AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು

Adani Group Paytm deal: ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಗೌತಮ್ ಅದಾನಿ ಅವರು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ತೇಲಿ ಬಂದಿದೆ. ಕೆಲ ಕಾಲದಿಂದ ಅದಾನಿ ಮತ್ತು ವಿಜಯ್ ಶೇಖರ್ ಮಧ್ಯೆ ಮಾತುಕತೆ ನಡೆಯುತ್ತಿದ್ದು ಮೇ 28ರಂದು ಒಪ್ಪಂದದ ಅಂಶ ಅಂತಿಮಗೊಳಿಸುವ ಸಂಬಂಧ ಇಬ್ಬರ ಭೇಟಿ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಪೇಟಿಎಂ ಮಾಲೀಕ ಒನ್97 ಕಮ್ಯೂನಿಕೇಶನ್ಸ್ ಈ ಸುದ್ದಿಯನ್ನು ಅಲ್ಲಗಳೆದಿದೆ.

ಪೇಟಿಎಂ ಖರೀದಿಸಲು ಮುಂದಾದ್ರಾ ಅದಾನಿ? ಇಲ್ಲ ಎನ್ನುತ್ತಿವೆ ಎರಡೂ ಸಂಸ್ಥೆಗಳು
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2024 | 11:04 AM

Share

ನವದೆಹಲಿ, ಮೇ 29: ಅದಾನಿ ಗ್ರೂಪ್ ಸಂಸ್ಥೆ ಡಿಜಿಟಲ್ ಪೇಮೆಂಟ್ಸ್ ಕ್ಷೇತ್ರಕ್ಕೆ (digital payments) ಕಾಲಿಡಲು ಯೋಜಿಸುತ್ತಿದೆ ಎನ್ನುವಂತಹ ಸುದ್ದಿ ಬಂದ ಬೆನ್ನಲ್ಲೇ ಪೇಟಿಎಂ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಖರೀದಿಸಲು ಗೌತಮ್ ಅದಾನಿ (Gautam Adani) ಮುಂದಾಗಿದ್ದಾರೆ ಎನ್ನುವ ಸುದ್ದಿ ಇದೆ. ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ. ಅಹ್ಮದಾಬಾದ್​​ನಲ್ಲಿರುವ ಗೌತಮ್ ಅದಾನಿ ಅವರ ಕಚೇರಿಗೆ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಭೇಟಿ ನೀಡಿದ್ದರು. ಪೇಟಿಎಂ ಅದಾನಿ ಗ್ರೂಪ್ ಮಧ್ಯೆ ಒಪ್ಪಂದ ರೂಪುರೇಖೆ ಅಂತಿಮಗೊಳಿಸಲು ಈ ಭೇಟಿ ನಡೆದಿದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಎರಡೂ ಸಂಸ್ಥೆಗಳು ಈ ಬೆಳವಣಿಗೆಯನ್ನು ನಿರಾಕರಿಸಿವೆ. ‘ಇದು ಕೇವಲ ಗಾಳಿ ಸುದ್ದಿ. ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ (ಪೇಟಿಎಂ ಮಾಲಕ) ಈ ಸಂಬಂಧ ಯಾವ ಚರ್ಚೆಯಲ್ಲೂ ಭಾಗಿಯಾಗಿಲ್ಲ’ ಎಂದು ಹೇಳಿದೆ.

ಅದೇನೇ ಆದರೂ ಇಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪೇಟಿಎಂ ಮತ್ತು ಅದಾನಿ ಗ್ರೂಪ್ ಮಧ್ಯೆ ಒಪ್ಪಂದ ಆಗಬಹುದು ಎಂಬ ಸುದ್ದಿ ಬಂದ ಬೆನ್ನಲ್ಲೇ ಪೇಟಿಎಂ ಷೇರು ಅಪ್ಪರ್ ಸರ್ಕ್ಯುಟ್​ಗೆ (ಏರಿಕೆ ಮಿತಿ) ಏರಿದೆ. ಹಲವು ಸಂಕಷ್ಟಗಳಿಗೆ ಸಿಲುಕಿರುವ ಪೇಟಿಎಂ ಅದಾನಿ ಗ್ರೂಪ್ ಪಾಲಾಗುವುದನ್ನು ಮಾರುಕಟ್ಟೆ ಸ್ವಾಗತಿಸಲು ಸಿದ್ಧವಿದ್ದಂತಿದೆ. ಐಪಿಒದಲ್ಲಿ ಸೂಪರ್ ಸ್ಟಾರ್ ಆಗಿದ್ದ ಪೇಟಿಎಂ ಷೇರು ಮೌಲ್ಯ ಶೇ. 75ಕ್ಕಿಂತಲೂ ಕಡಿಮೆಗೆ ಕುಸಿದಿದೆ.

