Purchasing Managers Index: ಜೂನ್ ತಿಂಗಳ ಪಿಎಂಐ ಸೇವಾ ವಲಯ ಚಟುವಟಿಕೆ 11 ವರ್ಷದ ಗರಿಷ್ಠ ಮಟ್ಟ 59.2ಕ್ಕೆ

| Updated By: Srinivas Mata

Updated on: Jul 05, 2022 | 12:25 PM

ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಸೇವಾ ವಲಯವು 2022ರ ಜೂನ್ ತಿಂಗಳಲ್ಲಿ 59.2 ತಲುಪುವ ಮೂಲಕ 11 ವರ್ಷದ ಗರಿಷ್ಠ ಮಟ್ಟವನ್ನು ತಲುಪಿದೆ.

Purchasing Managers Index: ಜೂನ್ ತಿಂಗಳ ಪಿಎಂಐ ಸೇವಾ ವಲಯ ಚಟುವಟಿಕೆ 11 ವರ್ಷದ ಗರಿಷ್ಠ ಮಟ್ಟ 59.2ಕ್ಕೆ
ಸಾಂದರ್ಭಿಕ ಚಿತ್ರ
Follow us on

2022ನೇ ಇಸವಿಯ ಮೇ ತಿಂಗಳಲ್ಲಿ ಇದ್ದ 58.9ರಿಂದ ಜೂನ್‌ನಲ್ಲಿ 59.2ಕ್ಕೆ ಏರಿದ್ದು, ಎಸ್​ ಅಂಡ್ ಪಿ ಗ್ಲೋಬಲ್ ಇಂಡಿಯಾ ಸರ್ವೀಸಸ್ ಪಿಎಂಐ ಉದ್ಯಮ ಚಟುವಟಿಕೆ ಸೂಚ್ಯಂಕವು 2011ರ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಭಾರೀ ಪ್ರಮಾಣದ ದರ ಏರಿಕೆಯನ್ನು (Price Hike) ಸೂಚಿಸುತ್ತದೆ. ಜೂನ್ ತಿಂಗಳ ಡೇಟಾವು ಹೊಸ ಉದ್ಯಮ ಮತ್ತು ಭಾರತೀಯ ಸೇವಾ ಕಂಪೆನಿಗಳ ಉತ್ಪಾದನೆಯ ಬೆಳವಣಿಗೆಯನ್ನು ತೋರಿಸುತ್ತಿದೆ. ಬೇಡಿಕೆಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿರುವ ಸನ್ನಿವೇಶದಲ್ಲಿ ಈಗಿನ ಸಂಖ್ಯೆಯು ಬಂದಿದೆ. ಈ ಚೇತರಿಕೆಯು ಮುಂದಿನ 12 ತಿಂಗಳ ಕಾಲ ಹಾಗೇ ಉಳಿಯಲಿದೆ ಎಂದು ಸಂಸ್ಥೆಗಳು ಬಲವಾಗಿ ನಂಬುತ್ತಿವೆ. ಆದರೆ ಹಣದ ಒತ್ತಡವು ಉದ್ಯಮಗಳ ವಿಶ್ವಾಸವನ್ನು ಮಿತಿಗೊಳಿಸಿದೆ.ಈ ಮಧ್ಯೆ ಇನ್​ಪುಟ್​ ವೆಚ್ಚವು ಐತಿಹಾಸಿಕ ಏರಿಕೆ ಮಾರ್ಗದಲ್ಲೇ ಮುನ್ನಡೆದಿದೆ. ಆದರೂ ಇದು ಕಳೆದ ಮೂರು ತಿಂಗಳಲ್ಲೇ ಅತ್ಯಂತ ನಿಧಾನಗತಿಯದ್ದಾಗಿದೆ. ಅಂದಹಾಗೆ ಹಣದುಬ್ಬರವು ಹತ್ತಿರ ಹತ್ತಿರ 5 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ.

