ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅಬ್ಬರ; ಸ್ಥಳೀಯ ಉತ್ಪಾದನೆಗೂ ಮುಂದು
Africa becoming growth engine for Indian FMCG giants: ಮುಂದಿನ ದಿನಗಳು ಭಾರತ, ಆಫ್ರಿಕಾದಂತಹ ತೃತೀಯ ಜಗತ್ತಿಗೆ ಸೇರಿವೆ. ಆಫ್ರಿಕನ್ ದೇಶಗಳು ಉತ್ತಮ ಬೆಳವಣಿಗೆ ಹೊಂದುತ್ತಿದ್ದು, ಆಫ್ರಿಕಾ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಭಾರತೀಯ ಕಂಪನಿಗಳಿಗೆ ಆಫ್ರಿಕಾ ರಫ್ತು ಮಾರುಕಟ್ಟೆಯಾಗಿ ಉಳಿಯದೆ ಗ್ರೋತ್ ಎಂಜಿನ್ ಎನಿಸಿವೆ.

ಮುಖ್ಯಾಂಶಗಳು
- ಮುಂದಿನ ದಿನಗಳು ಭಾರತ, ಆಫ್ರಿಕಾದಂತಹ ತೃತೀಯ ಜಗತ್ತಿಗೆ ಸೇರಿವೆ.
- ಆಫ್ರಿಕನ್ ದೇಶಗಳು ಉತ್ತಮ ಬೆಳವಣಿಗೆ ಹೊಂದುತ್ತಿದ್ದು, ಆಫ್ರಿಕಾ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ.
- ಭಾರತೀಯ ಕಂಪನಿಗಳಿಗೆ ಆಫ್ರಿಕಾ ರಫ್ತು ಮಾರುಕಟ್ಟೆಯಾಗಿ ಉಳಿಯದೆ ಗ್ರೋತ್ ಎಂಜಿನ್ ಎನಿಸಿವೆ.
ನವದೆಹಲಿ, ಜೂನ್ 26: ಭಾರತದ ಎಫ್ಎಂಸಿಜಿ (FMCG) ಕಂಪನಿಗಳಿಗೆ ಈಗ ಆಫ್ರಿಕಾ ಒಂದು ಮಾರುಕಟ್ಟೆ ಮಾತ್ರವೇ ಆಗಿ ಉಳಿದಿಲ್ಲ. ಅದು ಈ ಕಂಪನಿಗಳ ಬ್ಯುಸಿನೆಸ್ಗೆ ಗ್ರೋತ್ ಎಂಜಿನ್ ಆಗಿದೆ. ಅಲ್ಲಿ ಭಾರತೀಯ ಕಂಪನಿಗಳು ನೆಲೆ ಭದ್ರಪಡಿಸಿಕೊಳ್ಳುತ್ತಿರುವುದು ಎಕನಾಮಿಕ್ ಟೈಮ್ಸ್ ವರದಿಯೊಂದರಿಂದ ತಿಳಿದುಬಂದಿದೆ. ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಮ್ಯಾರಿಕೋ, ಡಾಬರ್ ಮತ್ತು ವರುಣ್ ಬೆವರೇಜಸ್ನಂತಹ ಭಾರತದ ದೈತ್ಯ ಕಂಪನಿಗಳು ಆಫ್ರಿಕಾವನ್ನು ಕೇವಲ ರಫ್ತು ಮಾಡುವ ದೇಶವನ್ನಾಗಿ ನೋಡದೆ, ತಮ್ಮ ದೀರ್ಘಕಾಲದ ಪ್ರಮುಖ ಬೆಳವಣಿಗೆಯ ಕೇಂದ್ರವನ್ನಾಗಿ (Growth Engine) ಪರಿಗಣಿಸುತ್ತಿವೆಯಂತೆ. ಆಫ್ರಿಕಾದಲ್ಲಿನ ಯುವ ಜನಸಂಖ್ಯೆ ಮತ್ತು ಶರವೇಗದ ನಗರೀಕರಣವು ಇವರ ಈ ದೊಡ್ಡ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
