
ಬೆಂಗಳೂರು (ಸೆ. 17): ಸ್ಮಾರ್ಟ್‌ಫೋನ್‌ಗಳ (Smartphone) ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ಮಾರುಕಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ಸಾಮಾನ್ಯವಾಗಿದ್ದ 2GB ಮತ್ತು 3GB RAM ಹೊಂದಿರುವ ಬಜೆಟ್ ಫೋನ್‌ಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ 10 ಸಾವಿರಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಇಂತಹ ಫೋನ್‌ಗಳು ಮತ್ತೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಕಣ್ಮರೆಯಾಗಿದ್ದ ಈ ಫೋನುಗಳು ಈಗ ಮತ್ತೆ ಬರಲು ಏನು ಕಾರಣ?.
ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಕಂಪನಿಗಳು ದುಬಾರಿ ಹಾಗೂ ಪ್ರೀಮಿಯಂ ಮಾದರಿಗಳತ್ತ ಹೆಚ್ಚಿನ ಗಮನ ಹರಿಸುತ್ತಿವೆ. ಇದರಿಂದ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳ ಆಯ್ಕೆಗಳು ಕಡಿಮೆಯಾಗಿವೆ. ಪ್ರೊಸೆಸರ್ ಮತ್ತು ಮೆಮೊರಿ ಸೇರಿದಂತೆ ಹಲವು ಪ್ರಮುಖ ಬಿಡಿಭಾಗಗಳ ಬೆಲೆ ಹೆಚ್ಚಾಗಿರುವುದೂ ಕಡಿಮೆ ಬೆಲೆಯ ಫೋನ್‌ಗಳನ್ನು ತಯಾರಿಸುವುದು ಕಂಪನಿಗಳಿಗೆ ಕಷ್ಟವಾಗಲು ಒಂದು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಈ ವಿಭಾಗದ ಕುಸಿತ ಎಷ್ಟಿದೆ ಎಂಬುದನ್ನು ಅಂಕಿ-ಅಂಶಗಳೂ ತೋರಿಸುತ್ತವೆ. ಸಂಶೋಧನಾ ಸಂಸ್ಥೆ ಐಡಿಸಿ ಪ್ರಕಾರ, 2026ರ ಎರಡನೇ ತ್ರೈಮಾಸಿಕದಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸಾಗಣೆ ಶೇಕಡ 74.3ರಷ್ಟು ಕುಸಿದಿದೆ. ಇದೇ ಅವಧಿಯಲ್ಲಿ ಒಟ್ಟಾರೆ ಮಾರುಕಟ್ಟೆಯಲ್ಲಿ ಈ ವಿಭಾಗದ ಪಾಲು ಶೇಕಡ 15.6ರಿಂದ ಕೇವಲ 4.5ಕ್ಕೆ ಇಳಿದಿದೆ.
ದೊಡ್ಡ ಬ್ರ್ಯಾಂಡ್‌ಗಳು ಬಜೆಟ್ ವಿಭಾಗದಿಂದ ಹಿಂದೆ ಸರಿಯುತ್ತಿರುವ ಸಂದರ್ಭದಲ್ಲಿ ಐಟೆಲ್, ಲಾವಾ ಸೇರಿದಂತೆ ಕೆಲವು ಸಣ್ಣ ಮತ್ತು ಹೊಸ ಬ್ರ್ಯಾಂಡ್‌ಗಳು ಕಡಿಮೆ ಬೆಲೆಯ ಫೋನ್‌ಗಳತ್ತ ಗಮನ ಹರಿಸುತ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ವೇದಿಕೆಗಳಲ್ಲಿಯೂ ಕೆಲವು ಹೊಸ ಬ್ರ್ಯಾಂಡ್‌ಗಳ ಪ್ರವೇಶ ಹಂತದ ಫೋನ್‌ಗಳು ಮಾರಾಟವಾಗುತ್ತಿವೆ. ಇವುಗಳಲ್ಲಿ ಆಕರ್ಷಕ ವಿನ್ಯಾಸದ ಜತೆಗೆ ಮೂಲಭೂತ ಹಾರ್ಡ್‌ವೇರ್ ನೀಡಲಾಗುತ್ತಿದೆ.
ವರದಿಯ ಪ್ರಕಾರ, ಮುಂಬರುವ ಹಬ್ಬದ ಋತುವಿನ ಮುನ್ನ 2GB ಮತ್ತು 3GB RAM ಹೊಂದಿರುವ ಇನ್ನಷ್ಟು ಫೋನ್‌ಗಳು ಮಾರುಕಟ್ಟೆಗೆ ಬರಬಹುದು. ಇವುಗಳ ಬೆಲೆ ಸುಮಾರು 8 ಸಾವಿರದಿಂದ 9 ಸಾವಿರದೊಳಗೆ ಇರಬಹುದೆಂದು ವರದಿ ಹೇಳಿದೆ.
10 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ, ವಿಶೇಷವಾಗಿ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ, ಇನ್ನೂ ಬೇಡಿಕೆ ಇದೆ ಎಂದು ಉದ್ಯಮದ ಮೂಲಗಳು ಹೇಳಿವೆ. ಇದೇ ಬೇಡಿಕೆಯನ್ನು ಪೂರೈಸಲು ಕಡಿಮೆ RAM ಹಾಗೂ ಹಳೆಯ ತಂತ್ರಜ್ಞಾನ ಹೊಂದಿರುವ ಹಾರ್ಡ್‌ವೇರ್ ಬಳಸಿ ಹೊಸ ಬಜೆಟ್ ಫೋನ್‌ಗಳನ್ನು ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.
ಹೀಗಾಗಿ, ಒಂದು ಕಾಲದಲ್ಲಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಸಾಮಾನ್ಯವಾಗಿದ್ದ 2GB ಮತ್ತು 3GB RAM ಮತ್ತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಇಂತಹ ಫೋನ್‌ಗಳನ್ನು ಖರೀದಿಸುವಾಗ RAM ಮಾತ್ರವಲ್ಲದೆ, ಪ್ರೊಸೆಸರ್, ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಸ್ಟೋರೇಜ್, ಬ್ಯಾಟರಿ ಮತ್ತು 4G/5G ಬೆಂಬಲದಂತಹ ಅಂಶಗಳನ್ನೂ ಪರಿಶೀಲಿಸುವುದು ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