ಎಸ್​ ಅಂಡ್​ ಪಿ ಪ್ರಕಾರ, ಏರುತ್ತಲೇ ಇರುವ ಹಣದುಬ್ಬರ ದರವು ಉದ್ಯಮಗಳ ಪಾಲಿಗೆ ಆತಂಕದ ವಿಷಯವಾಗಿದೆ. ಮುಂಬರುವ ವರ್ಷದಲ್ಲಿ ಉದ್ಯಮ ಚಟುವಟಿಕೆಗಳಿಗೆ ಹೇಗಿರಲಿವೆ ಎಂಬುದರ ಮುನ್ನೋಟದ ಬಗ್ಗೆ ಬಹಳ ಎಚ್ಚರಿಕೆ ವಹಿಸಲಾಗಿದೆ. ಒಟ್ಟಾರೆ ಭಾವನೆಯ ಮಟ್ಟವನ್ನು ಗಮನಿಸಿದಾಗ ಅದರ ದೀರ್ಘಾವಧಿಯ ಸರಾಸರಿಗಿಂತ ಕಡಿಮೆಯಾಗಿದೆ. ಏಕೆಂದರೆ ಕೇವಲ ಶೇ 9ರಷ್ಟು ಕಂಪೆನಿಗಳು ಉತ್ಪಾದನೆಯ ಬೆಳವಣಿಗೆಯನ್ನು ಸೂಚಿಸುತ್ತವೆ. ಸತತ 11ನೇ ತಿಂಗಳು ಸೇವಾ ವಲಯವು ಉತ್ಪಾದನೆಯಲ್ಲಿ ವಿಸ್ತರಣೆಯನ್ನು ಕಂಡಿದೆ. ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಪರಿಭಾಷೆಯಲ್ಲಿ 50ಕ್ಕಿಂತ ಹೆಚ್ಚಿದ್ದಲ್ಲಿ ವಿಸ್ತರಣೆ ಎಂದರ್ಥ. ಆದರೆ 50ಕ್ಕಿಂತ ಕಡಿಮೆ ಅಂಕವು ಸಂಕೋಚನವನ್ನು ಸೂಚಿಸುತ್ತದೆ.

“2011ರ ಫೆಬ್ರವರಿಯಿಂದ ಸೇವೆಗಳ ಬೇಡಿಕೆಯು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಿದ್ದು, 2022/23 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ವಲಯಕ್ಕೆ ದೃಢವಾದ ಆರ್ಥಿಕ ವಿಸ್ತರಣೆಯನ್ನು ಬೆಂಬಲಿಸುತ್ತದೆ ಮತ್ತು ಮುಂದಿನ ತಿಂಗಳು ಉತ್ಪಾದನೆಯಲ್ಲಿ ಮತ್ತೊಂದು ಗಣನೀಯ ಏರಿಕೆಗೆ ವೇದಿಕೆ ಹೊಂದಿಸುತ್ತದೆ,” ಎಂದು ಎಸ್​ ಅಂಡ್​ ಪಿಗೆ ಸೇರಿದ ಪೊಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಸೇವೆಗಳ PMIನಲ್ಲಿನ ಜಿಗಿತವು ಹಣಕಾಸು ವರ್ಷ 2023ರಲ್ಲಿ ಸೇವಾ ವಲಯವು ಬೆಳವಣಿಗೆ ಚೇತರಿಕೆಗೆ ಕಾರಣವಾಗುತ್ತದೆ ಎಂಬ ನಮ್ಮ ಅಭಿಪ್ರಾಯವನ್ನು ದೃಢೀಕರಿಸುತ್ತದೆ. ಮಧ್ಯಮದಿಂದ ಹೆಚ್ಚಿನ ಆದಾಯದ ಕುಟುಂಬಗಳು ಸಂಪರ್ಕ-ತೀವ್ರ ಸೇವೆಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಇದನ್ನು ಕೊರೊನಾ ಸಮಯದಲ್ಲಿ ತಪ್ಪಿಸಲಾಯಿತು. ಆದರೆ ಈ ಸಮಯದಲ್ಲಿ ಗ್ರಾಹಕ ಬಳಕೆ ವಸ್ತುಗಳ ಮೇಲೆ ಪರಿಣಾಮ ಬೀರಿತು. ಇದು ಸಾಮರ್ಥ್ಯದ ಬಳಕೆಯ ಮಟ್ಟಗಳಲ್ಲಿ ನಿಧಾನಗತಿಯ ಸುಧಾರಣೆಗೆ ಕಾರಣವಾಯಿತು. ಜಾಗತಿಕ ಸಂಗತಿಗಳು ಮತ್ತು ಹೆಚ್ಚಿದ ಸರಕುಗಳ ಬೆಲೆಗಳ ಮಧ್ಯೆ ಖಾಸಗಿ ವಲಯಗಳ ಕ್ಯಾಪೆಕ್ಸ್ ಯೋಜನೆಗಳನ್ನು ಸಾಧಾರಣವಾಗಿ ವಿಳಂಬಗೊಳಿಸುತ್ತದೆ ಎಂದು ಇಕ್ರಾದ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.

