ಗೃಹಜ್ಯೋತಿ ಸ್ಕೀಮ್: ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ?
How to delink Aadhaar from Griha jyoti scheme: ಗೃಹಜ್ಯೋತಿ ಸ್ಕೀಮ್ ರಾಜ್ಯಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಬಹುತೇಕ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಇನ್ನೂರು ಯುನಿಟ್ಗಳೊಳಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತವಾಗಿ ವಿದ್ಯುತ್ ಒದಗಿಸುವ ಈ ಯೋಜನೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗುತ್ತದೆ. ಒಂದು ಕಡೆ ಲಿಂಕ್ ಆಗಿರುವ ಆಧಾರ್ ಅನ್ನು ಇನ್ನೊಂದು ಕನೆಕ್ಷನ್ಗೆ ಲಿಂಕ್ ಮಾಡಲು ಆಗುವುದಿಲ್ಲ. ಮನೆ ಬದಲಾಯಿಸುವ ಬಾಡಿಗೆದಾರರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಸರ್ಕಾರ ಇದನ್ನು ಪರಿಗಣಿಸಿ, ಬಿದ್ಯುತ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವ ಅವಕಾಶ ಕೊಟ್ಟಿದೆ.

ಬೆಂಗಳೂರು, ಮೇ 29: ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಸ್ಕೀಮ್ಗಳಲ್ಲಿ ಗೃಹಜ್ಯೋತಿ ಯೋಜನೆಯೂ (Gruha Jyothi scheme) ಒಂದು. ಪ್ರತೀ ಮನೆಗೂ 200 ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ಸರಬರಾಜು (free electricity) ಒದಗಿಸುವ ಯೋಜನೆ ಇದಾಗಿದೆ. ಪ್ರತೀ ಬೆಸ್ಕಾಂ ಖಾತೆಗೂ (ESCOM electricity connection) ಒಂದು ಆಧಾರ್ ನಂಬರ್ ಅನ್ನು ಲಿಂಕ್ ಮಾಡಿದರೂ ಸಾಕು ಗೃಹಜ್ಯೋತಿ ಸ್ಕೀಮ್ ಚಾಲೂ ಆಗುತ್ತದೆ. 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ವ್ಯಯಿಸುವ ಮನೆಗಳಿಗೆ ಈ ಸ್ಕೀಮ್ ಅನ್ವಯ ಆಗುತ್ತದೆ. ಬಾಡಿಗೆ ಮನೆಯಲ್ಲಿರುವವರು ವಿದ್ಯುತ್ ಬಿಲ್ಗೆ ತಮ್ಮ ಆಧಾರ್ ನಂಬರ್ ಜೋಡಿಸಿರುತ್ತಾರೆ. ಇಂಥ ಬಾಡಿಗೆದಾರರು ಮನೆ ಬದಲಾಯಿಸಿ ಬೇರೆ ಮನೆಗೆ ಬಾಡಿಗೆಗೆ ಹೋದಾಗ ಹೇಗೆ? ಹಿಂದಿನ ಮನೆಯ ವಿದ್ಯುತ್ ಬಿಲ್ಗೆ ಆಧಾರ್ ಲಿಂಕ್ ಆಗಿರುವುದರಿಂದ ಬದಲಾಯಿಸಲಾದ ಮನೆಯ ವಿದ್ಯುತ್ ಬಿಲ್ಗೆ ಅದೇ ಆಧಾರ್ ಜೋಡಿಸಲು ಆಗುವುದಿಲ್ಲ. ಬಹಳಷ್ಟು ಬಾಡಿಗೆದಾರರು ಇದೇ ವಿಚಾರವಾಗಿ ಪರಿತಪಿಸುತ್ತಿದ್ದಾರೆ.
ಈ ಸಮಸ್ಯೆಯು ಸರ್ಕಾರ ಮತ್ತು ಎಸ್ಕಾಂಗಳ ಅರಿವಿಗೆ ಬಂದಿದೆ. ಗೃಹಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಬಿಲ್ನಿಂದ ಆಧಾರ್ ಅನ್ನು ಡೀಲಿಂಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆಫ್ಲೈನ್ನಲ್ಲಿ ಇದನ್ನು ಮಾಡಬಹುದು. ಅಂದರೆ ನಿಮ್ಮ ಎಸ್ಕಾಂ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಡೀಲಿಂಕ್ ಮಾಡಬಹುದು. ಆನ್ಲೈನ್ನಲ್ಲಿ ಸೇವಾ ಸಿಂಧು ಪೋರ್ಟಲ್ನಲ್ಲಿ ಆದಷ್ಟೂ ಬೇಗ ಈ ಸೌಲಭ್ಯ ಲಭ್ಯ ಇರಲಿದೆ ಎಂಬ ಮಾಹಿತಿ ಗೊತ್ತಾಗಿದೆ.
