The Kashmir Files: ‘ನಾ ಕಂಡಂತೆ ದಿ ಕಾಶ್ಮೀರ್ ಫೈಲ್ಸ್..!’

Vivek Agnihotri | Anupam Kher: ‘ದಿ ಕಾಶ್ಮೀರ್ ಫೈಲ್ಸ್’ ಸದ್ಯ ದೇಶದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹಲವು ಕಾರಣಗಳಿಗೆ ಭಿನ್ನ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಚಿತ್ರ ವೀಕ್ಷಿಸಿದ ನಂತರ ತಮ್ಮ ಅನಿಸಿಕೆಯನ್ನು ಬರಹ ರೂಪಕ್ಕಿಳಿಸಿದ್ದಾರೆ ಟಿವಿ9 ಮೈಸೂರು ಪ್ರತಿನಿಧಿ ರಾಮ್. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರದ ಬಗ್ಗೆ ಅವರ ಅಭಿಪ್ರಾಯ ಇಲ್ಲಿದೆ.

The Kashmir Files: ‘ನಾ ಕಂಡಂತೆ ದಿ ಕಾಶ್ಮೀರ್ ಫೈಲ್ಸ್..!’
‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್
Follow us
TV9 Web
| Updated By: shivaprasad.hs

Updated on: Mar 20, 2022 | 10:34 AM

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು‌ ಬಿಚ್ಚಿಟ್ಟಿದೆ ಅನ್ನೋದರಲ್ಲಿ ಎರಡು‌ ಮಾತಿಲ್ಲ. ಆದರೆ ಸಿನಿಮಾ‌ ನೋಡಿದ ಎಲ್ಲರನ್ನೂ‌ ಕಾಡುವ ಪ್ರಶ್ನೆ.! ಇದು ಸತ್ಯನಾ? ನಮಗ್ಯಾಕೆ ಗೊತ್ತಾಗಲೇ ಇಲ್ಲ? ಅದು ನಮ್ಮ ಭಾರತದಲ್ಲಿ..? ಅಂತಾ. ಅಚ್ಚರಿಯಾದರೂ ಇದು ಸತ್ಯ. ಇದು ನಡೆದಿರುವುದು ನಮ್ಮ ದೇಶದ ಮುಕುಟಪ್ರಾಯವಾಗಿರುವ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ. ಒಂದಲ್ಲ‌, ಎರಡಲ್ಲ, ಬರೋಬ್ಬರಿ 32 ವರ್ಷ ಏಕೆ ಇದು ನಮಗೆ ಗೊತ್ತಾಗಲಿಲ್ಲ ಅನ್ನೋದಕ್ಕೆ ನಾನಾ ಕಾರಣಗಳಿವೆ. ಸರಳವಾಗಿ ಹೇಳುವುದಾದರೆ ಸಿನಿಮಾದ ಪ್ರಮುಖ ಪಾತ್ರಧಾರಿ ಪುಷ್ಕರ್ ನಾಥ್ ಪಂಡಿತ್ ಹೇಳುವ ಅದೊಂದು ಪಂಚಿಂಗ್ ಡೈಲಾಗ್‌, ‘ಸತ್ಯ ಚಪ್ಪಲಿ ಹಾಕಿಕೊಳ್ಳುವ ಮುಂಚೆ ಸುಳ್ಳು ಊರೆಲ್ಲಾ ಸುತ್ತಿ ಬಂದಿತ್ತಂತೆ’- ಈ ಡೈಲಾಗ್‌ನಲ್ಲೇ ಎಲ್ಲದಕ್ಕೂ ಉತ್ತರವಿದೆ. ಇನ್ನು ಈ‌ ಬರವಣಿಗೆ ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ. ಇದು ನೊಂದಿದ್ದಾರೆ ಎನ್ನಲಾದ ನಮ್ಮವರಿಗೊಂದು ಸಾಂತ್ವನ. ಇಂತಹ ಘಟನೆಗಳು ಮತ್ತೆ‌ ಮರುಕಳಿಸಬಾರದೆಂಬ ಆಶಯ. ಇದರ ಜೊತೆಗೆ ಬಹುಮುಖ್ಯವಾಗಿ, ವಿವಿಧತೆಯಲ್ಲಿ ಏಕತೆಯೇ ಮಂತ್ರವಾಗಿರುವ ನನ್ನ ದೇಶದಲ್ಲಿ ಧರ್ಮಾಂದಂತೆಯ ಕಾರ್ಮೋಡದ ಆಪತ್ತುಗಳ ಬಗ್ಗೆ ಬೆಳಕು ಚೆಲ್ಲುವುದಷ್ಟೇ ಆಗಿದೆ.

