Govt Expense: ಬಡ್ಡಿಗೆ ಆಯ್ತು ಶೇ. 25 ಬಜೆಟ್ ಹಣ; ಸಾರಿಗೆ, ರಕ್ಷಣೆ ಇತ್ಯಾದಿಗೆ ಸಿಕ್ಕಿದ್ದಿಷ್ಟು
Union Budget 2025, allocations: ಈ ಬಾರಿಯ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂನಷ್ಟಿದೆ. ಇದರಲ್ಲಿ ಕಾಲುಭಾಗದಷ್ಟು ಹಣವು ಬಡ್ಡಿ ಕಟ್ಟಲು ವಿನಿಯೋಗವಾಗುತ್ತದೆ. ಮಾಹಿತಿ ಪ್ರಕಾರ 12.76 ಲಕ್ಷ ಕೋಟಿ ರೂ ಹಣವು ಬಡ್ಡಿ ಸಂದಾಯಕ್ಕೆ ಹೋಗುತ್ತದೆ. ಸಾರಿಗೆ ಇಲಾಖೆಗೆ ಐದೂವರೆ ಲಕ್ಷ ಕೋಟಿ ರೂ, ರಕ್ಷಣಾ ಇಲಾಖೆಗೆ 4.91 ಲಕ್ಷ ಕೋಟಿ ರೂ ಹೋಗುತ್ತದೆ. ಪೆಟ್ರೋಲಿಯಂ, ಆಹಾರ ಇತ್ಯಾದಿಗಳಿಗೆ ನೀಡುವ ಸಬ್ಸಿಡಿಯೂ 3.83 ಲಕ್ಷ ಕೋಟಿ ರೂ ಆಗುತ್ತದೆ.

ನವದೆಹಲಿ, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ ಅವರು 50.65 ಲಕ್ಷ ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಸರ್ಕಾರದ ಹಣ ಯಾವ್ಯಾವುದಕ್ಕೆ ಎಷ್ಟೆಷ್ಟು ವಿನಿಯೋಗವಾಗುತ್ತದೆ ಎಂಬುದು ಕುತೂಹಲದ ಸಂಗತಿ. ಬಜೆಟ್ ದಾಖಲೆ ಪ್ರಕಾರ 50.65 ಲಕ್ಷ ಕೋಟಿ ರೂ ಅಂದಾಜು ಲಭ್ಯ ಇರುವ ಹಣದಲ್ಲಿ 12.76 ಲಕ್ಷ ಕೋಟಿ ರೂ ಮೊತ್ತವು ಸಾಲ ಮರುಪಾವತಿ, ಬಡ್ಡಿ ಪಾವತಿಗೆ ಸಂದಾಯವಾಗುತ್ತದೆ. ಅಂದರೆ, ಶೇ. 25ರಷ್ಟು ಬಜೆಟ್ ಹಣವು ಸಾಲಕ್ಕೆಯೇ ಹೋಗಿಬಿಡುತ್ತದೆ. ಇದರ ಜೊತೆಗೆ, ಸಬ್ಸಿಡಿ, ಸಂಬಳ, ಮತ್ತು ಪಿಂಚಣಿ ಹಣವನ್ನೂ ಸೇರಿಸಿದರೆ ದೊಡ್ಡ ಮೊತ್ತವೇ ಆಗಿಹೋಗುತ್ತದೆ.
