ಈ ಬಜೆಟ್ ಅಧಿವೇಶನದಲ್ಲಿ ಇನ್ಷೂರೆನ್ಸ್ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ; ಕಾಯ್ದೆಯಲ್ಲಿ ಏನೇನು ಬದಲಾವಣೆ?
Insurance Amendment bill: 1938ರ ಇನ್ಷೂರೆನ್ಸ್ ಕಾಯ್ದೆಗೆ ಕೆಲ ತಿದ್ದುಪಡಿಗಳನ್ನು ತಂದಿರುವ ಮಸೂದೆ ಸಿದ್ಧವಾಗಿದೆ. ಜುಲೈ 22ರಂದು ಆರಂಭವಾಗುವ ಬಜೆಟ್ ಅಧಿವೇಶನದ ವೇಳೆ ಇನ್ಷೂರೆನ್ಸ್ ತಿದ್ದುಪಡಿ ಮಸೂದೆಯ ಮಂಡನೆ ಆಗಲಿದೆ. ಲೈಫ್ ಇನ್ಷೂರೆನ್ಸ್ ಕಂಪನಿಗಳು ಹೆಲ್ತ್ ಇನ್ಷೂರೆನ್ಸ್ ಸೇವೆಯನ್ನೂ ನೀಡಲು ಅನುವು ಮಾಡಿಕೊಡುವುದು ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ನವದೆಹಲಿ, ಜುಲೈ 14: ಇನ್ಷೂರೆನ್ಸ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಈ ಬಜೆಟ್ ಅಧಿವೇಶನದಲ್ಲಿ ಮಂಡಿಸಬಹುದು ಎನ್ನುವ ಸುದ್ದಿ ಕೇಳಿಬಂದಿದೆ. ಜುಲೈ 23ರಂದು ಬಜೆಟ್ ಮಂಡನೆ ಆದ ನಂತರದ ದಿನಗಳಲ್ಲಿ ಇನ್ಷೂರೆನ್ಸ್ ತಿದ್ದುಪಡಿ ಮಸೂದೆಯನ್ನು ಸಂಸತ್ನ ಎರಡು ಸದನಗಳಲ್ಲಿ ಪ್ರಸ್ತುತಪಡಿಸಬಹುದು ಎನ್ನಲಾಗುತ್ತಿದೆ. 2047ರೊಳಗೆ ಪ್ರತಿಯೊಬ್ಬರಿಗೂ ಇನ್ಷೂರೆನ್ಸ್ ಒದಗಿಸುವ ಗುರಿಯೊಂದಿಗೆ 1938ರ ಇನ್ಷೂರೆನ್ಸ್ ಆ್ಯಕ್ಟ್ಗೆ ತಿದ್ದುಪಡಿ ಮಾಡಲಾಗಿದೆ. ಇನ್ಷೂರೆನ್ಸ್ ಕಂಪನಿಗಳ ನಿರ್ವಹಣೆ, ಜವಾಬ್ದಾರಿ ಇತ್ಯಾದಿಯಲ್ಲಿ ಈ ತಿದ್ದುಪಡಿ ಕಾಯ್ದೆ ಒಂದಷ್ಟು ಮಾರ್ಪಾಡು ತರಲಿದೆ. ಈ ತಿದ್ದುಪಡಿ ಮಸೂದೆಯ ಕರಡು ಸಿದ್ದವಾಗಿದ್ದು ಕ್ಯಾಬಿನೆಟ್ ಸಭೆಯ ಒಪ್ಪಿಗೆ ಪಡೆದ ಬಳಿಕ ಅಧಿವೇಶನದ ವೇಳೆ ಮೊದಲಿಗೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ಬಳಿಕ ರಾಜ್ಯಸಭೆಯಲ್ಲಿ ಈ ಬಿಲ್ ಮಂಡನೆ ಆಗಲಿದೆ. ಎರಡೂ ಮನೆಗಳಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಅದು ಕಾಯ್ದೆಯಾಗಿ ಬದಲಾಗಲಿದೆ.
