CPI Inflation: ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಏಪ್ರಿಲ್​ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟವಾದ ಶೇ 7.79ಕ್ಕೆ

CPI Inflation: ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಏಪ್ರಿಲ್​ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟವಾದ ಶೇ 7.79ಕ್ಕೆ
ಸಾಂದರ್ಭಿಕ ಚಿತ್ರ

2022ರ ಏಪ್ರಿಲ್​ನಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 7.79 ತಲುಪುವ ಮೂಲಕ 8 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.

TV9kannada Web Team

| Edited By: Srinivas Mata

May 13, 2022 | 6:22 AM

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 7.79ಕ್ಕೆ ಏರಿದೆ. ಇದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ಗೆ ಆತಂಕ ಅವರಿಸಿದೆ. – ಇದು 2014ರ ಮೇ ನಂತರದಲ್ಲಿ ಗರಿಷ್ಠ ಮಟ್ಟದ್ದಾಗಿದೆ. ಶೇ 7.79ರಲ್ಲಿ ಏಪ್ರಿಲ್‌ನಲ್ಲಿನ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಮಾರ್ಚ್ ತಿಂಗಳ ಶೇ 6.95ಕ್ಕಿಂತ 84 ಬೇಸಿಸ್ ಪಾಯಿಂಟ್‌ಗಳು ಹೆಚ್ಚಾಗಿದೆ ಎಂದು ಅಂಕಿ- ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಮೇ 12ರಂದು ಬಿಡುಗಡೆ ಮಾಡಿದ ಮಾಹಿತಿಯು ತೋರಿಸಿದೆ. ಕಳೆದ ತಿಂಗಳು ಹಣದುಬ್ಬರ ತೀವ್ರವಾಗಿ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಏಪ್ರಿಲ್‌ನಲ್ಲಿ ಈಗಾಗಲೇ ಹೆಚ್ಚಿಸಲಾದ ಒಮ್ಮತದ ಅಂದಾಜಿಗಿಂತ ಹೆಚ್ಚಾಗಿದ್ದು, ಮನಿಕಂಟ್ರೋಲ್ ಸಮೀಕ್ಷೆಯಲ್ಲಿ ಅರ್ಥಶಾಸ್ತ್ರಜ್ಞರು ಹಣದುಬ್ಬರವು ಶೇ 7.5ಕ್ಕೆ ಏರಿಕೆ ಆಗಬಹುದು ಎಂದು ತೋರಿಸಿತ್ತು.

ಮೇ 4ರಂದು ನಿಗದಿಯೇ ಆಗದ ಸಭೆ ಮುಕ್ತಾಯದಲ್ಲಿ ಆರ್​ಬಿಐ ಹಣಕಾಸು ನೀತಿ ಸಮಿತಿಯು (MPC) 40 ಬೇಸಿಸ್ ಪಾಯಿಂಟ್ ರೆಪೋ ದರ ಹೆಚ್ಚಳದ ಪರವಾಗಿ ಮತ ಚಲಾಯಿಸಿದ ನಂತರ ಇತ್ತೀಚಿನ ಹಣದುಬ್ಬರ ಸಂಖ್ಯೆ ಏನಾಗಬಹುದು ಎಂದು ಕಳೆದ ವಾರದಿಂದ ಮಾರುಕಟ್ಟೆಗಳು ಆತಂಕದಲ್ಲಿವೆ. ಮೇ 4ರಂದು ನಿರ್ಧಾರವನ್ನು ತಿಳಿಸುವ ಹೇಳಿಕೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಏಪ್ರಿಲ್‌ನಲ್ಲಿ ಹಣದುಬ್ಬರ “ಹೆಚ್ಚುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಆಹಾರ ಮತ್ತು ಇಂಧನ ಏಪ್ರಿಲ್‌ನಲ್ಲಿ ಹಣದುಬ್ಬರದ ತೀವ್ರ ಏರಿಕೆಯು ಗಮನಾರ್ಹ ಬೆಲೆ ಒತ್ತಡಗಳಿಂದ ಆಗಿದೆ. ನಿರೀಕ್ಷೆಯಂತೆ, ಇಂಧನ ವಸ್ತುಗಳು ಮುಂಚೂಣಿಯಲ್ಲಿತ್ತು. ಸಿಪಿಐನ ‘ಇಂಧನ ಮತ್ತು ಬೆಳಕು’ ಗುಂಪಿನ ಸೂಚ್ಯಂಕವು ಏಪ್ರಿಲ್‌ನಲ್ಲಿ ತಿಂಗಳಿನಿಂದ ತಿಂಗಳಿಗೆ ಶೇ 3.1ರಷ್ಟು ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಹಣದುಬ್ಬರ ದರವು ಶೇ 10.8ರಷ್ಟಾಗಿದೆ. ಏಪ್ರಿಲ್‌ನಲ್ಲಿ ಇಂಧನ ಬೆಲೆಗಳಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಮಾರ್ಚ್‌ಗೆ ಹೋಲಿಸಿದರೆ ಭಾರತದ ಪ್ರಮುಖ ನಾಲ್ಕು ಮೆಟ್ರೋಪಾಲಿಟನ್ ನಗರಗಳಲ್ಲಿ ಪೆಟ್ರೋಲ್‌ನ ಸರಾಸರಿ ಪಂಪ್ ಬೆಲೆ ಶೇ 8.6ರಿಂದ 9ರಷ್ಟು ಹೆಚ್ಚಾಗಿದೆ. ಇನ್ನು ಈ ಮಧ್ಯೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ವಿಭಾಗದ ಅಂಕಿಅಂಶಗಳ ಪ್ರಕಾರ, ಡೀಸೆಲ್ ಬೆಲೆಗಳು ಶೇಕಡಾ 8.8ರಿಂದ 9.7ರಷ್ಟು ಹೆಚ್ಚಾಗಿದೆ.

