Budget 2022 Speech Highlights: ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌; ಇಲ್ಲಿವೆ ಮುಖ್ಯಾಂಶಗಳು

| Updated By: Digi Tech Desk

Updated on: Feb 01, 2022 | 3:46 PM

Budget 2022 Full Speech Highlights in kannada: ನಿರ್ಮಲಾ ಇಂದು 4ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದು ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರದ 10ನೇ ಬಜೆಟ್. ಕೊರೊನಾ ಕಾರಣದಿಂದಾಗಿ ಬಜೆಟ್​ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ.

Budget 2022 Speech Highlights: ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌; ಇಲ್ಲಿವೆ ಮುಖ್ಯಾಂಶಗಳು
ಸಾಂದರ್ಭಿಕ ಚಿತ್ರ

Union Budget 2022 LIVE Updates | ಕೇಂದ್ರ ಸರ್ಕಾರ ಇಂದು (ಫೆ.01) 2022-23ನೇ ಸಾಲಿನ ಬಜೆಟ್ (Budget) ಮಂಡಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ 2019, 2020, 2021ರಲ್ಲಿ ಬಜೆಟ್ ಮಂಡಿಸಿದ್ದರು. ನಿರ್ಮಲಾ ಇಂದು 4ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದು ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರದ 10ನೇ ಬಜೆಟ್. ಕೊರೊನಾ ಕಾರಣದಿಂದಾಗಿ ಬಜೆಟ್​ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಳೆದ 2 ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸಲಾಗುತ್ತಿಲ್ಲ. ಬದಲಾಗಿದೆ ಡಿಜಿಟಲ್​ ರೂಪದಲ್ಲಿ ಬಜೆಟ್ ಮಂಡಿಸಿದರು. 2020ರಲ್ಲಿ ದಾಖಲೆಯ 160 ನಿಮಿಷ ಬಜೆಟ್ ಮಂಡಿಸಿದ್ದರು. ಈ ಬಾರಿ 90  ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದಾರೆ.

ಬಜೆಟ್​ ಅಧಿವೇಶನದಲ್ಲಿ (Budget Session 2022) ಮುಕ್ತ ಮನಸಿನಿಂದ ಮತ್ತು ಗುಣಮಟ್ಟದ ಚರ್ಚೆಗಳನ್ನು ಮಾಡಿ ಎಂದು ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಸಭೆ ಹಾಗೂ ರಾಜ್ಯ ಸಭೆ ಸದಸ್ಯರಿಗೆ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ, ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ಸಂಸದರೂ ಮಕ್ತ ಮನಸಿನಿಂದ ಡಿಬೇಟ್​​ನಲ್ಲಿ ಪಾಲ್ಗೊಳ್ಳಿ. ಆದರೆ ಮಾಡುವ ಚರ್ಚೆ ಮತ್ತು ಡಿಬೇಟ್​​ಗಳು ಅರ್ಥಪೂರ್ಣವಾಗಿರಲಿ. ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ಮುನ್ನಡೆಸಲು ಪೂರಕವಾಗಿರಲಿ ಎಂದು ಹೇಳಿದ್ದರು.

ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಮಾತನಾಡಿ, ಈ ವರ್ಷದಿಂದ ಸರ್ಕಾರವು ನೇತಾಜಿ ಅವರ ಜನ್ಮದಿನವಾದ ಜನವರಿ 23 ರಿಂದ ಗಣರಾಜ್ಯೋತ್ಸವವನ್ನು ಪ್ರಾರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಹಿಂದಿನದನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದರಿಂದ ಕಲಿಯುವುದು ಬಹಳ ಮುಖ್ಯ ಎಂದು ನನ್ನ ಸರ್ಕಾರ ನಂಬುತ್ತದೆ ಎಂದು ಹೇಳಿದ್ದರು. ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಮೋದಿ ಸರ್ಕಾರದ ಪ್ರತಿಕ್ರಿಯೆಯನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಶ್ಲಾಘಿಸಿದ್ದರು. ಲಸಿಕೆಗಳು ವೈರಸ್‌ನಿಂದ ಕೋಟ್ಯಂತರ ಜೀವಗಳನ್ನು ಉಳಿಸಿವೆ ಎಂದು ಅವರು ನಿನ್ನೆ ಅಭಿಪ್ರಾಯಪಟ್ಟಿದ್ದಾರೆ.

LIVE NEWS & UPDATES

The liveblog has ended.
  • 01 Feb 2022 02:14 PM (IST)

    ಇದು ದೂರದ ಆಲೋಚನೆಯ ಬಜೆಟ್; ಸಂಸದ ತೇಜಸ್ವಿ ಸೂರ್ಯ ಹೇಳಿಕೆ

    ಇದು ದೂರದ ಆಲೋಚನೆಯ ಬಜೆಟ್. ಬಿಜೆಪಿ ಇದನ್ನು ಸ್ವಾಗತ ಮಾಡುತ್ತದೆ. ಮೂಲಸೌಕರ್ಯ, ಹೈವೇಗಳು, 400 ರೈಲು ಯೋಜನೆಗಳು ಘೋಷಣೆಯಾಗಿದೆ. ಇದರಿಂದಕೋಟ್ಯಂತರ ಉದ್ಯೋಗಗಳು ಸಿಗಲಿವೆ. ನಗರಾಭಿವೃದ್ಧಿಗೆ ಹೆಚ್ಚು ಆದ್ಯತೆ ಸಿಕ್ಕಿದೆ. ಸಹಕಾರಿ ಸಂಘಗಳ ಮೇಲೆ ಇದ್ದ ಸಚ್೯ ಜಾರ್ಚ ಇಳಿಸಿದೆ. ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಿದೆ. ರೈತರು, ಗ್ರಾಮೀಣಭಾಗ, ಸ್ಟಾರ್ಟ್​ಅಪ್ ಸೇರಿ ಎಲ್ಲಾ ವಿಭಾಗಳಿಗೂ ಬಜೆಟ್ ಸ್ಪರ್ಷ ಆಗಿದೆ. ಮೋದಿ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಒಂದು ಸ್ಕೀಂ ಅಂತಾ ಘೋಷಣೆ ಮಾಡಲ್ಲ. ಆದರೆ ಮೂಲಸೌರ್ಯ ಹೆಸರಲ್ಲಿ ಎಲ್ಲಾ ರಾಜ್ಯಗಳ ಯೋಜನೆಗಳಿಗೆ ಹಣ ಸಿಗುತ್ತೆ. ಕ್ರಿಪ್ಟೋಕರೆನ್ಸಿ ಕಾನೂನು ಬಾಹಿರ ಅಂತ ಕೇಂದ್ರ ಸರ್ಕಾರ ಹೇಳಿಲ್ಲ.
    ಬದಲಿಗೆ ಆರ್​ ಬಿಐ ತರುವ ಕ್ರಿಪ್ಟೋಕರೆನ್ಸಿ ಮೂಲಕ ಡಿಜಿಟಲ್ ಹಣ ಹೂಡಿಕೆ ಮಾಡಬಹುದು ಅಂತ ದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

  • 01 Feb 2022 02:06 PM (IST)

    ‘ಇದು ಬಜೆಟ್ ಅಲ್ಲ, ವರದಿ ಹೇಳಿದಂತೆ ಇದೆ’- ಸಂಸದ ಡಿಕೆ ಸುರೇಶ್ ಟೀಕೆ

    ಇದು ಬಜೆಟ್ ಅಲ್ಲ, ವರದಿ ಹೇಳಿದಂತೆ ಇದೆ ಅಂತ ಕೇಂದ್ರ ಬಜೆಟ್‌ಗೆ ಸಂಸದ ಡಿಕೆ ಸುರೇಶ್ ಟೀಕೆ ಮಾಡಿದ್ದಾರೆ. ಯಾವುದೇ ಭರವಸೆಯನ್ನು ಮೂಡಿಸದ ಬಜೆಟ್. ಬಜೆಟ್‌ನಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ. ಕೊವಿಡ್‌ನಿಂದ ಜನರು ತೊಂದರೆಗೊಳಗಾಗಿದ್ದರು. ಬಡವರಿಗೆ, ಮಧ್ಯಮ ವರ್ಗಕ್ಕೆ ಏನೂ ನೀಡಿಲ್ಲ. ರಾಜ್ಯಗಳಿಗೆ ಸಾಲದ ರೂಪದಲ್ಲಿ ಹಣ ಕೊಡ್ತಾರಂತೆ. ಬಜೆಟ್ ಬಗ್ಗೆ ಚರ್ಚೆ ಮಾಡಲೂ ಕೂಡ ಏನೂ ಇಲ್ಲ. ನಿರುದ್ಯೋಗವನ್ನು ಪಿಎಂ ಒಪ್ಪಿಕೊಂಡಂತೆ ಆಗಿದೆ. ಬರೀ ಸುಳ್ಳು ಭರವಸೆಗಳ ಬಜೆಟ್. ಹಣವನ್ನು ಇಡದೆ ಬರೀ ದಿಕ್ಸೂಚಿ ತೋರಿಸಿದ್ದಾರೆ. ಪುನಃ ಭಾರತೀಯರನ್ನು ಸಾಲಗಾರರನ್ನಾಗಿ ಮಾಡಿದೆ ಅಂತ ಸುರೇಶ್ ಅಭಿಪ್ರಾಯಪಟ್ಟರು.

