ಡೆಲಿವರಿ ಬಾಯ್​ಗಳೆಂಬ ಹರಕೆಯ ಕುರಿಗಳು: ರವಿ ಅರೇಹಳ್ಳಿ ಬರಹ

ಡೆಲಿವರಿ ಬಾಯ್​ಗಳೆಂಬ ಹರಕೆಯ ಕುರಿಗಳು: ರವಿ ಅರೇಹಳ್ಳಿ ಬರಹ
ಫುಡ್​ ಡೆಲಿವರಿ ಬಾಯ್ (ಎಡಚಿತ್ರ), ಲೇಖಕ ರವಿ ಅರೇಹಳ್ಳಿ (ಬಲಚಿತ್ರ)

ಕೆಲಸಕ್ಕೆ ನೆಚ್ಚಿಕೊಂಡಿರುವ ಆ್ಯಪ್​ ಕಂಪನಿಗಳಿಂದಲೇ ಈ ಯುವಕರು ಅನುಭವಿಸುವ ಶೋಷಣೆಯ ಚಿತ್ರಣ ಇಲ್ಲಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 06, 2022 | 6:00 AM


ಥರ್ಡ್​ ಪಾರ್ಟಿ ಡೆಲಿವರಿ ಆ್ಯಪ್​ಗಳಿಗಾಗಿ ಕೆಲಸ ಮಾಡುವವರ ದೊಡ್ಡ ಸಂಖ್ಯೆ ಬೆಂಗಳೂರಿನಲ್ಲಿದೆ. ಆ್ಯಪ್​ಗಳ ಮೂಲಕ ಬರುವ ಆರ್ಡರ್​ಗಳನ್ನು ಕಾಯ್ದುಕೊಂಡಿದ್ದು ಆಹಾರ ಪೂರೈಸುವ ಇಂಥವರ ಪಡಿಪಾಟಲು ಒಂದೆರೆಡಲ್ಲ. ಕೆಲಸಕ್ಕೆ ನೆಚ್ಚಿಕೊಂಡಿರುವ ಆ್ಯಪ್​ ಕಂಪನಿಗಳಿಂದಲೇ ಈ ಯುವಕರು ಅನುಭವಿಸುವ ಶೋಷಣೆಯ ಚಿತ್ರಣ ಇಲ್ಲಿದೆ. ಸಾವಯವ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಹವ್ಯಾಸಿ ಬರಹಗಾರ ಮತ್ತು ಕೃಷಿಕ ರವಿ ಅರೇಹಳ್ಳಿ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬರಹವನ್ನು ಇಲ್ಲಿ ನೀಡಲಾಗಿದೆ. ಈ ಲೇಖನದಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ.

ನಮ್ಮಲ್ಲಿ ಸಾವಯವ ಬೇಸಾಯದ ಆಹಾರ ವಸ್ತುಗಳನ್ನು ಪಿಕಪ್ ಮಾಡಿ ಡೆಲಿವರಿ ಕೊಡಲು ಬರುವ ಥರ್ಡ್​ ಪಾರ್ಟಿ ಡೆಲಿವರಿ ಆ್ಯಪ್​ಗಳ ಕಂಪನಿಗಳಿಗೆ ಡೆಲಿವರಿ ಕೆಲಸ ಮಾಡುವ ಹುಡುಗರನ್ನು ಒಂದೆರಡು ಕ್ಷಣ ನಿಲ್ಲಿಸಿ ಮಾತನಾಡಿಸುತ್ತಿರುತ್ತೇನೆ. ನಡುಮಧ್ಯಾಹ್ನದ ಬಿಸಿಲಲ್ಲಿ ಕೆಲಸ ಮಾಡುವವರು ಕೆಲವೊಮ್ಮೆ ನೀರಿನ ಬಾಟಲಿ ತುಂಬಿಸಿಕೊಡಲು ಕೇಳುತ್ತಾರೆ. ಕೆಲವರು ಸಂಜೆ ಐದಾದರೂ ಮಧ್ಯಾಹ್ನದ ಊಟ ತಿಂದಿರುವುದಿಲ್ಲ. ರಾತ್ರಿಯ ಊಟ ಮಧ್ಯರಾತ್ರಿ ಮನೆಗೆ ಸೇರುವ ದಾರಿಯಲ್ಲೋ, ಮತ್ತೆಲ್ಲೊ. ಕನ್ನಡಿಗರಲ್ಲಿ ಬಹಳ ಜನ ಇನ್ನೆಲ್ಲೋ ಕೆಲಸ ಕಳೆದುಕೊಂಡು ಇಲ್ಲಿಗೆ ಬಂದವರು. ಉತ್ತರ ಭಾರತದ ವಲಸಿಗರೂ ಇತ್ತೀಚೆಗೆ ಹೆಚ್ಚು ಸೇರುತ್ತಿದ್ದಾರೆ. ಕೆಲವು ಕಾಲೇಜು ವಿದ್ಯಾರ್ಥಿಗಳಿರುತ್ತಾರಾದರೂ ಅವರಿಗದು ಪಾರ್ಟ್​ಟೈಮ್ ಕೆಲಸ.