ಆಫ್ಲೈನ್ನಲ್ಲಿ ಗೃಹಜ್ಯೋತಿ ಸ್ಕೀಮ್ನಿಂದ ಆಧಾರ್ ಡೀಲಿಂಕ್ ಮಾಡುವ ಪ್ರಕ್ರಿಯೆ
ನಿಮ್ಮ ಮನೆಗೆ ಸಮೀಪದ ಎಸ್ಕಾಂ ಕಚೇರಿಗೆ ಹೋಗಿ ಆಧಾರ್ ಡೀಲಿಂಕ್ ಮಾಡಿಸಬಹುದು. ಮನೆಯ ವಿದ್ಯುತ್ ಬಿಲ್, ಲಿಂಕ್ ಆಗಿರುವ ಆಧಾರ್ ಕಾರ್ಡ್ ಪ್ರತಿ, ನಿಮ್ಮ ಭಾವಚಿತ್ರ, ಬಾಡಿಗೆ ಕರಾರು ಪತ್ರ ಈ ದಾಖಲಾತಿಗಳನ್ನು ಜೊತೆಯಲ್ಲಿ ಕೊಂಡೊಯ್ಯಿರಿ. ಹಾಗೆಯೇ, ಗೃಹಜ್ಯೋತಿ ಸ್ಕೀಮ್ಗೆ ಅರ್ಜಿ ಸಲ್ಲಿಸಲಾಗಿದ್ದ ಅಪ್ಲಿಕೇಶನ್ ನಂಬರ್ ಮತ್ತು ಮೊಬೈಲ್ ನಂಬರ್ನ ಮಾಹಿತಿಯನ್ನು ಕಚೇರಿಯಲ್ಲಿ ತಿಳಿಸಬೇಕಾಗುತ್ತದೆ.
ಇದನ್ನೂ ಓದಿ: ಪಾನ್ ಕಾರ್ಡ್ಗೆ ಆಧಾರ್ ಲಿಂಕ್; ಮೇ 31ಕ್ಕೆ ಡೆಡ್ಲೈನ್; ಮೀರಿದರೆ ಕಷ್ಟಕಷ್ಟ; ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ
ಆನ್ಲೈನ್ನಲ್ಲಿ ಗೃಹಜ್ಯೋತಿ ಯೋಜನೆ ರದ್ದು ಮಾಡುವ ಕ್ರಮ
ಆನ್ಲೈನ್ನಲ್ಲಿ ಗೃಹ ಜ್ಯೋತಿ ಸ್ಕೀಮ್ ಅಡಿಯಲ್ಲಿ ಆಧಾರ್ ಡೀಲಿಂಕ್ ಮಾಡುವ ಸೌಲಭ್ಯ ಈಗ ಇಲ್ಲ. ಶೀಘ್ರದಲ್ಲೇ ಇದು ಲಭ್ಯವಾಗಲಿದೆ. ಆಗ ನೀವು ಸೇವಾ ಸಿಂಧು ವೆಬ್ಸೈಟ್ಗೆ ಹೋಗಿ ಸ್ಕೀಮ್ ಕ್ಯಾನ್ಸಲ್ ಮಾಡಬಹುದು. ಪೋರ್ಟಲ್ನ ವಿಳಾಸ ಇಂತಿದೆ: sevasindhugs1.karnataka.gov.in/gruhajyothi
ಇಲ್ಲಿ ಮುಖ್ಯಪುಟದಲ್ಲಿ ‘ಗೃಹಜ್ಯೋತಿ ಅರ್ಜಿ ರದ್ದುಗೊಳಿಸಿ’ ಎನ್ನುವ ಲಿಂಕ್ ಇರುತ್ತದೆ.
ರದ್ದುಗೊಳಿಸಲು ಇರುವ ಕಾರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
ಅಲ್ಲಿ ಕೇಳಲಾದ ದಾಖಲೆಗಳ ಸ್ಕ್ಯಾನ್ಡ್ ಕಾಪಿ ಅಥವಾ ಫೋಟೋಕಾಪಿಯನ್ನು ಅಪ್ಲೋಡ್ ಮಾಡಿ ಸಲ್ಲಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