Diwali Muhurat Trading: ದೀಪಾವಳಿ ಹಬ್ಬದ ಮುಹೂರ್ತ ಟ್ರೇಡಿಂಗ್​ಗೆ ಹೂಡಿಕೆ ತಜ್ಞರಿಂದ 5 ಕಂಪೆನಿಯ ಷೇರು ಶಿಫಾರಸು

| Updated By: Srinivas Mata

Updated on: Nov 02, 2021 | 7:42 PM

stock picks for muhurat trading: 2021ರ ದೀಪಾವಳಿ ಮುಹೂರ್ತ ಟ್ರೇಡಿಂಗ್​ಗೆ ಹೂಡಿಕೆ ತಜ್ಞರಾದ ಡಾ. ಬಾಲಾಜಿ ರಾವ್ ಅವರು ಶಿಫಾರಸು ಮಾಡಿದ 5 ಷೇರುಗಳ ಬಗ್ಗೆ ವಿವರಗಳು ಇಲ್ಲಿವೆ.

Diwali Muhurat Trading: ದೀಪಾವಳಿ ಹಬ್ಬದ ಮುಹೂರ್ತ ಟ್ರೇಡಿಂಗ್​ಗೆ ಹೂಡಿಕೆ ತಜ್ಞರಿಂದ 5 ಕಂಪೆನಿಯ ಷೇರು ಶಿಫಾರಸು
ಸಾಂದರ್ಭಿಕ ಚಿತ್ರ
Follow us on

ದೀಪಾವಳಿಗೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟಿಗೆ ಬಹಳ ಪ್ರಾಶಸ್ತ್ಯ. ಹೇಗೆ ಯುಗಾದಿಯನ್ನು ಹೊಸ ವರ್ಷ ಎಂದು ದಕ್ಷಿಣ ಭಾರತದಲ್ಲಿ ಕರೆಯಲಾಗುತ್ತದೋ ಅದೇ ರೀತಿ ದೀಪಾವಳಿ ಅಮಾವಾಸ್ಯೆಯಂದು ಉತ್ತರ ಭಾರತೀಯರಿಗೆ ಹೊಸ ವರ್ಷ. ಅಂದರೆ ಈ ಬಾರಿ ನವೆಂಬರ್ 4ನೇ ತಾರೀಕಿನಂದು ದೀಪಾವಳಿ ಅಮಾವಾಸ್ಯೆ ಇದೆ. ಆ ದಿನ ಷೇರು ಮಾರ್ಕೆಟ್​ನಲ್ಲಿ ಮುಹೂರ್ತ ಟ್ರೇಡಿಂಗ್ ಅಂತ ಮಾಡಲಾಗುತ್ತದೆ. ಸಾಮಾನ್ಯವಾಗಿ ವರ್ಷದ ಕೆಲವು ದಿನ ಮಾತ್ರ ಷೇರು ಮಾರ್ಕೆಟ್​ನಲ್ಲಿ ವಹಿವಾಟು ನಡೆಸುವವರು ಕೂಡ ಆ ದಿನ ಒಂದಾದರೂ ಷೇರನ್ನು ಖರೀದಿ ಮಾಡುತ್ತಾರೆ. ಏಕೆಂದರೆ, ಅದೊಂದು ಸೆಂಟಿಮೆಂಟ್. ಈ ಲೇಖನವನ್ನು ನೀವು ಓದುತ್ತಿರುವುದಕ್ಕೆ ಕಾರಣವಾದ ಲೇಖಕ ಕೂಡ ಅದಕ್ಕೆ ಹೊರತಲ್ಲ. ದೀಪಾವಳಿ ಅಮಾವಾಸ್ಯೆಯ ಮುಹೂರ್ತ ಟ್ರೇಡಿಂಗ್ ದಿನ ಕಡ್ಡಾಯವಾಗಿ ಷೇರು ಖರೀದಿ ಮಾಡುವುದು ಹೌದು. ಹಾಗಂತ ಯಾವುದಂದರೆ ಅದು ಕೊಳ್ಳಲ್ಲ. ಈ ಬಾರಿ ಟಿವಿ9 ಕನ್ನಡ ವೆಬ್​ಸೈಟ್​ ಓದುಗರಿಗಾಗಿಯೇ 5 ಅತ್ಯುತ್ತಮ ಕಂಪೆನಿಗಳನ್ನು ಆಯ್ಕೆ ಮಾಡಿ, ಅವುಗಳ ವಿವರ ಇಲ್ಲಿ ನೀಡಲಾಗುತ್ತಿದೆ. ಅವುಗಳನ್ನು ಏಕೆ ಕೊಳ್ಳಬಹುದು ಎಂಬುದಕ್ಕೆ ಕಾರಣವನ್ನೂ ನೀಡಲಾಗುತ್ತಿದೆ.