  • 01 Feb 2022 02:04 PM (IST)

    ಬಜೆಟ್ ಬಗ್ಗೆ ದೊಡ್ಡ ಮಟ್ಟಿಗೆ ಹೇಳುವಂತಹದ್ದು ಏನು‌ ಇಲ್ಲ; ಕುಮಾರಸ್ವಾಮಿ

    ಬಜೆಟ್ ಬಗ್ಗೆ ದೊಡ್ಡ ಮಟ್ಟಿಗೆ ಹೇಳುವಂತಹದ್ದು ಏನು‌ ಇಲ್ಲ. ಕೆಲವೊಮ್ಮೆ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅದೇ ರೀತಿ ತಣ್ಣೀರು ಬಟ್ಟೆ ಹಾಕಿಕೋ ಎಂದು ಹೇಳಿದ್ದಾರೆ. ಬಜೆಟ್ ಬಗ್ಗೆ ಇನ್ನೂ‌ ಸಂಪೂರ್ಣವಾಗಿ ಗಮನಿಸಿಲ್ಲ. ನದಿಯೋಜನೆ ಬಗ್ಗೆ ಮೂರು‌ ವರ್ಷದಿಂದ ಹೇಳುತ್ತಿದ್ದಾರೆ. ಅದು‌ ಕಾರ್ಯರೂಪಕ್ಕೆ ಬರಬೇಕಲ್ಲ. ನದಿ ಜೋಡಣೆ ವಿಚಾರ ಬರಿ ಚರ್ಚೆಯಲ್ಲಿ‌. ಇದೆ ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ರೀತಿನ ಟಾಕ್ಸ್ ಹಾಕಿಲ್ಲ ಅನ್ನೋದು ಬಿಟ್ಟರೇ ಬೇರೆ ಏನು‌ ಇಲ್ಲ. ಯಾವುದೇ ರೀತಿಯ ಹೊಸ ರೀತಿಯ ಅಭಿವೃದ್ದಿ ಕಾರ್ಯಕ್ರಮವಿಲ್ಲ. ವರ್ಷವನ್ನ ಕಳೆಯುವ ಬಜೆಟ್ ಇದು ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

  • 01 Feb 2022 01:28 PM (IST)

    ಯಾವುದೇ ನಿರ್ದಿಷ್ಟವಾದ ಯೋಜನೆಗಳಿಲ್ಲ; ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಘದ ಸುದ್ದಿಗೋಷ್ಠಿ

    ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಘ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಉದ್ಯಮಿ ವಸಂತ್ ಲದ್ದಡ್, ಯಾವುದೇ ನಿರ್ದಿಷ್ಟವಾದ ಯೋಜನೆಗಳಿಲ್ಲ. ಒಂದೇ ಒಂದು ಜನಪರ ಘೋಷಣೆ ಆಗಲಿಲ್ಲಿ. ಆದಾಯ ತೆರಿಗೆ ಮೀತಿ‌ ಹೆಚ್ಚಳ‌ ನಿರೀಕ್ಷೆ ಹುಸಿಯಾಗಿದೆ. ಶೇಕಡ 52 ರಷ್ಟು ಭೂ ಭಾಗದ ಜನರು ಕರಾವಳಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ ಅಂಕೋಲ ರೈಲ್ವೆ ಲೈನ್​ಗೆ ಯಾವುದೇ ಪ್ರಸ್ತುತ ಇಲ್ಲ. ಎಂಎಸ್ಎಂಇ ಗೆ ಯಾವುದೇ ಉತ್ತೇಜನ ಇಲ್ಲ. ಉದ್ಯೋಗ ಸೃಷ್ಟಿ ಯಾವುದೇ ಯೋಜನೆ ಇಲ್ಲ. ಯಾವುದೇ ವರ್ಗದ ಜನರಿಗೆ ಈ ಬಜೆಟ್ ನಿಂದ ಉಪಯೋಗ ಇಲ್ಲ. ಧಾರವಾಡ ಜಿಲ್ಲೆಗೆ ಎಮ್ಸ್ ಆಸ್ಪತ್ರೆಯ ನಿರೀಕ್ಷೆ ಹುಸಿಯಾಗಿದೆ. ದಾಖಲೆ ಪ್ರಮಾಣ ಜಿಎಸ್ಟಿ ಸಂಗ್ರಹಕ್ಕೆ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗಿದೆ ಅಂತ ಅಭಿಪ್ರಾಯವ್ಯಕ್ತಪಡಿಸಿದರು.

     

  • 01 Feb 2022 01:25 PM (IST)

    ಕರ್ನಾಟಕಕ್ಕೆ ಏನು ಸಿಕ್ಕಿಲ್ಲ; ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್

    ಈ ವರ್ಷ ಶೇ.6 ಸಾಲ ಪಡೆಯಲು ಅವಕಾಶ ಮಾಡಿಕೊಂಡಿದ್ದಾರೆ ಇದು ತಪ್ಪು. ಕರ್ನಾಟಕಕ್ಕೆ ಏನು ಸಿಕ್ಕಿಲ್ಲ. ನರೇಗಾ, ಸರ್ಬಬನ್ ಹಣ ಇಟ್ಟಿಲ್ಲ ಎಂದು ಮಾತನಾಡಿದ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್, ನದಿ ಜೋಡಣೆ ವಿಚಾರ ಸಂಬಂಧಿಸಿ ಎಲ್ಲಾ ರಾಜ್ಯಗಳ ಒಪ್ಪಿಗೆ ಪಡೆದು ಅಂತಾರೆ. ಈ ಮಾತು ಹೇಳಲು ಕೇಂದ್ರ ಸರ್ಕಾರ ಬೇಕಾ? ಕೇಂದ್ರದಿಂದ ರಾಜ್ಯಗಳನ್ನು ಒಪ್ಪಿಸಬೇಕು. ಇದು ನಿರಾಶಾದಾಯಕ ಬಜೆಟ್.
    ಕರ್ನಾಟ ಕ್ಕೆ ಸಂಪೂರ್ಣ ನಿರಾಸೆ ಅಂತ ತಿಳಿಸಿದರು.

  • 01 Feb 2022 01:23 PM (IST)

    ಕೇಂದ್ರ ಬಜೆಟ್ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ

    ಕೇಂದ್ರ ಬಜೆಟ್ ಕುರಿತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಧ್ಯಮ ಪ್ರತಿಕ್ರಿಯೆ ನೀಡಿದ್ದಾರೆ. ಆಯವ್ಯಯವು ಆರ್ಥಿಕ ಹಿಂಜರಿತ ಸರಿಪಡಿಸುವ ದೃಷ್ಟಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿ ಗುರಿ ಹೊಂದಿದೆ. ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್. ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ. ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, 2023 ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಅಂತ ಹೇಳಿದರು.

  • 01 Feb 2022 01:18 PM (IST)

    ಬಹಳ ನಿರಾಸಾದಾಯಕ ಬಜೆಟ್: ಸಂಸದ ಪ್ರಜ್ವಲ್ ರೇವಣ್ಣ

    ಬಹಳ ನಿರಾಸಾದಾಯಕ ಬಜೆಟ್. ಬಜಟ್ ಮೇಲೆ ನಂಬಿಕೆಯೇ ಹೋಗಿದೆ. 25 ಜನ ಬಿಜೆಪಿ ಎಂಪಿಗಳು ಕರ್ನಾಟಕ ದಿಂದ ಇದ್ದಾರೆ, ಏನ್ ತಂದರು ರಾಜ್ಯಕ್ಕೆ? ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ಫೇಲ್ ಬಜೆಟ್. ಬಹಳಷ್ಟು ನಿರೀಕ್ಷೆಗಳು ಇದ್ದವು. ಕಾವೇರಿ- ಮೇಕೆದಾಟು ವಿಚಾರಕ್ಕೆ ಬಜೆಟ್ ನಲ್ಲಿ ನಿರೀಕ್ಷೆ ಮಾಡಲಾಗಿತ್ತು.  ಆದರೆ ಬಜೆಟ್​ನಲ್ಲಿ ರಾಜ್ಯಗಳ ಸಹಮತ ಇದ್ದರೇ ಮಾತ್ರ ಜೋಡೆ ಎಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯ.
    ಇದು ಕಳಪೆ ಬಜೆಟ್. ಕರ್ನಾಟಕ ಕ್ಕೆ ಏನು ಕೊಟ್ಟಿಲ್ಲ ಅಂತ ದೆಹಲಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.

  • 01 Feb 2022 01:09 PM (IST)

    ಮೋದಿಯವರ ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ; ಸಿಸಿ ಪಾಟೀಲ್

    ಮೋದಿಯವರ ಆತ್ಮ ನಿರ್ಭರ ಭಾರತದ ಕನಸು ನನಸಾಗಿದೆ ಅಂತ ಲೋಕೋಪಯೋಗಿ ಸಚಿವ ಸಿಸಿ  ಪಾಟೀಲ್ ಹೇಳಿಕೆ ನೀಡಿದ್ದಾರೆ. ಐತಿಹಾಸಿಕ ಬಜೆಟ್ ಮಂಡನೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಯೋಜನೆಗೆ ಹಣ ಬಿಡುಗಡೆಯಾಗಿದೆ. ಬಡವರ ಅನುಕೂಲಕ್ಕೆ 400 ರೈಲು ಘೋಷಣೆ ಮಾಡಲಾಗಿದೆ. ರೈತರಿಗೆ ಬೆಲೆ ಬಿದ್ದ ಸಂದರ್ಭದಲ್ಲಿ ಉತ್ತೇಜನ ನೀಡಲು ಹಣ ಮೀಸಲಿಡಲಾಗಿದೆ. ನದಿ ಜೋಡಣೆಗೆ ಸ್ವಾಗತ. ಶಿರಾಡಿ ಘಾಟ್ ಗೆ 1,200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು. ಗಡ್ಕರಿ ಅವರಿಗೆ ಧನ್ಯವಾದಗಳು. ಕೊವಿಡ್ ಹಿನ್ನೆಲೆ ಟ್ಯಾಕ್ಸ್ ಸಂಗ್ರಹದಲ್ಲಿ ಯಶಸ್ವಿಯಾಗಿದೆ. ಕೊವಿಡ್ ನಡುವೆ ಅದ್ಬುತವಾದ ಬಜೆಟ್ ಮಂಡನೆಯಾಗಿದೆ ಅಂತ ಅಭಿಪ್ರಾಯಪಟ್ಟರು.

  • 01 Feb 2022 01:06 PM (IST)

    ಅರ್ಥ ವ್ಯವಸ್ಥೆಯನ್ನು ಸರಿ ಪಡಿಸುವ ಬಜೆಟ್ ಇದಾಗಿದೆ: ಸಚಿವ ಗೋವಿಂದ ಕಾರಜೋಳ

    ಅರ್ಥ ವ್ಯವಸ್ಥೆಯನ್ನು ಸರಿ ಪಡಿಸುವ ಬಜೆಟ್ ಇದಾಗಿದೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ‌ಹೇಳಿಕೆ ನೀಡಿದ್ದಾರೆ. ಅನೇಕ ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡುತ್ತಿದ್ದೆವು. ನದಿ ಜೋಡಣೆ ಯೋಜನೆ  ಘೋಷಣೆ ಮೂಲಕ 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತೀ ಮನೆಗೂ ನೀರು ಕೊಡಲು 60 ಲಕ್ಷ ಕೋಟಿ ಕೊಟ್ಟಿದ್ದಾರೆ. ಎರಡು ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಎಸ್​ಸಿ, ಎಸ್​ಟಿ​, ಬಡ ರೈತರಿಗೆ ನೀರಾವರಿ ಸೌಲಭ್ಯ ಕೊಟ್ಟಿದ್ದಾರೆ. 400 ಹೊರ ರೈಲು ಮಾರ್ಗಗಳನ್ನು ಘೋಷಣೆ ಮಾಡಿದ್ದಾರೆ. ಸೋಲಾರ್ ವಿದ್ಯುತ್ ಯೋಜನೆಗೆ ಒತ್ತು ನೀಡಿದ್ದಾರೆ. 80 ಲಕ್ಷ ಮನೆ ಕೊಡುವ ಯೋಜನೆ ರೂಪಿಸಿದ್ದಾರೆ ಅಂತ ಹೇಳಿದರು.

