Tata Punch EV: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಅನಾವರಣ
ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು: ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಎಲೆಕ್ಟ್ರಿಕ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಕಾರು ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದೆ.
ಆಕರ್ಷಕ ಬೆಲೆ ಮತ್ತು ಭರ್ಜರಿ ಫೀಚರ್ಸ್ ಗಳನ್ನು ಒಳಗೊಂಡಿರುವ ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಇದೀಗ ಹೊಸದಾಗಿ ಪಂಚ್ ಎಲೆಕ್ಟ್ರಿಕ್ (Punch Electric) ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಟಾಟಾ ಮೋಟಾರ್ಸ್ ಕಂಪನಿಯ ಎರಡನೇ ತಲೆಮಾರಿನ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿದೆ.
ಟಾಟಾ ಮೋಟಾರ್ಸ್ ಕಂಪನಿಯ ಎರಡನೇ ತಲೆಮಾರಿನ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಅನ್ನು ಅಧಿಕೃತವಾಗಿ ಆಕ್ಟಿ.ಇವಿ (acti.ev) ಎಂದು ನಾಮಕರಣಗೊಳಿಸಿದ್ದು, ಹೊಸ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿಯೇ ಪಂಚ್ ಇವಿ ಸೇರಿದಂತೆ ಪ್ರಮುಖ ಇವಿ ಕಾರುಗಳನ್ನು ಉತ್ಪಾದನೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದೆ.
ಪಂಚ್ ಎಲೆಕ್ಟ್ರಿಕ್ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಹೊಸ ಇವಿ ಕಾರು ತನ್ನ ವಿಭಾಗದಲ್ಲಿಯೇ ಅತಿ ಹೆಚ್ಚು ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿದೆ. ಹೊಸ ಪಂಚ್ ಇವಿ ಕಾರಿನಲ್ಲಿ ನೆಕ್ಸಾನ್ ಇವಿಯಲ್ಲಿರುವಂತೆ ಸ್ಟ್ಯಾಂಡರ್ಡ್ ಮತ್ತು ಲಾಂಗ್ ರೇಂಜ್ ಆವೃತ್ತಿಗಳನ್ನು ನೀಡಲಾಗುತ್ತಿದ್ದು, ಒಟ್ಟು ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ ಪಂಚ್ ಇವಿ ಕಾರಿನ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಕುರಿತಾಗಿ ಟಾಟಾ ಕಂಪನಿಯು ಇನ್ನು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಕಾರಿನಲ್ಲಿ 25kWh ಮತ್ತು 35kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡಬಹುದಾಗಿದೆ. ಈ ಮೂಲಕ ಹೊಸ ಕಾರಿನ ಸ್ಟ್ಯಾಂಡರ್ಡ್ ಮಾದರಿಯು ಪ್ರತಿ ಚಾರ್ಜ್ ಗೆ 280 ರಿಂದ 350 ಕಿ.ಮೀ ಮೈಲೇಜ್ ನೀಡಿದರೆ ಹೈ ರೇಂಜ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 450 ಕಿ.ಮೀ ಮೈಲೇಜ್ ನೀಡಬಹುದಾಗಿದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಹೊಸ ಎಡಿಎಎಸ್ ಫೀಚರ್ಸ್ ಕಾರುಗಳಿವು!
ಹೊಸ ಪಂಚ್ ಇವಿ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 7.2kW ಎಸಿ ಚಾರ್ಜರ್ ನೊಂದಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಸಹ ನೀಡಿದ್ದು, ಇದು ಟಿಯಾಗೋ ಇವಿ ಮತ್ತು ನೆಕ್ಸಾನ್ ಇವಿ ನಡುವಿನ ಸ್ಥಾನ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಹೊಸ ಇವಿ ಕಾರು ನೆಕ್ಸಾನ್ ಇವಿ ಮಾದರಿಯೆಂತೆಯೇ ಸ್ಪೋಟಿಯಾಗಿರುವ ಮುಂಭಾಗದ ವಿನ್ಯಾಸದೊಂದಿಗೆ 16 ಇಂಚಿನ ಅಲಾಯ್ ವ್ಹೀಲ್, ಆಲ್ ವ್ಹೀಲ್ ಡಿಸ್ಕ್ ಬೇಕ್ ಸೇರಿದಂತೆ ಹಲವು ಫೀಚರ್ಸ್ ಗಳನ್ನು ಹೊಂದಿರಲಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಪಂಚ್ ಇವಿ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ನೀಡಲಾಗುತ್ತಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, ಲೆದರ್ ಆಸನಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹಿಲ್ ಹೋಲ್ಡ್ ಅಸಿಸ್ಟ್, ಕನೆಕ್ಟೆಡ್ ಕಾರ್ ಟೆಕ್, ವೈರ್ ಲೆಸ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು, ಕ್ರೂಸ್ ಕಂಟ್ರೋಲ್ ಮತ್ತು ಆಯ್ಕೆ ರೂಪದಲ್ಲಿ ಸನ್ ರೂಫ್ ಸೌಲಭ್ಯವನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಭರ್ಜರಿ ಮೈಲೇಜ್ ಪ್ರೇರಿತ ಹೈಬ್ರಿಡ್ ಕಾರುಗಳಿವು!
ಸುರಕ್ಷಾ ಸೌಲಭ್ಯಗಳು ಮತ್ತು ಬೆಲೆ
ಇದರೊಂದಿಗೆ ಹೊಸ ಪಂಚ್ ಇವಿ ಕಾರಿನಲ್ಲಿ ಸುರಕ್ಷತೆಗಾಗಿ ಎಲ್ಲಾ ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಎಸ್ ಸಿ, ಬ್ಲೈಂಡ್ ವ್ಯೂ ಮಾನಿಟರ್ ಸಿಸ್ಟಂ, ತ್ರಿ ಪಾಯಿಂಟ್ ಸೀಟ್ ಬೆಲ್ಟ್ಸ್ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ನೀಡಲಾಗಿದೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 14 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಸಿಟ್ರನ್ ಇಸಿ3 ಕಾರಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
Published On - 5:25 pm, Fri, 5 January 24