ಬೆಂಗಳೂರು: ರಾಜ್ಯ ಬಜೆಟ್ಗೆ (Karnataka Budget) ದಿನಗಣನೆ ಆರಂಭವಾಗಿದ್ದು, ನಿರೀಕ್ಷೆಗಳೂ ಗರಿಗೆದರಿವೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿರಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಎರಡನೇ ಬಜೆಟ್ ಆಗಿರಲಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಬಜೆಟ್ ಬಗ್ಗೆ ಜನಸಾಮಾನ್ಯರ ನಿರೀಕ್ಷೆಗಳೂ ಗರಿಗೆದರಿವೆ. ಇದಕ್ಕೆ ಪೂರಕವಾಗಿ ಕಳೆದ 10 ತಿಂಗಳುಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಆದಾಯವೂ ಸಂಗ್ರಹವಾಗಿದೆ. ಹೀಗಾಗಿ ದೊಡ್ಡ ಗಾತ್ರದ ಬಜೆಟ್ ಅನ್ನು ಬೊಮ್ಮಾಯಿ ಮಂಡಿಸಬಹುದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಬಜೆಟ್ ಸಿದ್ಧತೆಗಾಗಿ ಬೊಮ್ಮಾಯಿ ಇಲಾಖಾವಾರು ಹಲವಾರು ಸಭೆಗಳನ್ನು ನಡೆಸಿದ್ದಾರೆ. ಬಡವರು, ಮಧ್ಯಮ ವರ್ಗ, ದೀನ ದಲಿತರು ಹಾಗೂ ರೈತರು ಮನಗೆಲ್ಲುವಂಥ ಬಜೆಟ್ ಮಂಡಿಸಲು ಹಣಕಾಸು ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 17ರಂದು ಶುಕ್ರವಾರ ಬೆಳಗ್ಗೆ 10:15ಕ್ಕೆ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ಬಜೆಟ್ ಭಾಷಣ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ 20ರಿಂದ 22ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.
ಬಸವರಾಜ ಬೊಮ್ಮಾಯಿ ಅವರು 3 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗು ತಿಳಿಸಿವೆ. ಕಳೆದ ಬಾರಿ 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಅವರು ಮಂಡನೆ ಮಾಡಿದ್ದರು. ಈ ವರ್ಷದ ತೆರಿಗೆ ಆದಾಯ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಬಜೆಟ್ ಗಾತ್ರ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ಹತ್ತು ತಿಂಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ನಿರೀಕ್ಷೆಗಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಜನವರಿ ತಿಂಗಳೊಂದರಲ್ಲಿಯೇ 6,000 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ. ವಾಣಿಜ್ಯ ತೆರಿಗೆ ಮೂಲಕ ಭರ್ಜರಿ ಆದಾಯ ಸಂಗ್ರಹವಾಗಿದ್ದು, ಮಾರ್ಚ್ ತಿಂಗಳ ಅಂತ್ಯಕ್ಕೆ 70 ಸಾವಿರ ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಬಗ್ಗೆ ಹಣಕಾಸು ಇಲಾಖೆ ಅಂದಾಜಿಸಿದೆ.
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಈ ಬಾರಿಯ ಬಜೆಟ್ನಲ್ಲಿ 40,000 ಕೋಟಿ ರೂ. ಅನುದಾನ ಘೋಷಿಸುವ ನಿರೀಕ್ಷೆ ಇದೆ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗೆ 75,000 ಕೋಟಿ ರೂ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕ್ಕೆ 60,000 ಕೋಟಿ ರೂ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 10,000 ಕೋಟಿ ರೂ, ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ 400 ಕೋಟಿ ರೂ. ಅನುದಾನ ಘೋಷಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: Budget Time: ಫೆ. 17 ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ; ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ನಿರೀಕ್ಷೆಗಳೇನು?
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ 65,000 ಕೋಟಿ ರೂ, ಮಹಿಳಾ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 50,000 ಕೋಟಿ ರೂ, ಮಕ್ಕಳ ಕಲ್ಯಾಣಕ್ಕೆ 50,000 ಕೋಟಿ ರೂ, ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ 10,000 ಕೋಟಿ ರೂ, ಹೆಚ್ಚುವರಿ ಅನುದಾನ ನೀಡುವ ಸಾಧ್ಯತೆ ಇದೆ.
ಕರ್ನಾಟಕ ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Wed, 15 February 23