Princess Latifa: ದುಬೈ ರಾಜಕುಮಾರಿ ಲತೀಫಾ ಯಾರು? ಅವಳು ಬದುಕಿರುವುದಕ್ಕೆ ವಿಶ್ವಸಂಸ್ಥೆ ಸಾಕ್ಷ್ಯ ಕೇಳುತ್ತಿರುವುದೇಕೆ?

Princess Latifa: ದುಬೈ ರಾಜಕುಮಾರಿ ಲತೀಫಾ ಯಾರು? ಅವಳು ಬದುಕಿರುವುದಕ್ಕೆ ವಿಶ್ವಸಂಸ್ಥೆ ಸಾಕ್ಷ್ಯ ಕೇಳುತ್ತಿರುವುದೇಕೆ?
ದುಬೈ ರಾಜಕುಮಾರಿ ಲತೀಫಾ

Dubai Princess Latifa Al Maktoum: ಲತೀಫಾ ತನ್ನ ತಂದೆಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಬಹುಕಷ್ಟದ ಜೀವನವನ್ನು ಕಳೆದಿದ್ದಳು. ಇದೇ ಕಾರಣಕ್ಕೆ ತಂದೆಯ ಸಾಮ್ರಾಜ್ಯವನ್ನು ಎರಡು ಬಾರಿ ತೊರೆಯಲು ಪ್ರಯತ್ನಿಸಿದ್ದಳು.

TV9kannada Web Team

| Edited By: ganapathi bhat

Apr 06, 2022 | 7:40 PM

ದುಬೈ: ಆಗಸ್ಟಾ ವೆಸ್ಟ್​ಲ್ಯಾಂಡ್ ಹಗರಣದ ಪ್ರಮುಖ ಸಾಕ್ಷಿ ಕ್ರಿಶ್ಚಿಯನ್ ಮೈಕೆಲ್ ಮತ್ತು ದುಬೈ ರಾಜಕುಮಾರಿ ಶೇಖ್ ಲತೀಫಾ ಅವರನ್ನು ತನ್ನ ತಂದೆಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ಪ್ರಮುಖ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳನ್ನು ಭಾರತ ಮತ್ತು ದುಬೈ ವಿನಿಮಯ (Swap) ಮಾಡಿಕೊಂಡಿರುವ ವಿಚಾರ ಈಚೆಗೆ ಬೆಳಕಿಗೆ ಬಂದಿದೆ. ಮನೆಯಿಂದ ತಪ್ಪಿಸಿಕೊಂಡು ಬಂದು ಗೋವಾದಲ್ಲಿ ವಾಸ್ತವ್ಯ ಹೂಡಿದ್ದ ದುಬೈ ಪ್ರಧಾನಿ ಶೇಖ್ ಮೊಹಮ್ಮದ್ (Sheikh Mohammed) ಪುತ್ರಿ ಲತೀಫಾಳನ್ನು (Latifa Al Maktoum) ಭಾರತ 2018ರಲ್ಲಿ ಮರಳಿಸಿತ್ತು. ಆ ಬಳಿಕ, ದುಬೈ ಕ್ರಿಶ್ಚಿಯನ್ ಮೈಕೆಲ್​ನನ್ನುಭಾರತಕ್ಕೆ ಹಸ್ತಾಂತರಿಸಿತ್ತು.

ಇದೀಗ ವಿಶ್ವಸಂಸ್ಥೆ ಮೈಕೆಲ್​ನನ್ನು ಹಸ್ತಾಂತರಿಸುವ ಬಗ್ಗೆ ಅಧಿಕೃತವಾಗಿ ಕೇಳಿದೆ. ಬ್ರಿಟನ್​ನಲ್ಲಿ ತಯಾರಿಸಲ್ಪಟ್ಟ ಹೆಲಿಕಾಪ್ಟರ್​ಗಳನ್ನು ಭಾರತಕ್ಕೆ ಮಾರಾಟ ಮಾಡಲು 40 ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಆರೋಪದಲ್ಲಿ ಕ್ರಿಶ್ಚಿಯನ್ ಮೈಕೆಲ್ ಬಂಧನಕ್ಕೆ ಯುಎನ್ ಕಾಯುತ್ತಿದೆ.