ಕಾಶ್ಮೀರ್ ಫೈಲ್ಸ್..!

ಕಾಶ್ಮೀರ್​ ಫೈಲ್ಸ್ ನಮ್ಮ ದೇಶದ ಮುಕುಟದಲ್ಲಿ 32 ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘಟನೆ. ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ಕಾಶ್ಮೀರಿ ಪಂಡಿತರಿಗೆ ತಾವು ನಿಂತಿದ್ದ ನೆಲ‌ ನಡುಗುವಂತೆ ಮಾಡಿದ ಕಹಿ ಘಟನೆ. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ತೋರಿಸಲಾಗಿದೆ.

ದೂರದ ಬೆಟ್ಟ..

ಸಿನಿಮಾ ನೋಡಿ ಬಂದ ನಂತರ ಅನಿಸಿದ್ದು ಎರಡು ವಿಚಾರ. ಮೊದಲನೆಯದು ‘ಭಗವಾನ್‌ ಕಾ ಘರ್ ಮೇ ದೇರ್ ಹೈ ಅಂದೇರ್ ನಹಿಃ’ ಮತ್ತು ಇನ್ನೊಂದು ಇಷ್ಟು ದಿನ ನಮಗೆ ಗೊತ್ತಿದ್ದಿದ್ದು ‘ದೂರದ ಬೆಟ್ಟ ನುಣ್ಣಗೆ’ ಅನ್ನೋದು. ಆದ್ರೆ ಅದಕ್ಕೂ ಮೀರಿ, ದೂರದ ಬೆಟ್ಟ ನುಣ್ಣಗಿದೆ ಅಂತಾ ನಂಬಿಸೋರು ಇದ್ದಾರೆ ಅನ್ನೋದು. ಹೌದು, ಕಣಿವೆಗಳ ನಗರಿ, ಮಂಜನ್ನು ಹೊದ್ದು ಮಲಗಿರುವ ಕಾಶ್ಮಿರದ ಈ ನೋವಿನ‌ ಕಥೆ ಜಗತ್ತಿಗೆ, ಅಲ್ಲ, ಅಲ್ಲ ನಮಗೆ ಭಾರತೀಯರಿಗೆ ಗೊತ್ತಾಗಂತೆ ಮಾಡುವಲ್ಲಿ ನಮ್ಮವರದ್ದೇ ಪಾತ್ರ ಬಹಳವಾಗಿತ್ತು ಅನ್ನೋದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಶ್ಮೀರಿ ಪಂಡಿತರ ಅನುಭವಿಸಿದ ಯಾತನೆ ಹೇಗಿತ್ತೆಂದರೆ ಅವರ ನೋವಿನ ಕಣ್ಣೀರು ಸಹಾ ನೆಲಕ್ಕೆ ಬಿದ್ದಿಲ್ಲ. ಕಣ್ಣುಗಳಲ್ಲೇ ಮಂಜುಗೆಡ್ಡೆಯಾಗಿ, ರಕ್ತದ ಗೆಡ್ಡೆಗಳಾಗಿ ಹೆಪ್ಪುಗಟ್ಟಿ ಹೋಗಿವೆ. ಇಷ್ಟಾದರೂ ಆಗ ನಮ್ಮನ್ನಾಳುತ್ತಿದ್ದ ಸೋ ಕಾಲ್ಡ್ ಜನಪ್ರತಿನಿಧಿಗಳು ಮಾತ್ರ ಅಲ್ಲಿ ಏನು ಆಗಿಯೇ ಇಲ್ಲವೇನೋ ಎಂಬಂತೆ ಎಲ್ಲರ ಕಣ್ಣಿಗೂ ಬಟ್ಟೆ ಕಟ್ಟಿ ನಂಬಿಸಿಬಿಟ್ಟಿದ್ದರು. ದೂರದ‌ ಬೆಟ್ಟ ನುಣ್ಣಗೇ ಇದೇ ಎಂದು ನಂಬಿಸಿದ್ದ ಆ ಪರದೆಯನ್ನು ಸಿನಿಮಾ‌ ಕಿತ್ತು ಹಾಕಿದೆ.

