ಇಡೀ ಅಮೆರಿಕನ್ನರ ಗಮನ ಸೆಳೆಯುತ್ತಿರುವ ವಿವೇಕ್ ರಾಮಸ್ವಾಮಿ ಯಾರು? ಇವರ ತಾಯಿಯ ಮೈಸೂರು ನಂಟು ಏನು? ಇಲ್ಲಿದೆ ಮಾಹಿತಿ

Who Is Vivek Ramaswamy?: ಭಾರತ ಮೂಲದ ಸಮುದಾಯಕ್ಕೆ ಸೇರಿದ ಅಮೆರಿಕನ್ ವ್ಯಕ್ತಿ ವಿವೇಕ್ ರಾಮಸ್ವಾಮಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ. ಎಡಪಂಥೀಯ ಚಿಂತನೆಯ ವಿರೋಧಿಯಾಗಿರುವ ಅವರು ತಮ್ಮನ್ನು ತಾವು ಅಮೆರಿಕನ್ ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುತ್ತಾರೆ. ಮೂರ್ನಾಲ್ಕು ಪುಸ್ತಕಗಳನ್ನು ಬರೆದಿರುವ ಅವರು ಫಾರ್ಮಾ ಕ್ಷೇತ್ರದ ಉದ್ಯಮಿ ಕೂಡ ಹೌದು.

ಇಡೀ ಅಮೆರಿಕನ್ನರ ಗಮನ ಸೆಳೆಯುತ್ತಿರುವ ವಿವೇಕ್ ರಾಮಸ್ವಾಮಿ ಯಾರು? ಇವರ ತಾಯಿಯ ಮೈಸೂರು ನಂಟು ಏನು? ಇಲ್ಲಿದೆ ಮಾಹಿತಿ
ವಿವೇಕ್ ರಾಮಸ್ವಾಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 29, 2023 | 11:45 AM

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ರಿಪಬ್ಲಿಕನ್ ಪಕ್ಷದಲ್ಲಿ ಪೈಪೋಟಿ ನಡೆಸಿರುವ ವಿವೇಕ್ ರಾಮಸ್ವಾಮಿ (Vivek Ramaswamy) ತಮ್ಮ ಮೊನಚು ಮಾತುಗಳಿಂದ ಅಮೆರಿಕನ್ನರ ಗಮನ ಸೆಳೆಯುತ್ತಿದ್ದಾರೆ. ಖಚಿತ ನಿಲುವು, ನೇರಾನೇರ ಮಾತುಗಳ ಖಡಕ್ ವ್ಯಕ್ತಿತ್ವಕ್ಕೆ ಹೆಸರಾದ ವಿವೇಕ್ ರಾಮಸ್ವಾಮಿ ಭಾರತ ಮೂಲದವರು. ಇವರು ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕದಲ್ಲೇ. ಇವರ ತಂದೆ ಮತ್ತು ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋದವರು. 38 ವರ್ಷದ ವಿವೇಕ್ ರಾಮಸ್ವಾಮಿ ಅಮೆರಿಕದಲ್ಲಿ ನೆಲಸಿರುವ ಎರಡನೇ ತಲೆಮಾರಿನವರ ಭಾರತೀಯರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿರುವ ಅವರು ಮೂಲತಃ ಉದ್ಯಮಿಯಾಗಿದ್ದಾರೆ. ಹಾಗೆಯೇ ಹಲವು ರಾಜಕೀಯ ಮತ್ತು ಕಾರ್ಪೊರೇಟ್ ಸಂಬಂಧಿ ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದಾರೆ. ವಿವೇಕ್ ರಾಮಸ್ವಾಮಿ ಮೂಲ, ಬೆಳವಣಿಗೆ, ನಿಲುವುಗಳ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ…

