ಚೀನಾದ ದೋಸ್ತ್, ಅಮೆರಿಕಾಗೂ ಬೇಕು ಪಾಕ್​ನ ಭಾವಿ ಪ್ರಧಾನಿ ಷರೀಫ್​ ಖಾಂದಾನ್​ನ ಶೋಕಿಲಾಲ ಶೆಹಬಾಜ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2022 | 10:48 AM

ಶೆಹಬಾಜ್​ನ ಪೂರ್ವಜರು ಭಾರತದ ಜಮ್ಮು ಕಾಶ್ಮೀರ ಜಿಲ್ಲೆಯ ಅನಂತ್​ನಾಗ್ ಜಿಲ್ಲೆಯವರು. ಅಮೃತಸರದಲ್ಲಿ ವ್ಯಾಪಾರ ಮಾಡುತ್ತಿದ್ದವರು.

ಚೀನಾದ ದೋಸ್ತ್, ಅಮೆರಿಕಾಗೂ ಬೇಕು ಪಾಕ್​ನ ಭಾವಿ ಪ್ರಧಾನಿ ಷರೀಫ್​ ಖಾಂದಾನ್​ನ ಶೋಕಿಲಾಲ ಶೆಹಬಾಜ್
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Follow us on

ಪಕ್ಕೆಗೆ ರೆಕ್ಕೆ ಕಟ್ಟಿಕೊಂಡು ಪಾಕಿಸ್ತಾನದ ಪ್ರಧಾನಿಯಾಗಲು ಕಾಯುತ್ತಿದ್ದಾರೆ ಮಿಯಾ ಮೊಹಮದ್ ಶೆಹಬಾಜ್ ಷರೀಫ್ (Shehbaz Sharif ). ಇಂದು (ಏಪ್ರಿಲ್ 11) ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಂಸತ್ ಕಲಾಪದಲ್ಲಿ ಇವರ ಆಯ್ಕೆಯೇ  ಪ್ರಧಾನಿ ಹುದ್ದೆಗೆ ಅಂತಿಮವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಸಂಪ್ರದಾಯವಾದಿಗಳ ಪಕ್ಷ ಎಂದೇ ಕರೆಯಲಾಗುವ ಪಾಕಿಸ್ತಾನ್ ಮುಸ್ಲಿಮ್ ಲೀಗ್ ಪಕ್ಷದ ನೇತಾರರಾಗಿರುವ ಶೆಹಬಾಜ್, ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷದ ನಾಯಕರಾಗಿದ್ದರು. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ತಮ್ಮ ಶೆಹಬಾಜ್ ಈ ಮೊದಲು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಕಾರ್ಯನಿರ್ವಹಿಸಿದ್ದಾರೆ. 1990ರಲ್ಲಿ ರಾಷ್ಟ್ರೀಯ ಸಂಸತ್ತಿಗೆ ಪ್ರವೇಶಿಸಿದರು. 1999ರಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯ ನಂತರ ನಡೆದ ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ಶೆಹಬಾಜ್ ಹಲವು ವರ್ಷಗಳ ಕಾಲ ದೇಶಭ್ರಷ್ಟರಾಗಿ ಸೌದಿ ಅರೇಬಿಯಾದಲ್ಲಿ ಕಾಲ ಕಳೆಯಬೇಕಾಯಿತು. 2007ರಲ್ಲಿ ದೇಶಕ್ಕೆ ಹಿಂದಿರುಗಿದ ಶೆಹಬಾಜ್, ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ಇದೀಗ 70ರ ಹರೆಯದಲ್ಲಿರುವ ಶೆಹಬಾಜ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಭಾವಿ. ಉಕ್ಕು ಉದ್ಯಮದ ಒಡೆಯರಾಗಿ ಸಾಕಷ್ಟು ಶ್ರೀಮಂತಿಕೆ ಗಳಿಸಿದವರು. ದಣಿವಿಲ್ಲದೆ ಕೆಲಸ ಮಾಡುವ ಬಿಗಿ ಆಡಳಿತಗಾರ ಎಂದು ಹೆಸರುವಾಸಿಯಾಗಿದ್ದಾರೆ. ಲಂಡನ್ ಮತ್ತು ದುಬೈನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಬಗ್ಗೆ ಹಾಗೂ ಹತ್ತಾರು ಮದುವೆ ಆಗಿರುವ ಬಗ್ಗೆ ಪಾಕಿಸ್ತಾನದ ಪತ್ರಿಕೆಗಳು ಸಾಕಷ್ಟು ಬಾರಿ ಬರೆದಿದ್ದರೂ ಶೆಹಬಾಜ್​ರ ಜನಪ್ರಿಯತೆ ಕಡಿಮೆಯಾಗಿಲ್ಲ. ಅತಿಯಾದ ಭಾವುಕತೆಯಿಂದ ಮಾತನಾಡುವ ಶೆಹಬಾಜ್ ಸಾರ್ವಜನಿಕ ಭಾಷಣಗಳಲ್ಲಿ ಸಂಯಮ ಕಳೆದುಕೊಂಡು ರೇಗಾಡಿದ್ದು ಸಹ ಹಲವು ಬಾರಿ ಸುದ್ದಿಯಾಗಿತ್ತು. ತಮ್ಮ ಭಾಷಣಗಳಲ್ಲಿ ಕ್ರಾಂತಿಕಾರಿ ಗೀತೆಗಳ ಸಾಲುಗಳನ್ನು ಉಲ್ಲೇಖಿಸಿ, ಜನರಿಗೆ ಭಾವನೆಗಳನ್ನು ದಾಟಿಸಲು ಯತ್ನಿಸುವುದು ಇವರು ಜನಪ್ರಿಯರಾಗಲು ಕಾರಣವಾದ ಅಂಶಗಳಲ್ಲಿ ಒಂದು.