ಸಿನಿಮಾ ಕಥೆ..

ಸಿನಿಮಾ‌ ಕಥೆ ಸರಳವಾಗಿದೆ. ನೈಜ‌ ಘಟನೆಯನ್ನು ಆಧಾರಿಸಿದ ಸಿನಿಮಾ. ಕಾಶ್ಮೀರವನ್ನು ಇಸ್ಲಾಂ ದೇಶವನ್ನಾಗಿಸಲು ಬರುವ ಕೆಲವು ಮತಾಂಧ ಶಕ್ತಿಗಳು ಹೇಗೆ ಕಾಶ್ಮೀರದ ಬಿಳಿಯ ಮಂಜು ಹಾಸಿ ಹೊದ್ದ ನೆಲವನ್ನು ರಕ್ತದಿಂದ ಕೆಂಪಾಗಿಸಿದವು ಅನ್ನೋದು ಕಥೆ. ಸಿನಿಮಾ ಅಂದ್ರೆ ಹಾಡು ಹೊಡೆದಾಟ ಹೀರೋಯಿಸಂ, ವಿಲನ್‌ನ ಅಟ್ಟಹಾಸ ಎಲ್ಲವು ಇರುತ್ತದೆ. ಆದ್ರೆ ಇದರಲ್ಲಿರುವುದು ಧರ್ಮಾಂಧತೆಗೆ ಸಿಲುಕಿ‌ ನರಳುವವರು‌, ಕಾಶ್ಮೀರದ ಮುಗ್ದ ಪಂಡಿತರನ್ನು ನರಳಿಸುವುದು. ಕಾಶ್ಮೀರವನ್ನು ರಿಪಬ್ಲಿಕ್ ಆಫ್ ಇಸ್ಲಾಂ ಮಾಡಿಯೇ ತೀರಬೇಕೆಂದು ಹೊರಟ ಮತಾಂಧ ಶಕ್ತಿಗಳು ಕಾಶ್ಮೀರದಲ್ಲಿದ್ದ ಮೂಲ ನಿವಾಸಿಗಳಿಗೆ ಇದ್ದಲ್ಲೇ ನರಕ ತೋರಿಸುತ್ತಾರೆ. ರಲೀವ್, ಗಲೀವ್, ಸಲೀವ್ ಅಂದ್ರೆ ಮತಾಂತರವಾಗಿ, ಇಲ್ಲ ಸಾಯಿರಿ,‌ ಇಲ್ಲ ಓಡಿ ಹೋಗಿ ಅಂತಾ. ಇದನ್ನು ಶತಾಯಗತಾಯ ಕಾರ್ಯಗತಗೊಳಿಸಲು ಆ ಪಾಪಿಗಳು ನಡೆಸುವ ಅಟ್ಟಹಾಸ ಕ್ರೌರ್ಯವನ್ನು ನಾನು ಹೇಳುವುದಕ್ಕಿಂತ ಪರದೆಯಲ್ಲೇ ನೀವು ನೋಡಬೇಕು.