ದಾವಣಗೆರೆ ಮೂಲದ ಮಹಂತೇಶ್ ಎಂಬ ಮಧ್ಯವಯಸ್ಕರೊಬ್ಬರು ಪಿಕಪ್ ಮಾಡಲು ಬಂದಿದ್ದರು. ಮಧ್ಯಾಹ್ನದಿಂದ ಓಡಾಡಿ ದಣಿದಿದ್ದರಿಂದ ಮಾತಿಗೆಳೆದಾಗ ಅವಸರಿಸದೆ ತಾವು ಕೆಲಸ ಮಾಡುವ ಕಂಪನಿಯ ಹಣದಾಹದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡರು. ಅವರು ಈ ಮಾಹಿತಿ ಹಂಚಿಕೊಳ್ಳುವ ಗಳಿಗೆಯಲ್ಲಿ ಬೆಂಗಳೂರಿನಾದ್ಯಂತ 55 ಸಾವಿರದಷ್ಟು ಡೆಲಿವರಿ ಮಾಡುವವರು ಲಾಗಿನ್ ಆಗಿದ್ದರು. ಇದೊಂದೇ ಕಂಪನಿಯಲ್ಲಿ ಇಡೀ ದಿನದ ಬೇರೆಬೇರೆ ಅವಧಿಯಲ್ಲಿ ಲಾಗಿನ್ ಆಗುವ ಲೆಕ್ಕಾಚಾರ ಲಕ್ಷ ದಾಟಬಹುದು. ಒಟ್ಟು ಸೇರಿಸಿದರೆ ಸುಮಾರು 2 ಲಕ್ಷ ಜನ ಈ ಉದ್ಯೋಗ ಆರಿಸಿಕೊಂಡಿರಬಹುದು. ಕೆಲವರು ವೊಗೊ ಥರದ ಬಾಡಿಗೆ ಸ್ಕೂಟರ್, ಯುಲೊ ಥರದ ವಾಹನಗಳಲ್ಲಿ ಡೆಲಿವರಿ ಮಾಡುತ್ತಿರುತ್ತಾರೆ.

ಇಂಥ ಆ್ಯಪ್​ಗಳ ಪೈಕಿ ಕೆಲವು ಪಿಕಪ್ ಮಾಡಲು ಹೋಗುವ ಖರ್ಚು ಕೊಡುವುದಿಲ್ಲ. ತೀರ ಹತ್ತಿರದ ಜಾಗಗಳಿಗೆ 10ರಿಂದ 15 ರೂಪಾಯಿಗಳಿಗೆ ಡೆಲಿವರಿ ಕೊಡಬೇಕಾಗುತ್ತದೆ. ಇಂತಹ ಸಣ್ಣ ಡೆಲಿವರಿಗಳಲ್ಲೂ ಶೇ 25ರಿಂದ 40ರವರೆಗೆ ಕಮಿಷನ್ ಬಾಚುತ್ತಾರೆ. ಮಧ್ಯಮ ಮತ್ತು ದೂರದ ಜಾಗಗಳಿಗೆ ಹೋದಾಗ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಬಹುಭಾಗವನ್ನು ಆ್ಯಪ್ ಕಂಪನಿಗಳೇ ಕಬಳಿಸುತ್ತವೆ.

