ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಡೆಲ್ಟಾ ಮತ್ತು ಒಮಿಕ್ರಾನ್​ ಸೋಂಕು ತಗುಲಿದರೆ ಏನಾಗುತ್ತದೆ? ಆರೋಗ್ಯ ತಜ್ಞರು ನೀಡಿದ ಉತ್ತರ ಭಯಹುಟ್ಟಿಸುವಂತಿದೆ !

| Updated By: Lakshmi Hegde

Updated on: Dec 18, 2021 | 11:41 AM

ಒಂದೊಮ್ಮೆ ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್​ ಎರಡೂ ತಳಿಗಳು ತಗುಲಿದರೆ, ಆತನ ದೇಹದಲ್ಲಿ ಇವೆರಡೂ ತಮ್ಮ ಜೀನ್​ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಡೆಲ್ಟಾ ಮತ್ತು ಒಮಿಕ್ರಾನ್​ ಸೋಂಕು ತಗುಲಿದರೆ ಏನಾಗುತ್ತದೆ? ಆರೋಗ್ಯ ತಜ್ಞರು ನೀಡಿದ ಉತ್ತರ ಭಯಹುಟ್ಟಿಸುವಂತಿದೆ !
ಸಾಂಕೇತಿಕ ಚಿತ್ರ
Follow us on

ಕೊರೊನಾದ ವಿವಿಧ ತಳಿಗಳು ಈಗಾಗಲೇ ವಿಶ್ವವನ್ನು ಬಾಧಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಡೆಲ್ಟಾ (Delta Variant) ಮತ್ತು ಒಮಿಕ್ರಾನ್ (Omicron Variant)​ ದೊಡ್ಡ ತಲೆನೋವು ಸೃಷ್ಟಿಸಿದ ತಳಿಗಳು. ಇತ್ತೀಚೆಗಷ್ಟೇ ಪತ್ತೆಯಾದ ಒಮಿಕ್ರಾನ್ ಸೋಂಕಿನ ಪ್ರಸರಣದ ಪ್ರಮಾಣ ಹೆಚ್ಚಾಗಿದೆ. ಹೀಗಿರುವಾಗ ಒಬ್ಬ ವ್ಯಕ್ತಿಗೆ ಒಂದೇ ಬಾರಿಗೆ ಡೆಲ್ಟಾ ಮತ್ತು ಒಮಿಕ್ರಾನ್​ ಎರಡೂ ವೈರಾಣು ತಗುಲಿದರೆ ಏನಾಗಲಿದೆ ಎಂಬ ಪ್ರಶ್ನೆಯೊಂದು ಎದ್ದಿದ್ದು, ಅದಕ್ಕೆ ಆರೋಗ್ಯ ತಜ್ಞರು (Health Experts) ಉತ್ತರ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಒಮಿಕ್ರಾನ್​ ಮತ್ತು ಡೆಲ್ಟಾ ವೈರಾಣುಗಳು ತಗುಲಿದರೆ, ಆ ವ್ಯಕ್ತಿಯಲ್ಲಿ  ಕೊವಿಡ್​ 19 ವೈರಸ್​ನ ಇನ್ನೊಂದು ಸೂಪರ್​ ವೇರಿಯಂಟ್​ (ಹೊಸ ತಳಿ)ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮಾಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಪಾಲ್ ಬರ್ಟನ್ ಕಳೆದ ವಾರ ಯುಕೆ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಎದುರು ಹೇಳಿದ್ದಾರೆ.  

ಒಮಿಕ್ರಾನ್​ ಪ್ರಾರಂಭವಾದ ತಕ್ಷಣವೇ ದಕ್ಷಿಣ ಆಫ್ರಿಕಾ ಈ ಬಗ್ಗೆ ಹೇಳಿದೆ. ಹಾಗೇ, ಅಲ್ಲಿನ ಆರೋಗ್ಯ ತಜ್ಞರು ಹೀಗೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ತುಂಬ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಜನರು ನಿಸ್ಸಂಶಯವಾಗಿಯೂ ಎರಡೂ (ಡೆಲ್ಟಾ ಮತ್ತು ಒಮಿಕ್ರಾನ್​) ವಿಧದ ವೈರಾಣುಗಳಿಗೆ ತುತ್ತಾಗಬಹುದು ಎಂದು ಹೇಳಿದ್ದಾರೆ ಎಂದು ಡಾ. ಬರ್ಟನ್​ ತಿಳಿಸಿದ್ದಾರೆ. ಸದ್ಯ ಬ್ರಿಟನ್​​ನಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್​  ಎರಡೂ ವೈರಸ್​ಗಳು ಹೆಚ್ಚಿನ ಪ್ರಮಾಣದಲ್ಲಿಯೇ ಹಬ್ಬುತ್ತಿವೆ. ಒಮಿಕ್ರಾನ್​ ಮತ್ತು ಡೆಲ್ಟಾ ಪ್ರಕರಣಗಳು ಪ್ರತಿದಿನವೂ ಪತ್ತೆಯಾಗುತ್ತಿವೆ. ಅದರಲ್ಲೂ ಶುಕ್ರವಾರ ಒಂದೇ ದಿನ 3201 ಒಮಿಕ್ರಾನ್​ ಕೇಸ್​ಗಳು ದಾಖಲಾಗಿವೆ ಎಂದೂ ಮಾಹಿತಿ ನೀಡಿದ್ದಾರೆ.

ಒಂದೊಮ್ಮೆ ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್​ ಎರಡೂ ತಳಿಗಳು ತಗುಲಿದರೆ, ಆತನ ದೇಹದಲ್ಲಿ ಇವೆರಡೂ ತಮ್ಮ ಜೀನ್​ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆಗ ಅತ್ಯಂತ ಹೆಚ್ಚು ಅಪಾಯಕಾರಿಯಾದ ರೂಪಾಂತರ ಸೃಷ್ಟಿಯಾಗಬಹುದು. ಇಂಥ ಮರುಸಂಯೋಜನೆ ಅತ್ಯಂತ ಅಪರೂಪವಾದರೂ, ಆಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಬರ್ಟನ್​ ಸೇರಿ ಇನ್ನಿತರ ಕೆಲವು ಸಂಶೋಧಕರು ಹೇಳಿದ್ದಾಗಿ ಡೇಲಿ ಮೇಲ್​ ಕೂಡ ವರದಿ ಮಾಡಿದೆ. ನ್ಯೂ ಸೌತ್​ ವೇಲ್ಸ್​ನ ಯೂನಿವರ್ಸಿಟಿಯ ವೈರಾಣುಶಾಸ್ತ್ರಜ್ಞ ಪೀಟರ್ ವೈಟ್ ಕೂಡ ಇದೇ ಎಚ್ಚರಿಕೆ ನೀಡಿದ್ದಾರೆ. ಬ್ಲೂಮ್​ಬರ್ಗ್​ನೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ವಿವಿಧ ತಳಿಗಳ ಮರುಸಂಯೋಜನೆ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜನಪ್ರತಿನಿಧಿಗಳೇ ಎಚ್ಚರವಿರಲಿ : ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಆ ಅಸಾಧ್ಯ ಸಂಕಟ ನಿಮಗೇನು ಗೊತ್ತು?