ವಿವೇಕ್ ರಾಮಸ್ವಾಮಿ ತಾಯಿ ಮೈಸೂರಿನಲ್ಲಿ ಓದಿದವರು…

ವಿವೇಕ್ ರಾಮಸ್ವಾಮಿ ಅವರದ್ದು ತಮಿಳು ಬ್ರಾಹ್ಮಣ ಮನೆತನ. ಅವರ ತಂದೆ ಗಣಪತಿ ರಾಮಸ್ವಾಮಿ ಮತ್ತು ತಾಯಿ ಗೀತಾ ರಾಮಸ್ವಾಮಿ ಇಬ್ಬರೂ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕನಚೇರಿಯವರು. ಗಣಪತಿ ರಾಮಸ್ವಾಮಿ ಕೇರಳದ ಕಲ್ಲಿಕೋಟೆಯ (ಕ್ಯಾಲಿಕಟ್) ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಅವರ ತಾಯಿ ಗೀತಾ ರಾಮಸ್ವಾಮಿ ವೈದ್ಯೆ. ಮೈಸೂರಿನ ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇನ್ಸ್​ಟಿಟ್ಯೂಟ್​ನಲ್ಲಿ ವೈದ್ಯಕೀಯ ಪದವಿ ಪಡೆದು, ಅಲ್ಲಿಯೇ ಕೆಲಸ ಮಾಡಿದವರು.

ವಿವೇಕ್ ರಾಮಸ್ವಾಮಿ ಹುಟ್ಟಿದ್ದು ಅಮೆರಿಕದ ಓಹಿಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ 1985, ಆಗಸ್ಟ್ 9ರಂದು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ಪದವಿ ಮಾಡಿದ್ದಾರೆ. ಆಗಲೇ ಅವರು ರಾಜಕೀಯ ಮತ್ತು ತಾತ್ವಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಯಾಲೆ ಲಾ ಸ್ಕೂಲ್​ನಲ್ಲಿ ಕಾನೂನು ಕೂಡ ಓದಿದ್ದಾರೆ.

ವಿವೇಕ್ ರಾಮಸ್ವಾಮಿ ಪತ್ನಿ ಅಪೂರ್ವಾ ಅವರೂ ವೈದ್ಯೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ

ವಿವೇಕ್ ರಾಮಸ್ವಾಮಿ ಉದ್ಯಮಿ

ವಿವೇಕ್ ರಾಮಸ್ವಾಮಿ 23ನೇ ವಯಸ್ಸಿನಲ್ಲಿ ಕ್ಯಾಂಪಸ್ ವೆಂಚರ್ ನೆಟ್ವರ್ಕ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಉದ್ಯಮ ಆರಂಭಿಸಲು ಬಯಸುವ ಯೂನಿವರ್ಸಿಟಿ ವಿದ್ಯಾರ್ಥಿಗಳ ಖಾಸಗಿ ನೆಟ್ವರ್ಕಿಂಗ್ ವೆಬ್​ಸೈಟ್ ಅದಾಗಿತ್ತು.

2007ರಿಂದ 2014ರವರೆಗೆ ಕ್ಯುವಿಟಿ ಫೈನಾನ್ಷಿಯಲ್ ಎಂಬ ಹೆಡ್ಜ್ ಫಂಡ್​ನಲ್ಲಿ ಕೆಲಸ ಮಾಡಿದರು.

2014ರಲ್ಲಿ ರೋಯಿವಂಟ್ ಸೈನ್ಸಸ್ ಎಂಬ ಬಯೋಟೆಕ್ನಾಲಜಿ ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಜೊತೆಗೆ ಹಲವು ಉಪಸಂಸ್ಥೆಗಳನ್ನೂ ಆರಂಭಿಸಿದರು.

2020ರಲ್ಲಿ ಚಾಪ್ಟರ್ ಮೆಡಿಕೇರ್ ಎಂಬ ಮೆಡಿಕೇರ್ ನ್ಯಾವಿಗೇಶನ್ ಪ್ಲಾಟ್​ಫಾರ್ಮ್ ಅನ್ನು ಸಹ-ಸಂಸ್ಥಾಪನೆ ಮಾಡಿದರು.

ಆನ್​ಕೋರ್ ಬಯೋಫಾರ್ಮಾ, ಟೆಕ್ಮಿರಾ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳಲ್ಲಿ ಅವರು ಛೇರ್ಮನ್ ಆಗಿದ್ದರು.

ಕೆನಡಾದ ಆರ್ಬುಟಸ್ ಬಯೋಫಾರ್ಮಾ ಎಂಬ ಸಂಸ್ಥೆಯ ಬೋರ್ಡ್​ನ ಅಧ್ಯಕ್ಷರಾಗಿದ್ದರು.

2022ರಲ್ಲಿ ಸ್ಟ್ರೈವ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸಹ-ಸಂಸ್ಥಾಪಿಸಿದರು.