ಈ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಳ್ಳುವ ಕುಟುಂಬ ಅದರಲ್ಲಿ ಬದುಕುಳಿಯುವ ಅಲ್ಲಲ್ಲ, ತಮ್ಮ ಕ್ರೂರತೆಯನ್ನು ಜಗತ್ತಿಗೆ ತಿಳಿಸಲು ಯಾರಾದರೂ ಇರಲಿ ಎಂದು ಉಳಿಸುವ ವಯೋವೃದ್ದ ತನ್ನ ಹಸುಗೂಸು ಮೊಮ್ಮಗನನ್ನು ಕಾಪಾಡಿಕೊಂಡು ತಾನು ಹುಟ್ಟಿದ ನೆಲದಿಂದ ದೂರಾಗಿ ಮತ್ತೆ ತನ್ನ ಊರಿಗೆ ವಾಪಸ್ಸು ಹೋಗಲು ನಡೆಸುವ ಹೋರಾಟ. ಈ‌ ಮಧ್ಯೆ ಮೊಮ್ಮಗ ದೊಡ್ಡವನಾದ‌ ಮೇಲೆ ಕಾಶ್ಮೀರದಲ್ಲಿ ನೆತ್ತರು ಹರಿಸಿದ ಆ ರಕ್ತ ಪಿಪಾಸುಗಳೇ ಆತನಿಗೆ ಕಾಶ್ಮೀರದ ಬಗ್ಗೆ ಸುಳ್ಳು ಹೇಳಿ ತಮ್ಮ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಲು ಬಳಸಿಕೊಳ್ಳುವುದು.

ಇದರಿಂದ ಆಜಾದಿ ಎಂಬ ಅಮಲು ಏರಿಸಿಕೊಂಡ ತನ್ನ ದೇಶ, ವ್ಯವಸ್ಥೆ ಸರ್ಕಾರದ ವಿರುದ್ದ ತಿರುಗಿಬಿದ್ದು ಆಜಾದಿ ಆಜಾದಿ ಆಜಾದಿ ಎಂದು ಬಡಬಡಾಯಿಸುತ್ತಿದ್ದವನಿಗೆ ಕೊನೆಗೆ ಸತ್ಯದ ದರ್ಶನವಾಗಿ 32 ವರ್ಷದಿಂದ ಮಂಜಿನ ನೆಲದಲ್ಲಿ ಹುದುಗಿದ್ದ ತನ್ನ ತಂದೆ, ತಾಯಿ, ಅಣ್ಣ ಸೇರಿ‌ ಕಾಶ್ಮೀರಿ ಪಂಡಿತರ ಹತ್ಯಾಕಾಂಡ, ಅತ್ಯಾಚಾರದಂತಹ ಘನಘೋರ ಸತ್ಯವನ್ನು ಹೊರ ಜಗತ್ತಿಗೆ ಆತನೇ ತಿಳಿಸುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ. ಆದರೆ ಇದರ‌ ನಡುವೆ ಆರಂಭದಿಂದ ಅಂತ್ಯದವರೆಗಿನ ಪ್ರತಿ ಘಟನೆಯೂ ರಣ ರೋಚಕ. ಅದನ್ನು ತೆರೆಯ ಮೇಲೆ ನೋಡಿದರೆನೇ ಅದರ ತೀವ್ರತೆ ಅರಿಯಲು ಸಾಧ್ಯ.

ಪಾಪದ ಕಾಶ್ಮೀರಿ ಪಂಡಿತರ ಪರಿಸ್ಥಿತಿ:

ಸಿನಿಮಾದಲ್ಲಿನ ಕಾಶ್ಮೀರಿ ಪಂಡಿತರ ನೋವು, ದುಖಃ, ದುಮ್ಮಾನಗಳು ಅರ್ಥವಾಗಬೇಕಾದರೆ ಆ ಪಾತ್ರಗಳಲ್ಲಿ ನಮ್ಮನ್ನು, ನಮ್ಮ ಮನೆಯವರನ್ನು ನಾವು ಊಹಿಸಿಕೊಳ್ಳಬೇಕು. ನಾವು ಕೆಲ ವರ್ಷ ಬಾಡಿಗೆಗೆ ಇದ್ದ ಮನೆಯನ್ನು ತೊರೆಯುವಾಗಲೇ ಜಗತ್ತೇ ತಲೆ ಮೇಲೆ ಬಿದ್ದಷ್ಟು ನೋವನ್ನು ಅನುಭವಿಸುತ್ತೇವೆ. ಅಲ್ಲಿಂದ ಹೊರಡುವಾಗ ದುಖಃ ಉಮ್ಮಳಿಸಿ ಬರುತ್ತದೆ. ಹೀಗಿರುವಾಗ ಇದ್ದಕ್ಕಿದ್ದಂತೆ ತಮ್ಮ ತಾತಾ, ಮುತ್ತಾತ, ಅಪ್ಪ ಅಮ್ಮ ಬೆಳೆದ ಮನೆಯನ್ನು ಮಾತ್ರವಲ್ಲ ಆ ಊರನ್ನೇ ತೊರೆಯಿರಿ ಇಲ್ಲಾ ಸಾಯಿರಿ ಅಂದರೆ ಹೇಗಾಗಬೇಡ ಊಹಿಸಿಕೊಳ್ಳಿ ? ಸಿನಿಮಾದಲ್ಲಿ ತೋರಿಸಿರುವುದು ಕೇವಲ ಕೆಲ ಆಯ್ದ ನಾಲ್ಕು ಕುಟಂಬಗಳ ಕಥೆ ಅಷ್ಟೇ. ಹಾಗಿದ್ದರೆ ಉಳಿದವರು ಪಾಡೇನು ? ಆ ಭೋಲೆನಾಥನಿಗೆ ಮಾತ್ರವೇ ಗೊತ್ತು ಅನಿಸುತ್ತದೆ.