ಲತೀಫಾಳನ್ನು ಯುಎಇಗೆ ಬಿಟ್ಟುಕೊಟ್ಟಿರುವ ವಿಚಾರದ ಕುರಿತು ಭಾರತ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಮೈಕೆಲ್ ಹಸ್ತಾಂತರದ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಉನ್ನತ ಅಧಿಕಾರಿಗಳಿಗೆ, 16 ಪುಟಗಳ ವರದಿ ಸಲ್ಲಿಸಿರುವ ವಿಶ್ವಸಂಸ್ಥೆ, ಕ್ರಿಶ್ಚಿಯನ್ ಮೈಕೆಲ್ ಬಂಧನದಲ್ಲಿ ಯಾವುದೇ ಕಾನೂನಾತ್ಮಕ ಆಧಾರಗಳಿಲ್ಲ, ಬದಲಾಗಿ ಅದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿಸಿದೆ.

ಈ ಪ್ರಕರಣ ಬೆಳಕಿಗೆ ಬರಲು ಕಾರಣವೇನು? ಲತೀಫಾ ತನ್ನ ತಂದೆಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಬಹುಕಷ್ಟದ ಜೀವನವನ್ನು ಕಳೆದಿದ್ದಳು. ಇದೇ ಕಾರಣಕ್ಕೆ ತಂದೆಯ ಸಾಮ್ರಾಜ್ಯವನ್ನು ಎರಡು ಬಾರಿ ತೊರೆಯಲು ಪ್ರಯತ್ನಿಸಿದ್ದಳು. 2002ರಲ್ಲಿ ಮೊದಲ ಬಾರಿಗೆ ಲತೀಫಾ ದುಬೈನಿಂದ ತಪ್ಪಿಸಿಕೊಂಡಿದ್ದಳು. ಮತ್ತೊಮ್ಮೆ 2018ರಲ್ಲಿ ದುಬೈನಿಂದ ಪರಾರಿಯಾಗಿ ಭಾರತಕ್ಕೆ ಬಂದಿದ್ದಳು. ಬಳಿಕ, ಭಾರತ ಕ್ರಿಶ್ಚಿಯನ್ ಮೈಕೆಲ್ ಬದಲಾಗಿ ಲತೀಫಾಳನ್ನು ದುಬೈನೊಂದಿಗೆ ವಿನಿಮಯ ಮಾಡಿಕೊಂಡಿತ್ತು ಎನ್ನಲಾಗುತ್ತಿದೆ. ಮತ್ತೆ ಲತೀಫಾ ಗೃಹಬಂಧನದಲ್ಲಿ ಕಷ್ಟ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತನ್ನ ಕಷ್ಟ ಹೇಳಿಕೊಂಡಿರುವ ಶೇಖ್ ಲತೀಫಾ, ತನ್ನನ್ನು ತಂದೆ ಮತ್ತೆ ಕೂಡಿಹಾಕಿದ್ದಾರೆ ಎಂದು ವೀಡಿಯೋ ಮೂಲಕ ಹೇಳಿದ್ದಾಳೆ. ಗೃಹ ಬಂಧನಕ್ಕೆ ಸಹಕಾರ ನೀಡದೇ ಹೋದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೂಡ ಹೇಳಿಕೊಂಡಿದ್ದಾಳೆ. ಹೀಗೆ ಕಷ್ಟ ತೋಡಿಕೊಂಡಿರುವ ವೀಡಿಯೋವನ್ನು ಬಿಬಿಸಿ ‘ಪನೋರಮಾ’ ತನಿಖಾ ಕಾರ್ಯಾಚರಣೆಯಲ್ಲಿ ಬಿಡುಗಡೆಗೊಳಿಸಿದೆ.

ಬಿಬಿಸಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಲತೀಫಾಳ ಸೆಲ್ಫೀ ವೀಡಿಯೋ ಹರಿದಾಡುತ್ತಿದೆ. ತಾನಿರುವ ವಿಲ್ಲಾದಲ್ಲಿ ಕಿಟಕಿ ಬಾಗಿಲುಗಳನ್ನೂ ತೆರೆಯಲು ಬಿಡುತ್ತಿಲ್ಲ. ಆರೋಗ್ಯ ಸೇವೆಯೂ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಮಗಳು ಮಾಡಿರುವ ಈ ಆರೋಪವನ್ನು ತಂದೆ ಮತ್ತು ದುಬೈ ಆಡಳಿತಗಾರನೂ ಆಗಿರುವ ಶೇಖ್ ಮೊಹಮ್ಮದ್ ತಳ್ಳಿಹಾಕಿದ್ದಾರೆ. ಶೇಖ್ ಮೊಹಮ್ಮದ್​ಗೆ ಆರು ಮಡದಿಯರು ಮತ್ತು 30 ಮಕ್ಕಳಿದ್ದಾರೆ. ಅದರಲ್ಲಿ ಲತೀಫಾ ಒಬ್ಬಳಾಗಿದ್ದಾಳೆ.