  • 01 Feb 2022 01:00 PM (IST)

    ಮೋದಿ, ನಿರ್ಮಲಾ ಸೀತಾರಾಮನ್​ಗೆ ಅಭಿನಂದನೆ ಸಲ್ಲಿಸಿದ ಶ್ರೀರಾಮುಲು

    ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು, ಪ್ರಧಾನಿ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ. ಇದು ಜನಪರ ಬಜೆಟ್. ದೇಶ ವೇಗವಾಗಿ ಬೆಳೆಯಲು ಅನುಕೂಲವಾಗುವ ಬಜೆಟ್. ಕೊವಿಡ್ ಇದ್ದಾಗಲು ಒಳ್ಳೆ ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನೂ ಸಮಯ ಇದೆ. ನಮ್ಮ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಕೊಡುವ ಸಾಧ್ಯತೆ ಇದೆ. 100 ಕೋಟಿ ಜನರಿಗೆ ವ್ಯಾಕ್ಸಿನ್ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ ಮೋದಿ. ಮಾಹಿತಿ ತಂತ್ರಜ್ಞಾನ, ಐಟಿ ಬಿಟಿಗೆ ಒತ್ತು ಕೊಟ್ಟಿದ್ದಾರೆ. ರೈತರಿಗೆ ಅನೇಕ ಯೋಜನೆ ಕೊಟ್ಟು ರೈತ ಹಿತ ಕಾದಿದ್ದಾರೆ. ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ. ರಕ್ಷಣಾ ಕ್ಷೆತ್ರದಲ್ಲಿ ಬದಲಾವಣೆ ಮಾಡಿದ್ದಾರೆ. 2022 ರ 5 ಜಿ ತರಲು ಮುಂದಾಗಿ ಬಹುದಿನದ ಕನಸು ನನಸಾಗಿಸಿದ್ದಾರೆ. ದೇಶದಲ್ಲಿ ಎಲ್ಲೇ ಇದ್ರೂ ಭೂಮಿ ಖರಿದಿಸಲು ರಿಜಿಸ್ಟರ್ ಮಾಡಿಸಲು ಅನುವು ಮಾಡಿರೋದು ಒಳ್ಳೆಯದು. ಮಹಿಳೆಯ ಸಬಲೀಕರಣಕ್ಕಾಗಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಉಚಿತ ಕೊಡಲು ಮುಂದಾಗಿರೋದು ಒಳ್ಳೆಯದು. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಅಂತ ಹೇಳಿದರು.

  • 01 Feb 2022 12:48 PM (IST)

    ವಜ್ರದ ಮೇಲೆ ಅಬಕಾರಿ ಶುಲ್ಕ ಇಳಿಕೆ

    ಪಾಲಿಶ್ ಮಾಡಿದ ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ಅಬಕಾರಿ ಸುಂಕವನ್ನು ಶೇ 5ರಷ್ಟು ಕಡಿತಗೊಳಿಸಲಾಗಿದೆ. ಇದೇ ವರ್ಷ ಜೂನ್ ತಿಂಗಳಿನಿಂದ ಇ-ಕಾಮರ್ಸ್​ ವೇದಿಕೆಗಳ ಮೂಲಕ ವಜ್ರದ ರಫ್ತಿಗೆ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಸರಳ ನಿಯಮಗಳನ್ನು ರೂಪಿಸಲಾಗುವುದು ಎಂದು ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು.

  • 01 Feb 2022 12:42 PM (IST)

    ರೈತರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆ

    ರೈತರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷ 5 ಸಾವಿರ ಕೋಟಿ ರೂಪಾಯಿ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ MSP 2.42 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷ ಎಂಎಸ್‌ಪಿ ಬಲೆ 2.37 ಕೋಟಿ ರೂ. ಇಳಿಕೆ ಮಾಡಲಾಗುವುದು. MSP ಕಡಿತ, ನಿಲ್ಲಿಸಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.

  • 01 Feb 2022 12:40 PM (IST)

    ಆದಾಯ ತೆರಿಗೆ: ಹೊಸ ಪದ್ಧತಿ-ಹಳೇ ಪದ್ಧತಿ, ಇದು ಲೆಕ್ಕಾಚಾರ

    ಪ್ರಸ್ತುತ ದೇಶದಲ್ಲಿ ಆದಾಯ ತೆರಿಗೆ ಪಾವತಿಗಾಗಿ ಹೊಸ ಪದ್ಧತಿ ಮತ್ತು ಹಳೇ ಪದ್ಧತಿ ಎಂಬ ಎರಡು ವಿಧಾನಗಳಿವೆ. ಆದಾಯ ತೆರಿಗೆಯ ವಿನಾಯಿತಿಯ ಮೂಲ ಮಿತಿಯನ್ನು ವಾರ್ಷಿಕ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಸಂಬಳದಾರ ವರ್ಗದಲ್ಲಿ ವ್ಯಕ್ತವಾಗಿತ್ತು. ₹ 2.5 ಲಕ್ಷದವರೆಗಿನ ಆದಾಯಕ್ಕೆ ಎರಡೂ ಪದ್ಧತಿಗಳಲ್ಲಿ ಸಂಪೂರ್ಣ ವಿನಾಯಿತಿ ಇದೆ. ₹ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಎರಡೂ ಪದ್ಧತಿಗಳಲ್ಲಿ ಶೇ 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ₹ 5 ಲಕ್ಷದಿಂದ ₹ 7.5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20ರಷ್ಟು ಆದಾಯ ತೆರಿಗೆ ವಿಧಿಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 10 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 15ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.

    ಹಳೇ ಪದ್ಧತಿಯನ್ನು ಪೂರ್ತಿ ತೆಗೆದುಹಾಕಿ, ಹೊಸ ಪದ್ಧತಿಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂಬ ಆತಂಕವೂ ಬಜೆಟ್​ಗೆ ಮೊದಲು ಕೇಳಿಬಂದಿತ್ತು. ಈ ಆತಂಕವೂ ಇದೀಗ ನಿವಾರಣೆಯಾದಂತೆ ಆಗಿದೆ

  • 01 Feb 2022 12:38 PM (IST)

    ತೆರಿಗೆದಾರರಿಗೆ ನಿರಾಸೆ: ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

    ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿದ್ದವು. ಆದರೆ ವಿತ್ತ ಸಚಿವರ ಇಂದಿನ ಭಾಷಣದಲ್ಲಿ ಇಂಥ ಯಾವುದೇ ಪ್ರಸ್ತಾವಗಳು ಮಂಡನೆಯಾಗಿಲ್ಲ. ಆದಾಯ ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್​ಚಾರ್ಜ್ ಸೇರಿಲ್ಲ ಎನ್ನುವುದು ಸಮಾಧಾನದ ವಿಷಯ.

  • 01 Feb 2022 12:35 PM (IST)

    ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಇಲ್ಲ

    ಸದ್ಯದ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

  • 01 Feb 2022 12:35 PM (IST)

    ಬಜೆಟ್ ಭಾಷಣ ಮುಕ್ತಾಯ

    ಬಜೆಟ್ ಭಾಷಣ ಮುಕ್ತಾಯವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ಸಚಿವರು ಹಣಕಾಸು ವಿಧೇಯಕ ಮಂಡಿಸಿದರು. ನಿರ್ಮಲಾ ಸೀತಾರಾಮನ್​ನ ಈ ಹಿಂದಿನ ಬಜೆಟ್ ಭಾಷಣಗಳಿಗೆ ಹೋಲಿಸಿದರು ಇದು ಕಡಿಮೆ ಅವಧಿಯದ್ದು. ಈ ಬಾರಿ ವಿತ್ತ ಸಚಿವರು 90 ನಿಮಿಷಗಳಲ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದರು. ತೆರಿಗೆ ವಿಚಾರ ಮಾತನಾಡುವಾಗ ಮಹಾಭಾರತದ ಉಲ್ಲೇಖ ಹೊರತುಪಡಿಸಿದರೆ ಉಳಿದಂತೆ ಯಾವುದೇ ಕಾವ್ಯವನ್ನು ಈ ಬಾರಿಯ ಭಾಷಣದಲ್ಲಿ ಉಲ್ಲೇಖಿಸಲಿಲ್ಲ.

  • 01 Feb 2022 12:34 PM (IST)

    ನಾಳೆ ಸಂಜೆ 4.30ಕ್ಕೆ ಲೋಕಸಭೆ ಕಲಾಪ ಮುಂದೂಡಿಕೆ

    ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ 1 ಗಂಟೆ 33 ನಿಮಿಷಗಳ ಕಾಲ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ನಾಳೆ ಸಂಜೆ 4.30ಕ್ಕೆ ಲೋಕಸಭೆ ಕಲಾಪ ಮುಂದೂಡಿಕೆ ಮಾಡಿದ್ದಾರೆ.

  • 01 Feb 2022 12:33 PM (IST)

    NPS: ಕೇಂದ್ರ ಸರ್ಕಾರಿ ನೌಕರರಿಗೆ ತುಸು ಕಹಿ

    ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ನಿಧಿಗಾಗಿ ಪಾವತಿಸುತ್ತಿದ್ದ ಮೊತ್ತದಲ್ಲಿ ಸಿಗುತ್ತಿದ್ದ ತೆರಿಗೆ ವಿನಾಯ್ತಿಯ ಮಿತಿಯನ್ನು ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕೇಂದ್ರ ಸರ್ಕಾರಿ ಮಾಡುವ ಹೂಡಿಕೆಗೆ ಈವರೆಗೆ ಶೇ 18ರಷ್ಟು ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಈ ಮೊತ್ತವನ್ನು ಇದೀಗ ಶೇ 15ಕ್ಕೆ ಇಳಿಸಲಾಗಿದೆ.

  • 01 Feb 2022 12:32 PM (IST)

    ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆ ಇಳಿಕೆ

    ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆಯೂ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • 01 Feb 2022 12:31 PM (IST)

    ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ

    ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗುವುದು. ಡೈಮಂಡ್ ಕಸ್ಟಮ್ಸ್ ಡ್ಯೂಟಿ ಶೇ.5ರಷ್ಟು ಕಡಿತ ಮಾಡಲಾಗುವುದು. ಕಾರ್ಪೊರೇಟ್ ಸರ್‌ ಚಾರ್ಚ್ ಕೂಡ ಇಳಿಕೆ ಮಾಡಲಾಗಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲಾಗುತ್ತದೆ.

  • 01 Feb 2022 12:30 PM (IST)

    ಮೊಬೈಲ್, ಮೊಬೈಲ್ ಚಾರ್ಜರ್‌ಗಳ ಬೆಲೆ ಇಳಿಕೆ

    ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ ಮಾಡಿದ ಸರ್ಕಾರ, ಮೊಬೈಲ್, ಮೊಬೈಲ್ ಚಾರ್ಜರ್‌ಗಳ ಬೆಲೆ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ.

  • 01 Feb 2022 12:29 PM (IST)

    NPS: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

    ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme – NPS) ಹೂಡಿಕೆಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆಯಲ್ಲಿ ಶೇ 14ರ ಮಿತಿ ಸಿಗಲಿದೆ.

  • 01 Feb 2022 12:28 PM (IST)

    ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ

    ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
    ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಇಲ್ಲ.