1) ಐಟಿಸಿ
ಭಾರತದ ಅತ್ಯಂತ ಹಳೆಯ ಹಾಗೂ ಅತ್ಯಂತ ವಿಶ್ವಾಸಾರ್ಹ ಕಂಪೆನಿಗಳಲ್ಲಿ ಐಟಿಸಿ ಸಹ ಒಂದು. ಎಫ್​ಎಂಸಿಜಿ, ಹೋಟೆಲ್, ಸಿಗರೆಟ್ ಹೀಗೆ ಅದರ ವ್ಯಾಪ್ತಿ ವಿಶಾಲವಾಗಿದೆ. ಈಗಿರುವ ಮಾರುಕಟ್ಟೆ ದರ 225 ರೂಪಾಯಿ. ಈ ಷೇರಿನ ಬೆಲೆ 300 ರೂಪಾಯಿಗೆ ಹೋಗುವ ಸಾಧ್ಯತೆ ಇದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶದಂತೆ ಐಟಿಸಿಯ ಮಾರಾಟ ಶೇ 13ರಷ್ಟು ಬೆಳವಣಿಗೆ ದಾಖಲಿಸಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಆಗಿರುವ ಏರಿಕೆ). ಸಿಗರೆಟ್​ನಿಂದ ಒಳ್ಳೆ ಆದಾಯ ಬಂದಿದೆ. ಐಟಿಸಿಯು ವಿತರಣೆ ಜಾಲವನ್ನು ಗಟ್ಟಿ ಮಾಡಲು ಒಳ್ಳೆ ಯೋಜನೆ ಹಾಕಿಕೊಂಡಿದೆ. ಇನ್ನು ಕೊವಿಡ್​ ನಿರ್ಬಂಧಗಳು ಕಡಿಮೆ ಆಗಿರುವುದರಿಂದ ಐಟಿಸಿ ಹೋಟೆಲ್ ಉತ್ತಮ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ.

2) ಶಾರದಾ ಕ್ರಾಪ್​ಕೆಮ್
ಕೀಟನಾಶಕ ಮತ್ತು ಕೃಷಿ ರಾಸಾಯನಿಕ ಕಂಪೆನಿ ಇದು. ದೇಶದ ಮೂರನೇ ಎರಡರಷ್ಟು ಭಾಗ ಕೃಷಿಯಲ್ಲಿ ತೊಡಗಿಕೊಂಡಿದೆ. ಕೃಷಿ ವಲಯಕ್ಕೆ ಸಂಬಂಧಿಸಿದ ಶಾರದಾ ಕ್ರಾಪ್​ ಕೆಮ್ ಅಂತ ಕಂಪೆನಿ ಇದೆ. ಇದರ ಸಾಲ ಪ್ರಮಾಣ ಶೇ 0.02ರಷ್ಟಿದೆ. ಹೆಚ್ಚು-ಕಡಿಮೆ ಸಾಲವೇ ಇಲ್ಲದಂತಾಯಿತು. ರಿಟರ್ನ್ ಆನ್ ಈಕ್ವಿಟಿ ಅಂತಿದೆ. ಅಂದರೆ 100 ರೂಪಾಯಿ ಈ ಕಂಪೆನಿಗೆ ನೀಡಿದರೆ 115 ರೂಪಾಯಿ ರಿಟರ್ನ್ ನೀಡುತ್ತದೆ. 315 ರೂಪಾಯಿ ಇರುವ ಈ ಷೇರು 400 ರೂಪಾಯಿ ಆಗಬಹುದು. ಈ ಬಾರಿ ಉತ್ತಮ ಮುಂಗಾರು ಆಗಿರುವುದು ಇದಕ್ಕೆ ಪೂರಕ ಆಗಿದೆ.