ಭಾರತದ ಎಫ್ಎಂಸಿಜಿ ಕಂಪನಿಗಳ ಪಾಲಿಗೆ ಆಫ್ರಿಕನ್ ದೇಶಗಳು ಉತ್ಪನ್ನಗಳ ಮಾರಾಟ ಕೇಂದ್ರಗಳಂತಿದ್ದವು. ಇಲ್ಲಿ ಮಾರುಕಟ್ಟೆ ಪ್ರವೇಶ ಮಾಡುವುದು ಈ ಕಂಪನಿಗಳ ಪ್ರಯತ್ನವಾಗಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ದೊಡ್ಡ ಮಟ್ಟದ ಬ್ಯುಸಿನೆಸ್ ವಿಸ್ತರಣೆಯ ಅವಕಾಶ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಬಹಳ ವಿಸ್ತಾರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಭಾರತೀಯ ಕಂಪನಿಗಳು ಆಫ್ರಿಕಾದಲ್ಲಿ ಮ್ಯಾನುಫ್ಯಾಕ್ಚರಿಂಗ್, ಡಿಸ್ಟ್ರಿಬ್ಯೂಶನ್ ಜಾಲಕ್ಕೆ ಭರ್ಜರಿ ಹೂಡಿಕೆ ಮಾಡುತ್ತಿವೆ. ಸ್ಥಳೀಯ ಬ್ರ್ಯಾಂಡ್ಗಳನ್ನು ಕಟ್ಟಿ ವ್ಯಾಪಾರಾವಕಾಶ ಹೆಚ್ಚಿಸಲು ಯೋಜಿಸಿವೆ.
ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ (GCPL) ಭರ್ಜರಿ ಬ್ಯುಸಿನೆಸ್
ಆಫ್ರಿಕಾದಲ್ಲಿ ಈಗಾಗಲೇ ಭದ್ರವಾಗಿ ನೆಲೆಸಿರುವ ಗೋದ್ರೇಜ್ ಕಂಪನಿಯ ಹೇರ್ ಕೇರ್ ಮತ್ತು ಏರ್ ಕೇರ್ ಉತ್ಪನ್ನಗಳು ಶೇ. 20 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುತ್ತಿವೆ. ಕಂಪನಿಯು ಮುಂದಿನ ದಿನಗಳಲ್ಲೂ ಇಲ್ಲಿ ದೊಡ್ಡ ಹೂಡಿಕೆಯನ್ನು ಮುಂದುವರಿಸಲು ಯೋಜಿಸಿದೆ.
ವರುಣ್ ಬೆವರೇಜಸ್ (VBL) ಸಾಮ್ರಾಜ್ಯ ವಿಸ್ತರಣೆ
ಪೆಪ್ಸಿಕೋ ಉತ್ಪನ್ನಗಳ ಪ್ರಮುಖ ಬಾಟ್ಲಿಂಗ್ ಕಂಪನಿಯಾದ ವರುಣ್ ಬೆವರೇಜಸ್ ಮೊರಾಕೊ, ಜಿಂಬಾಬ್ವೆ, ಜಾಂಬಿಯಾ, ಕಾಂಗೋ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಸಾಫ್ಟ್ ಡ್ರಿಂಕ್ಸ್ ಕಂಪನಿಯಾದ ‘ಟ್ವಿಜ್ಜಾ’ (Twizza) ಅನ್ನು ಖರೀದಿಸಿರುವುದು ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಕಂಪನಿಯು ಕೀನ್ಯಾದಲ್ಲಿ ಡೈರಿ (ಡೈರಿ ಉತ್ಪನ್ನಗಳು) ವ್ಯವಹಾರವನ್ನೂ ನಡೆಸುತ್ತಿದೆ.
ಸಹಾರ ಪ್ರದೇಶದಲ್ಲಿ ಡಾಬರ್ ಇಂಡಿಯಾ ಬ್ಯುಸಿನೆಸ್ ಹೆಚ್ಚಳ
ಇತ್ತೀಚಿನ ತ್ರೈಮಾಸಿಕದಲ್ಲಿ ಡಾಬರ್‌ನ ಅಂತರರಾಷ್ಟ್ರೀಯ ವ್ಯವಹಾರವು ಉತ್ತಮ ಪ್ರಗತಿ ಕಂಡಿದ್ದು, ವಿಶೇಷವಾಗಿ ಉಪ-ಸಹಾರನ್ ಆಫ್ರಿಕಾ (Sub-Saharan Africa) ವಲಯದಲ್ಲಿ ಶೇ. 20 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ.