  • 01 Feb 2022 12:26 PM (IST)

    ವ್ಯವಹಾರಿಕ ವೆಚ್ಚಕ್ಕೆ ಶಿಕ್ಷಣ, ಆರೋಗ್ಯ ಸೆಸ್‌ನಿಂದ ವಿನಾಯಿತಿ

    ವ್ಯವಹಾರಿಕ ವೆಚ್ಚಕ್ಕೆ ಶಿಕ್ಷಣ, ಆರೋಗ್ಯ ಸೆಸ್‌ನಿಂದ ವಿನಾಯಿತಿ ನೀಡಲಾಗಿದೆ. ‘ಒನ್ ಮಾರ್ಕೆಟ್, ಒನ್ ಟ್ಯಾಕ್ಸ್’ ನೀತಿ ಜಾರಿಮಾಡಲಾಗುವುದು. ಸಂಕಷ್ಟ ಕಾಲದಲ್ಲೂ GST ಸಂಗ್ರಹ ಉತ್ತಮವಾಗಿದೆ. ಜನವರಿಯಲ್ಲಿ 1.40 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ.

  • 01 Feb 2022 12:24 PM (IST)

    IndiaWantsCrypto: ಟ್ವಿಟರ್​ನಲ್ಲಿ ಜನರ ಹರ್ಷ

    ಭಾರತ ಸರ್ಕಾರವು ಈ ಬಾರಿಯ ಬಜೆಟ್​ನಲ್ಲಿ ತನ್ನದೇ ಸ್ವತಂತ್ರ ಕ್ರಿಪ್ಟೊಕರೆನ್ಸಿ ಆರಂಭಿಸಲು ನಿರ್ಧರಿಸಿರುವ ಜನರು ಸ್ವಾಗತಿಸಿದ್ದಾರೆ. ಭಾರತವು ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡಲು ಮತ್ತು ಕಾನೂನು ಕ್ರಮಗಳ ನಿಯಂತ್ರಿಸಲು ಮುಂದಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ವಾಜಿರ್​ಎಕ್ಸ್​ ಕಂಪನಿಯ ಸಿಇಒ ನಿಶ್ಚಲ್ ಟ್ವೀಟ್ ಮಾಡಿದ್ದಾರೆ.

  • 01 Feb 2022 12:24 PM (IST)

    ಈಕ್ವಿಟಿ ಷೇರು ಮತ್ತು ಇತರ ಲಾಂಗ್​ ಟರ್ಮ್​ ಕ್ಯಾಪಿಟಲ್​ ಗೇಯ್ನ್ಸ್ ಶೇ 15ಕ್ಕೆ ಇಳಿಕೆ

    ಈಕ್ವಿಟಿ ಷೇರು ಮತ್ತು ಇತರ ಲಾಂಗ್​ ಟರ್ಮ್​ ಕ್ಯಾಪಿಟಲ್​ ಗೇಯ್ನ್ಸ್ ಶೇ 15ಕ್ಕೆ ಇಳಿಕೆ. ಈ ಹಿಂದೆ ಶೇ 37ರಷ್ಟಿತ್ತು.

  • 01 Feb 2022 12:22 PM (IST)

    ಕ್ರಿಪ್ಟೋಕರೆನ್ಸಿ ಮೇಲೆ ತೆರಿಗೆ ಶಾಕ್

    ಡಿಜಿಟಲ್ ಕರೆನ್ಸಿ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆ ಹಾಕಲಾಗುವುದು. ಈ ಸಾಲಿನಿಂದಲೇ ಕ್ರಿಪ್ಟೋಕರೆನ್ಸಿ ಮೇಲೆ  ತೆರಿಗೆ ಶಾಕ್ ಎದುರಾಗಲಿದೆ.

  • 01 Feb 2022 12:20 PM (IST)

    Fiscal Deficit: ₹ 39.45 ಲಕ್ಷ ಕೋಟಿ ಖರ್ಚು ಮಾಡಲು ಪ್ರಸ್ತಾವ

    ಈ ಬಜೆಟ್​ನಲ್ಲಿ ಸರ್ಕಾರವು ₹ 39.45 ಲಕ್ಷ ಕೋಟಿ ಖರ್ಚು ಮಾಡಲು ಉದ್ದೇಶಿಸಿದೆ. ಇದರಲ್ಲಿ ₹ 10.68 ಲಕ್ಷ ಕೋಟಿ ಬಂಡವಾಳ ವೆಚ್ಚ (Capital Expenditure). ಸಾಲ ಹೊರತುಪಡಿಸಿದ ಆದಾಯವು ₹ 22.84 ಲಕ್ಷ ಮಾತ್ರ ಇದೆ.

  • 01 Feb 2022 12:18 PM (IST)

    ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ 30ರ ತೆರಿಗೆ

    ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ 30ರ ತೆರಿಗೆ. ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ 1ರಷ್ಟು ಟಿಡಿಎಸ್​ ಪ್ರಸ್ತಾವ.

  • 01 Feb 2022 12:14 PM (IST)

    ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ

    ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ. ಕೊವಿಡ್ ಸಂಕಷ್ಟ ಹಿನ್ನೆಲೆ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯತಿ ನೀಡಲಾಗಿದೆ.

  • 01 Feb 2022 12:14 PM (IST)

    ವಿಶೇಷ ಚೇತನರು ವಿಮೆ ಹಣ ಪಡೆಯುವುದಕ್ಕೆ ಅವಕಾಶ

    ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ. 60 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಗೆ ಅವಕಾಶ ನೀಡಲಾಗಿದೆ.

  • 01 Feb 2022 12:10 PM (IST)

    ಸಹಕಾರ ಸಂಘಗಳ ಮೇಲಿನ ಸರ್​ಚಾರ್ಜ್ ಇಳಿಕೆ

    ಸಹಕಾರ ಸಂಘಗಳ ಮೇಲಿನ ಸರ್​ಚಾರ್ಜ್ ಇಳಿಕೆ ಮಾಡಲಾಗಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದ್ದು, ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗುತ್ತದೆ. ಕೋ- ಆಪರೇಟಿವ್ ಸೊಸೈಟಿಗಳಿಗೂ ಇನ್ನು ಮುಂದೆ ಶೇ 15ರ ತೆರಿಗೆ. ತೆರಿಗೆ ಪದ್ಧತಿಯಲ್ಲಿ ಇರುವ ಹಲವು ಸಂಕೀರ್ಣ ಅಂಶಗಳನ್ನು ಸರಳಗೊಳಸಲಿ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಹಾಗೂ ಹೊಸದಾಗಿ ಮತ್ತೊಮ್ಮೆ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಎರಡು ವರ್ಷಗಳ ಅವಕಾಶ ಸಿಗಲಿದೆ. ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ.

  • 01 Feb 2022 12:10 PM (IST)

    ತೆರಿಗೆ ಪಾವತಿ ತಪ್ಪು ಸರಿಪಡಿಸಿಕೊಳ್ಳಲು 2 ವರ್ಷಗಳ ಅವಕಾಶ

    ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್​ಡೇಟೆಡ್​ ರಿಟರ್ನ್ ಫೈಲ್ ಮಾಡಬಹುದು. ಆ ಅಸೆಸ್​ಮೆಂಟ್​ನಿಂದ ಎರಡು ವರ್ಷದೊಳಗೆ ಮಾಡಬಹುದು.

  • 01 Feb 2022 12:08 PM (IST)

    ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ

    ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ತೀರ್ಮಾನಿಸಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ  2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.

  • 01 Feb 2022 12:03 PM (IST)

    ಬಂಡವಾಳ ಹೂಡಲು ರಾಜ್ಯಗಳಿಗೆ 1 ಲಕ್ಷ ಕೋಟಿ ಅನುದಾನ

    50 ವರ್ಷ ಕಾಲ ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂಪಾಯಿ ಸಾಲ ನೀಡಲು ನಿರ್ಧಾರ ಮಾಡಲಾಗಿದೆ. 50 ವರ್ಷಗಳ ಕಾಲ ಸಾಲ ನೀಡಲು ನಿರ್ಧರಿಸಲಾಗಿದೆ. ಡಿಜಿಟಲೈಸೇಷನ್ ಹಾಗೂ ನಗರ ಯೋಜನೆಗಳಿಗಾಗಿ ಈ ಹಣ ನೀಡಲಾಗುತ್ತದೆ.

  • 01 Feb 2022 12:02 PM (IST)

    ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ

    ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬ್ಲಾಕ್‌ಚೈನ್‌ ಟೆಕ್ನಾಲಜಿ ಮೂಲಕ ಡಿಜಿಟಲ್ ರೂಪಾಯಿ ವಿತರಣೆಗೆ ನಿರ್ಧರಿಸಿದೆ.  2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುವುದು.

  • 01 Feb 2022 12:01 PM (IST)

    ಬಂಡವಾಳ ವೆಚ್ಚ ಹೆಚ್ಚಳ

    ಈ ಬಾರಿಯ ಬಜೆಟ್​ನಲ್ಲಿ ಬಂಡವಾಳ ವೆಚ್ಚವನ್ನು (Capital Expenditure) ಶೇ 35.4ರಷ್ಟು ಹೆಚ್ಚಿಸಲಾಗಿದೆ. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು ₹ 10.9 ಲಕ್ಷ ಕೋಟಿ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧರಿಸಿದೆ.

  • 01 Feb 2022 11:57 AM (IST)

    ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ

    ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ.

  • 01 Feb 2022 11:56 AM (IST)

    ಈವರೆಗಿನ ಅತಿಮುಖ್ಯ ಘೋಷಣೆಗಳು

    1) ದೇಶದಲ್ಲಿ ಸಹಜ ಕೃಷಿಗೆ ಒತ್ತು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಣ್ಣ ಉದ್ಯಮಿಗಳ ಸಹಭಾಗಿತ್ವದ ಯೋಜನೆಗಳಿಗೆ ಅವಕಾಶ.
    2) ಪ್ರವಾಸೋದ್ಯಮದ ಚೇತರಿಕೆಗೆ ಪ್ರೋತ್ಸಾಹಕಗಳ ಮುಂದುವರಿಕೆ.
    3) ಯುವಜನರಲ್ಲಿ ಕೌಶಲ ಅಭಿವೃದ್ಧಿಗೆ DESH ಇ-ಪೋರ್ಟಲ್ ಆರಂಭ.
    4) ಒನ್​ ಕ್ಲಾಸ್, ಒನ್ ಟಿವಿ ಚಾನೆಲ್ ಯೋಜನೆಯನ್ನು 1ರಿಂದ 12ನೇ ತರಗತಿವರೆಗೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸಲು ನಿರ್ಧಾರ.
    5) ವಿಶ್ವಮಟ್ಟದ ಶಿಕ್ಷಣ ದೊರಕಿಸಲು ಡಿಜಿಟಲ್ ವಿಶ್ವವಿದ್ಯಾಲಯ ಆರಂಭ.
    6) ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಯೋಜನೆ ಆರಂಭ.