ಅಧಿಕಾರಿಗಳ ಅಸಹಾಯಕತೆ – ಜನಪ್ರತಿನಿಧಿಗಳ ಸ್ವಾರ್ಥ

ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತವರಿಗೆ ಈ ಸಿನಿಮಾ‌ ನೋಡಿದ ಮೇಲೆ ಅಬ್ಬಾ ಸದ್ಯ ಅಂದಿಗಿಂತ ಈ‌ ಪರಿಸ್ಥಿತಿಯೇ ಪರ್ವಾಗಿಲ್ಲ ಅಂತಾ ಅನಿಸದೇ ಇರಲಾರದು. ಯಾಕಂದ್ರೆ ಇಂದಿಗಿಂತ ಅಸಹಾಯಕ ಪರಿಸ್ಥಿತಿಯಲ್ಲಿ ಅಂದಿನ ಅಧಿಕಾರಿಗಳಿದ್ದರು. ಇಂದಿನ ಜನಪ್ರತಿನಿಧಿಗಳಿಗಿಂತ ಕಠೋರ ಮನಸಿನ ಧರ್ಮಾಂಧತೆಯ ವಿಷವನ್ನು ಮನದಲ್ಲಿ ತುಂಬಿಕೊಂಡ ಜನಪ್ರತಿನಿಧಿಗಳು ಅವರಾಗಿದ್ದರು ಅನ್ನೋದು ಸಿನಿಮಾದಿಂದ ಸ್ಪಷ್ಟವಾಗುತ್ತದೆ. ಅದರಲ್ಲೂ ಪಾಪದ ಅಧಿಕಾರಿಗಳ ಅಸಹಾಯಕತೆ ಆ ದೇವರಿಗೆ ಪ್ರೀತಿ. ಜನಪ್ರತಿನಿಧಿಗಳ ಜಾಣ ಕುರುಡ ಅಬ್ಬಾಬ್ಬಾ ನೋಡಲಾಗದು. ಸಾಮೂಹಿಕ ನರಮೇಧವನ್ನೇ ಮುಚ್ಚಿಡುವಷ್ಟು, ಲಕ್ಷಾಂತರ ಜನರ ನೋವಿನ‌ ಧ್ವನಿ ಯಾರಿಗೂ ಕೇಳದಂತೆ ಅದುಮುವಷ್ಟು ನಮ್ಮನ್ನಾಳುವವರು ಕ್ರೂರಿಗಳಾದರಾ…! ಅಸಹ್ಯ ಹುಟ್ಟಿಸುವಷ್ಟು ಅಂದಿನ ನಮ್ಮ ನಾಯಕರು ನಡೆದುಕೊಂಡು ಬಿಟ್ಟರಾ ? ಏಕೆ ? ಯಾವ ಕಾರಣಕ್ಕೆ ? ಅದ್ಯಾವ ಹಪಾಹಪಿಯ ಭೂತ ಅವರನ್ನು ಮೆಟ್ಟಿಕೊಂಡಿತ್ತು ? ಗೊತ್ತಿಲ್ಲ.