ಅವರು ಒಂದು ಉದಾಹರಣೆ ಹೇಳಿದರು- ಒಮ್ಮೆ ದೂರದ ಒಂದು ಜಾಗಕ್ಕೆ ಡೆಲಿವರಿ ಕೊಟ್ಟಾಗ ಇವರ ಅಕೌಂಟಿಗೆ 275 ಜಮೆಯಾಯಿತು. ಡೆಲಿವರಿ ಕೊಡುವಾಗ ಗ್ರಾಹಕರು ಇವರನ್ನು ಉದ್ದೇಶಿಸಿ ನೀವು ಸುಲಿಗೆ ಮಾಡ್ತಾ ಇದೀರಿ ಅಂತ ಬೈದುಕೊಳ್ಳುತ್ತಿದ್ದರು. ಯಾಕೆಂದು ಕೇಳಿದಾಗ ಇನ್ನೇನು 675 ರೂಪಾಯಿ ಚಾರ್ಜ್ ಮಾಡುವುದಾ ಎಂದು ಬಿಲ್ ಮುಖಕ್ಕೆ ಹಿಡಿದರು. ಮಹಂತೇಶ್ ತಮಗೆ ಬಂದಿರುವ ಮೊತ್ತ ತೋರಿಸಿದರು. ಆ್ಯಪ್ ಕಂಪನಿಯು ಕಮಿಷನ್ ಹೆಸರಿನಲ್ಲಿ 400 ರೂಪಾಯಿಯನ್ನು ಕಡಿತ ಮಾಡಿಕೊಂಡಿತ್ತು. ಶ್ರಮದ ಮೂರನೇ ಎರಡರಷ್ಟು ಪಾಲನ್ನು ಅದೇ ಕಬಳಿಸಿತ್ತು.

ಹೆಚ್ಚೂ ಕಡಿಮೆ ಇಬ್ಬರಿಗೂ ದರೋಡೆಗೊಳಗಾಗಿರುವುದು ಅರಿವಾದರೂ ಏನೂ ಮಾಡಲಾಗದ ಸ್ಥಿತಿ. ಬೋನಸ್ ಆಫರಿನಲ್ಲಿ 400 ರೂಪಾಯಿ ದುಡಿಮೆ ಮಾಡಿದರೆ 100 ಬೋನಸ್ ಅಂತೆ, 800 ಮಾಡಿದರೆ 200 ಬೋನಸ್ ಎಂದು ಮಂಗ ಮಾಡುವ ಆಟ ಇನ್ನೊಂದು ತೆರನಾದದ್ದು. ಬಹುತೇಕ ದಿನಗಳಲ್ಲಿ 800 ದುಡಿಮೆ ಮಾಡಲು ಬಿಡದಂತೆ ಆಟವಾಡಿಸುವ ಅಲ್ಗಾರಿದಮ್ ಇವರಲ್ಲಿದೆ. 300ರಿಂದ 400ರ ಸರಾಸರಿ ಗಳಿಕೆಯ ಮೊತ್ತಕ್ಕೆ ಪರದಾಡುವಂತೆ ಆರ್ಡರುಗಳನ್ನು ಸೀಮಿತಗೊಳಿಸುತ್ತಾರೆ. 600 ಮಾಡಿದವರು ಬಕಪಕ್ಷಿಯಂತೆ ಒಂದೆರಡು ಗಂಟೆ ಕಾದು 800 ಗಳಿಸಲಾಗದ ನಿರಾಸೆಯಿಂದ ಮನೆ ಸೇರಬೇಕು. ಇಂತಹ ಕನಿಷ್ಠ ಗಳಿಕೆಯಲ್ಲಿ ಪೆಟ್ರೋಲು, ಗಾಡಿ ನಿರ್ವಹಣೆ, ಬಾಡಿಗೆ, ಊಟ ತಿಂಡಿ ಇತ್ಯಾದಿ ಕಳೆದಾಗ ಉಳಿಯುವುದು ಖಾಲಿ ಕೈ.