ಇದನ್ನೂ ಓದಿ: ಅಂಬಾನಿ ಅಡ್ಡೆಗೆ ಇಳಿಯುತ್ತಾರಾ ಅಡಾನಿ?; ಯುಪಿಐ, ಕ್ರೆಡಿಟ್ ಕಾರ್ಡ್, ಇಕಾಮರ್ಸ್ ಬಿಸಿನೆಸ್​ಗೆ ಇಳಿಯಲು ಸಜ್ಜು

ಪತ್ರಿಕೆ ವರದಿಯಲ್ಲಿ ಏನಿದೆ?

ಗೌತಮ್ ಅದಾನಿ ಮತ್ತು ವಿಜಯ್ ಶೇಖರ್ ಶರ್ಮಾ ಮಧ್ಯೆ ಇತ್ತೀಚೆಗೆ ಕೆಲ ಕಾಲದಿಂದ ಮಾತುಕತೆಗಳು ನಡೆಯುತ್ತಿವೆ. ನಿನ್ನೆ ಮಂಗಳವಾರ (ಮೇ 28) ಪೇಟಿಎಂ ಸಂಸ್ಥಾಪಕರು ಅಹ್ಮದಾಬಾದ್​ನಲ್ಲಿ ಗೌತಮ್ ಅದಾನಿಯನ್ನು ಭೇಟಿ ಮಾಡಿ ಒಪ್ಪಂದದ ಅಂಶಗಳನ್ನು ಅಂತಿಮಗೊಳಿಸುವ ಸಂಬಂಧ ಮಾತುಕತೆ ನಡೆಸಿದರು ಎನ್ನಲಾಗಿದೆ.

ಗೌತಮ್ ಅದಾನಿ ಕೂಡ ಪಶ್ಚಿಮ ಏಷ್ಯಾದಿಂದ ಹೂಡಿಕೆದಾರರನ್ನು ಪೇಟಿಎಂ ಕಡೆಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಹೇಳಲಾಗಿದೆ.

ಒನ್97 ಕಮ್ಯೂನಿಕೇಶನ್ಸ್​ನಲ್ಲಿ ವಿಜಯ್ ಶೇಖರ್ ಶರ್ಮಾ ಶೇ. 19ರಷ್ಟು ಷೇರುಪಾಲು ಹೊಂದಿದ್ದಾರೆ. ಸೇಫ್ ಪಾರ್ಟ್ನರ್ಸ್ ಸಂಸ್ಥೆ ಶೇ. 15, ಆಂಟ್​ಫಿನ್ ನೆದರ್​ಲ್ಯಾಂಡ್ಸ್ ಶೇ. 10, ಹಾಗೂ ಕಂಪನಿಯ ನಿರ್ದೇಶಕರು ಶೇ. 9ರಷ್ಟು ಷೇರುಗಳನ್ನು ಹೊಂದಿದ್ದಾರೆ. ಆಂಟ್​ಫಿನ್ ನೆದರ್​ಲ್ಯಾಂಡ್ಸ್ ಸಂಸ್ಥೆ ಚೀನಾ ಮೂಲದ ಜ್ಯಾಕ್ ಮಾ ಅವರು ಸ್ಥಾಪಿಸಿರುವ ಕಂಪನಿ.

ಇದನ್ನೂ ಓದಿ: ನರೇಂದ್ರ ಮೋದಿ ಬರದಿದ್ದರೂ ಸರ್ಕಾರದ ಆರ್ಥಿಕ ನೀತಿ ನಿಲ್ಲುವುದಿಲ್ಲ: ರಘುರಾಮ್ ರಾಜನ್

ಒಂದು ವೇಳೆ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಯನ್ನು ಅದಾನಿ ಗ್ರೂಪ್ ಖರೀದಿಸಬೇಕೆಂದಿದ್ದರೆ ಸೆಬಿ ನಿಯಮಗಳ ಪ್ರಕಾರ ಅದು ಮೊದಲಿಗೆ ಶೇ. 25 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಷೇರನ್ನು ಖರೀದಿಸಬೇಕು. ಬಳಿಕ ಕನಿಷ್ಠ ಶೇ. 26ರಷ್ಟು ಪಾಲು ಖರೀದಿಗೆ ಅದಾನಿ ಗ್ರೂಪ್ ಓಪನ್ ಆಫರ್ ಕೊಡಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