ವಿದ್ಯಾರ್ಥಿಗಳ‌ ಪಾತ್ರ – ಸ್ವಾರ್ಥ ಸಾಧನೆ

ಸಿನಿಮಾವನ್ನು ನಮ್ಮ ವಿದ್ಯಾರ್ಥಿಗಳು ನೋಡಲೇಬೇಕು. ಯಾಕಂದ್ರೆ ಸಿನಿಮಾದಲ್ಲಿ 90ರ ದಶಕದ ಕಥೆಯ ಜೊತೆಗೆ ಪ್ರಸ್ತುತ ಪರಿಸ್ಥಿತಿಗೂ ಕನ್ನಡಿ ಹಿಡಿಯುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಓದಲು ಬರುವ ವಿದ್ಯಾರ್ಥಿಗಳಿಗೆ ಯಾವ ರೀತಿ ಬ್ರೈನ್ ವಾಷ್ ಮಾಡಿ‌ ಒಂದು ಸಮಾಜ ಸರ್ಕಾರ ವ್ಯವಸ್ಥೆಯ ವಿರುದ್ದ ಅನವಶ್ಯಕವಾಗಿ ಎತ್ತಿಕಟ್ಟಲಾಗುತ್ತದೆ. ಅದಕ್ಕಾಗಿ ಯಾವ ರೀತಿಯ ಡ್ರೊಮ್ಯಾಟಿಕಲ್ ಆಗಿ ನಡೆದುಕೊಳ್ಳಲಾಗುತ್ತದೆ. ಸೋ ಕಾಲ್ಡ್ ಬುದ್ದಿಜೀವಿಗಳು ಅಂತಾ ಕರೆಸಿಕೊಳ್ಳುವವರ ತಂತ್ರಗಾರಿಕೆ ಸೇರಿ ಎಲ್ಲವನ್ನೂ ಎಳೆ ಎಳೆಯಾಗಿ ಸಿನಿಮಾದಲ್ಲಿ ಬಿಚ್ಚಿಡಲಾಗಿದೆ. ಅಷ್ಟೇ ಅಲ್ಲ ಇವೆಲ್ಲವೂ ಅವರ ವೈಯಕ್ತಿಕ ಇಗೋಗಳನ್ನು ತೃಪ್ತಿಗೊಳಿಸಿಕೊಳ್ಳಲು ಮಾತ್ರ ಇದರಿಂದ ಯಾವುದೇ ಪ್ರಗತಿ, ದೇಶಭಕ್ತಿ ಅಥವಾ ದೇಶ ಸೇವೆ, ವಿದ್ಯಾರ್ಥಿಗಳ ಹಿತ ಒಳಿತು ಯಾವುದು ಆಗುವುದಿಲ್ಲ ಎಂಬುದನ್ನು ಮನಸಿಗೆ ನಾಟುವಂತೆ ಅರ್ಥ ಮಾಡಿಸಲಾಗಿದೆ.

ಪಾತ್ರಗಳ ಪರಕಾಯ ಪ್ರವೇಶ

ಸಿನಿಮಾದ ಒಂದೊಂದು‌ ಪಾತ್ರಗಳು ಅದ್ಬುತ ಅಮೋಘವಾಗಿ ಮೂಡಿಬಂದಿದೆ. ನನ್ನ ಆತ್ಮೀಯರೊಬ್ಬರು ಹೇಳುತ್ತಿದ್ದರು, ಸಿನಿಮಾದಲ್ಲಿ ಕಾಲೇಜ್ ಪ್ರೊಫೆಸರ್ ರಾಧಿಕ ಮೆನನ್ ಆಗಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪಾತ್ರ ಮಾಡಿರುವ ಪಲ್ಲವಿ ಜೋಶಿ ನನ್ನ ಎದುರು ಬಂದರೆ ಕಪಾಲಕ್ಕೆ ನಾಲ್ಕು ಬಾರಿಸಿ ನಂತರವೇ ಮಾತನಾಡುತ್ತೇನೆ ಅಂದರು. ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಇ‌ನ್ನು ವೈಯಕ್ತಿಕವಾಗಿ ನನಗೆ ತುಂಬಾ ಅಂದ್ರೆ ತುಂಬಾನೇ ಇಷ್ಟವಾದ ಪಾತ್ರ ಸಿನಿಮಾದ ಕೇಂದ್ರ ಬಿಂದು ಪುಷ್ಕರ್ ನಾಥ್ ಪಂಡಿತ್ ಪಾತ್ರಧಾರಿ ಅನುಪಮ್ ಕೇರ್. ಅಬ್ಬಾ ಅದೆಂತಾ ಅಭಿನಯ, ಅದೆಂತಾ ಭಾವ, ಅವರ ಬಾಯಿಂದ ಹೊರಡುವ ಆ ನೋವಿನ ಕಾಶ್ಮೀರಿ ಭಾಷೆ ಮಾತಾಡುವ ಶೈಲಿ ನಿಮ್ಮ ಕಣ್ಣಾಲಿಗಳನ್ನು ಒದ್ದೆ ಮಾಡದೆ ಬಿಡವು.

