ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅಪಘಾತ; 13 ಜನ ಸಾವು, 34 ಮಂದಿಯ ಸ್ಥಿತಿ ಗಂಭೀರ

ಉತ್ತರಾಖಂಡದ ಪಿಥೋರಗಢ ಬಳಿಯ ನೇಪಾಳದ ಬೈತಾಡಿಯಲ್ಲಿ ಬಸ್ ಕಂದಕಕ್ಕೆ ಉರುಳಿ 13 ಜನರು ಸಾವನ್ನಪ್ಪಿದ್ದಾರೆ, 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಉತ್ತರಾಖಂಡದ ಪಿಥೋರಗಢದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಈ ಭೀಕರ ರಸ್ತೆ ಅಪಘಾತದ ಸಂಭವಿಸಿತ್ತು. ಹಲವಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದಾಗ ಈ ಘಟನೆ ಸಂಭವಿಸಿತ್ತು.

ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅಪಘಾತ; 13 ಜನ ಸಾವು, 34 ಮಂದಿಯ ಸ್ಥಿತಿ ಗಂಭೀರ
Nepal Bus Accident
Image Credit source: x

Updated on: Feb 06, 2026 | 5:24 PM

ಕಠ್ಮಂಡು, ಫೆಬ್ರವರಿ 6: ಉತ್ತರಾಖಂಡದ ಗಡಿಯಲ್ಲಿರುವ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ಗುರುವಾರ ಭೀಕರ ಬಸ್ ಅಪಘಾತ (Accident) ಸಂಭವಿಸಿತ್ತು. ಮದುವೆಗೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಉರುಳಿತ್ತು. ಈ ಅಪಘಾತದ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 34 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ಮಾಹಿತಿ ತಿಳಿದ ಕೂಡಲೇ ನೇಪಾಳದ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಬೈತಾಡಿ ಮತ್ತು ದಾದೇಲ್ಧುರಾದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ವರದಿಗಳ ಪ್ರಕಾರ, ನೇಪಾಳದ ಸುದುರ್ಪಾಶ್ಚಿಮ್ ಪ್ರದೇಶದಲ್ಲಿ ನಿನ್ನೆ ಈ ಅಪಘಾತ ಸಂಭವಿಸಿದ್ದು, 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಿಕಿತ್ಸೆಯ ಸಮಯದಲ್ಲಿ 5 ಜನರು ಸಾವನ್ನಪ್ಪಿದರು. ಈ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಬೈತಾಡಿ ಜಿಲ್ಲೆಯ ಪುರ್ಚೌರಿ ಪುರಸಭೆ ಪ್ರದೇಶದಿಂದ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಪರ್ವತದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ಪಶ್ಚಿಮ ನೇಪಾಳದ ಪುರ್ಚೌರಿ -7 ಪ್ರದೇಶದ ಬದ್ಗಾಂವ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ

ಸ್ಥಳೀಯ ನಿವಾಸಿಗಳು, ನೇಪಾಳದ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಲವಾರು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾರ ಹೊತ್ತಿದ್ದ ಬಸ್ ಹತ್ತುತ್ತಿದ್ದಾಗ ಪ್ರೆಶರ್ ಪೈಪ್ ಒಡೆದ ನಂತರ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