  • 01 Feb 2022 11:55 AM (IST)

    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಸಹಕಾರ

    ಅರಣ್ಯ ಕೃಷಿ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಸಹಕಾರ ನೀಡಲಾಗುವುದು.

  • 01 Feb 2022 11:53 AM (IST)

    ಇಂಧನ ಉಳಿತಾಯ ಯೋಜನೆಗಳಿಗೆ ಉತ್ತೇಜಿಸಲು ಸ್ಕೀಮ್

    ಇಂಧನ ಉಳಿತಾಯ ಯೋಜನೆಗಳಿಗೆ ಉತ್ತೇಜಿಸಲು ಸ್ಕೀಮ್ ಜಾರಿಗೊಳಿಸಲಾಗುವುದು. ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಇಂಧನ ಉಳಿತಾಯಕ್ಕೆ ಸ್ಕೀಮ್ ಜಾರಿಯಾಗುವುದು.

  • 01 Feb 2022 11:51 AM (IST)

    ಸೋಲಾರ್‌ ವಿದ್ಯುತ್ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ ಆದ್ಯತೆ

    ಸೋಲಾರ್‌ ವಿದ್ಯುತ್ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. 19,500 ಕೋಟಿ ಅನುದಾನ ಜತೆ ಸೋಲಾರ್ ಕ್ಷೇತ್ರಕ್ಕೆ ಸಾಥ್ ನೀಡಿದೆ.

  • 01 Feb 2022 11:50 AM (IST)

    Defence: ದೇಶೀ ಕೈಗಾರಿಕೆಗಳಿಗೆ ಇನ್ನಷ್ಟು ಅವಕಾಶ

    ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒತ್ತು ನೀಡಲಿದೆ. ಡಿಆರ್​ಡಿಒ ಸಹಯೋಗದಲ್ಲಿ ಸಂಶೋಧನೆಗಳನ್ನು ನಡೆಸಲು ಆಸಕ್ತರಿಗೆ ಅವಕಾಶ ನೀಡಲಾಗುವುದು. ಭದ್ರತೆಗೆ ಅಗತ್ಯವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು. ಅಗತ್ಯ ಅನುಕೂಲಗಳನ್ನೂ ಕಲ್ಪಿಸಲಾಗುವುದು.

  • 01 Feb 2022 11:50 AM (IST)

    Health: ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ

    ದೇಶದಲ್ಲಿ ಲಭ್ಯವಿರುವ ಎಲ್ಲ ವೈದ್ಯಕೀಯ ಸೇವೆಗಳ ವಿವರಗಳನ್ನು ಆನ್​ಲೈನ್​ನಲ್ಲಿ ಒದಗಿಸುವ ಮಹತ್ವದ ಘೋಷಣೆಯನ್ನು ಬಜೆಟ್​ ಮೂಲಕ ಕೇಂದ್ರ ಸರ್ಕಾರ ಮಾಡಿದೆ. ಈ ಯೋಜನೆಯನ್ವಯ ರಾಷ್ಟ್ರೀಯ ವೈದ್ಯಕೀಯ ಸೇವೆಗಳ (National Digital Health Ecosystem) ಸಮಗ್ರ ವಿವರಗಳನ್ನು ಒದಗಿಸುv ಆನ್​ಲೈನ್ ವೇದಿಕೆಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸೇವೆಗಳ ಸಮಗ್ರ ಮಾಹಿತಿ ಲಭ್ಯವಾಗಲಿದೆ. ವಿಶಿಷ್ಟ ಆರೋಗ್ಯ ಗುರುತು ಸಂಖ್ಯೆ (unique health identity) ಮತ್ತು ಸಾರ್ವತ್ರಿಕ ಆರೋಗ್ಯ ಸೇವೆಗಳ ಮಾಹಿತಿಯೂ ಇದರಲ್ಲಿ ಲಭ್ಯವಾಗಲಿದೆ.

  • 01 Feb 2022 11:50 AM (IST)

    2025ರೊಳಗೆ ಎಲ್ಲಾ ಹಳ್ಳಿಯಲ್ಲಿ OFC ಕೇಬಲ್ ಅಳವಡಿಕೆ

    ಪ್ರತೀ ಹಳ್ಳಿಗಳಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ ನೀಡಲಾಗುವುದು. 2025ರೊಳಗೆ ಎಲ್ಲಾ ಹಳ್ಳಿಯಲ್ಲಿ OFC ಕೇಬಲ್ ಅಳವಡಿಕೆ ಮಾಡಲಾಗುವುದು.

  • 01 Feb 2022 11:49 AM (IST)

    2022ರಲ್ಲೆ ದೇಶದಲ್ಲಿ 5G ಸೇವೆ ಆರಂಭವಾಗಲಿದೆ

    2022ರಲ್ಲೇ 5G ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಯುತ್ತದೆ. 2022ರಲ್ಲಿ ದೇಶದಲ್ಲಿ 5G ಸೇವೆ ಆರಂಭವಾಗಲಿದೆ. ದೇಶದ ಪ್ರತಿ ಹಳ್ಳಿಗೆ ಫೈಬರ್ ಆಪ್ಟಿಕಲ್ ಕೇಬಲ್ ಅಳವಡಿಕೆ ಮಾಡಲಾಗುವುದು. 5Gಯಲ್ಲೂ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ ಯೋಜನೆ ಮಾಡಲಾಗುವುದು.

  • 01 Feb 2022 11:45 AM (IST)

    Health: ಮಾನಸಿಕ ಆರೋಗ್ಯಕ್ಕೆ ವಿಶೇಷ ಒತ್ತು

    ಕೊರೊನಾ ಪಿಡುಗಿನ ನಂತರ ದೇಶದಲ್ಲಿ ಹೆಚ್ಚಾಗಿರುವ ಮಾನಸಿಕ ಸಮಸ್ಯೆಗಳ ನಿರ್ವಹಣೆಗೆ ಸರ್ಕಾರ ಗಮನ ಹರಿಸಿದೆ. ಬೆಂಗಳೂರಿನ ನಿಮ್ಹಾನ್ಸ್​ ನೇತೃತ್ವದಲ್ಲಿ ರಾಷ್ಟ್ರೀಯ ಮೆಂಟಲ್ ಟೆಲಿ ಹಬ್ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

  • 01 Feb 2022 11:45 AM (IST)

    5G ಮೊಬೈಲ್ ಸೇವೆ ಜಾರಿಗೆ ತರಲು ಕೇಂದ್ರದ ತೀರ್ಮಾನ

    5G ಮೊಬೈಲ್ ಸೇವೆ ಜಾರಿಗೆ ತರಲು ಕೇಂದ್ರ ಸರ್ಕಾರ  ತೀರ್ಮಾನ ಮಾಡಿದೆ. ಟೆಲಿಕಾಮ್‌ ಕ್ಷೇತ್ರದಲ್ಲಿ 5ಜಿ ಸೇವೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಪ್ರತೀ ಹಳ್ಳಿಗಳಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ ನೀಡಲಾಗುವುದು.

  • 01 Feb 2022 11:44 AM (IST)

    ಕೇಂದ್ರದಲ್ಲಿ ಯೋಜನೆಗಳ ನಿರ್ವಹಣೆಗಾಗಿ E-ಬಿಲ್ ವ್ಯವಸ್ಥೆ

    ಕೇಂದ್ರದಲ್ಲಿ ಯೋಜನೆಗಳ ನಿರ್ವಹಣೆಗಾಗಿ E-ಬಿಲ್ ವ್ಯವಸ್ಥೆ ಮಾಡಲಾಗುತ್ತದೆ. ಗುತ್ತಿಗೆದಾರರು ಇ-ಬಿಲ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಕಾಗದ ರಹಿತ ಪ್ರಕ್ರಿಯೆ ಜಾರಿಗೊಳಿಸಲು ಇ-ಬಿಲ್ ಸ್ಕೀಮ್ ಜಾರಿಯಾಗುತ್ತದೆ.

  • 01 Feb 2022 11:44 AM (IST)

    ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೊಳಿಸಲು ತೀರ್ಮಾನ

    ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೊಳಿಸಲು ತೀರ್ಮಾನ ಮಾಡಲಾಗಿದೆ. ಗ್ರೀನ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಉತ್ತೇಜನಕ್ಕಾಗಿ ಯೋಜನೆ ಮಾಡಲಾಗುವುದು.

  • 01 Feb 2022 11:43 AM (IST)

    ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಜಾರಿ

    ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಜಾರಿಮಾಡಲಾಗುವುದು. ಚಾರ್ಜ್ ಆಗಿರುವ ಬ್ಯಾಟರಿ ಬದಲಾವಣೆಗೆ ಸ್ಟೇಷನ್ ಓಪನ್ ಮಾಡಲಾಗುವುದು. ಬ್ಯಾಟರಿ ಸ್ವ್ಯಾಪಿಂಗ್‌ಗೆ ನೀತಿ ಜಾರಿ ಮಾಡಾಗುತ್ತದೆ ಎಂದು ತಿಳಿಸಿದ ಸಚಿವೆ, ನಗರಾಭಿವೃದ್ಧಿಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

  • 01 Feb 2022 11:41 AM (IST)

    ಚಿಪ್ ಒಳಗೊಂಡ ಇ-ಪಾಸ್‌ಪೋರ್ಟ್ ಜಾರಿ

    ಇ-ಪಾಸ್‌ಪೋರ್ಟ್ 2023ರಲ್ಲಿ ಜಾರಿಗೊಳಿಸಲಾಗುವುದು. ಚಿಪ್ ಒಳಗೊಂಡ ಇ-ಪಾಸ್‌ಪೋರ್ಟ್ ಜಾರಿಗೊಳಿಸಲಾಗುವುದು. ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್‌ಪೋರ್ಟ್ ಜಾರಿಯಾಗುತ್ತದೆ. MSMEಗಳಿಗೆ 6 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಮುಂದಿ 5 ವರ್ಷದಲ್ಲಿ 6 ಸಾವಿರ ಕೋಟಿ ನೀಡಲಾಗುವುದು.

  • 01 Feb 2022 11:40 AM (IST)

    ಈಸ್ ಆಫ್‌ ಡೂಯಿಂಗ್ ಬ್ಯುಸಿನೆಸ್‌ಗೂ ಹೆಚ್ಚಿನ ಉತ್ತೇಜನ

    ಈಸ್ ಆಫ್‌ ಡೂಯಿಂಗ್ ಬ್ಯುಸಿನೆಸ್‌ಗೂ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಈಸ್ ಆಫ್‌ ಲಿವಿಂಗ್‌ ಉದ್ದೇಶದಲ್ಲಿಯೂ ಕೆಲವು ಯೋಜನೆಗಳು ಜಾರಿಯಾಗುತ್ತವೆ. ಏಕಗವಾಕ್ಷಿ ಯೋಜನೆಯಲ್ಲಿ ಜನಕ್ಕೆ ಎಲ್ಲಾ ಸೇವೆ ಅನುಕೂಲವಾಗಲಿದೆ. ಈ ಬಾರಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ 2.O ಜಾರಿಗೊಳಿಸಲಾಗುವುದು.

