ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡೆರಡು ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

Venezuela Earthquake: ವೆನೆಜುವೆಲಾದಲ್ಲಿ ಒಂದೇ ನಿಮಿಷದ ಅಂತರದಲ್ಲಿ 7.1 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ. ಜನರು ಭಯದಿಂದ ಮನೆಬಿಟ್ಟು ಬೀದಿಗಳಲ್ಲಿ ರಾತ್ರಿ ಕಳೆದರು. ಕಳೆದ ಶತಮಾನದ ಭೀಕರ ಕಂಪನ ಇದಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.

ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡೆರಡು ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ
ಭೂಕಂಪ

Updated on: Jun 25, 2026 | 10:11 AM

ಮುಖ್ಯಾಂಶಗಳು

  • ವೆನೆಜುವೆಲಾದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ
  • ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿವೆ
  • ಒಬ್ಬರನ್ನೊಬ್ಬರು ತಬ್ಬಿಕೊಂಡು ಬೀದಿಗಳಲ್ಲಿ ರಾತ್ರಿ ಕಳೆದ ಜನ

ಕ್ಯಾರಕಾಸ್, ಜೂನ್ 25: ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪ(Earthquake)ಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ ನಗರವೇ ಧೂಳಿನ ಮಯವಾಗಿದೆ. ಒಂದು ಶತಮಾನಕ್ಕೂ (100 ವರ್ಷ) ಹೆಚ್ಚು ಅವಧಿಯಲ್ಲಿ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಂಜೆ 6 ಗಂಟೆಯ ಬಳಿಕ 7.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಕ್ಯಾರಕಾಸ್‌ನಿಂದ 168 ಕಿ.ಮೀ ದೂರದ ಮೊರೊನ್ ಕರಾವಳಿಯ 22 ಕಿ.ಮೀ ಆಳದಲ್ಲಿತ್ತು. ಅಂದರೆ ಕೇವಲ ಒಂದು ನಿಮಿಷದ ಅಂತರದಲ್ಲಿ ಮತ್ತೊಂದು ಭೀಕರ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಇದು ಭೂಮಿಯ ಒಳಗಡೆ ಕೇವಲ 10 ಕಿ.ಮೀ ಆಳದಲ್ಲಿದ್ದ ಕಾರಣ ವಿನಾಶದ ತೀವ್ರತೆ ಹೆಚ್ಚಾಗಿತ್ತು. ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಕಣ್ಣೆದುರೇ ಕುಸಿದು ಬಿದ್ದ ಗೋಡೆಗಳು, ಬೀದಿಯಲ್ಲೇ ರಾತ್ರಿ ಕಳೆದ ಜನ

ಕಂಪನ ಆರಂಭವಾಗುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಕ್ಯಾರಕಾಸ್ ನಗರದ ಜನನಿಬಿಡ ಪ್ರದೇಶಗಳಲ್ಲಿ ಕಟ್ಟಡಗಳ ದೊಡ್ಡ ದೊಡ್ಡ ಗೋಡೆಗಳು ಕುಸಿದು ಬಿದ್ದಿವೆ. ಮನೆಗಳ ಗೋಡೆಗಳು ಇಲ್ಲದಂತಾಗಿ ಒಳಗಿದ್ದ ಪೀಠೋಪಕರಣಗಳು ನೇರವಾಗಿ ರಸ್ತೆಗೆ ಕಾಣಿಸುವಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತಷ್ಟು ಓದಿ: ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ

ರಾತ್ರಿಯಲ್ಲೂ ಜನರು ಮನೆಗಳ ಒಳಗೆ ಹೋಗಲು ಹೆದರಿ ಬೀದಿಗಳಲ್ಲೇ ಕಾಲ ಕಳೆದರು. ಅನೇಕರು ಆಘಾತದಿಂದ ತಮ್ಮ ಸಾಕುಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಂಡು ರಸ್ತೆಯ ಮೇಲೆಯೇ ಕುಳಿತಿದ್ದ ದೃಶ್ಯಗಳು ಕಂಡುಬಂದವು.

ವಿಡಿಯೋ

ಜಾಗತಿಕವಾಗಿ ಸುನಾಮಿ ಎಚ್ಚರಿಕೆ

ವೆನೆಜುವೆಲಾದಲ್ಲಿ ಇಷ್ಟೊಂದು ಪ್ರಬಲ ಭೂಕಂಪಗಳು ಸಂಭವಿಸುವುದು ತೀರಾ ಅಪರೂಪ. ಈ ಭೀಕರ ಭೂಕಂಪದ ಬೆನ್ನಲ್ಲೇ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳು ಹಾಗೂ ಡೊಮಿನಿಕನ್ ಗಣರಾಜ್ಯದ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಪೋರ್ಟೊ ರಿಕೊಗೆ ನೀಡಲಾಗಿದ್ದ ಎಚ್ಚರಿಕೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 am, Thu, 25 June 26

Follow Us