ಮ್ಯಾರಿಕೋದ ಹೇರ್ ಕೇರ್ ಬ್ಯುಸಿನೆಸ್ ಆಫ್ರಿಕಾದಲ್ಲಿ ಹೆಚ್ಚಳ
ದಕ್ಷಿಣ ಆಫ್ರಿಕಾದಲ್ಲಿ ಮ್ಯಾರಿಕೋ ಕಂಪನಿಯ (Marico) ಕೂದಲಿನ ಆರೈಕೆ ಉತ್ಪನ್ನಗಳ ವ್ಯವಹಾರವು ಶೇ. 8 ರಷ್ಟು ಬೆಳವಣಿಗೆ (ಸ್ಥಿರ ಕರೆನ್ಸಿಯಲ್ಲಿ – Constant Currency Growth) ಕಂಡಿದೆ.
ಇದನ್ನೂ ಓದಿ: ಎಐ ‘ಕಿಲ್ ಸ್ವಿಚ್’ ಕಡ್ಡಾಯ: ಬ್ಯಾಂಕುಗಳಿಗೆ ಆರ್ಬಿಐ ಹೊಸ ಪ್ರಸ್ತಾಪಿತ ನಿಯಮ
ರಫ್ತು ಮಾದರಿಯಿಂದ ಸ್ಥಳೀಯ ಉತ್ಪಾದನೆಯತ್ತ ಬದಲಾವಣೆ
ಭಾರತೀಯ ಕಂಪನಿಗಳು ಈ ಹಿಂದೆ ಆಫ್ರಿಕಾಕ್ಕೆ ಕೇವಲ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದವು. ಆದರೆ ಈಗ ಆಫ್ರಿಕಾದಲ್ಲೇ ಸ್ಥಳೀಯ ಉತ್ಪಾದನಾ ಘಟಕಗಳನ್ನು (Local Manufacturing) ಸ್ಥಾಪಿಸುತ್ತಿವೆ ಮತ್ತು ಅಲ್ಲಿನ ಸಾಂಪ್ರದಾಯಿಕ ರೀಟೇಲ್ ಸೇಲ್ಸ್ ನೆಟ್ವರ್ಕ್ ಬಳಸಿಕೊಂಡು ಡಿಸ್ಟ್ರಿಬ್ಯೂಶನ್ ಸಿಸ್ಟಂ ಅನ್ನು ಬಲಪಡಿಸುತ್ತಿವೆ. ಇಥಿಯೋಪಿಯಾ, ರುವಾಂಡಾ, ಟಾಂಜಾನಿಯಾ ಮತ್ತು ಉಗಾಂಡಾದಂತಹ ದೇಶಗಳು ಸ್ಥಿರವಾಗಿ ಶೇ. 6-7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿರುವುದು ಇವರಿಗೆ ಹೆಚ್ಚಿನ ಅನುಕೂಲ ತಂದಿಕೊಟ್ಟಿದೆ.
ಭಾರತೀಯ ಕಂಪನಿಗಳಿಗೆ ಎದುರಾಗಲಿರುವ ಸವಾಲುಗಳೇನು?
ಆಫ್ರಿಕಾದಲ್ಲಿ ವ್ಯವಹಾರ ನಡೆಸಲು ದೊಡ್ಡ ಅವಕಾಶಗಳಿದ್ದರೂ ಸವಾಲುಗಳೂ ಕಡಿಮೆ ಇಲ್ಲ. ಪ್ರಮುಖವಾಗಿ ಆಫ್ರಿಕಾದ ವಿವಿಧ ದೇಶಗಳ ಕರೆನ್ಸಿ ಮೌಲ್ಯದಲ್ಲಿ ಆಗಾಗ ಉಂಟಾಗುವ ಭಾರಿ ಏರಿಳಿತಗಳು (Currency Volatility) ಮತ್ತು ಅಲ್ಲಿನ ಹಣದುಬ್ಬರ (Inflation) ಕಂಪನಿಗಳ ಲಾಭದ ಮೇಲೆ ಪರಿಣಾಮ ಬೀರುತ್ತಿವೆ. ಆದರೆ, ಭಾರತೀಯ ಕಂಪನಿಗಳು ಹೊಂದಿರುವ ದಶಕಗಳ ಅನುಭವ ಮತ್ತು ಬ್ರಾಂಡ್ ಮೇಲಿನ ನಂಬಿಕೆ ಈ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




