ಬಜೆಟ್​ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ

Prof. K.V. Subramanian explains consumption multiplier effect on economy: ಬಜೆಟ್​ನಲ್ಲಿ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ. 12 ಲಕ್ಷ ರೂ ವಾರ್ಷಿಕ ಆದಾಯ ಇರುವವರು ತೆರಿಗೆಯನ್ನೇ ಕಟ್ಟಬೇಕಿಲ್ಲ. ಈ ಕ್ರಮದಿಂದ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ. ಇದರಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ ಆರ್ಥಿಕ ತಜ್ಞರಾದ ಪ್ರೊಫೆಸರ್ ಕೃಷ್ಣಮೂರ್ತಿ ವಿ ಸುಬ್ರಮಣಿಯನ್.

ಬಜೆಟ್​ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ
ಆರ್ಥಿಕತೆ

Updated on: Feb 02, 2025 | 11:42 AM

ನವದೆಹಲಿ, ಫೆಬ್ರುವರಿ 2: ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಂಡಿಸಿದ ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಹೆಚ್ಚಿನ ಜನರು ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡಿದ್ದನ್ನು ಸ್ವಾಗತಿಸಿದ್ದಾರೆ. ಆದರೆ, ಇದರಿಂದೇನೂ ಆರ್ಥಿಕತೆಗೆ ದೊಡ್ಡ ಪರಿಣಾಮವೇನೂ ಆಗಲ್ಲ. ಮಧ್ಯಮವರ್ಗದವರ ಹೊರೆ ತುಸು ತಗ್ಗಬಹುದು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಇದೇ ಹೊತ್ತಲ್ಲಿ, ಬಜೆಟ್​ನಲ್ಲಿ ಮಾಡಿದ ಘೋಷಣೆಗಳಿಂದ, ಅದರಲ್ಲು ಆದಾಯ ತೆರಿಗೆ ದರಗಳ ಇಳಿಕೆಯಿಂದ ಆರ್ಥಿಕತೆಗೆ ಅದೆಂಥ ಪರಿಣಾಮ ತರಬಹುದು ಎನ್ನುವುದನ್ನು ಕೆಲ ನಿದರ್ಶನಗಳ ಸಮೇತವಾಗಿ ಆರ್ಥಿಕ ತಜ್ಞ ಪ್ರೊ. ಕೆ.ವಿ. ಸುಬ್ರಮಣಿಯನ್ ಅವರು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಆರ್ಥಿಕತೆಯಲ್ಲಿ ಬರುವ ಅನುಭೋಗ ಗುಣಕ ಅಥವಾ ಕನ್ಸಮ್ಷನ್ ಮಲ್ಟಿಪ್ಲಯರ್ ಎನ್ನುವ ತತ್ವದ ಮೂಲಕ ಬಜೆಟ್ ಪರಿಣಾಮವನ್ನು ವಿವರಿಸಿದ್ದಾರೆ ಅವರು. ಆದಾಯ ತೆರಿಗೆ ಕಡಿಮೆ ಮಾಡಿದ ಪರಿಣಾಮವಾಗಿ ಒಬ್ಬ ವ್ಯಕ್ತಿ 10,000 ರೂ ಉಳಿಸಿದರೆ, ಅದರಿಂದ ಏನೇನು ಗುಣಕ ಪರಿಣಾಮಗಳಾಗಬಹುದು ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Tax Calculator: ಹೊಸ ಟ್ಯಾಕ್ಸ್ ಕ್ಯಾಲ್ಕುಲೇಟರ್, ಪಕ್ಕಾ ಲೆಕ್ಕಾಚಾರ… ನೀವೆಷ್ಟು ತೆರಿಗೆ ಕಟ್ಟಬೇಕು ತಿಳಿಯಿರಿ…

ಆ ವ್ಯಕ್ತಿ ತಾನು ಉಳಿಸಿರುವ 10,000 ರೂ ಹಣ ಬಳಸಿ ಹೊಸ ಸ್ಮಾರ್ಟ್​ಫೋನ್​ವೊಂದನ್ನು ಖರೀದಿಸುತ್ತಾನೆಂದಿಟ್ಟುಕೊಳ್ಳಿ. ಆ ಫೋನ್ ಅಂಗಡಿ ಮಾಲೀಕರಿಗೆ ಈ ವ್ಯವಹಾರದಿಂದ 10,000 ರೂ ಆದಾಯ ಬರುತ್ತದೆ ಎಂದು ಭಾವಿಸೋಣ. ಆ ಮಾಲೀಕ ಆ ಹಣದಲ್ಲಿ ಶೇ. 20ರಷ್ಟು ಉಳಿಸಿ ಉಳಿದ ಶೇ. 80ರಷ್ಟು ಹಣವನ್ನು ಬೇರೆ ವೈಯಕ್ತಿಕ ಉಪಯೋಗದ ವಸ್ತುಗಳ ಖರೀದಿಗೆ ಬಳಸುತ್ತಾರೆ. ಹೀಗೆ ಸರಣಿಯಾಗಿ ಈ ಹಣವು ಆರ್ಥಿಕತೆಯೊಳಗೆ ಚಲಿಸುತ್ತಿರುತ್ತದೆ.

