ಪ್ರಸಕ್ತ ಅಸೆಸ್ಮೆಂಟ್ ವರ್ಷವಾದ 2022-23ಕ್ಕೆ ಐಟಿಆರ್ ಫೈಲ್ (ITR Filing) ಮಾಡುವುದಕ್ಕೆ ಜುಲೈ 31, 2022. ಈ ಅವಧಿಯಲ್ಲಿ ಯಾರಾದರೂ ಉದ್ಯೋಗ ಬದಲಾವಣೆ ಮಾಡಿದ್ದಲ್ಲಿ ಎರಡು ಫಾರ್ಮ್ 16 ಬಂದಿರಬಹುದು. ಅದು ಈಗಿನ ಹಾಗೂ ಹಿಂದಿನ ಉದ್ಯೋಗದಾತರಿಂದ. ಹೀಗೆ ಎರಡು ಫಾರ್ಮ್ 16 ಬಂದರೆ ಏನು ಮಾಡಬೇಕು ಎಂದು ಗೊಂದಲ ಆಗುವುದು ಸಹಜ. ಹೀಗೆ ಎರಡು ಫಾರ್ಮ್ 16 ಇರುವವರಿಗೆ ಗೊತ್ತಾಗಬೇಕಾದದ್ದು ಏನೆಂದರೆ, ಇವರೂ ಐಟಿಆರ್ ಫೈಲ್ ಮಾಡಿ, ತಮಗೆ ವಾಪಸ್ ಸಿಗಬೇಕಾದದ್ದನ್ನು ಪಡೆಯಬಹುದು. ಆದರೆ ಅದಕ್ಕೆ ಮುನ್ನ ಅನುಸರಿಸಬೇಕಾದ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ.
1. ಮೊದಲಿಗೆ ಈಗಿನ ಮತ್ತು ಹಿಂದಿನ ಉದ್ಯೋಗದಾತರಿಂದ ಫಾರ್ಮ್ 16 ಪಡೆದುಕೊಳ್ಳಬೇಕು.
2. ಆ ನಂತರ ಎರಡೂ ಸಂಸ್ಥೆಗಳಿಂದ ಪಡೆದ ಒಟ್ಟು ಗಳಿಕೆಯನ್ನು ಒಗ್ಗೂಡಿಸಬೇಕು. ತಮ್ಮ ಆದಾಯ ನಮೂದಿಸಲು ಮತ್ತು ಇತರ ಮಾಹಿತಿಗಳನ್ನು ತಾನಾಗಿಯೇ ಒಗ್ಗೂಡಿಸುವುದಕ್ಕೆ ಹಲವು ವೆಬ್ಸೈಟ್ಗಳು ಅನುಕೂಲ ಮಾಡಿಕೊಡುತ್ತವೆ.
3. ಈಗ, ಹಣಕಾಸು ವರ್ಷದ ಒಟ್ಟು ವೇತನದಲ್ಲಿ ಲೀವ್ ಟ್ರಾವೆಲ್ ಅಲೋವೆನ್ಸ್ (LTA), ಮನೆ ಬಾಡಿಗೆ ಭತ್ಯೆ (HRA), ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ಸೆಕ್ಷನ್ 80C, 80G, 80D ಅಡಿ ಬರುವ ವಿನಾಯಿತಿಗಳನ್ನು ಕಳೆಯಬೇಕು.
ಈ ವಿನಾಯಿತಿಗಳನ್ನು ಒಂದು ಸಲ ಮಾತ್ರ ಕ್ಲೇಮ್ ಮಾಡುವುದಕ್ಕೆ ಮಾತ್ರ. ಉದಾಹರಣೆಗೆ, ಎರಡೂ ಕಂಪೆನಿಗಳು ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದು ತಲಾ 50 ಸಾವಿರದಂತೆ, 1 ಲಕ್ಷ ರೂಪಾಯಿ ಕ್ಲೇಮ್ ಮಾಡುವುದಕ್ಕೆ ಸಾಧ್ಯವಿಲ್ಲ.
4. ಮೇಲ್ಕಂಡ ಎಲ್ಲ ಲೆಕ್ಕಾಚಾರ ಮಾಡಿದ ಮೇಲೆ, ಪ್ರತಿ ಉದ್ಯೋಗದಾತರು ಕಡಿತ ಮಾಡಿದ ನಿಮ್ಮ ಟಿಡಿಎಸ್ ಅನ್ನು ಕೂಡುವ ಮೂಲಕ ತೆರಿಗೆ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿಯಿರಿ. ಒಂದು ವೇಳೆ ಏನಾದರೂ ತೆರಿಗೆ ಜವಾಬ್ದಾರಿ ಬಂದಲ್ಲಿ ಅದನ್ನು ಮೊದಲಿಗೆ ಪಾವತಿಸಿ, ಐಟಿಆರ್ ಫೈಲ್ ಮಾಡಿ.
ಸದ್ಯದ ಉದ್ಯೋಗದಾತರು ಮಾತ್ರ ಫಾರ್ಮ್ 16 ನೀಡಿದಾಗ
ಈ ಸನ್ನಿವೇಶದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ನಿಮ್ಮ ಸ್ಯಾಲರಿ ಸ್ಲಿಪ್ ಪಡೆದುಕೊಳ್ಳಬೇಕು. ಆ ನಂತರ ಈ ಹಿಂದಿನ ಸಂಸ್ಥೆಯಲ್ಲಿ ಬಂದ ಮೊತ್ತ ಹಾಗೂ ಫಾರ್ಮ್ 16ನಲ್ಲಿನ ಮೊತ್ತ ಎರಡನ್ನೂ ಒಟ್ಟು ಮಾಡಬೇಕು. ಇನ್ನು ಬಾಕಿ ಪ್ರಕ್ರಿಯೆಯು ಮೇಲ್ಕಂಡಂತೆಯೇ ಇರುತ್ತದೆ.
ಒಂದು ವೇಳೆ ಫಾರ್ಮ್ 16 ವಿತರಿಸದಿದ್ದಲ್ಲಿ
ಸ್ಯಾಲರಿ ಬ್ರೇಕ್ ಅಪ್ ಮತ್ತು ತೆರಿಗೆ ಕಡಿತ ತಿಳಿಯುವುದಕ್ಕೆ ಪೇ ಸ್ಲಿಪ್ ಬಳಸಿಕೊಳ್ಳಿ. ನಿಮ್ಮ ಒಟ್ಟು ಆದಾಯದಲ್ಲಿ ಕಡಿತವನ್ನು ಕಡಿತ ಮಾಡಿ ಮತ್ತು ಕ್ಲೇಮ್ ಮಾಡಿ. ಮೇಲ್ಕಂಡಂತೆಯೇ ಪ್ರಕ್ರಿಯೆಯನ್ನು ಅನುಸರಿಸಿ.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ?