Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್

ಇರಾನ್ ಜೊತೆಗಿನ ಕದನವಿರಾಮಕ್ಕೆ ಅಮೆರಿಕ 15 ಅಂಶಗಳ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿತ್ತು. ಆದರೆ, ಈ ನಿರ್ಧಾರವನ್ನು ಒಪ್ಪದ ಇರಾನ್ ನಮ್ಮ ಷರತ್ತುಗಳನ್ನು ಪೂರೈಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸುತ್ತೇವೆ, ನಾವೇನು ಮಾಡಬೇಕೆಂದು ಟ್ರಂಪ್ ನಿರ್ಧರಿಸಲು ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. ಇರಾನ್ ಅಮೆರಿಕ ಹೇಳಿದ ಕದನ ವಿರಾಮದ ಸಮಯವನ್ನು ತಿರಸ್ಕರಿದ್ದು, ಯುದ್ಧವನ್ನು ಕೊನೆಗೊಳಿಸಲು 5 ಕಠಿಣ ಷರತ್ತುಗಳನ್ನು ನಿಗದಿಪಡಿಸಿದೆ.

Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್
Mojtaba Khamenei
Image Credit source: AP

Updated on: Mar 25, 2026 | 9:40 PM

ಟೆಹ್ರಾನ್, ಮಾರ್ಚ್ 25: ಕಳೆದ 2 ದಿನಗಳಿಂದ ಡೊನಾಲ್ಡ್ ಟ್ರಂಪ್ (Donald Trump) ಈ ಯುದ್ಧ ಸಾಕಾಗಿದೆ ಎಂಬಂತೆ ವರ್ತಿಸಿದ್ದರು. ಇರಾನ್ ಜೊತೆ ಕದನವಿರಾಮದ ಸುಳಿವನ್ನೂ ನೀಡಿದ್ದರು. ಹಾಗೇ, ಇರಾನ್ ಮೇಲಿನ ದಾಳಿಯನ್ನು ಕೊನೆಗೊಳಿಸಲು 15 ಅಂಶಗಳ ಶಾಂತಿ ಯೋಜನೆಯನ್ನು ಘೋಷಿಸಿದ್ದರು. ಆದರೆ, ಅವರ ಈ ನಿರ್ಧಾರವನ್ನು ತಿರಸ್ಕರಿಸಿರುವ ಇರಾನ್ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡಿದೆ. ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ಈ ಯುದ್ಧ ನಿಲ್ಲಬೇಕಾದರೆ ನಾವು ಹಾಕುವ 5 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಘೋಷಿಸಿದೆ.

ತನ್ನ ಷರತ್ತುಗಳು ಪೂರೈಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಕದನ ವಿರಾಮಕ್ಕೆ ಸಮಯವನ್ನು ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ದೃಢವಾಗಿ ತಿರಸ್ಕರಿಸಿರುವ ಇರಾನ್ ಅಮೆರಿಕ ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದೆ ಎಂದು ಟೀಕಿಸಿದೆ.

ಇದನ್ನೂ ಓದಿ: ಎಚ್ಚರಿಕೆ ನೀಡಿದ 1 ಗಂಟೆಯಲ್ಲೇ ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ

ಇದರ ನಡುವೆ ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ದೃಢ ನಿಲುವನ್ನು ತೆಗೆದುಕೊಂಡಿದೆ. ಯುದ್ಧ ನಿಲ್ಲಿಸಲು ಇರಾನ್ ಹಾಕಿರುವ 5 ಪ್ರಮುಖ ಷರತ್ತುಗಳು ಹೀಗಿವೆ.

1. ಅಮೆರಿಕ ಮತ್ತು ಇಸ್ರೇಲ್‌ನಿಂದ ಆಕ್ರಮಣಶೀಲತೆ ಮತ್ತು ಟಾರ್ಗೆಟ್ ಮಾಡಿದ ಹತ್ಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು.

2. ಇರಾನ್ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮಿಲಿಟರಿ ಕ್ರಮ ಅಥವಾ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡುವುದು;

3. ಯುದ್ಧ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಗೆ ಸೂಕ್ತವಾದ ಪರಿಹಾರ ನೀಡುವುದು.

4. ಮಿತ್ರ ಗುಂಪುಗಳು ಸೇರಿದಂತೆ ಎಲ್ಲಾ ಪ್ರಾದೇಶಿಕ ರಂಗಗಳಲ್ಲಿ ಹಗೆತನಕ್ಕೆ ಅಂತ್ಯ ಹಾಡುವುದು.

5. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ಗೆ ಅಧಿಕಾರದ ಅಧಿಕೃತ ಮಾನ್ಯತೆ ನೀಡುವುದು.

ಇದನ್ನೂ ಓದಿ: ಎಚ್ಚರಿಕೆ ನೀಡಿದ 1 ಗಂಟೆಯಲ್ಲೇ ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ

‘ನಮ್ಮ ಈ ಷರತ್ತುಗಳನ್ನು ಒಪ್ಪಿದ ಮೇಲೆ ಯುದ್ಧ ಕೊನೆಗೊಳ್ಳುತ್ತದೆ’ ಎಂದು ಇರಾನ್ ಸ್ಪಷ್ಟವಾಗಿ ತಿಳಿಸಿದೆ. ಇವೆಲ್ಲದಕ್ಕೆ ಇಸ್ರೇಲ್ ಹಾಗೂ ಅಮೆರಿಕ ಒಪ್ಪುವ ಸಾಧ್ಯತೆ ಕಡಿಮೆ ಇರುವುದರಿಂದ ಸದ್ಯಕ್ಕೆ ಯುದ್ಧ ನಿಲ್ಲುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಹಾಗೇ, ಯಾವುದೇ ಕದನ ವಿರಾಮದ ಸಮಯವನ್ನು ಇರಾನ್ ಮಾತ್ರ ನಿರ್ಧರಿಸುತ್ತದೆಯೇ ವಿನಃ ಬೇರೆ ದೇಶಗಳು ಇದನ್ನು ನಿರ್ಧರಿಸುವಂತಿಲ್ಲ ಎಂದು ಇರಾನಿನ ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳು ಈಡೇರುವವರೆಗೆ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಇರಾನ್ ಸ್ಪಷ್ಟಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:38 pm, Wed, 25 March 26

Follow Us