ಇನ್ನು ಐಎಎಸ್ ಅಧಿಕಾರಿ ಬ್ರಹ್ಮನಾಗಿ ಮಿಥುನ್‌ದಾ ಅವರ ಅಭಿನಯ, ಬಾಡಿ ಲಾಂಗ್ವೇಜ್ ಅಮೋಘ. ಡಿಜಿಪಿ ಹರಿನಾರಾಯಣ್ ಆಗಿ ಪುನೀತ್ ಇಸ್ಸಾರ್ ಅವರ ಮಾತಿನ ಧಾಟಿ, ವೈದ್ಯ ಮಹೇಶ್ ಕುಮಾರ್ ಆಗಿ ಹೆಮ್ಮೆಯ ಕನ್ನಡಿಗ ಪ್ರಕಾಶ್ ಬೆಳವಾಡಿ ಅವರ ಮನಮೋಹಕ ಭಾವಾಭಿನಯ. ಲಾಸ್ಟ್ ಬಟ್ ನಾಟ್ ಲೀಸ್ಟ್, ವಿದ್ಯಾರ್ಥಿ ಕೃಷ್ಣ ಪಂಡಿತ್ ಆಗಿ ಅಭಿನಯಿಸಿರುವ ದರ್ಶನ್ ಕುಮಾರ್, ಕಾಶ್ಮೀರಿ ಮಹಿಳೆ ಶಾರದಳಾಗಿ ಅಭಿನಯಿಸಿರುವ ಬಾಷ ಸುಂಬ್ಲಿ, ಹಾಗೂ ಮತಾಂಧತೆಯ ಅಫೀಮು‌ ಕುಡಿದ ಫಾರೂಕ್ ಮಲ್ಲಿಕ್ ಬಿಟ್ಟಾ ಪಾತ್ರದ ಚಿನ್ಮಯ್ ಮಂಡ್ಲೇಕರ್ ಅವರ ಅಭಿನಯ ಜಸ್ಟ್ ಪರಕಾಯ ಪ್ರವೇಶ. ಬಹುಶಃ ಇವರೆಲ್ಲಾ ಈಗಲೂ ತಮ್ಮ ಸಿನಿಮಾದ ಪಾತ್ರಗಳಿಂದ ಹೊರಬರಲಾರದೆ ಪರಿತಪಿಸುತ್ತಿರಬಹುದು ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಕೊನೆಯ ಮಾತು