  • 01 Feb 2022 11:38 AM (IST)

    ಗ್ರಾಮ ಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನ

    ಗ್ರಾಮ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ವಿಶೇಷ ಅನುದಾನ ನೀಡಲು ನಿರ್ಧರಿಸಿದೆ. ಗಡಿಪ್ರದೇಶಗಳ ಗ್ರಾಮಗಳ ಮೂಲಸೌಕರ್ಯಕ್ಕೆ ಆರ್ಥಿಕ ನೆರವು ನೀಡಲಾಗುವುದು. ಎಲ್ಲಾ ಪೋಸ್ಟ್‌ ಆಫಿಸ್‌ಗಳಲ್ಲೂ ಬ್ಯಾಂಕಿಂಗ್‌ ವ್ಯವಸ್ಥೆಗೆ ಯೋಜನೆ ಮಾಡಲಾಗುವುದು. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‌ಗಳನ್ನು ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.

  • 01 Feb 2022 11:36 AM (IST)

    Agriculture: ಸಹಜ ಕೃಷಿಗೆ ಒತ್ತು

    ದೇಶದಲ್ಲಿ ರಾಸಾಯನಿಕ ಮುಕ್ತ ಸಹಜ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು. ಇದಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಎಣ್ಣೆಕಾಳುಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಬೆಳೆ ಅಂದಾಜು, ಕೀಟನಾಶಕ ಸಿಂಪಡಣೆಗೆ ಡ್ರೋನ್ ಬಳಕೆಗೆ ಅವಕಾಶ ನೀಡಲಾಗುವುದು. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ 2023 ಘೋಷಿಸಲಾಗುವುದು.

  • 01 Feb 2022 11:36 AM (IST)

    2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ

    2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದ ಸಚಿವೆ, 3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. 2020-23ರಲ್ಲಿ 80 ಲಕ್ಷ ಮನೆ ನಿರ್ಮಾಣ ಪೂರ್ಣ ಮಾಡಲಾಗುತ್ತದೆ. ಪಿಎಂ ಅವಾಸ್ ಯೋಜನೆಗೆ 48 ಸಾವಿರ ಕೋಟಿ ರೂ. ನೀಡಲಾಗಿದೆ.

  • 01 Feb 2022 11:34 AM (IST)

    ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್‌ ಪ್ರೋಗ್ರಾಮ್ ಘೋಷಣೆ

    ಕೇಂದ್ರ ಸರ್ಕಾರ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್‌ ಪ್ರೋಗ್ರಾಮ್ ಘೋಷಣೆ ಮಾಡಿದೆ. ನಿಮ್ಹಾನ್ಸ್ ನೋಡೆಲ್ ಕೇಂದ್ರವನ್ನಾಗಿಸಿ ಹೆಲ್ತ್ ಪ್ರೋಗ್ರಾಮ್ ಘೋಷಣೆ ಮಾಡಲಾಗಿದೆ. ಕೊರೊನಾ ಕಾಲದಲ್ಲಿ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕೀಮ್ ಮಾಡಲಾಗಿದೆ.

  • 01 Feb 2022 11:31 AM (IST)

    ಕನಿಷ್ಠ ಬೆಂಬಲ ಬೆಲೆ ನೀಡಿಕೆಗೆ ₹2.37 ಲಕ್ಷ ಕೋಟಿ: ನಿರ್ಮಲಾ

    ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸಲು ಕೇಂದ್ರ ಸರ್ಕಾರವು ₹ 2.37 ಲಕ್ಷ ಕೋಟಿ ಮೊತ್ತವನ್ನು ಮೀಸಲಿಟ್ಟಿದೆ.

  • 01 Feb 2022 11:29 AM (IST)

    2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ

    2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ಜಾರಿಮಾಡಲಾಗುವುದು.

  • 01 Feb 2022 11:28 AM (IST)

    MSME: ಸಾಲಖಾತ್ರಿ ಯೋಜನೆಗಳ ಅವಧಿ ವಿಸ್ತರಣೆ

    ಕೊರೊನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅನುಕೂಲಕ್ಕಾಗಿ ಜಾರಿಗಳಿಸಿದ್ದ ಎಲ್ಲ ಸಾಲಖಾತ್ರಿ ಯೋಜನೆಗಳನ್ನು ಇನ್ನೂ ಒಂದು ಆರ್ಥಿಕ ವರ್ಷದ ಅವಧಿಗೆ ವಿಸ್ತರಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ದಿಮೆಗಳಿಗೆ ತುರ್ತು ಸಾಲದ ಬೆಂಬಲ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಕೊರೊನಾ ಮುಂಚಿನ ಸ್ಥಿತಿಗೆ ತರುವಲ್ಲಿ ಸರ್ಕಾರವು ಎಲ್ಲ ನೆರವು ಒದಗಿಸಲಿದೆ.

  • 01 Feb 2022 11:28 AM (IST)

    200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ

    ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ  ಒನ್ ಕ್ಲಾಸ್‌ ಒನ್ ಟಿವಿ ಚಾನೆಲ್ ಯೋಜನೆ ಜಾರಿಗೆ ಕೇಂದ್ರ ನಿರ್ಧರಿಸಿದೆ. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ ಮಾಡಲಾಗಿದೆ. ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಚಾನೆಲ್​ಸ್ ಜಾರಿಯಾಗುವುದು.

  • 01 Feb 2022 11:26 AM (IST)

    ಒನ್ ಕ್ಲಾಸ್, ಒನ್ ಟಿವಿ ಚಾನಲ್-ನಿರ್ಮಲಾ

    ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮಾಡಲಾಗುವುದು  ಒನ್ ಕ್ಲಾಸ್, ಒನ್ ಟಿವಿ ಚಾನಲ್ ಮಾಡಲಾಗುವುದು ಅಂತ ಸಚಿವೆ ತಿಳಿಸಿದ್ದಾರೆ.

  • 01 Feb 2022 11:24 AM (IST)

    ಬಜೆಟ್​ನ 7 ಮೂಲಾಧಾರಗಳು

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಬಜೆಟ್​ನ ಅತಿಮುಖ್ಯ ಅಂಶಗಳು ಇವು:
    1) ಪಿಎಂ ಗತಿಶಕ್ತಿ.
    2) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ.
    3) ಉತ್ಪಾದಕತೆಯ ವೃದ್ಧಿ.
    4) ಅವಕಾಶಗಳ ಹೆಚ್ಚಳ.
    5) ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ.
    6) ಪರಿಸರ ಸಂರಕ್ಷಣೆ.
    7) ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು.

  • 01 Feb 2022 11:23 AM (IST)

    ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಕ್ರಮ

    ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಕ್ರಮಕೈಗೊಂಡಿದೆ. 50 ಸಾವಿರ ಕೋಟಿಯಿಂದ 5 ಲಕ್ಷ ಕೋಟಿ ವಹಿವಾಟಿಗೆ ಸಾಥ್ ನೀಡಿದೆ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯಕ್ಕೆ ಯೋಚನೆ ಮಾಡಲಾಗುವುದು.

  • 01 Feb 2022 11:22 AM (IST)

    ಖಾದ್ಯ ತೈಲ ಆಮದು ಕಡಿಮೆ ಮಾಡಲು ಪ್ರೋತ್ಸಾಹ

    ಖಾದ್ಯ ತೈಲ ಆಮದು ಕಡಿಮೆ ಮಾಡಲು ಪ್ರೋತ್ಸಾಹ ನೀಡಲಾಗಿದೆ. ಭೂ ದಾಖಲೆಗಳು ಡಿಜಿಟಲೀಕರಣ ಮಾಡಲಾಗುವುದು. ಬೆಳೆ ಮೌಲ್ಯಮಾಪನಕ್ಕೆ ಕಿಸಾನ್ ಡ್ರೋನ್ ಬಳಕೆ ಮಾಡಲಾಗುವುದು.

  • 01 Feb 2022 11:21 AM (IST)

    ಕಾವೇರಿ-ಪೆನ್ನಾರ್ ನದಿ ಜೋಡಣೆಗೆ ಗ್ರೀನ್ ಸಿಗ್ನಲ್

    ಕಾವೇರಿ-ಪೆನ್ನಾರ್ ನದಿ ಜೋಡಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ
    ನದಿಗಳ ಜೋಡಣೆಗೆ ಗ್ರೀನ್ ಸಿಗ್ನಲ್ ದೊರಕಿದೆ. ಕೆನ್-ಬೆಟ್ವಾ ಜೋಡಣೆ ಯೋಜನೆಯನ್ನು ₹ 44,605 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆ ಜಾರಿಯಾದರೆ 9 ಲಕ್ಷ ಹೆಕ್ಟೇರ್​ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.

  • 01 Feb 2022 11:20 AM (IST)

    ಸರಕು ಸಾಗಣೆಗೆ ಪ್ರಾಮುಖ್ಯತೆ

    ಆರ್ಥಿಕ ಪ್ರಗತಿಗೆ ಅತ್ಯಗತ್ಯವಾಗಿ ಬೇಕಿರುವ ಕಾರ್ಗೊ ಟರ್ಮಿನಲ್​ಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ 100 ಕಾರ್ಗೋ ಟರ್ಮಿನಲ್​ಗಳನ್ನು ನಿರ್ಮಿಸಲಾಗುವುದು ಎಂದು ಸಚಿವೆ ನಿರ್ಮಲಾ ತಿಳಿಸಿದರು.

  • 01 Feb 2022 11:18 AM (IST)

    3 ವರ್ಷದಲ್ಲಿ 100 ಕಾರ್ಗೋ ಟರ್ಮಿನಲ್ ನಿರ್ಮಾಣ: ನಿರ್ಮಲಾ

    3 ವರ್ಷದಲ್ಲಿ 100 ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಪಿಎಂ ಗತಿ ಶಕ್ತಿ ಯೋಜನೆಯಡಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು.

  • 01 Feb 2022 11:16 AM (IST)

    2023 ಅಂತಾರಾಷ್ಟ್ರೀಯ ಮಿಲೆಟ್ಸ್‌ ವರ್ಷವೆಂದು ಘೋಷಣೆ

    2023 ಅಂತಾರಾಷ್ಟ್ರೀಯ ಮಿಲೆಟ್ಸ್‌ ವರ್ಷವೆಂದು ಘೋಷಣೆ ಮಾಡಲಾಗಿದೆ.

  • 01 Feb 2022 11:16 AM (IST)

    ರೈತರಿಗೆ ಹಲವು ಅನುಕೂಲ

    ಮುಂದಿನ ಆರ್ಥಿಕ ವರ್ಷದಲ್ಲಿ (2022-23) ದೇಶದಲ್ಲಿ ಒಟ್ಟು 25 ಸಾವಿರ ಕಿಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ರೈತರಿಗಾಗಿ ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಯೋಜನೆ ಅನುಷ್ಠಾನಗೊಳಿಸಲಾಗುವುದು. ನಾಲ್ಕು ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪಿಸಲಾಗುವುದು.

  • 01 Feb 2022 11:15 AM (IST)

    ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು

    ಮುಂದಿನ ದಿನಗಳಲ್ಲಿ ಮೂಲಸೌಕರ್ಯ ಒದಗಿಸಲು ಸರ್ಕಾರ ಮಾಡುವ ವೆಚ್ಚಕ್ಕೆ ಎರಡು ಉದ್ದೇಶಗಳಿರುತ್ತವೆ. ಒಂದು ಅದು ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಅಗತ್ಯವಿರುವ ಯೋಜನೆಗಳ ಮೇಲೆ ಹಣ ವಿನಿಯೋಗಿಸುತ್ತದೆ. ಎರಡನೆಯದಾಗಿ ಅದು ಭವಿಷ್ಯದ ಅಗತ್ಯಗಳನ್ನು ಮನಗಂಡ ನಂತರವೇ ಹಣ ಹೂಡಿಕೆ ಮಾಡುತ್ತದೆ.

  • 01 Feb 2022 11:15 AM (IST)

    ಶೇ 9 ಮೀರಿದ ವೃದ್ಧಿದರದ ಕನಸು

    ದೇಶದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆ ಸರಾಸರಿಯು ಶೇ 9.2 ಮುಟ್ಟುವ ಕನಸು ಇದೆ. ಇದು ವಿಶ್ವದ ಎಲ್ಲ ಬೃಹತ್ ಆರ್ಥಿಕತೆಗಳಲ್ಲಿಯೇ ಗರಿಷ್ಠ ಮಟ್ಟದ್ದು. ನಾವು ನಮ್ಮೆಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ.

  • 01 Feb 2022 11:14 AM (IST)

    400 ವಂದೇಭಾರತ್‌ ರೈಲುಗಳು ಘೋಷಣೆ

    ಹೊಸದಾಗಿ ಈ ಸಲ 400 ವಂದೇಭಾರತ್‌ ರೈಲುಗಳು ಘೋಷಣೆ ಮಾಡಲಾಗಿದೆ.

  • 01 Feb 2022 11:14 AM (IST)

    ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ-ನಿರ್ಮಲಾ

    2022-23ರಲ್ಲಿ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರೈತರಿಗೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಯೋಜನೆ ಮಾಡಲಾಗುವುದು. 4 ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.

  • 01 Feb 2022 11:11 AM (IST)

    ಪಿಎಂ ಗತಿಶಕ್ತಿ ಮಾಸ್ಟರ್​ ಪ್ಲಾನ್

    ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್​ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ.

  • 01 Feb 2022 11:10 AM (IST)

    ಈಗಾಗಲೇ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ-ನಿರ್ಮಲಾ

    ಈಗಾಗಲೇ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾತನಾಡಿದ ಸಚಿವೆ ನಿರ್ಮಲಾ, 14 ಕ್ಷೇತ್ರಗಳ ಪಿಎಲ್‌ಐಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

  • 01 Feb 2022 11:09 AM (IST)

    2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆ-ನಿರ್ಮಲಾ

    2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ. ಎಲ್ಲ ಅವಕಾಶ ಬಳಸಿಕೊಂಡು ಬಡವರಿಗೆ ಸಹಾಯ ಮಾಡಲಾಗುವುದು. ಕಳೆದ ವರ್ಷದ ಬಜೆಟ್ ಘೋಷಣೆಯಿಂದ ಪ್ರಗತಿಯಾಗಿದೆ. ಸದ್ಯದಲ್ಲೇ ಎಲ್‌ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುವುದು. ಮುಂದಿನ 25 ವರ್ಷ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಅಂತ ನಿರ್ಮಲಾ ಹೇಳಿದರು.

  • 01 Feb 2022 11:07 AM (IST)

    ಈ ಸಲದ ಬಜೆಟ್ 25 ವರ್ಷಗಳ ಮಾರ್ಗದರ್ಶಿ

    ನಾನು ಇಂದು ಮಂಡಿಸುತ್ತಿರುವ ನಮ್ಮ ಸರ್ಕಾರದ ಬಜೆಟ್​ ಭಾರತದ ದೇಶದ ಮುಂದಿನ 25 ವರ್ಷಗಳ ಮಾರ್ಗದರ್ಶಿಯಾಗಿರಲಿದೆ. ಭಾರತವು ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವ ಹೊತ್ತಿಗೆ ಯಾವ ಸ್ಥಿತಿಯಲ್ಲಿ ಇರಬೇಕು ಎನ್ನುವುದನ್ನು ಈ ಬಜೆಟ್​ ಕೈದೀವಿಗೆಯಾಗಿ ಮಾರ್ಗದರ್ಶನ ಮಾಡಲಿದೆ. ನಮ್ಮ ಕನಸುಗಳನ್ನು ಪ್ರತಿಬಿಂಬಿಸುತ್ತದೆ.

  • 01 Feb 2022 11:07 AM (IST)

    ಆಜಾದಿ ಅಮೃತ ಮಹೋತ್ಸವ ಪ್ರಸ್ತಾಪ

    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಮ್ಮ ಸರ್ಕಾರವು ದೇಶದ ಆರ್ಥಿಕ ಅಭಿವೃದ್ಧಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮಧ್ಯಮ ವರ್ಗಕ್ಕೆ ಅಗತ್ಯ ಸವಲತ್ತು ಒದಗಿಸಲು ಯತ್ನಿಸುತ್ತಿದೆ.

  • 01 Feb 2022 11:02 AM (IST)

    ಲೋಕಸಭೆಯಲ್ಲಿ ಬಟೆಟ್ ಕಲಾಪ ಆರಂಭ

    ಸ್ಪೀಕರ್ ಓಂ ಬಿರ್ಲಾ ಲೋಕಸಭೆಗೆ ಆಗಮಿಸಿದ್ದಾರೆ.  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಬಜೆಟ್​ ಮಂಡಿಸಲು ಸೂಚನೆ ನೀಡಿದರು. ಸ್ಪೀಕರ್​ಗೆ ಎರಡೂ ಕೈ ಎತ್ತಿ ಮುಗಿದು ಸಚಿವೆ ಬಜೆಟ್ ಮಂಡನೆ ಆರಂಭಿಸಿದ್ದಾರೆ.

  • 01 Feb 2022 11:01 AM (IST)

    ಷೇರುಪೇಟೆಯಲ್ಲಿ ನಿರೀಕ್ಷೆಯ ಉಲ್ಲಾಸ: ಏರುತ್ತಿದೆ ಸೂಚ್ಯಂಕ

    ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಆರ್ಥಿಕ ಸದೃಢತೆಯ ಆಧಾರ ಎನಿಸಿರುವ ಷೇರುಪೇಟೆಯಲ್ಲಿ ನಿರೀಕ್ಷೆ ಗರಿಗೆದರಿದೆ. ಬಜೆಟ್​ನ ಮೊದಲ ಪ್ರತಿಕ್ರಿಯೆ ಎಂದು ಷೇರುಪೇಟೆ ವಿದ್ಯಮಾನಗಳನ್ನು ವಿಶ್ಲೇಷಿಸುವುದು ವಾಡಿಕೆ. ಬೆಳಿಗ್ಗೆ 10.48ರ ಅವಧಿಯಲ್ಲಿ ಮುಂಬೈ ಪೇಟೆಯ ಸೆನ್ಸೆಕ್ಸ್ (ಬಿಎಸ್​ಇ) 806 ಅಂಶಗಳ ಏರಿಕೆ ಕಂಡು 58,820 ಮುಟ್ಟಿತ್ತು. ರಾಷ್ಟ್ರೀಯ ಸೂಚ್ಯಂಕ (ನಿಫ್ಟಿ) 224 ಅಂಶಗಳ ಏರಿಕೆ ದಾಖಲಿಸಿ 17,564ರಲ್ಲಿ ವಹಿವಾಟು ನಡೆಸುತ್ತಿತ್ತು. 1919 ಪ್ರಮುಖ ಕಂಪನಿಗಳ ಷೇರುಗಳ ಮೌಲ್ಯ ವೃದ್ಧಿಯಾಗಿದೆ.

  • 01 Feb 2022 11:00 AM (IST)

    ಸಿಂಪಲ್ ನಿರ್ಮಲಾ: ಬಿಳಿ ಅಂಚಿನ ಸುಂದರ ವಿನ್ಯಾಸ

    ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದು ಎನಿಸಿರುವ ಭಾರತದ ಬಜೆಟ್​ ಅನ್ನು ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತದೆ. ವಿಶ್ವದ ಬಹುತೇಕ ಮಾಧ್ಯಮಗಳಲ್ಲಿ ಭಾರತದ ಬಜೆಟ್​ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇಂಥ ಬಜೆಟ್ ಮಂಡಿಸುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹಜವಾಗಿಯೇ ಎಲ್ಲ ಗಮನ ಸೆಳೆಯುವ ಕೇಂದ್ರಬಿಂದು ಎನಿಸಿದ್ದಾರೆ.

    ಬಜೆಟ್ ಮಂಡನೆಯ ದಿನ ಸಚಿವರು ಉಟ್ಟಿರುವ ಸೀರೆ ಗಮನ ಸೆಳೆದಿದೆ. ಬಿಳಿ ಅಂಚಿನ, ಕೆಂಪು ಛಾಯೆಯ ಬೂದು ಬಣ್ಣದ ಸೀರೆಯ ಆಯ್ಕೆಯ ಬಗ್ಗೆಯೂ ಕೆಲ ಮಾಧ್ಯಮಗಳು ಚರ್ಚಿಸುತ್ತಿವೆ. ಬೂದು, ಕೆಂಪು ಮತ್ತು ಬಿಳಿ ಬಣ್ಣಗಳು ವಿಶ್ವಾಸಾರ್ಹತೆ, ಭದ್ರತೆ ಮತ್ತು ಸರುಕ್ಷೆಯನ್ನು ಬಿಂಬಿಸುತ್ತವೆ. ಈ ಸೀರೆಗೆ ಬಳಕೆಯಾಗಿರುವ ಬೂದು ಛಾಯೆಯ ಕೆಂಪು ಅಧಿಕಾರದೊಂದಿಗೆ ಬರುವ ಪ್ರೀತಿಯ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.

