Venezuela Earthquake: ವೆನೆಜುವೆಲಾದಲ್ಲಿ ಮತ್ತೆ ನಡುಗಿದ ಭೂಮಿ, ಅವಳಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 920ಕ್ಕೆ ಏರಿಕೆ

ವೆನೆಜುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪಗಳ ನಂತರ, 4.9 ತೀವ್ರತೆಯ ಮತ್ತೊಂದು ಕಂಪನ ಆತಂಕ ಸೃಷ್ಟಿಸಿದೆ. ಈ ದುರಂತದಲ್ಲಿ ಒಟ್ಟು 920 ಜನರು ಸಾವನ್ನಪ್ಪಿದ್ದು, 3,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯದ ಕೊರತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, 24ಕ್ಕೂ ಹೆಚ್ಚು ದೇಶಗಳಿಂದ ಅಂತರರಾಷ್ಟ್ರೀಯ ನೆರವು ಹರಿದುಬರುತ್ತಿದೆ. ಸರ್ಕಾರ ಆಹಾರ ಮತ್ತು ನೀರು ವಿತರಿಸಲು ಶ್ರಮಿಸುತ್ತಿದೆ.

Venezuela Earthquake: ವೆನೆಜುವೆಲಾದಲ್ಲಿ ಮತ್ತೆ ನಡುಗಿದ ಭೂಮಿ, ಅವಳಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 920ಕ್ಕೆ ಏರಿಕೆ
ಭೂಕಂಪ

Updated on: Jun 27, 2026 | 8:30 AM

ಮುಖ್ಯಾಂಶಗಳು

  • ವೆನೆಜುವೆಲಾದಲ್ಲಿ ಮತ್ತೆ ಭೂಮಿ ಕಂಪಿಸಿದೆ
  • ಈ ಬಾರಿ 4.9 ತೀವ್ರತೆಯ ಕಂಪನವಾಗಿದೆ
  • ಬುಧವಾರ ಸಂಭವಿಸಿದ ಅವಳಿ ಭೂಕಂಪದಲ್ಲಿ ಇದುವರೆಗೆ 920 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

ಕ್ಯಾರಕಾಸ್, ಜೂನ್ 27: ಅವಳಿ ಭೂಕಂಪ(Earthquake)ಗಳು ಇಡೀ ದೇಶವನ್ನೇ ಸ್ಮಶಾನವಾಗಿಸಿದ ಕೇವಲ ಎರಡು ದಿನಗಳ ಬೆನ್ನಲ್ಲೇ, ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ ಶುಕ್ರವಾರ 4.9 ತೀವ್ರತೆಯ ಮತ್ತೊಂದು ಹೊಸ ಭೂಕಂಪ ಸಂಭವಿಸಿದೆ. ಈಗಾಗಲೇ ಭಾರಿ ಸಾವು-ನೋವುಗಳಿಂದ ತತ್ತರಿಸಿ ಹೋಗಿರುವ ಜನರಲ್ಲಿ ಈ ಇತ್ತೀಚಿನ ಕಂಪನವು ಹೊಸ ಆತಂಕ ಹಾಗೂ ಭೀತಿಯನ್ನು ಹುಟ್ಟುಹಾಕಿದೆ.

ಕ್ಯಾರಕಾಸ್ ಮತ್ತು ಮರಕೇಯಲ್ಲೂ ಕಂಪನದ ಅನುಭವ
ಭೂಕಂಪ ಟ್ರ್ಯಾಕಿಂಗ್ ಸಂಸ್ಥೆ EMSC ಪ್ರಕಾರ, ಈ ಹೊಸ ಭೂಕಂಪದ ಕೇಂದ್ರಬಿಂದು ಮರಕೇ ನಗರದಿಂದ ವಾಯುವ್ಯಕ್ಕೆ ಸುಮಾರು 61 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ. ಮರಕೇ ಹಾಗೂ ದೇಶದ ರಾಜಧಾನಿ ಕ್ಯಾರಕಾಸ್ ಎರಡರಲ್ಲೂ ಭೂಮಿ ಜೋರಾಗಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹೊಸ ಕಂಪನದಿಂದ ಉಂಟಾದ ಹೆಚ್ಚುವರಿ ಹಾನಿಯ ವಿವರಗಳು ಇನ್ನೂ ಲಭ್ಯವಾಗಿಲ್ಲದಿದ್ದರೂ, ಇದು ಸದ್ಯ ನಡೆಯುತ್ತಿರುವ ರಕ್ಷಣಾ ಕಾರ್ಯವನ್ನು ಮತ್ತಷ್ಟು ಕಠಿಣಗೊಳಿಸಿದೆ.