3) ವೇದಾಂತ
ಇದು ಅತ್ಯಂತ ಹಳೆಯ ಕಂಪೆನಿ. ಗಣಿಗಾರಿಕೆ ಮಾಡುವುದು ಇದರ ಉದ್ಯಮ. ಇದರ ಹಳೆಯ ಹೆಸರು ಸೆಸಗೋವಾ ಅಂತಿತ್ತು. ಈ ಕಂಪೆನಿಯದೊಂದು ವಿಶೇಷ ಇದೆ. ಇದರ ಪ್ರಮೋಟರ್ಸ್ ಬಳಿ ಶೇ 65ರಷ್ಟು ಷೇರು ಇದೆ. ಯಾವ ಕಂಪೆನಿಯ ಷೇರಿನ ಪ್ರಮಾಣ ಹೆಚ್ಚು ಪ್ರವರ್ತಕರ ಬಳಿ ಇದ್ದಲ್ಲಿ ಅದು ಉತ್ತಮ ಪ್ರದರ್ಶನ ನೀಡುತ್ತದೆ. ಸಾಂಸ್ಥಿಕ ಹೂಡಿಕೆದಾರರ ಬಳಿ ಶೇ 20ರಷ್ಟು ಪಾಲಿದೆ. ಸೆಪ್ಟೆಂಬರ್​ ತ್ರೈಮಾಸಿಕಕ್ಕೆ ಈ ಕಂಪೆನಿಯ ನಿವ್ವಳ ಲಾಭ 15033 ಕೋಟಿ ರೂಪಾಯಿ. ಈ ಹಿಂದಿನ ತ್ರೈಮಾಸಿಕದಲ್ಲಿ ಈ ಕಂಪೆನಿಯು 4743 ಕೋಟಿ ನಷ್ಟ ಅನುಭವಿಸಿತ್ತು. ಇನ್ನು ಫಲಿತಾಂಶ ಸ್ಥಿರವಾಗಿದೆ. ಜತೆಗೆ ಸಾಲ ಕೂಡ ಕಡಿಮೆ ಇದ್ದು, ಡಿವಿಡೆಂಡ್​ ಉತ್ತಮವಾಗಿ ನೀಡುತ್ತಾ, ರಿಟರ್ನ್ ಆನ್ ಈಕ್ವಿಟಿ ಷೇರು ಅತ್ಯುತ್ತಮವಾಗಿದೆ. ಅಂದಹಾಗೆ ಈ ಷೇರಿನ ಈಗಿನ ಮಾರುಕಟ್ಟೆ ಬೆಲೆ 308 ರೂಪಾಯಿ ಇದೆ.

4) ಇಮಾಮಿ
ಈ ಇಮಾಮಿ ಷೇರಿನ ಬೆಲೆ 558 ರೂಪಾಯಿ ಇದೆ. ಪರ್ಸನಲ್ ಕೇರ್ ಉತ್ಪನ್ನ ಸೇರಿದಂತೆ ಸಿಮೆಂಟ್​ ಮತ್ತಿತರ ಉತ್ಪನ್ನಗಳ ಮಾರಾಟ ಮಾಡುತ್ತದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 180 ಕೋಟಿ ರೂಪಾಯಿ ಬಂದಿದೆ. ರಿಟರ್ನ್ ಆನ್ ಈಕ್ವಿಟಿ 100 ರೂಪಾಯಿ ನೀಡಿದರೆ 26 ರೂಪಾಯಿ ರಿಟರ್ನ್ ನೀಡಿದ್ದಾರೆ. ಡೆಟ್​ ಟು ಈಕ್ವಿಟಿ ಶೇ 0.05 ಇದೆ. ಯಾವುದೇ ಕಂಪೆನಿ ಶೇ 1ಕ್ಕಿಂತ ಕಡಿಮೆ ಇದ್ದಲ್ಲಿ ಕಣ್ಣು ಮುಚ್ಚಿಕೊಂಡು ಖರೀದಿಸಬಹುದು. ಈ ಕಂಪೆನಿ ಪ್ರತಿ ವರ್ಷ ಡಿವಿಡೆಂಡ್ ನೀಡುತ್ತಿದೆ. ಮೂರು ಸಲ ಬೋನಸ್ ನೀಡಿದೆ.

5) ಗುಜರಾತ್ ಗ್ಯಾಸ್
ಇದು ಅನಿಲ ಕಂಪೆನಿ. ಗುಜರಾತ್ ಕಂಪೆನಿಯ ಈಗಿನ ಮಾರುಕಟ್ಟೆ ದರ 639 ರೂಪಾಯಿ. ಇದು ಕಳೆದ ಒಂದು ವರ್ಷದಲ್ಲಿ 770 ರೂಪಾಯಿಯಿಂದ ಈಗಿನ ದರಕ್ಕೆ ಬಂದಿದೆ. ಇದರ ಸಾಲ ಐದು ವರ್ಷದ ಹಿಂದೆ 1.3 ಇತ್ತು. ಡೆಟ್ ಈಕ್ವಿಟಿ ರೇಷಿಯೋ 1ಕ್ಕಿಂತ ಕಡಿಮೆ ಇರಬೇಕು. ಅದೀಗ 0.17 ಇದೆ. ಇದೆಲ್ಲ ಉತ್ತಮ ಸೂಚನೆ. ಇದರ ನಿವ್ವಳ ಲಾಭ ಕಳೆದ 5 ವರ್ಷದಲ್ಲಿ 219 ಕೋಟಿಯಿಂದ 1270 ಕೋಟಿ ರೂ.ಗೆ ಏರಿದೆ. ಪ್ರವರ್ತಕರ ಹೋಲ್ಡಿಂಗ್ ಶೇ 61, ಸಾಂಸ್ಥಿಕ ಹೂಡಿಕೆದಾರರು ಶೇ 16ರಷ್ಟು ಪಾಲು ಹೊಂದಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎನ್​ಜಿ ಬಳಕೆ ಹೆಚ್ಚಾಗಿದೆ. ಆದ್ದರಿಂದ ಈ ಷೇರಿನ ಬೆಲೆ 800 ರೂಪಾಯಿ ತನಕ ಏರಬಹುದು.

ಇಲ್ಲಿ ನೀಡಿರುವ ಷೇರುಗಳು ಉತ್ತಮವಾದವು. ಆದರೆ ಇದು ಕೆಳಗೆ ಬಿದ್ದುಹೋದರೆ ಏನು ಮಾಡೋದು ಎಂಬ ಪ್ರಶ್ನೆ ನಿಮಗಿದ್ದಲ್ಲಿ, ಈ ಜಗತ್ತಿನಲ್ಲಿ ಯಾವುದಕ್ಕೂ ಗ್ಯಾರಂಟಿ ಎಂಬುದಿಲ್ಲ. ಆದರೆ ಈ ಕಂಪೆನಿ ಷೇರುಗಳು ಮೂಲಭೂತವಾಗಿ ಬಲಿಷ್ಠವಾಗಿರುವಂಥವು. ಖರೀದಿ ಮಾಡಿದ ನಂತರ ಬೆಲೆ ಬಿದ್ದುಹೋದರೂ ಮತ್ತೆ ಏರಿಕೆ ಆಗುವುದನ್ನು ನಿರೀಕ್ಷೆ ಮಾಡಬಹುದು. ಇವುಗಳಿಗೆ ಇರುವ ಸಾಲದ ಪ್ರಮಾಣದ, ಡೆಟ್ ಟು ಈಕ್ವಿಟಿ ರೇಷಿಯೋ, ರಿಟರ್ನ್ ಆನ್ ಈಕ್ವಿಟಿ ಇಂಥ ಅಂಶಗಳನ್ನೆಲ್ಲ ಗಮನಿಸಿಯೇ ಶಿಫಾರಸು ಮಾಡಲಾಗಿದೆ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಮತ್ತು ಶಿಫಾರಸು ಲೇಖಕರವು. ಇದಕ್ಕೂ ಟಿವಿ9 ಡಿಜಿಟಲ್ ಕನ್ನಡಕ್ಕೂ ಸಂಬಂಧವಿಲ್ಲ. ಇದು ಹಣಕ್ಕೆ ಸಂಬಂಧಿಸಿದ ವ್ಯವಹಾರವಾದ್ದರಿಂದ ತಜ್ಞರನ್ನೊಮ್ಮೆ ಸಂಪರ್ಕಿಸಿ, ಆ ನಂತರ ವಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು)

ಲೇಖಕರು: ಡಾ. ಬಾಲಾಜಿ ರಾವ್, ಹೂಡಿಕೆ ತಜ್ಞರು

ಇದನ್ನೂ ಓದಿ: Muhurat trading 2021: ನವೆಂಬರ್​ 4ಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು; ಅವಧಿ, ಮಹತ್ವ, ವಿಶೇಷ ಮತ್ತಿತರ ವಿವರ

Published On - 7:38 pm, Tue, 2 November 21