ನು ನಿರ್ದಿಷ್ಟವಾಗಿ ಹೆಸರಿಸದೆ, “ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ವಿಶ್ವದ ಟಾಪ್ 5 ದೇಶಗಳು” ಎಂಬ ವಿಶಾಲ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.

ಅಧ್ಯಕ್ಷರ ಪರಮಾಧಿಕಾರಕ್ಕೆ ವಿರೋಧ: ಅಧ್ಯಕ್ಷರಿಗೆ ಇಷ್ಟೊಂದು ವ್ಯಾಪಕ ವ್ಯಾಪಾರ ಸುಂಕ ವಿಧಿಸುವ ಅಧಿಕಾರ ನೀಡುವುದನ್ನು ವಿರೋಧಿಸಿ ಕೆಲವು ಡೆಮಾಕ್ರಟಿಕ್ ಸಂಸದರು ತಿದ್ದುಪಡಿ ತರಲು ಯತ್ನಿಸಿದರಾದರೂ, ಆ ಪ್ರಸ್ತಾವವೂ ಸಮಿತಿಯಲ್ಲಿ ಬಿದ್ದುಹೋಗಿದೆ.

ಭಾರತದ ಇಂಧನ ಭದ್ರತೆ ನಿಲುವು: ಉಕ್ರೇನ್ ಯುದ್ಧದ ನಂತರ ರಷ್ಯಾದಿಂದ ಅತ್ಯಂತ ಕಡಿಮೆ ದರದಲ್ಲಿ ತೈಲ ಖರೀದಿಸುತ್ತಿರುವ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಿದೆ. ತನ್ನ ದೇಶದ 140 ಕೋಟಿ ಜನರ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಯೇ ತಮಗೆ ಪ್ರಮುಖ ಆದ್ಯತೆ ಎಂದು ಭಾರತ ಮೊದಲಿನಿಂದಲೂ ಅಮೆರಿಕದ ಒತ್ತಡಗಳಿಗೆ ಸಡ್ಡು ಹೊಡೆದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಮೋದಿ-ಪುಟಿನ್ ಇತ್ತೀಚಿನ ಮಾತುಕತೆ: ಸೆಪ್ಟೆಂಬರ್ 11 ರಂದು ನಡೆದ ಉನ್ನತ ಮಟ್ಟದ ಮಾತುಕತೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ವ್ಯಾಪಾರ, ಇಂಧನ ಸಹಭಾಗಿತ್ವ ಮತ್ತು ರಾಷ್ಟ್ರೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವ ಕುರಿತು ಚರ್ಚಿಸಿದ್ದಾರೆ.

ಮುಂದಿರುವ ಸವಾಲು: ಈ ಮಸೂದೆ ಪೂರ್ಣ ಪ್ರಮಾಣದಲ್ಲಿ ಸಂಸತ್ತಿನಲ್ಲಿ ಪಾಸ್ ಆಗಿ ಅಂತಿಮವಾಗಿ ಕಾನೂನಾದರೆ, ಅಮೆರಿಕ ಆಡಳಿತವು ಭಾರತವನ್ನು ‘ದ್ವಿತೀಯ ನಿರ್ಬಂಧಗಳ’ ವ್ಯಾಪ್ತಿಗೆ ತರಲು ಪ್ರಯತ್ನಿಸುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ವ್ಯಾಪಾರ ಸಂಬಂಧಿತ ರಾಜತಾಂತ್ರಿಕ ಸಂಧಾನಗಳು ತೀವ್ರಗೊಳ್ಳಲಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:27 am, Wed, 16 September 26

Loading...
Unable to load recommendations.
Follow Us