ನವದೆಹಲಿ: ವಿಜ್ಞಾನಿಗಳು ಎಕ್ಸ್-ರೇ (X-Ray) ಬಳಸಿಕೊಂಡು ಇಡೀ ಜಗತ್ತೇ ಅಚ್ಚರಿಪಡುವಂತಹ ಕೋವಿಡ್ (COVID-19) ರೋಗನಿರ್ಣಯ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕಡಿಮೆ ಅವಧಿಯಲ್ಲಿ ಶೇ. 98ರಷ್ಟು ನಿಖರವಾದ ಫಲಿತಾಂಶವನ್ನು ನೀಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪಿಸಿಆರ್ ಪರೀಕ್ಷೆಯ (PCR Test) ಜಾಗಕ್ಕೆ ಎಕ್ಸ್-ರೇ ಮುಂಚೂಣಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಸ್ಕಾಟ್ಲೆಂಡ್ನ ವಿಜ್ಞಾನಿಗಳು ಕಂಡುಹಿಡಿದಿರುವ ಈ ಎಕ್ಸ್-ರೇ ಆಧಾರಿತ ಪರೀಕ್ಷೆ ಕೊವಿಡ್ ರೋಗವನ್ನು ಬಹುಬೇಗ ಪತ್ತೆಹಚ್ಚಲು ಸಹಾಯಕವಾಗಲಿದೆ.
ಯೂನಿವರ್ಸಿಟಿ ಆಫ್ ದಿ ವೆಸ್ಟ್ ಆಫ್ ಸ್ಕಾಟ್ಲೆಂಡ್ (UWS)ನ ತಜ್ಞರು ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿದರು. ಪಿಸಿಆರ್ ಪರೀಕ್ಷೆಗಳು ಸುಲಭವಾಗಿ ಲಭ್ಯವಿಲ್ಲದಿರುವಾಗ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಲು ಈ ಎಕ್ಸ್-ರೇ ಸಹಾಯಕವಾಗಲಿದೆ. ಇದು ಪಿಸಿಆರ್ ಪರೀಕ್ಷೆಗಿಂತ ವೇಗವಾಗಿ ಕೊರೊನಾವೈರಸ್ ಅನ್ನು ಪತ್ತೆಹಚ್ಚುತ್ತದೆ. ಎಕ್ಸ್-ರೇ ಮೂಲಕ ಸುಮಾರು 2 ಗಂಟೆಯೊಳಗೆ ಕೊವಿಡ್ ಪರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು.
ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳು, ಆರೋಗ್ಯವಂತ ವ್ಯಕ್ತಿಗಳು ಮತ್ತು ವೈರಲ್ ನ್ಯುಮೋನಿಯಾ ರೋಗಿಗಳಿಗೆ ಸೇರಿದ ಸುಮಾರು 3,000 ಚಿತ್ರಗಳ ಡೇಟಾಬೇಸ್‌ಗೆ ಸ್ಕ್ಯಾನ್‌ಗಳನ್ನು ಹೋಲಿಸಲು ಎಕ್ಸ್-ರೇ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನ ಶೇಕಡಾ 98ರಷ್ಟು ನಿಖರವಾಗಿದೆ ಎಂದು ಕಂಡುಬಂದಿದೆ.
ಇಂಗ್ಲೆಂಡ್ನಾದ್ಯಂತ ಅಪಘಾತ ಮತ್ತು ತುರ್ತು ವಿಭಾಗಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಈ ತಂತ್ರಜ್ಞಾನವನ್ನು ಬಳಸಬಹುದೆಂದು ಭಾವಿಸಲಾಗಿದೆ. UWSನಲ್ಲಿನ ಸ್ಮಾರ್ಟ್ ಎನ್ವಿರಾನ್ಮೆಂಟ್ಸ್ ರಿಸರ್ಚ್ ಸೆಂಟರ್‌ಗಾಗಿ ಎಫೆಕ್ಟಿವ್ ಮತ್ತು ಹ್ಯೂಮನ್ ಕಂಪ್ಯೂಟಿಂಗ್‌ನ ನಿರ್ದೇಶಕ ಪ್ರೊಫೆಸರ್ ನಯೀಮ್ ರಮ್ಜಾನ್ ಈ ಪ್ರಾಜೆಕ್ಟ್ನ ಮೂರು ವ್ಯಕ್ತಿಗಳ ತಂಡದ ನೇತೃತ್ವ ವಹಿಸಿದ್ದರು. ಇದರಲ್ಲಿ ಗೇಬ್ರಿಯಲ್ ಒಕೊಲೊ ಮತ್ತು ಡಾ ಸ್ಟಾಮೊಸ್ ಕಟ್ಸಿಗಿಯಾನಿಸ್ ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ; ಬಿಜೆಪಿಯ ಎನ್ಆರ್ ರಮೇಶ್ ವಿರುದ್ಧ ಎಫ್ಐಆರ್ ದಾಖಲು
ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?