ಚೀನಾ ಮತ್ತು ಅಮೆರಿಕದೊಂದಿಗೆ ಏಕಕಾಲಕ್ಕೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬಲ್ಲ ಚಾಕಚಕ್ಯತೆ ಶೆಹಬಾಜ್​ಗೆ ಇದೆ. ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಈ ಅಂಶ ಪ್ರಸ್ತಾಪಿಸಿದ್ದರು. ‘ಶೆಹಬಾಜ್ ಏನಾದರೂ ಪಾಕಿಸ್ತಾನದ ಪ್ರಧಾನಿ ಆದರೆ ಅವರು ಅಮೆರಿಕದ ಗುಲಾಮರಾಗಿ ಕೆಲಸ ಮಾಡುತ್ತಾರೆ. ಭಿಕ್ಷಕರು ಎಂದಿಗೂ ಏನನ್ನೂ ಆಯ್ಕೆ ಮಾಡಿಕೊಳ್ಳಲಾರರು. ನಾವು ಬಡವರು ಎನ್ನುವ ಕಾರಣಕ್ಕೆ ಗುಲಾಮರಾಗಿ ಇರಬೇಕಿಲ್ಲ’ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶೆಹಬಾಜ್, ‘ನಾವು ಯಾವುದೇ ವಿದೇಶಿ ಶಕ್ತಿಯನ್ನು ದೇಶಕ್ಕೆ ಆಹ್ವಾನಿಸುವುದಿಲ್ಲ. ಯಾವುದೇ ವಿದೇಶಿ ಸಂಚಿನ ಭಾಗವೂ ಆಗಿಲ್ಲ’ ಎಂದರು.

ಎಷ್ಟು ಮದುವೆ? ವೈಯಕ್ತಿಕ ಬದುಕು ಹೇಗಿದೆ?

1988ರಲ್ಲಿ ಮೊದಲ ಬಾರಿಗೆ ಪಂಜಾಬ್​ ವಿಧಾನಸಭೆಗೆ ಆಯ್ಕೆಯಾದ ಶೆಹಬಾಜ್ ಮೂರು ಅವಧಿಗೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದವರು. 23ನೇ ಸೆಪ್ಟೆಂಬರ್, 1951ರಲ್ಲಿ ಜನಿಸಿದ ಶೆಹಬಾಜ್​ನ ಪೂರ್ವಜರು ಭಾರತದ ಜಮ್ಮು ಕಾಶ್ಮೀರ ಜಿಲ್ಲೆಯ ಅನಂತ್​ನಾಗ್ ಜಿಲ್ಲೆಯವರು. ಅಮೃತಸರದಲ್ಲಿ ವ್ಯಾಪಾರ ಮಾಡುತ್ತಿದ್ದವರು. 1947ರಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನದ ಲಾಹೋರ್​ಗೆ ವಲಸೆ ಹೋಗಿ ವ್ಯಾಪಾರ ಆರಂಭಿಸಿದರು. ಶೆಹಬಾಜ್​ಗೆ ಭಾರತದ ದಿಲೀಪ್ ಕುಮಾರ್ ನೆಚ್ಚಿನ ನಟ, ಮೊಹಮದ್ ರಫಿ ನೆಚ್ಚಿನ ಗಾಯಕ. ಉರ್ದು, ಪಂಜಾಬಿ, ಸೆರೈಕಿ, ಸಿಂಧಿ, ಪಷ್ತು, ಇಂಗ್ಲಿಷ್, ಜರ್ಮನ್, ಫ್ರೆಂಚ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಹಿಡಿತವಿದೆ. ಪಾಕಿಸ್ತಾನದ ಉದ್ಯಮ ಮತ್ತು ರಾಜಕೀಯ ವಲಯದಲ್ಲಿ ಶೋಕಿಲಾಲ ಎಂದೇ ಶೆಹಬಾಜ್​ರನ್ನು ಲೇವಡಿ ಮಾಡುತ್ತಾರೆ. ಅಧಿಕೃತವಾಗಿ ಐವರನ್ನು ಮದುವೆಯಾಗಿದ್ದಾರೆ. ಅನಧಿಕೃತವಾಗಿ ಹತ್ತಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪಾಕಿಸ್ತಾನದ ಟ್ಯಾಬ್ಲೋಯ್ಡ್​ಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಯಾರಾಗ್ತಾರೆ ಪಾಕಿಸ್ತಾನದ ಮುಂದಿನ ಪ್ರಧಾನಿ?- ರೇಸ್​​ನಲ್ಲಿದ್ದಾರೆ ಶೆಹಬಾಜ್​ ಶರೀಫ್​- ಶಾ ಮೊಹಮ್ಮದ್​ ಖುರೇಶಿ

ಇದನ್ನೂ ಓದಿ: India Pakistan: ಪಾಕಿಸ್ತಾನದ ರಾಜಕೀಯ ವಿದ್ಯಮಾನ; ಭಾರತದ ಮೇಲೇನು ಪರಿಣಾಮ

Published On - 10:42 am, Mon, 11 April 22