ವಿಪರ್ಯಾಸ ಅಂದ್ರೆ ಬಹುತೇಕ ನಾವು ನೋಡುವ ಸಿನಿಮಾದಲ್ಲಿ ಮನರಂಜನೆಯ ದೃಷ್ಟಿಯಿಂದ ಕೆಲ ಮಾರ್ಪಾಡು‌ ಮಾಡಲಾಗಿದೆ ಮತ್ತು‌ ಕೆಲವನ್ನು ಸೇರಿಸಲಾಗಿದೆ ಅಂತಾ ಹೇಳಲಾಗುತ್ತದೆ. ಆದ್ರೆ ಈ ಸಿನಿಮಾದ ಬಹುತೇಕ ಕಲಾವಿದರು ಅಯ್ಯೋ ನಾವು ತೋರಿಸಿರೋದೆ ಸ್ವಲ್ಪ‌ ಸ್ವಾಮಿ, ಇನ್ನು ಈ ರೀತಿ ಬೇಕಾದಷ್ಟಿದೆ ಅಂತಿದ್ದಾರೆ. ದೂರದಲ್ಲೆಲ್ಲೋ ನಡೆದಿದೆ ಎನ್ನಲಾದ‌ ಒಂದು ಘಟನೆಯ ಎಳೆಯನ್ನು ಹಿಡಿದು ಹೋಗಿ. ತಪ್ಪಸ್ಸಿನಂತೆ ಸಂಶೋಧನೆ ಮಾಡಿ ಅನೇಕ ಎಡರು ತೊಡರುಗಳನ್ನು ದಾಟಿ, ಹಲವು ಸವಾಲುಗಳನ್ನು ಎದುರಿಸಿ ಪ್ರಾಣದ ಹಂಗನ್ನು ತೊರೆದು ಸಿನಿಮಾ ಮಾಡಿದ್ದಾರೆ ಎಂಬುದನ್ನು ನಾನು ಸ್ವತಃ ಸಿನಿಮಾದಲ್ಲಿ ಅಭಿನಯಿಸಿರುವ ನಮ್ಮ ಹೆಮ್ಮೆಯ ಕನ್ನಡಿಗ ಪ್ರಕಾಶ್ ಬೆಳವಾಡಿ ಅವರಿಂದ ಕೇಳಿ ತಿಳಿದಿದ್ದೇನೆ.

ನಾಲ್ಕು ಗೋಡೆಗಳ‌ ಮಧ್ಯೆ ನೋಡಿದ ಸಿನಿಮಾ ಹೊರಗೆ ಬಂದ ಮೇಲೂ ಕಾಡುತ್ತಿದೆ. ಇದು ಸಿನಿಮಾ ನೋಡಿದ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಸಿನಿಮಾವನ್ನು ಎಲ್ಲರೂ ನೋಡಿ. ನೋಡಿದವರು ದಯಮಾಡಿ ಅದು ಸತ್ಯ ಕಥೆಯೋ ಕಲ್ಪನೆಯೋ ಅನ್ನೋ ಜಿಜ್ಞಾಸೆಗೆ ಬೀಳದೆ. ಅಲ್ಲಿ ಆಗಿದೆ ಎನ್ನಲಾಗಿರುವುದು ಮುಂದೆಂದೂ ನಡೆಯದಂತೆ ಎಚ್ಚರಿಕೆ ವಹಿಸಿ. ಇದಕ್ಕೆ ನಾವು ಏನು ಮಾಡಬೇಕು ಎಂಬುದನ್ನು ಅರಿತುಕೊಂಡು ನಡೆದರೆ ಸಾಕು. ಬೇರೆ ಏನು ಮಾಡಬೇಕಿಲ್ಲ. ಆಗ ವಿಶ್ವ ಗುರುವಾಗುವ ನಮ್ಮ ಭಾರತದ ಕನಸು ಖಂಡಿತಾ ಈಡೇರುತ್ತದೆ. ಈ ಮೂಲಕ ನಾವೆಲ್ಲರೂ ಸದಾ ನಾನು ಹೇಳುವ ನನ್ನ ದೇಶದ ವಿಶೇಷತೆ ಅನೇಕತೆಯಲ್ಲಿ ಏಕತೆ ಎಂಬುದನ್ನು ಉಳಿಸಬಹುದು. ಮುಂದಿನ ಪೀಳಿಗೆಗೂ ಅದನ್ನು ಹಂಚಬಹುದು. ಕೊನೆಯದಾಗಿ ಭಾರತ ಮಾತೆಯ ಹೆಮ್ಮೆಯ ಮಕ್ಕಳಾಗಿ ನಮ್ಮತನವನ್ನು ನಾವು ಬಿಡದಿರೋಣ. ಬಾಳೋಣ ಬಾಳಲು ಬಿಡೋಣ.

ಬರಹ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕನ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್​’: ಇದರ ಕಥೆ ಇನ್ನೂ ​ಭಯಾನಕ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