ಇಲ್ಲಿ ಭಾರತೀಯರು ತಮ್ಮ ಆದಾಯದಲ್ಲಿ ಶೇ. 20ರಷ್ಟನ್ನು ಉಳಿಸಿ, ಉಳಿದ ಶೇ. 80ರಷ್ಟನ್ನು ವೆಚ್ಚಕ್ಕೆ ಬಳಸುತ್ತಾರೆ ಎನ್ನುವ ಅಂದಾಜಿನಲ್ಲಿ ಲೆಕ್ಕ ಹಾಕಿ ಅದಕ್ಕೆ ಗಣಿತದ ಜಾಮಿಟ್ರಿಕ್ ಪ್ರೋಗ್ರೆಷನ್​ನ ಸೂತ್ರವೊಂದನ್ನು ಅಳವಡಿಸಲಾಗಿದೆ. ಈ ಫಾರ್ಮುಲಾ ಹೀಗಿದೆ:

1+r+r^2+r^3+… = 1/(1-r)

ಇಲ್ಲಿ r ಎನ್ನುವುದು ವೆಚ್ಚಕ್ಕೆ ಬಳಸುವ ಹಣ. ಅಂದರೆ 0.8 ಆಗುತ್ತದೆ. ಅದರಂತೆ

₹10,000 (1+ 0.8 + 0.8^2 + 0.8^3 + 0.8^4 +… )

ಒಟ್ಟು ಹೆಚ್ಚಳವು: ₹10,000/(1-0.8) = ₹50,000

ಅಂದರೆ, ಹತ್ತು ಸಾವಿರ ರೂ ಹಣದಿಂದ ಆರ್ಥಿಕತೆಯಲ್ಲಿ ಆಗುವ ಅನುಭೋಗ 50,000 ರೂ. ಅಂದರೆ, ಅನುಭೋಗ ಗುಣಕವು ಇಲ್ಲಿ 5 ಆಗುತ್ತದೆ. ಐದು ಪಟ್ಟು ಅನುಭೋಗ ಹೆಚ್ಚುತ್ತದೆ.

ಇದನ್ನೂ ಓದಿ: ಶಾಲೆಗಳಲ್ಲಿ 50,000 ಹೊಸ ಅಟಲ್ ಟಿಂಕರಿಂಗ್ ಲ್ಯಾಬ್​ಗಳ ಸ್ಥಾಪನೆ; ಮಕ್ಕಳಲ್ಲಿ ಪ್ರಯೋಗಶೀಲತೆ ಬೆಳೆಸಲು ಪ್ರಯತ್ನ

ಹಾಗೆಯೇ, ಅನುಭೋಗ ಹೆಚ್ಚಿದರೆ ಜಿಡಿಪಿಯ ಮೇಲೆ ಹೇಗೆ ಪರಿಣಾಮ ಆಗುತ್ತದೆ ಎನ್ನುವುದನ್ನೂ ಗಣಿತ ಸೂತ್ರಗಳ ಮೂಲಕ ಸರಳವಾಗಿ ವಿವರಿಸಿದ್ದಾರೆ ಕೃಷ್ಣಮೂರ್ತಿ ವಿ ಸುಬ್ರಮಣಿಯನ್. ಈ ವಿವರಗಳನ್ನು ಅವರು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನೆಯ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷ ರೂವೊಳಗೆ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ ಎಂದು ಘೋಷಿಸಿದ್ದಾರೆ. ಸಂಬಳದಾರರಿಗೆ 12.75 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಉಳಿದ ಕೆಲ ಸ್ಲ್ಯಾಬ್ ದರಗಳನ್ನೂ ಕಡಿಮೆ ಮಾಡಲಾಗಿದೆ. ಆದರೆ, ಈ ಬದಲಾವಣೆಯು ಹೊಸ ಟ್ಯಾಕ್ಸ್ ರಿಜೈಮ್​ಗೆ ಮಾತ್ರವೇ ಆಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Sun, 2 February 25