  • 01 Feb 2022 10:52 AM (IST)

    ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ಸಿಗಲಿದೆ: ಆರೋಗ್ಯ ಸಚಿವ ಸುಧಾಕರ್ ಹೇಳಿಕೆ

    ಕೇಂದ್ರ ಬಜೆಟ್ ಮಂಡನೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ನಾವು ಹಲವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೊವಿಡ್ ಸಂದರ್ಭದಲ್ಲಿ ಹೆಚ್ಚಿನ ಒತ್ತು ನೀಡಿದ್ದರು. ಎಲ್ಲ ಬೆಳವಣಿಗೆಗೆ ಒತ್ತು ನೀಡುತ್ತಾರೆ. ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಮಹಿಳೆ,ಯುವಜನತೆಗೂ ಒಳ್ಳೆಯ ಅಯವ್ಯಯ ಸಿಗಲಿದೆ. ಪ್ರಧಾನಿ ಆಶಯಗಳಿಗೆ ಅನುಗುಣವಾಗಿ ಅಯವ್ಯಯ ಇರಲಿದೆ. 850 ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಿದ್ದರು. ವಿಶೇಷವಾಗಿ ಟೆಸ್ಟಿಂಗ್​ಗೆ ನೆರವು  ಕೊಡಬೇಕಿದೆ.  ಶೇ15 ರಿಂದ ಶೇ.20 ರಷ್ಟು ಹೆಚ್ಚು ಮಾಡಬೇಕು ಅಂತ ತಿಳಿಸಿದರು.

  • 01 Feb 2022 10:43 AM (IST)

    ದೇಶದ ಅತಿಮುಖ್ಯ ನಿರೀಕ್ಷೆಗಳು

    ಆದಾಯ ತೆರಿಗೆ ವಿನಾಯತಿ ಹೊರತುಪಡಿಸಿ ಕೇಂದ್ರ ಬಜೆಟ್​ನಿಂದ ಈ ಬಾರಿ ದೇಶ ಮುಖ್ಯವಾಗಿ ಗಮನಿಸುತ್ತಿರುವ ಅಂಶಗಳಿವು. ಕೊವಿಡ್ ನಿರ್ವಹಣೆಗೆ ಅನುದಾನ, ವಿತ್ತೀಯ ಕೊರತೆ ನಿರ್ವಹಣೆಗೆ ತೆಗೆದುಕೊಳ್ಳುವ ಕ್ರಮಗಳು, ಆರ್ಥಿಕ ಶಿಸ್ತು ಕಾಪಾಡಲು ಅನುಸರಿಸುವ ನೀತಿ. ಖಾಸಗೀಕರಣ, ಬಂಡವಾಳ ಹಿಂತೆಗೆತ, ಬಂಡವಾಳ ಹೂಡಿಕೆ, ತೆರಿಗೆ ಸಂಗ್ರಹ, ಹೊಸ ಸಾಲಗಳ ಪ್ರಸ್ತಾವ.

  • 01 Feb 2022 10:42 AM (IST)

    ಸಚಿವ ಸಂಪುಟ ಸಭೆ ಮುಕ್ತಾಯ

    ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿಟ್ಟ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

  • 01 Feb 2022 10:41 AM (IST)

    ಲೋಕಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮತಿ

    ಲೋಕಸಭೆಯಲ್ಲಿ ಬಜೆಟ್ ಮಂಡನೆಗೆ ಸ್ಪೀಕರ್ ಅನುಮತಿ ನೀಡಿದ್ದಾರೆ.

  • 01 Feb 2022 10:35 AM (IST)

    ಆದಾಯ ತೆರಿಗೆ ವಿನಾಯಿತಿಗಳ ಮೇಲೆ ಸಾಮಾನ್ಯ ಜನರ ಕಣ್ಣು

    ಆದಾಯ ತೆರಿಗೆ ವಿನಾಯಿತಿಗಳ ಮೇಲೆ ಸಾಮಾನ್ಯ ಜನರ ಕಣ್ಣಿದೆ. ಕೃಷಿ ಕ್ಷೇತ್ರ ಉತ್ಪನ್ನಗಳ ಉದ್ದಿಮೆಗೆ ಹೆಚ್ಚಿನ ಉತ್ತೇಜನ ಸಾಧ್ಯತೆಯಿದೆ.

  • 01 Feb 2022 10:34 AM (IST)

    ನನಗೆ ಕೇಂದ್ರ ಬಜೆಟ್ ಮೇಲೆ ನಂಬಿಕೆ ಇಲ್ಲ: ಕುಮಾರಸ್ವಾಮಿ ಹೇಳಿಕೆ

    ನನಗೆ ಕೇಂದ್ರ ಬಜೆಟ್ ಮೇಲೆ ನಂಬಿಕೆ ಇಲ್ಲ ಅಂತ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೌಡ್ಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಹಲವು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕೇಂದ್ರ ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜ್ಯದ ಜನತೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಕೇಂದ್ರದ ನಡವಳಿಕೆ ಮೇಲೆ ನನಗೆ ನಂಬಿಕೆ ಇಲ್ಲ ಅಂತ ತಿಳಿಸಿದರು.

  • 01 Feb 2022 10:27 AM (IST)

    ಸಂಸತ್ ಭವನಕ್ಕೆ ಆಗಮಿಸಿದ ರಾಜ್ ನಾಥ್ ಸಿಂಗ್, ಅಮಿತ್ ಶಾ

    ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಹಿನ್ನೆಲೆ ರಾಜ್ ನಾಥ್ ಸಿಂಗ್, ಅಮಿತ್ ಶಾ ಸಂಸತ್ ಭವನಕ್ಕೆ ಆಗಮಿಸಿದ್ದಾರೆ.

  • 01 Feb 2022 10:09 AM (IST)

    ನಮ್ಮ ಆರ್ಥಿಕತೆ ಚೇತರಿಕೆಯಾಗುತ್ತಿದೆ-ಸಿಎಂ ಬೊಮ್ಮಾಯಿ

    ನಮ್ಮ ಆರ್ಥಿಕತೆ ಚೇತರಿಕೆಯಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆ, ಉದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡುವ ನಿರೀಕ್ಷೆ ಇದೆ. ಇಂದು ಕೇವಲ ಬಜೆಟ್ ಭಾಷಣ ಮಾಡುತ್ತಾರೆ. ಪೂರ್ಣಪ್ರಮಾಣದ ಮಾಹಿತಿ ತಿಳಿಯಲು 2 ದಿನ ಬೇಕು. ಇಲಾಖಾವಾರು ಮಾಹಿತಿ ತಿಳಿಯಲು 2 ದಿನ ಬೇಕಾಗುತ್ತದೆ ಎಂದು ತಿಳಿಸಿದರು.

  • 01 Feb 2022 10:07 AM (IST)

    ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭ

    ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಹಿನ್ನೆಲೆ ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಆರಂಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರಂಭವಾಗುತ್ತದೆ.

  • 01 Feb 2022 10:06 AM (IST)

    ಸಂಸತ್‌ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ

    ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಹಿನ್ನೆಲೆ ಸಂಸತ್‌ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಆಗಮಿಸಿದರು.

  • 01 Feb 2022 09:56 AM (IST)

    ಮಧ್ಯಾಹ್ನ 3.45ಕ್ಕೆ ವಿತ್ತ ಸಚಿವೆ ನಿರ್ಮಲಾ ಸುದ್ದಿಗೋಷ್ಠಿ

    ಬಜೆಟ್ ಮಂಡನೆ ಬಳಿಕ ಮಧ್ಯಾಹ್ನ 3.45ಕ್ಕೆ ವಿತ್ತ ಸಚಿವೆ ನಿರ್ಮಲಾ ಸುದ್ದಿಗೋಷ್ಠಿ ನಡೆಸುತ್ತಾರೆ.

  • 01 Feb 2022 09:56 AM (IST)

    ಬೆಳಗ್ಗೆ 10ಕ್ಕೆ ಬಜೆಟ್ ಪ್ರತಿ ಜತೆ ಸಂಸತ್‌ ಭವನಕ್ಕೆ ನಿರ್ಮಲಾ ಆಗಮನ

    ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಹಿನ್ನೆಲೆ ಬೆಳಗ್ಗೆ 10ಕ್ಕೆ ಬಜೆಟ್ ಪ್ರತಿ ಜತೆ ಸಂಸತ್‌ ಭವನಕ್ಕೆ ನಿರ್ಮಲಾ ಆಗಮಿಸಿದ್ದಾರೆ. ಬೆಳಗ್ಗೆ 10.10ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಸಿಗುತ್ತದೆ. ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸುತ್ತಾರೆ.

  • 01 Feb 2022 09:53 AM (IST)

    ಸಂಸತ್ ಭವನಕ್ಕೆ ಬಜೆಟ್ ಪ್ರತಿಗಳನ್ನು ತಂದ ಸಿಬ್ಬಂದಿ

    ಸಿಬ್ಬಂದಿ ಸಂಸತ್ ಭವನಕ್ಕೆ ಬಜೆಟ್ ಪ್ರತಿಗಳನ್ನು ತಂದರು. ಭದ್ರತಾ ಸಿಬ್ಬಂದಿ  ಬಜೆಟ್ ಪ್ರತಿಗಳ ಪರಿಶೀಲನೆ ಮಾಡಿದರು. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದಲೂ ಪರಿಶೀಲನೆ ನಡೆದಿದೆ.

  • 01 Feb 2022 09:52 AM (IST)

    ಬಜೆಟ್ ಮಂಡನೆಗೆ ರಾಷ್ಟ್ರಪತಿ ಅನುಮತಿ ಪಡೆದ ನಿರ್ಮಲಾ

    ರಾಷ್ಟ್ರಪತಿಯನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಅನುಮತಿ ಪಡೆದರು.

  • 01 Feb 2022 09:46 AM (IST)

    ಬಜೆಟ್ ಮಂಡನೆಗೂ ಮುನ್ನಾ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ

    ಬಜೆಟ್ ಮಂಡನೆಗೂ ಮುನ್ನಾ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ, ಬಜೆಟ್​ನಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಣೆ ನೀಡಿದ್ದಾರೆ.

  • 01 Feb 2022 09:45 AM (IST)

    ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆಯಾಗುವ ಸಾಧ್ಯತೆ

    ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆಯಾಗುವ ಸಾಧ್ಯತೆಯಿದೆ. 50 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗಬಹುದು. ಈ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಬಹುದು.

  • 01 Feb 2022 09:43 AM (IST)

    ದೆಹಲಿ-ಕೋಲ್ಕತ್ತಾಗೆ ಬುಲೆಟ್ ರೈಲು ಘೋಷಣೆ ಸಾಧ್ಯತೆ

    ಇಂದಿನ ಕೇಂದ್ರ ಬಜೆಟ್‌ನಲ್ಲಿ ದೆಹಲಿ-ಕೋಲ್ಕತ್ತಾಗೆ ಬುಲೆಟ್ ರೈಲು ಘೋಷಣೆ ಸಾಧ್ಯತೆಯಿದೆ.

  • 01 Feb 2022 09:42 AM (IST)

    ಬಜೆಟ್ ಗಾತ್ರ 35 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ

    ನಿರ್ಮಲಾ ಸೀತಾರಾಮನ್‌ ಇಂದು ಬಜೆಟ್ ಮಂಡಿಸುತ್ತಾರೆ. ಬಜೆಟ್ ಗಾತ್ರ 35 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆಯಿದೆ.

Published On - 8:30 am, Tue, 1 February 22

Follow us on