ಸಿಪಿಐ ಬ್ಯಾಸ್ಕೆಟ್‌ನ ಇತರ ಏರಿಳಿತದ ಘಟಕ – ಆಹಾರ – ಏಪ್ರಿಲ್‌ನಲ್ಲಿ ಶೇ 8.38ರಷ್ಟು ಹೆಚ್ಚಿನ ಹಣದುಬ್ಬರ ದರವನ್ನು ದಾಖಲಿಸಿದೆ. ಇದು ಮಾರ್ಚ್‌ನಲ್ಲಿ ಶೇ 7.68ರಷ್ಟಿತ್ತು. ಆದರೆ ಒಟ್ಟಾರೆಯಾಗಿ ಆಹಾರ ಪದಾರ್ಥಗಳಿಗೆ ಅನುಕ್ರಮ ಬೆಲೆಗಳ ಒತ್ತಡವು ಇಂಧನದಂತೆಯೇ ಪ್ರಬಲವಾಗಿರಲಿಲ್ಲ. ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕವು ಶೇ 1.6ರಷ್ಟು ಹೆಚ್ಚಾಗಿದೆ. ಆಹಾರದೊಳಗೆ ಧಾನ್ಯಗಳು, ಎಣ್ಣೆಗಳು ಮತ್ತು ಹಾಲಿನಲ್ಲಿ ಬಲವಾದ ಬೆಲೆಯ ಏರಿಕೆ ಕಂಡುಬಂದಿದೆ.

ಪ್ರಮುಖ ಒತ್ತಡಗಳು ಆಹಾರ ಮತ್ತು ಇಂಧನ ವಸ್ತುಗಳಿಂದ ಹಣದುಬ್ಬರದ ಒತ್ತಡವನ್ನು ನಿರೀಕ್ಷಿಸಲಾಗಿತ್ತು, ಆದರೆ ಅಪಾಯದ ಮೂರನೇ ಮೂಲವು ಏಪ್ರಿಲ್‌ನಲ್ಲಿ ಪಾರಮ್ಯ ಪಡೆದಿದೆ – ವಿವೇಚನೆಯ ವಸ್ತುಗಳು. ಸಿಪಿಐ ಶೇ 28ರಷ್ಟು ಮತ್ತು ಸೇವೆಗಳನ್ನು ಒಳಗೊಂಡಿರುವ ‘ವಿವಿಧ’ ಗುಂಪಿನ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 7.02ರಷ್ಟು ಇದ್ದದ್ದು ಏಪ್ರಿಲ್‌ನಲ್ಲಿ ಶೇಕಡಾ 8.03ಕ್ಕೆ ಹೆಚ್ಚಾಗಿದೆ. ಪರಿಣಾಮವಾಗಿ, ಪ್ರಮುಖ ಹಣದುಬ್ಬರವು – ಬೇಡಿಕೆಯ ಆಧಾರವಾಗಿರುವ ಸೂಚಕವಾಗಿ ಕಂಡುಬರುತ್ತದೆ – ಮನಿ ಕಂಟ್ರೋಲ್ ಲೆಕ್ಕಾಚಾರಗಳ ಪ್ರಕಾರ, ಮಾರ್ಚ್‌ನಲ್ಲಿ ಶೇ 6.4ರಿಂದ ಏಪ್ರಿಲ್‌ನಲ್ಲಿ ಶೇ 7ಕ್ಕೆ ಜಿಗಿದಿದೆ.