ಉದ್ಯೋಗದ ವಿಚಾರಕ್ಕೆ ಬಂದರೆ, ಜೂನ್‌ನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ಕೆಲವು ಕಂಪೆನಿಗಳು ಸಾಮರ್ಥ್ಯದ ಒತ್ತಡಗಳಿಗೆ ಪ್ರತಿಕ್ರಿಯಿಸಿದವು. ಆದರೆ ಬಹುಪಾಲು (ಶೇ 94) ವೇತನದಾರರ ಸಂಖ್ಯೆಯನ್ನು ಬದಲಾಗದೆ ಬಿಟ್ಟಿವೆ. ಒಟ್ಟಾರೆಯಾಗಿ, ಸೇವೆ ವಲಯಗಳ ಉದ್ಯೋಗವು ಮೇ ತಿಂಗಳಲ್ಲಿ ಕುಸಿತದ ನಂತರ ಸ್ವಲ್ಪ ಮಟ್ಟಿಗೆ ಏರಿತು. ಇನ್ನು ಎಸ್​ ಅಂಡ್​ ಪಿ ಗ್ಲೋಬಲ್ ಇಂಡಿಯಾ ಕಾಂಪೋಸಿಟ್ PMI ಔಟ್‌ಪುಟ್ ಇಂಡೆಕ್ಸ್ – ಸಂಯೋಜಿತ ಸೇವೆಗಳು ಮತ್ತು ಉತ್ಪಾದನಾ ವಲಯದ ಉತ್ಪಾದನೆಯನ್ನು ಅಳೆಯುತ್ತದೆ – ಇದು ಜೂನ್‌ನಲ್ಲಿ 58.2 ಆಗಿದ್ದು, ಮೇ ತಿಂಗಳಿನಲ್ಲಿ 58.3ರಿಂದ ಸ್ವಲ್ಪ ಬದಲಾಗಿದೆ.

“ಸೇವಾ ಚಟುವಟಿಕೆಯಲ್ಲಿನ ವೇಗದ ಹೆಚ್ಚಳವು ಕಾರ್ಖಾನೆಯ ಉತ್ಪಾದನೆಯಲ್ಲಿ ನಿಧಾನಗತಿಯ ಏರಿಕೆಯನ್ನು ಸರಿದೂಗಿಸಿದ ಕಾರಣ ಜೂನ್‌ನಲ್ಲಿ ಭಾರತೀಯ ಖಾಸಗಿ ವಲಯದ ಉತ್ಪಾದನೆಯ ಬೆಳವಣಿಗೆಯು ಸ್ಥಿರವಾಗಿದೆ,” ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: CPI Inflation: ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಏಪ್ರಿಲ್​ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟವಾದ ಶೇ 7.79ಕ್ಕೆ

Published On - 12:23 pm, Tue, 5 July 22