ಪ್ರೇಮಿಗಳ ದಿನಾಚರಣೆಗೂ ಮುನ್ನವೇ ಎಚ್ಚೆತ್ತ ಸರ್ಕಾರ; ಈ ದೇಶದವರಿಗೆ 9.5 ಕೋಟಿ ಕಾಂಡೋಮ್ ಉಚಿತ!
ಉಚಿತವಾಗಿ ನೀಡಲಾಗುವ ಕಾಂಡೋಮ್‌ಗಳು 4 ಗಾತ್ರಗಳಲ್ಲಿ ಲಭ್ಯವಿರುತ್ತವೆ. ಈ ದೇಶದ ಎಲ್ಲ ಆಸ್ಪತ್ರೆಗಳ ಔಷಧಾಲಯಗಳು ಮತ್ತು ಪ್ರಾಥಮಿಕ ಆರೈಕೆ ಘಟಕಗಳಿಂದ ಈ ಕಾಂಡೋಮ್‌ಗಳನ್ನು ಪಡೆದುಕೊಳ್ಳಬಹುದು
ನವದೆಹಲಿ: ಫೆಬ್ರವರಿ ತಿಂಗಳು ಬಂದೇ ಬಿಟ್ಟಿದೆ. ಫೆ. 14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು (Valentine’s Day) ಆಚರಿಸುತ್ತಾರೆ. ಈ ವೇಳೆ ಭಾರತದಲ್ಲಿ ಸಾಕಷ್ಟು ಗಲಾಟೆಗಳೂ ನಡೆಯುತ್ತವೆ. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಈ ದಿನವನ್ನು ವಿಶೇಷವಾಗಿ, ಯಾವುದೇ ನಿರ್ಬಂಧವಿಲ್ಲದೆ ಆಚರಿಸಲಾಗುತ್ತದೆ. ಹೀಗಾಗಿ, ಆಗ್ನೇಯ ಏಷ್ಯಾದ ರಾಷ್ಟ್ರವಾದ ಥೈಲ್ಯಾಂಡ್ (Thailand) ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಸಲುವಾಗಿ ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಹದಿಹರೆಯದ ಗರ್ಭಧಾರಣೆಯನ್ನು ನಿಯಂತ್ರಿಸಲು 95 ಮಿಲಿಯನ್ (9.5 ಕೋಟಿ) ಉಚಿತ ಕಾಂಡೋಮ್‌ಗಳನ್ನು (Free Condoms) ವಿತರಿಸಲು ನಿರ್ಧರಿಸಿದೆ.
ಫೆಬ್ರವರಿ 1ರಿಂದ ಥೈಲ್ಯಾಂಡ್ನ ಸಾರ್ವತ್ರಿಕ ಹೆಲ್ತ್‌ಕೇರ್ ಕಾರ್ಡ್‌ದಾರರು 1 ವರ್ಷದವರೆಗೆ ವಾರಕ್ಕೆ 10 ಕಾಂಡೋಮ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರದ ವಕ್ತಾರರಾದ ರಚಡಾ ಧ್ನಾದಿರೇಕ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾಂಡೋಮ್‌ಗಳು 4 ಗಾತ್ರಗಳಲ್ಲಿ ಲಭ್ಯವಿರುತ್ತವೆ. ಇಲ್ಲಿನ ಎಲ್ಲ ಆಸ್ಪತ್ರೆಗಳ ಔಷಧಾಲಯಗಳು ಮತ್ತು ಪ್ರಾಥಮಿಕ ಆರೈಕೆ ಘಟಕಗಳಿಂದ ಈ ಕಾಂಡೋಮ್‌ಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Free Condoms: ಜ. 1ರಿಂದ 25 ವರ್ಷದೊಳಗಿನ ಯುವಕರಿಗೆ ಉಚಿತ ಕಾಂಡೋಮ್; ಫ್ರಾನ್ಸ್ ಸರ್ಕಾರ ಘೋಷಣೆ
ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಾಂಡೋಮ್ ನೀಡುವ ಅಭಿಯಾನವು ಲೈಂಗಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ರಾಚಡಾ ಹೇಳಿದ್ದಾರೆ. ಸಿಫಿಲಿಸ್, ಗರ್ಭಕಂಠದ ಕ್ಯಾನ್ಸರ್, ಗೊನೊರಿಯಾ, ಕ್ಲಮೈಡಿಯ ಮತ್ತು ಏಡ್ಸ್ ರೋಗಗಳನ್ನು ತಡೆಗಟ್ಟುವ ಗುರಿಯನ್ನು ಥೈಲ್ಯಾಂಡ್ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಥೈಲ್ಯಾಂಡ್ ಇತ್ತೀಚಿನ ವರ್ಷಗಳಲ್ಲಿ ಲೈಂಗಿಕವಾಗಿ ಹರಡುವ ರೋಗಗಳ ಪ್ರಮಾಣ ಹೆಚ್ಚಾಗಿದೆ. ಸಿಫಿಲಿಸ್ ಮತ್ತು ಗೊನೊರಿಯಾ 15 ರಿಂದ 19 ಮತ್ತು 20 ರಿಂದ 24 ವರ್ಷಗಳ ನಡುವಿನ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?
ಇತ್ತೀಚಿನ ಸರ್ಕಾರಿ ಮಾಹಿತಿಯ ಪ್ರಕಾರ, ಸುಮಾರು 70 ಮಿಲಿಯನ್ ಥೈಸ್‌ನಲ್ಲಿ ಸುಮಾರು 50 ಮಿಲಿಯನ್ ಜನರು ಸರ್ಕಾರದ ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆಯಲ್ಲಿ ದಾಖಲಾಗಿದ್ದಾರೆ. ಇದನ್ನು “ಗೋಲ್ಡ್ ಕಾರ್ಡ್” ಎಂದೂ ಕರೆಯುತ್ತಾರೆ. ಸಾರ್ವಜನಿಕ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ವೈದ್ಯಕೀಯ ಆರೈಕೆಯನ್ನು ಪಡೆಯಲು ಈ ಗೋಲ್ಡ್ ಕಾರ್ಡ್ ಬಳಸಲಾಗುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:35 pm, Thu, 2 February 23