Maruti Suzuki: ದೋಷಯುಕ್ತ ಏರ್ಬ್ಯಾಗ್; 17,362 ಕಾರುಗಳನ್ನು ವಾಪಸ್ ಪಡೆಯಲಿದೆ ಮಾರುತಿ ಸುಜುಕಿ
ಹಿಂಪಡೆಯಲಾಗುವ ಕಾರುಗಳ ಏರ್ಬ್ಯಾಗ್ಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆ ಕಂಡುಬಂದಲ್ಲಿ ಉಚಿತವಾಗಿ ಬೇರೆ ಏರ್ಬ್ಯಾಗ್ ಅಳವಡಿಸಿಕೊಡಲಾಗುವುದು ಎಂದು ಕಂಪನಿ ಹೇಳಿದೆ.
ನವದೆಹಲಿ: ದೋಷಯುಕ್ತ ಏರ್ಬ್ಯಾಗ್ ಸಮಸ್ಯೆಯ ಕಾರಣ 17,362 ಕಾರುಗಳನ್ನು ಹಿಂಪಡೆಯುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ತಿಳಿಸಿದೆ. ವಾಪಸ್ ಪಡೆಯಲಾಗುವ ಕಾರುಗಳಲ್ಲಿ ಆಲ್ಟೊ ಕೆ10, ಬ್ರೆಜ್ಜಾ ಹಾಗೂ ಬಾಲೆನೊ ಮಾಡೆಲ್ ಕಾರುಗಳೂ ಇವೆ. ಕಾರುಗಳ ಏರ್ಬ್ಯಾಗ್ ದೋಷ ಪರಿಶೀಲಿಸಲು ಮತ್ತು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಎಸ್-ಪ್ರೆಸ್ಸೊ, ಇಕೊ, ಗ್ರ್ಯಾಂಡ್ ವಿಟಾರ ಮಾಡೆಲ್ ಕಾರುಗಳನ್ನೂ ಹಿಂಪಡೆಯಲಾಗುತ್ತಿದೆ. 2022ರ ಡಿಸೆಂಬರ್ 8ರಿಂದ 2023ರ ಜನವರಿ 12ರ ಅವಧಿಯಲ್ಲಿ ತಯಾರಾಗಿರುವ ಕಾರುಗಳನ್ನು ವಾಪಸ್ ಪಡೆಯಲಾಗುವುದು ಎಂದು ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
ಹಿಂಪಡೆಯಲಾಗುವ ಕಾರುಗಳ ಏರ್ಬ್ಯಾಗ್ಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆ ಕಂಡುಬಂದಲ್ಲಿ ಉಚಿತವಾಗಿ ಬೇರೆ ಏರ್ಬ್ಯಾಗ್ ಅಳವಡಿಸಿಕೊಡಲಾಗುವುದು ಎಂದು ಕಂಪನಿ ಹೇಳಿದೆ. ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ ತಯಾರಾದ ನಿರ್ದಿಷ್ಟ ಮಾದರಿಯ ಕೆಲವು ಕಾರುಗಳಲ್ಲಿ ಏರ್ಬ್ಯಾಗ್ಗಳಲ್ಲಿ ದೋಷವಿರಬಹುದು ಎಂದು ಶಂಕಿಸಲಾಗಿದೆ. ಇದು ವಾಹನ ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ಮತ್ತು ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ನಿಯೋಜಿಸದಿರುವಿಕೆಗೆ ಕಾರಣವಾಗಬಹುದು. ಹೀಗಾಗಿ ಈ ಕುರಿತು ತಪಾಸಣೆ ನಡೆಸುವ ಅಗತ್ಯವಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Auto Expo 2023: ಮಹೀಂದ್ರಾ ಥಾರ್ ಪ್ರತಿಸ್ಪರ್ಧಿ ಮಾರುತಿ ಸುಜುಕಿ ಜಿಮ್ನಿ ಅನಾವರಣ!
ಸಾಕಷ್ಟು ಎಚ್ಚರಿಕೆ ಕೈಗೊಳ್ಳಲಾಗಿದೆ. ಏರ್ಬ್ಯಾಗ್ ಲೋಪದ ಬಗ್ಗೆ ಶಂಕೆಯುಳ್ಳ ವಾಹನಗಳನ್ನು ಪಡೆದಿರುವ ಗ್ರಾಹಕರು ಅದನ್ನು ಪರಿಶೀಲಿಸಿ, ಬದಲಾಯಿಸುವವರೆಗೆ ವಾಹನವನ್ನು ಓಡಿಸದಂತೆ ಅಥವಾ ವಾಹನವನ್ನು ಬಳಸದಂತೆ ಸೂಚಿಸಲಾಗಿದೆ ಎಂದು ಕಂಪನಿ ಹೇಳಿದೆ. ಲೋಪ ಇರಬಹುದು ಎಂದು ಶಂಕಿಸಲಾದ ಕಾರುಗಳ ಮಾಲೀಕರನ್ನು ಕಂಪನಿಯು ತಕ್ಷಣವೇ ಸಂಪರ್ಕಿಸುತ್ತಿದೆ. ಸಂಬಂಧಪಟ್ಟ ಶೋರೂಮ್ಗಳು ಈ ಬಗ್ಗೆ ಕ್ರಮ ಕೈಗೊಂಡಿವೆ ಎಂದು ಕಂಪನಿ ಹೇಳಿದೆ.
ಇನ್ನಷ್ಟು ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Wed, 18 January 23