“ಸಿಪಿಐ ಹಣದುಬ್ಬರದ ಉಲ್ಬಣವು ಕಳೆದ ವಾರ ಆಫ್-ಸೈಕಲ್ ದರ ಏರಿಕೆಯನ್ನು ಸ್ಪಷ್ಟವಾಗಿ ಸಮರ್ಥಿಸಿದೆ ಮತ್ತು ಜೂನ್ 2022ರಲ್ಲಿ ಒಂದರ ಬೆನ್ನಿಗೆ ಒಂದರಂತೆ ದರ ಹೆಚ್ಚಳದ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸಿದೆ,” ಎಂದು ICRAದ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಹೇಳಿದ್ದಾರೆ. “ಮುಂದಿನ ಎರಡು ನೀತಿ ಸಭೆಗಳಲ್ಲಿ ಹಣಕಾಸು ನೀತಿ ಸಮಿತಿಯು ಕ್ರಮವಾಗಿ 40 ಬೇಸಿಸ್ ಪಾಯಿಂಟ್‌ಗಳು ಮತ್ತು 35 ಬೇಸಿಸ್ ಪಾಯಿಂಟ್‌ಗಳಿಂದ ರೆಪೋ ದರವನ್ನು ಶೇ 5.15ಕ್ಕೆ ಹೆಚ್ಚಿಸುವ ಸಂಭವನೀಯತೆಯನ್ನು ನಾವು ಈಗ ನಿರೀಕ್ಷಿಸುತ್ತೇವೆ. ಆ ನಂತರ ಬೆಳವಣಿಗೆಯ ಪರಿಣಾಮವನ್ನು ನಿರ್ಣಯಿಸಲು ವಿರಾಮ ನೀಡಲಾಗುತ್ತದೆ. ಈಗಿನಂತೆ, ನಾವು 2023ರ ಮಧ್ಯದ ವೇಳೆಗೆ ದರವನ್ನು ಶೇ 5.5ರಲ್ಲಿ ಎದುರು ನೋಡುತ್ತೇವೆ,” ಎಂದು ನಾಯರ್ ಸೇರಿಸಿದ್ದಾರೆ.

ಮೇ ತಿಂಗಳಲ್ಲಿ ಸಿಪಿಐ ಹಣದುಬ್ಬರವನ್ನು ಕಡಿಮೆ ಮಾಡುವ ಅನುಕೂಲಕರ ಸ್ಥಿತಿಯನ್ನು ನಾಯರ್ ಎದುರು ನೋಡುತ್ತಾರೆ, ಆದರೂ ಇದು ಶೇ 6.5ಕ್ಕಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರ್​ಬಿಐನ ಮುಂದಿನ ಹಣಕಾಸು ನೀತಿ ಸಭೆ ಜೂನ್ 6ರಿಂದ 8ರ ಮಧ್ಯೆ ನಡೆಸಲು ನಿರ್ಧರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Repo Rate: ರೆಪೋ ದರ ಏರಿಕೆಯೊಂದಿಗೆ ಸಾಲದ ಕಂತು ಆಗಲಿದೆ ಭಾರಿ, ಬಡ್ಡಿ ದರ ದುಬಾರಿ; ಗೃಹ, ವಾಹನ ಮೊದಲಾದ ಸಾಲ ವಜ್ಜೆ

Follow us on

Related Stories

Most Read Stories

Click on your DTH Provider to Add TV9 Kannada