ವಿವೇಕ್ ರಾಮಸ್ವಾಮಿ ರಾಜಕೀಯ ಪುಟ

ವಿವೇಕ್ ರಾಮಸ್ವಾಮಿ ವಿದ್ಯಾರ್ಥಿ ಕಾಲದಲ್ಲಿ ಉದಾರವಾದಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಲಿಬರ್ಟೇರಿಯನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗೆ ವೋಟ್ ಹಾಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 2016ರಿಂದೀಚೆ ಅವರು ರಿಪಬ್ಲಿಕನ್ ಪಕ್ಷದ ಪರ ರಾಜಕೀಯ ನಿಲುವು ಹೊಂದಿರುವುದು ಕಂಡು ಬಂದಿದೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್​ಗೆ ಬೆಂಬಲ ನೀಡಿದ್ದರು.

ಇದೀಗ ವಿವೇಕ್ ರಾಮಸ್ವಾಮಿ ತಾವೇ ಖುದ್ದಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಹೊರಟಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳಿಂದ ತಲಾ ಒಬ್ಬ ಅಭ್ಯರ್ಥಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಬಹುದು. ಆ ಅಭ್ಯರ್ಥಿಯಾಗಲು ಆಯಾ ಪಕ್ಷದೊಳಗೆ ಮತದಾನ ನಡೆಯುತ್ತದೆ. ಈ ರೇಸ್​ನಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಮಂದಿ ಇದ್ದಾರೆ. ಈ ಸ್ಪರ್ಧೆಯಲ್ಲಿ ವಿವೇಕ್ ರಾಮಸ್ವಾಮಿ 3ನೇ ಸ್ಥಾನದಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ಫ್ಲೋರಿಡಾ ಗವರ್ನರ್ ರಾನ್ ಡೀಸ್ಯಾಂಟಿಸ್ ಅವರು ಬಹಳ ಮುಂದಿದ್ದಾರೆ.

ವಿವೇಕ್ ರಾಮಸ್ವಾಮಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಇವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತದ ಜೊತೆ ಗಟ್ಟಿ ಸಂಬಂಧ ಇದ್ದರೆ ಅಮೆರಿಕಕ್ಕೆ ಆಗುವ ಪ್ರಯೋಜನವೇನು? ವಿವೇಕ್ ರಾಮಸ್ವಾಮಿ ಅನಿಸಿಕೆ ಇದು

ವಿವೇಕ್ ರಾಮಸ್ವಾಮಿ ಇತರ ವಿಶೇಷತೆಗಳು ಮತ್ತು ವಿಚಾರಗಳು

  • ವಿವೇಕ್ ರಾಮಸ್ವಾಮಿ ಅವರು 40 ವರ್ಷದೊಳಗಿನ ಅಮೆರಿಕದ ಅತಿ ಶ್ರೀಮಂತರಲ್ಲಿ ಒಬ್ಬರೆನಿಸಿದ್ದಾರೆ.
  • ಅಮೆರಿಕದ ಕಾರ್ಪೊರೇಟ್ ವಲಯದ ಸಾಮಾಜಿಕ ನ್ಯಾಯ ವ್ಯವಸ್ಥೆ ವಿರುದ್ಧ ಅವರು ವೋಕ್ ಐಎನ್​ಸಿ ಎಂಬ ಪುಸ್ತಕ ಬರೆದಿದ್ದಾರೆ.
  • ನೇಶನ್ ಆಫ್ ವಿಕ್ಟಿಮ್ಸ್, ಕ್ಯಾಪಿಟಲಿಸ್ಟ್ ಪನಿಶ್ಮೆಂಟ್ ಎಂಬ ಇನ್ನೆರಡು ಪುಸ್ತಕಗಳ ಕರ್ತೃ ಕೂಡ ಅವರಾಗಿದ್ದಾರೆ.
  • ಎಡಪಂಥೀಯರ ವಿರುದ್ಧ ಅವರದ್ದು ಖಚಿತ ನಿಲುವಾಗಿದೆ.
  • ಮಾರಿಜುವಾನ ಡ್ರಗ್ಸ್ (ಗಾಂಜಾ) ಅನ್ನು ಕಾನೂನು ಬದ್ಧಗೊಳಿಸಬೇಕು ಎಂಬ ನಿಲುವು ಅವರದ್ದು.
  • ಎಲ್​ಜಿಬಿಟಿ ಅಥವಾ ಲೈಂಗಿಕ ಅಲ್ಪಸಂಖ್ಯಾತ ವರ್ಗದವರನ್ನು ವಿರೋಧಿಸುತ್ತಾರೆ.
  • ಅಮೆರಿಕದ ಜಾತ್ಯತೀತ ವ್ಯವಸ್ಥೆಗೆ ವಿರೋಧಿಯಾಗಿದ್ದಾರೆ. ಅಮೆರಿಕ ಕ್ರೈಸ್ತ ವಿಚಾರಗಳಿಂದ ರೂಪುಗೊಂಡ ದೇಶವಾಗಿದೆ ಎಂಬುದು ಅವರ ಅನಿಸಿಕೆ.
  • ಕಾರ್ಪೊರೇಟ್ ಕಂಪನಿಗಳ ಮೇಲೆ ಪರಿಸರ, ಸಾಮಾಜಿಕ ಮತ್ತು ಆಡಳಿತ ಜವಾಬ್ದಾರಿಯ ಹೊರೆ ಹೊರಿಸುವ ನೀತಿಯನ್ನು ವಿವೇಕ್ ವಿರೋಧಿಸುತ್ತಾರೆ.
  • ಗರ್ಭಪಾತವನ್ನು ವಿವೇಕ್ ರಾಮಸ್ವಾಮಿ ಬಲವಾಗಿ ವಿರೋಧಿಸುತ್ತಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಮತ್ತು ಮಹಿಳೆ ಪ್ರಾಣಕ್ಕೆ ಅಪಾಯವಾಗುವ ಸಂದರ್ಭದಲ್ಲಿ ಮಾತ್ರ ಅಬಾರ್ಷನ್ ಆಗಲು ಅವಕಾಶ ಇರಬೇಕು ಎಂಬುದು ಅವರ ನಿಲುವು.

ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಲ್ಲಿ ಭಾರತ ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು, ರಾಷ್ಟ್ರೀಯ ಎಐ ಲ್ಯಾಬ್ ಸ್ಥಾಪಿಸಬೇಕು: ಐಬಿಎಂ ಸಿಇಒ ಅರವಿಂದ್ ಕೃಷ್ಣ ಸಲಹೆ

  • ಭಾರತದ ಜಾತಿ ವ್ಯವಸ್ಥೆಯನ್ನು ನೀಗಿಸಬೇಕಾದರೆ ಅಮೆರಿಕನ್ ರೀತಿಯ ಬಂಡವಾಳಶಾಹಿ ವ್ಯವಸ್ಥೆ ಬೇಕು ಎಂದು ವಿವೇಕ್ ರಾಮಸ್ವಾಮಿ ಹೇಳುತ್ತಾರೆ.
  • ಅಮೆರಿಕದ ಸಂಸತ್ತಿನ ಮೇಲೆ ರಿಪಬ್ಲಿಕನ್ನರು ದಾಳಿ ನಡೆಸಿದ ಘಟನೆ ಹೊರತುಪಡಿಸಿ ಡೊನಾಲ್ಡ್ ಟ್ರಂಪ್ ಪರವಾಗಿ ವಿವೇಕ್ ನಿಂತಿದ್ದಾರೆ. ಅಮೆರಿಕ ಅಧ್ಯಕ್ಷರಾದರೆ ಡೊನಾಲ್ಡ್ ಟ್ರಂಪ್​ಗೆ ಕ್ಷಮಾದಾನ ಕೊಡುವುದಾಗಿ ಹೇಳಿದ್ದಾರೆ. ಹಾಗೆಯೇ, ಜೂಲಿಯನ್ ಅಸ್ಸಾಂಜೆ, ರಾಸ್ ಬುಲ್​ಬ್ರಿಷ್ಟ್, ಎಡ್ವರ್ಡ್ ಸ್ನೋಡನ್ ಮೊದಲಾದವರಿಗೂ ಕ್ಷಮಾದಾನ ಮಾಡುತ್ತೇನೆ ಎಂದಿದ್ದಾರೆ.
  • ಅಮೆರಿಕ ಅಧ್ಯಕ್ಷನಾದರೆ ಶೇ. 75ರಷ್ಟು ಸರ್ಕಾರಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮೆ ಹೆಚ್ಚಿಸುವುದಾಗಿ ಹೇಳಿರುವ ಅವರು ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಅವರು ಕೈಗೊಂಡ ಕ್ರಮವನ್ನು ಸಮರ್ಥಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