35 ವರ್ಷ ವಯಸ್ಸಿನ ಲತೀಫಾ ತನ್ನನ್ನು ಸಮುದ್ರ ಮಾರ್ಗದಲ್ಲಿ ಹೇಗೆ ದುಬೈಗೆ ಕರೆದೊಯ್ಯಲಾಯಿತು ಎಂದು ಹೇಳಿಕೊಂಡಿದ್ದಾಳೆ. ತಂದೆಯ ಶೇಖ್ ಮೊಹಮ್ಮದ್ ಆಜ್ಞೆಯಂತೆ ಪ್ರಜ್ಞೆ ತಪ್ಪುವ ಮದ್ದು ನೀಡಿ ಆಕೆಯನ್ನು ಭಾರತದಿಂದ ಹೇಗೆ ದುಬೈಗೆ ಕರೆಸಿಕೊಂಡರು ಎಂದು ವೀಡಿಯೋ ಮೂಲಕ ತಿಳಿಸಿದ್ದಾಳೆ.

ಬಳಿಕ, ಅವಳನ್ನು ಸುಮಾರು 3 ವರ್ಷಗಳ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿದೆ. ವೀಡಿಯೋದಲ್ಲಿ ಅಳಲು  ತೋಡಿಕೊಂಡಿರುವ ಲತೀಫಾ, ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ. ಬಂಧನದಿಂದ ಮುಕ್ತಿಯಾಗುವ ಸಣ್ಣ ಆಶಾಭಾವದೊಂದಿಗೆ ತಾನು ಇರುವುದಾಗಿ ಹೇಳಿದ್ದಾಳೆ.

ಲತೀಫಾ ಮಾತನಾಡಿರುವ ವೀಡಿಯೋ ಬಿಡುಗಡೆ ಆಗಿರುವುದು ಹೊಸ ವಿಚಾರಗಳ ಸಂಚಲನಕ್ಕೆ ಕಾರಣವಾಗಿದೆ. ಯುಎನ್ ವರದಿ , ದುಬೈ ಅಧಿಕಾರಿಗಳಿಗೆ ಲತೀಫಾ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಡವನ್ನು ಹೆಚ್ಚಿಸಿದೆ.

ವಿಶ್ವಸಂಸ್ಥೆ ಮಧ್ಯಪ್ರವೇಶ ಲತೀಫಾ ವಿಚಾರದಲ್ಲಿ ವಿಶ್ವಸಂಸ್ಥೆ  ಮಧ್ಯಪ್ರವೇಶ ಮಾಡಿದೆ. ಲತೀಫಾ ಬದುಕಿದ್ದಾಳೆ ಎನ್ನುವುದಕ್ಕೆ ದಾಖಲೆ ಕೊಡಿ ಎಂದು ಯುಎಇ ಸರ್ಕಾರವನ್ನು ವಿಶ್ವಸಂಸ್ಥೆ ಕೇಳಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ಮೈಕಲ್, ಲತೀಫಾ ವಿಚಾರವಾಗಿ ನಮಗೆ ಕಳವಳ ಇದೆ. ಹೀಗಾಗಿ ಲತೀಫಾ ಜೀವಂತವಾಗಿ ಇರುವ ಬಗ್ಗೆ ಸಾಕ್ಷ್ಯಗಳನ್ನು ನೀಡಿ ಎಂದು ಯುಎಇ ರಾಜವಂಶಸ್ಥರಿಗೆ ಕೇಳಿದ್ದಾರೆ.

ಈ ಕುರಿತು, ಯುಎಇ ರಾಜವಂಶಸ್ಥರು ಲಂಡನ್ ರಾಯಭಾರ ಕಚೇರಿ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕಾಳಜಿಗೆ ನಾವು ಆಭಾರಿ. ಆದರೆ, ಲತೀಫಾಳನ್ನು ನಾವು ಮನೆಯಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದೇವೆ. ಮಾಧ್ಯಮಗಳಲ್ಲಿ ವರದಿ ಆಗುತ್ತಿರುವಂತೆ ಏನೂ ನಡೆಯುತ್ತಿಲ್ಲ. ಕುಟುಂಬಸ್ಥರು ಹಾಗೂ ವೈದ್ಯರು ಅವಳ ನೆರವಿಗೆ ಇದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Uttarakhand Glacier Burst: 19 ಮೃತದೇಹ ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ: ನೆರವು ನೀಡಲು ಸಿದ್ಧ ಎಂದ ವಿಶ್ವಸಂಸ್ಥೆ

Fact Check: ಪತಂಜಲಿ ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು

Follow us on

Related Stories

Most Read Stories

Click on your DTH Provider to Add TV9 Kannada