ಇವು ಬಿಟ್ಟರೆ, ಸಾರಿಗೆ, ರಕ್ಷಣೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಅತಿಹೆಚ್ಚು ಅನುದಾನ ಸಿಗುತ್ತದೆ. ಕೃಷಿ ಕ್ಷೇತ್ರಕ್ಕೂ ಉತ್ತಮ ಮೊತ್ತದ ಅನುದಾನ ಇದೆ. ಕಳೆದ ಹತ್ತು ವರ್ಷಗಳಿಂದ ಸರ್ಕಾರದಿಂದ ಬಂಡವಾಳ ವೆಚ್ಚ ಗಣನೀಯವಾಗಿ ನಡೆದಿತ್ತು. ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನೆ, ಡಿಫೆನ್ಸ್ ಇತ್ಯಾದಿಗೆ ಸರ್ಕಾರದಿಂದ ಸಾಕಷ್ಟು ವೆಚ್ಚವಾಗಿದೆ. ಅಂತೆಯೇ ಸಾಲದ ಪ್ರಮಾಣ ಹೆಚ್ಚಾಗಿದೆ. ಸಾಲ ಎಂದರೆ ಇಲ್ಲಿ ಆಂತರಿಕವಾಗಿ ವಿವಿಧ ಬಾಂಡ್ಗಳ ಮೂಲಕ ಪಡೆದ ಸಾಲಗಳು ಪ್ರಮುಖವಾಗಿವೆ. ಸೇವಿಂಗ್ಸ್ ಸ್ಕೀಮ್ಗಳಿಗೆ ಬಡ್ಡಿ ಪಾವತಿಸಬೇಕಾಗುತ್ತದೆ. ಇವುಗಳ ವೆಚ್ಚವೇ ಸರ್ಕಾರಕ್ಕೆ ಅತ್ಯಧಿಕ ಆಗುತ್ತದೆ.
ಇದನ್ನೂ ಓದಿ: Tax Calculator: ಹೊಸ ಟ್ಯಾಕ್ಸ್ ಕ್ಯಾಲ್ಕುಲೇಟರ್, ಪಕ್ಕಾ ಲೆಕ್ಕಾಚಾರ… ನೀವೆಷ್ಟು ತೆರಿಗೆ ಕಟ್ಟಬೇಕು ತಿಳಿಯಿರಿ…
ಬಜೆಟ್ನ 50.65 ಲಕ್ಷ ಕೋಟಿ ರೂ ಎಲ್ಲೆಲ್ಲಿಗೆ ಹೋಗುತ್ತದೆ ನೋಡಿ…
- ಬಡ್ಡಿ: 12,76,338 ಕೋಟಿ ರೂ
- ಸಾರಿಗೆ: 5,48,649 ಕೋಟಿ ರೂ
- ರಕ್ಷಣೆ: 4,91,732 ಕೋಟಿ ರೂ
- ಸಬ್ಸಿಡಿ: 3,83,407 ಕೋಟಿ ರೂ
- ಪಿಂಚಣಿ: 2,76,618 ಕೋಟಿ ರೂ
- ಗ್ರಾಮೀಣಾಭಿವೃದ್ಧಿ: 2,66,817 ಕೋಟಿ ರೂ
- ಗೃಹ ವ್ಯವಹಾರ: 2,33,211 ಕೋಟಿ ರೂ
- ತೆರಿಗೆ ನಿರ್ವಹಣೆ: 1,86,632 ಕೋಟಿ ರೂ
- ಕೃಷಿ: 1,71,437 ಕೋಟಿ ರೂ
- ಜಿಎಸ್ಟಿ ಪರಿಹಾರ: 1,30,641 ಕೋಟಿ ರೂ
- ಶಿಕ್ಷಣ: 1,28,650 ಕೋಟಿ ರೂ
- ಆರೋಗ್ಯ: 98,311 ಕೋಟಿ ರೂ
- ನಗರಾಭಿವೃದ್ಧಿ: 96,777 ಕೋಟಿ ರೂ
- ಐಟಿ ಮತ್ತು ಟೆಲಿಕಾಂ: 95,298 ಕೋಟಿ ರೂ
- ಇಂಧನ: 81,174 ಕೋಟಿ ರೂ
- ವಾಣಿಜ್ಯ ಮತ್ತು ಉದ್ಯಮ: 65,553 ಕೋಟಿ ರೂ
- ಹಣಕಾಸು: 62,924 ಕೋಟಿ ರೂ
- ಸಮಾಜ ಕಲ್ಯಾಣ: 60,052 ಕೋಟಿ ರೂ
- ವೈಜ್ಞಾನಿಕ ಇಲಾಖೆಗಳು: 55,679 ಕೋಟಿ ರೂ
- ವಿದೇಶಾಂಗ ವ್ಯವಹಾರ: 20,517 ಕೋಟಿ ರೂ
- ಈಶಾನ್ಯ ರಾಜ್ಯಗಳ ಅಭಿವೃದ್ಧಿ: 5,915 ಕೋಟಿ ರೂ
- ಇತರೆ: 4,82,653 ಕೋಟಿ ರೂ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