920ಕ್ಕೆ ಏರಿದ ಸಾವಿನ ಸಂಖ್ಯೆ, 3,300ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ಬುಧವಾರ ತಡರಾತ್ರಿ ವೆನೆಜುವೆಲಾದಲ್ಲಿ 7.2 ಮತ್ತು 7.5 ರಷ್ಟು ಭೀಕರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಈ ಮಹಾ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರದ ವೇಳೆಗೆ 920ಕ್ಕೆ ಏರಿಕೆಯಾಗಿದೆ. 3,300 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರೀತಿಪಾತ್ರರನ್ನು ಕಳೆದುಕೊಂಡ ಹತಾಶ ನಾಗರಿಕರು ಸ್ವತಃ ತಾವೇ ಮನೆಗಳ ಅವಶೇಷಗಳನ್ನು ಅಗೆದು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದುರಂತದ ತೀವ್ರತೆಗೆ ಹೋಲಿಸಿದರೆ ಸ್ಥಳೀಯ ಸರ್ಕಾರಿ ರಕ್ಷಣಾ ತಂಡಗಳ ಕೊರತೆ ಎದ್ದುಕಾಣುತ್ತಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಭೂಕಂಪ ನಡೆದ ಮೊದಲ 48 ರಿಂದ 72 ಗಂಟೆಗಳನ್ನು ಬದುಕುಳಿದವರನ್ನು ಜೀವಂತವಾಗಿ ಹೊರತೆಗೆಯಲು ‘ಸುವರ್ಣ ಸಮಯ’ ಎಂದು ಪರಿಗಣಿಸಲಾಗುತ್ತದೆ. ಸಿಕ್ಕಿಬಿದ್ದವರಿಗೆ ಆಹಾರ ಮತ್ತು ನೀರು ಸಿಗದಿದ್ದರೆ ಅವರ ಬದುಕುವ ಸಾಧ್ಯತೆ ಕ್ಷೀಣಿಸಲಿದೆ.

ಮತ್ತಷ್ಟು ಓದಿ: ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡೆರಡು ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ವೆನೆಜುವೆಲಾದ ಈ ಬಿಕ್ಕಟ್ಟಿಗೆ ಸ್ಪಂದಿಸಿರುವ ವಿಶ್ವದ ಎರಡು ಡಜನ್‌ಗಿಂತಲೂ ಹೆಚ್ಚು ದೇಶಗಳ ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು ಈಗಾಗಲೇ ವೆನೆಜುವೆಲಾಕ್ಕೆ ಧಾವಿಸಿವೆ.

ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಅಂತಾರಾಷ್ಟ್ರೀಯ ನೆರವನ್ನು ಸ್ವಾಗತಿಸಿದ್ದು, ಸರ್ಕಾರವು ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ವಿತರಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಹಾನಿಗೊಳಗಾದ ‘ಲಾ ಗುಯಿರಾ’ ನಗರವನ್ನು ಸಂಪೂರ್ಣವಾಗಿ ಮಿಲಿಟರಿ ವಶಕ್ಕೆ ಒಪ್ಪಿಸಲಾಗಿದೆ. ಆದಾಗ್ಯೂ, ಈಗ ಸಿಗುತ್ತಿರುವ ಪರಿಹಾರವು ತಮಗೆ ಬೇಕಾಗಿರುವ ಅಗತ್ಯದ ಒಂದು ಸಣ್ಣ ಭಾಗ ಮಾತ್ರ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us