ಈಗಿರುವ ಕಾಯ್ದೆ ಪ್ರಕಾರ, ಜೀವ ವಿಮೆ ಕಂಪನಿಗಳು ಕೇವಲ ಲೈಫ್ ಇನ್ಷೂರೆನ್ಸ್ ಪಾಲಿಸಿಗಳನ್ನು ಮಾತ್ರವೇ ನೀಡಬೇಕು. ಜನರಲ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಸೇವೆಗಳನ್ನು ನೀಡುವಂತಿಲ್ಲ. ಹಾಗೆಯೇ, ಹೆಲ್ತ್ ಇನ್ಷೂರೆನ್ಸ್ ಕಂಪನಿಗಳು ಲೈಫ್ ಇನ್ಷೂರೆನ್ಸ್ ಸೇವೆ ನೀಡುವಂತಿಲ್ಲ. ಆದರೆ ತಿದ್ದುಪಡಿ ಕಾಯ್ದೆಯಲ್ಲಿ ಈ ರೀತಿ ಬೇರೆ ಬೇರೆ ಸೇವೆಗಳನ್ನು ನೀಡುವ ಅವಕಾಶ ಇದೆ.
ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ
ಇನ್ಷೂರೆನ್ಸ್ ತಿದ್ದುಪಡಿ ಮಸೂದೆಯ ಕೆಲ ಪ್ರಮುಖ ಅಂಶಗಳು
- ಲೈಫ್ ಇನ್ಷೂರೆನ್ಸ್ ಕಂಪನಿಗಳು ಹೆಲ್ತ್ ಇನ್ಷೂರೆನ್ಸ್ ಅಥವಾ ಜನರಲ್ ಇನ್ಷೂರೆನ್ಸ್ ಪಾಲಿಸಿಗಳನ್ನು ಆಫರ್ ಮಾಡಬಹುದು
- ಕ್ಯಾಪ್ಟಿವ್ ಲೈಸೆನ್ಸ್ ನೀಡಲಾಗುತ್ತದೆ. ಇಲ್ಲಿ ಕ್ಯಾಪ್ಟಿವ್ ಲೈಸೆನ್ಸ್ ಎಂದರೆ ಇನ್ಷೂರೆನ್ಸ್ ಕಂಪನಿಗೆ ವಿಮೆ ಒದಗಿಸಲು ಪ್ರತ್ಯೇಕ ಅಂಗ ಸಂಸ್ಥೆಯನ್ನು ಸ್ಥಾಪಿಸುವ ಅವಕಾಶ.
- ಪಾಲಿಸಿದಾರರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ನಿಯಮ ಬದಲಾವಣೆ
- ಇನ್ಷೂರೆನ್ಸ್ ಕಂಪನಿಗಳು ಬೇರೆ ಹಣಕಾಸು ಉತ್ಪನ್ನಗಳನ್ನು ಮಾರಲು ಅವಕಾಶ
- ಇನ್ಷೂರೆನ್ಸ್ ವಲಯದಲ್ಲಿ ಹೆಚ್ಚು ಕಂಪನಿಗಳ ಆಗಮನಕ್ಕೆ ಉತ್ತೇಜನ
- ಇನ್ಷೂರೆನ್ಸ್ ವಲಯದಲ್ಲಿ ಸುಲಭ ವ್ಯವಹಾರಕ್ಕೆ ಅನುವಾಗುವಂತೆ ಪೂರಕ ವಾತಾವರಣ ಸೃಷ್ಟಿ.
- ಇನ್ಷೂರೆನ್ಸ್ ಉದ್ಯಮದ ಹಣಕಾಸು ಮತ್ತು ಕಾರ್ಯಾಚರಣೆಯ ಕ್ಷಮತೆ ಹೆಚ್ಚಿಸಲಾಗುವುದು
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