ನಾವು ಏರುಗತಿಯಲ್ಲಿರುವ ಇಂಥ ಆ್ಯಪ್ ಕಂಪನಿಗಳ ಪ್ರಗತಿಯನ್ನು ಗ್ರಾಫುಗಳಲ್ಲಿ ಮುಂದಾಜು ಮಾಡುತ್ತಿರುವಾಗ ಇಲ್ಲಿ ಲಕ್ಷಾಂತರ ನಿರುದ್ಯೋಗಿಗಳ ಶ್ರಮ, ಕಳೆದುಹೋದ ವಯಸ್ಸು ‘ಅರ್ಥ’ವಾಗಿ (ಹಣವಾಗಿ) ಇದೇ ಕಂಪನಿಗಳ ತಿಜೋರಿ ತುಂಬಿಸುತ್ತಿರುತ್ತದೆ. ಒಂದು ಆ್ಯಪ್, ಕನಿಷ್ಠ ಸಂಖ್ಯೆಯ ನೇರ ಉದ್ಯೋಗಿಗಳನ್ನು ಇಟ್ಟುಕೊಂಡು ಲಕ್ಷಾಂತರ ಜನರ ಮಾನವ ಹಕ್ಕುಗಳಿಗೆ ಬೆಲೆ ಕೊಡದೆ ಬೆಂಡು ತೆಗೆಯುತ್ತಿರುವ ಇಂತಹ ಡೆಲಿವರಿ ಕಂಪನಿಗಳ ನಿಯಂತ್ರಿಸುವ ಸಣ್ಣ ಪ್ರಯತ್ನವೂ ನಮ್ಮ ಸರ್ಕಾರಗಳಿಂದ ಆಗುತ್ತಿಲ್ಲ ಎನ್ನುವುದೇ ಈ ಸಮಯದ ದುರಂತ.

ತಮ್ಮ ನಿರುದ್ಯೋಗಕ್ಕೆ, ನಿರುದ್ಯೋಗದ ಪರಿಣಾಮವೇ ಆಗಿರುವ ಡೆಲಿವರಿ ಕಂಪನಿಗಳ ಈ ಎಲ್ಲಾ ಶೋಷಣೆಗೆ ಸರ್ಕಾರದ ನೇರ ಸಹಕಾರವಿದೆ ಎಂದು ಯೋಚಿಸಲೂ ಬಿಡುವಿರದ ದೊಡ್ಡ ಸಂಖ್ಯೆಯ ಈ ಶ್ರಮಜೀವಿಗಳೇ ಈಗಿರುವ, ಮುಂದೆ ಬರುವ ಸರ್ಕಾರಗಳ ಲಾಯಲ್ ಓಟರುಗಳೂ ಆಗುತ್ತಾರೆ. ತಲೆ ಕಡಿಯುವವನು ಕೊಂಚ ಹುಲ್ಲು ಹಾಕಿದರೆ ಸಾಕು, ಕೃತಜ್ಞತೆಯಿಂದ ತಲೆ ಒಡ್ಡುವ ಬಲಿ ಪ್ರಾಣಿಗಳಂತೆ! ಆ್ಯಪ್​ಗಳನ್ನು ನಂಬಿ ಕಾರು ಓಡಿಸುವವರದ್ದು ಇದಕ್ಕಿಂತ ದೊಡ್ದ ವ್ಯಥೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ

ಇದನ್ನೂ ಓದಿ: Paytm IPO: ಫೇಸ್​ಬುಕ್​ನಲ್ಲಿ ಸದ್ದು ಮಾಡ್ತಿದೆ ಪೇಟಿಎಂ ಷೇರಿಗೆ ದುಡ್ಡು ಹಾಕಿದವರ ಹಳಹಳಿಕೆ

Follow us on

Most Read Stories

Click on your DTH Provider to Add TV9 Kannada