ಸತ್ತು ಹೋಗಿದ್ದಾರೆ ಎಂದು ಅಂತ್ಯಸಂಸ್ಕಾರದ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಇನ್ನೇನು ಕುಣಿಯೊಳಗೆ ಶವಪೆಟ್ಟಿಗೆ ಇಳಿಸಬೇಕು ಎನ್ನುವಾಗ ಶವಪೆಟ್ಟಿಗೆಯೊಳಗಿನಿಂದ ಟಕ್ ಟಕ್ ಸದ್ದು ಬಂದರೆ ಹೇಗಿರುತ್ತದೆ? ಪೆರು ದೇಶದ ಲಾಂಬೇಕ್ಯು ನಗರದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ. ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಮಹಿಳೆಯು ಅಂತ್ಯಸಂಸ್ಕಾರದ ವೇಳೆ ಶವಪೆಟ್ಟಿಗೆಯನ್ನು ತನ್ನ ಬೆರಳುಗಳ ಮೂಲಕ ಬಡಿದು ತಾನಿನ್ನೂ ಸತ್ತಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ರೋಸಾ ಇಸಬೆಲ್ ಕೆಸ್ಪೆಡೆಸ್ ಕಲ್ಲಕಾ ಹೆಸರಿನ ಮಹಿಳೆಯು ಈಚೆಗೆ ರಸ್ತೆ ಅಪಘಾತದಲ್ಲಿ ತನ್ನ ಮೈದುನನೊಂದಿಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈಕೆಯ ಮೂವರು ಸಂಬಂಧಿಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮಂಗಳವಾರ ಸಂಬಂಧಿಗಳು ಅಂತಿಮ ದರ್ಶನ ಪಡೆದುಕೊಂಡ ನಂತರ ರೊಸಾ ಅವರನ್ನು ಶವಪೆಟ್ಟಿಗೆಯೊಳಗೆ ಮಲಗಿಸಲಾಗಿತ್ತು. ಆದರೆ ಅವರು ಶವಪೆಟ್ಟಿಗೆಯೊಳಗೆ ಸದ್ದು ಮಾಡಿದರು. ದುಃಖತಪ್ತ ಸಂಬಂಧಿಗಳು ಒಂದು ಕ್ಷಣ ಆಘಾತಕ್ಕೆ ಒಳಗಾಗುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಭುಜಗಳ ಮೇಲೆ ಶವಪೆಟ್ಟಿಗೆ ಹೊತ್ತಿದ್ದ ಆಕೆಯ ಸಂಬಂಧಿಕರು ತಕ್ಷಣ ಅದನ್ನು ಕೆಳಗೆ ಇಳಿಸಿ ಬಾಗಿಲು ತೆಗೆದರು. ಈ ವೇಳೆ ಮಹಿಳೆಯು ಕಣ್ಣು ತೆಗೆದು, ಒಬ್ಬರತ್ತ ಬೆರಳು ತೋರಿಸಿದರು. ‘ಆಕೆ ಬೆವರುತ್ತಿದ್ದರು. ನಾನು ತಕ್ಷಣ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ಕೊಟ್ಟೆ’ ಎಂದು ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವ ಜುವಾನ್ ಸೆಗುಂಡೊ ಕಾಜೊ ಪ್ರತಿಕ್ರಿಯಿಸಿದರು.
ರೊಸಾ ಕುಟುಂಬ ಸದಸ್ಯರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಆಕೆಗೆ ಜೀವರಕ್ಷಕ ವ್ಯವಸ್ಥೆಗಳನ್ನು ಅಳವಡಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದರಾದರೂ, ಕೆಲವೇ ಗಂಟೆಗಳ ನಂತರ ಆಕೆ ಮೃತಪಟ್ಟರು. ಅಪಘಾತದ ನಂತರ ರೊಸಾ ಅವರು ಕೋಮಾಕ್ಕೆ ಜಾರಿರಬಹುದು. ಇದನ್ನು ತಪ್ಪಾಗಿ ಅರ್ಥಿಸಿದ್ದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿರಬಹುದು. ಇದೀಗ ಆಕೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಶವಸಂಸ್ಕಾರ ಎಂದರೆ ದುಃಖದ ಛಾಯೆ ಇರುವುದು ಸಹಜ. ಆದರೆ ಈ ಪ್ರಕರಣದಲ್ಲಿ ದುಃಖದ ಜೊತೆಗೆ ಆಘಾತವೂ ಇದ್ದುದು ಗಮನ ಸೆಳೆಯುವ ಸಂಗತಿ.
ಇದನ್ನೂ ಓದಿ: ರವಿಚಂದ್ರನ್ ಮಗನ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೊಸ ನಟಿಯ ಹೆಸರು? ವೈರಲ್ ಫೋಟೋದ ಅಸಲಿಯತ್ತು ಇಲ್ಲಿದೆ
ಇದನ್ನೂ ಓದಿ: Viral Video: ಅಪರೂಪದ ಬಿಳಿ ನವಿಲು ಹಾರುತ್ತಿರುವ ದೃಶ್ಯ ಸೆರೆ; ಮಂತ್ರಮುಗ್ಧರಾದ ನೆಟ್ಟಿಗರು